ರಾಮಲೀಲಾದ ಮಂಡೋದರಿ ಪಾತ್ರದಿಂದ ಪೂನಂ ಪಾಂಡೆಗೆ ಕೊಕ್‌

KannadaprabhaNewsNetwork |  
Published : Sep 24, 2025, 01:00 AM IST
ಪೂನಂ ಪಾಂಡೆ  | Kannada Prabha

ಸಾರಾಂಶ

ಬೋಲ್ಡ್‌ ನಟಿ ಪೂನಂ ಪಾಂಡೆ ಅವರನ್ನು ದೆಹಲಿಯ ಹೆಸರಾಂತ ಲವ ಕುಶ ರಾಮಲೀಲಾದ ಮಂಡೋದರಿಯ ಪಾತ್ರದಿಂದ ಕೈಬಿಡಲಾಗಿದೆ. ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನವದೆಹಲಿ: ಬೋಲ್ಡ್‌ ನಟಿ ಪೂನಂ ಪಾಂಡೆ ಅವರನ್ನು ದೆಹಲಿಯ ಹೆಸರಾಂತ ಲವ ಕುಶ ರಾಮಲೀಲಾದ ಮಂಡೋದರಿಯ ಪಾತ್ರದಿಂದ ಕೈಬಿಡಲಾಗಿದೆ. ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲವ ಕುಶ ರಾಮಲೀಲಾ ಸಮಿತಿ ಅಧ್ಯಕ್ಷ ಅರ್ಜುನ್‌ ಕುಮಾರ್‌, ಕಲಾವಿದರನ್ನು ಅವರ ಕೆಲಸಗಳಿಂದಾಗಿ ಗುರುತಿಸಬೇಕೇ ಹೊರತು ಅವರ ಇತಿಹಾಸದಿಂದಲ್ಲ. ರಾಮಲೀಲಾದಿಂದ ಪೂನಂಪಾಂಡೆ ಅವರನ್ನು ಕೈಬಿಡುವ ನಿರ್ಧಾರ ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದರು.

‘ಆರಂಭದಲ್ಲಿ ನಾವು ಪೂನಂ ಪಾಂಡೆ ಅವರೇ ರಾವಣನ ಪತ್ನಿ ಮಂಡೋದರಿಯ ಪಾತ್ರಕ್ಕೆ ಸೂಕ್ತ ಎಂದು ಭಾವಿಸಿದ್ದೆವು. ಆದರೆ ಕೆಲ ವರ್ಗಗಳಲ್ಲಿ ಇದು ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ನಮ್ಮ ನಿರ್ಧಾರ ಪುನರ್‌ ಪರಿಶೀಲಿಸಲು ತೀರ್ಮಾನಿಸಿದ್ದೇವೆ’ ಎಂದರು.

ಲವ ಕುಶ ರಾಮಲೀಲಾವು ದೆಹಲಿಯಲ್ಲಿ ನಡೆಯುವ ಪ್ರಮುಖ ರಾಮಲೀಲಾ ಪ್ರದರ್ಶನಗಳಲ್ಲಿ ಒಂದಾಗಿದೆ. ಈ ರಾಮಲೀಲಾದಲ್ಲಿ ಹಲವು ಸಿನಿಮಾ ಹಾಗೂ ಟೀವಿ ಕಲಾವಿದರು ಪಾಲ್ಗೊಂಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನ ಈ ರಾಮಲೀಲಾ ನೋಡುತ್ತಾರೆ. ಪ್ರತಿ ನವರಾತ್ರಿ ಸಂದರ್ಭದಲ್ಲಿ ಈ ರಾಮಲೀಲಾ ಪ್ರದರ್ಶನ ನಡೆಯುತ್ತದೆ.

==

ಮುಸ್ಲಿಂ ಆಕ್ರಮಣದಿಂದ ಹಿಂದು ಸಂಖ್ಯೆ 30 ಕೋಟಿಗೆ ಕುಸಿತ: ಯೋಗಿ

ದಾಳಿಕೋರರ ಚಿತ್ರಹಿಂಸೆಯಿಂದ ಹಿಂದೂಗಳ ಸಾವು

ಲಖನೌ: ‘ಮುಸ್ಲಿಂ ಆಕ್ರಮಣಕಾರರ ದೌರ್ಜನ್ಯದಿಂದಾಗಿ, 12ನೇ ಶತಮಾನದಲ್ಲಿ ಸುಮಾರು 60 ಕೋಟಿಯಷ್ಟಿದ್ದ ಹಿಂದೂಗಳ ಜನಸಂಖ್ಯೆ 1947ರಲ್ಲಿ ಸ್ವಾತಂತ್ರ್ಯ ಬರುವ ವೇಳೆಗೆ 30 ಕೋಟಿಗೆ ಕುಸಿಯಿತು’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.ಮಂಗಳವಾರ ‘ಆತ್ಮನಿರ್ಭರ ಭಾರತ, ಸ್ವದೇಶಿ ಸಂಕಲ್ಪ’ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಇಸ್ಲಾಂ ಮೊದಲ ಬಾರಿಗೆ ಭಾರತದ ಮೇಲೆ ದಾಳಿ ಮಾಡಿದಾಗ, ಅಂದರೆ ಸುಮಾರು ಕ್ರಿ.ಶ. 1100ರವರೆಗೆ, ದೇಶದಲ್ಲಿ ಹಿಂದೂ ಜನಸಂಖ್ಯೆ ಸುಮಾರು 60 ಕೋಟಿಯಷ್ಟಿತ್ತು. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ, ಅದು ಕೇವಲ 30 ಕೋಟಿಗೆ ಇಳಿದಿತ್ತು. ಆಕ್ರಮಣಕಾರರ ದೌರ್ಜನ್ಯಗಳಿಂದ ಮಾತ್ರ ಹಿಂದೂ ಜನಸಂಖ್ಯೆ ಕಡಿಮೆಯಾಗಲಿಲ್ಲ, ಹಸಿವು, ರೋಗ ಮತ್ತು ಇತರ ವಿವಿಧ ರೀತಿಯ ಚಿತ್ರಹಿಂಸೆಗಳಿಂದಲೂ ಜನರು ಸತ್ತರು. ವಿದೇಶಿ ಅಧೀನತೆ ಇದನ್ನೇ ಮಾಡುತ್ತದೆ. ಈ ದೇಶದಲ್ಲೂ ಅದೇ ಆಯಿತು’ ಎಂದರು.

==

2 ವರ್ಷಗಳಿಂದ ಜೈಲಲ್ಲಿದ್ದ ಎಸ್ಪಿ ನಾಯಕ ಆಜಂ ಖಾನ್‌ ಬಿಡುಗಡೆ

ಸೀತಾಪುರ (ಉ.ಪ್ರ.): ಸಾಕಷ್ಟು ಕ್ರಿಮಿನಲ್‌ ಪ್ರಕರಣಗಳಲ್ಲಿ ಬಂಧಿತನಾಗಿ 23 ತಿಂಗಳಿಂದ ಜೈಲಲ್ಲಿದ್ದ ಸಮಾಜವಾದಿ ಪಾರ್ಟಿ ನಾಯಕ, ಮಾಜಿ ಸಚಿವ ಆಜಂ ಖಾನ್ ಮಂಗಳವಾರ ಸೀತಾಪುರ ಜೈಲಿನಿಂದ ಬಿಡುಗಡೆ ಆಗಿದ್ದಾರೆ.ಅವರ ವಿರುದ್ಧ ಬಾಕಿ ಇದ್ದ ಕೊನೆಯ ಪ್ರಕರಣದ ಜಾಮೀನು ಇತ್ತೀಚೆಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು, ನೂರಾರು ಸಂಖ್ಯೆಯಲ್ಲಿದ್ದ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಅವರನ್ನು ಜೈಲಿನ ಹೊರಗೆ ಸ್ವಾಗತಿಸಿದರು. ಎಸ್ಪಿ ನಾಯಕ ಅಖಿಲೇಶ ಯಾದವ್‌, ‘ಅವೆಲ್ಲ ಸುಳ್ಳು ಕೇಸು. ನಾವು ಅಧಿಕಾರಕ್ಕೆ ಬಂದರೆ ಎಲ್ಲ ಕೇಸು ರದ್ದು ಮಾಡುತ್ತೇವೆ’ ಎಂದಿದ್ದಾರೆ.

==

ಮೋದಿಗೆ ಬೆದರಿಕೆ ಹಾಕಿದ್ದ ಪನ್ನು ವಿರುದ್ಧ ಎಫ್‌ಐಆರ್‌

ಧ್ವಜಾರೋಹಣ ತಡೆದರೆ ₹11 ಕೋಟಿ ಎಂದಿದ್ದ ಖಲಿಸ್ತಾನಿ ಉಗ್ರ

ಖಲಿಸ್ತಾನಿ ನಕಾಶೆ ಬಿಡುಗಡೆ ಮಾಡಿದ್ದ ಉಗ್ರ

ಸ್ವಾತಂತ್ರ್ಯದಿನಕ್ಕೆ ಅಡ್ಡಿಪಡಿಸಲು ಪನ್ನು ಸಂಚು

ನವದೆಹಲಿ: ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಧ್ವಜಾರೋಹಣ ಮಾಡುವುದನ್ನು ತಡೆಯುವ ಯಾವುದೇ ಸಿಖ್‌ ಯೋಧನಿಗೆ 11 ಕೋಟಿ ರು. ಬಹುಮಾನ ಘೋಷಿಸಿದ್ದ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೊಸ ಪ್ರಕರಣ ದಾಖಲಿಸಿಕೊಂಡಿದೆ.ಆ.11ರಂದು ಪನ್ನು ಅಮೆರಿಕದಿಂದ ವರ್ಚುವಲ್‌ ಮೂಲಕ ಪತ್ರಿಕಾಗೋಷ್ಠಿ ಕರೆದು, ಸ್ವಾತಂತ್ರ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಿಂದ ಪ್ರಧಾನಿ ಮೋದಿಯವರು ತ್ರಿವರ್ಣ ಧ್ವಜವನ್ನು ಹಾರಿಸುವುದನ್ನು ತಡೆಯುವ ವ್ಯಕ್ತಿಗೆ 11 ಕೋಟಿ ರು. ಬಹುಮಾನ ನೀಡುವುದಾಗಿ ಘೋಷಿಸಿದ್ದ. ಜೊತೆಗೆ, ಪಂಜಾಬ್‌, ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ದೆಹಲಿಯನ್ನು ಒಳಗೊಂಡ ಪ್ರತ್ಯೇಕ ಖಲಿಸ್ತಾನದ ನಕಾಶೆಯನ್ನು ಬಿಡುಗಡೆ ಮಾಡಿದ್ದ. ಈ ಕುರಿತು ಗೃಹ ಸಚಿವಾಲಯ ಎನ್‌ಐಎಗೆ ಮಾಹಿತಿತ್ತು. ಅದರಂತೆ ಎನ್‌ಐಎ ಕಳೆದ ತಿಂಗಳೇ ಎಫ್‌ಐಆರ್‌ ದಾಖಲಿಸಿದ್ದು, ಈಗ ಬಹಿರಂಗವಾಗಿದೆ.

==

ಆಪ್‌ ನಾಯಕ ಸತ್ಯೇಂದ್ರ ಜೈನ್‌ ಒಡೆತನದ ₹7.4 ಕೋಟಿ ಆಸ್ತಿ ಇ.ಡಿ ಜಪ್ತಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ.) ದೆಹಲಿಯ ಮಾಜಿ ಸಚಿವ, ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ಅವರಿಗೆ ಸಂಬಂಧಿಸಿದ 7.44 ಕೋಟಿ ರು. ಮೌಲ್ಯದ ಆಸ್ತಿಗಳನ್ನು ಮಂಗಳವಾರ ಜಪ್ತಿ ಮಾಡಿದೆ.ಈ ಆಸ್ತಿಗಳು ಸತ್ಯೇಂದ್ರ ಜೈನ್ ಅವರಿಂದ ನಿಯಂತ್ರಿತ ಮತ್ತು ಒಡೆತನದ ಕಂಪನಿಗಳಿಗೆ ಸಂಬಂಧಿಸಿವೆ ಎಂದು ಇ.ಡಿ. ತಿಳಿಸಿದೆ. ಜೈನ್ ಅವರು 2015ರಿಂದ 2017ರವರೆಗೆ ದೆಹಲಿ ಸರ್ಕಾರದ ಸಚಿವರಾಗಿದ್ದಾಗ ಅಕ್ರಮವಾಗಿ ಆಸ್ತಿ ಸಂಗ್ರಹಿಸಿದ ಆರೋಪ ಎದುರಿಸುತ್ತಿದ್ದಾರೆ. 2022ರ ಮೇ ತಿಂಗಳಿಂದಲೂ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇರಾನ್‌ ಸರ್ಕಾರದ ವಿರುದ್ಧ ಭಾರಿ ಜನತಾ ದಂಗೆ
ಗಿಗ್‌ ಕಾರ್ಮಿಕರ ಸೇವಾ ಭದ್ರತೆಗೆ ಕೇಂದ್ರ ನಿಯಮ