ಇಂದಿನಿಂದ ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗೆ ಪಡಿತರ ಸಾಗಣೆ ಸ್ಥಗಿತ

KannadaprabhaNewsNetwork |  
Published : Jul 08, 2025, 12:32 AM ISTUpdated : Jul 08, 2025, 04:36 AM IST
anna bhagya 2 | Kannada Prabha

ಸಾರಾಂಶ

ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗೆ ಪಡಿತರ ಆಹಾರಧಾನ್ಯ ಸಾಗಣೆ ಬಾಕಿ 260 ಕೋಟಿ ರು. ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ಪಡಿತರ ಸಾಗಣೆ ಸ್ಥಗಿಗೊಳಿಸಿ ಮಂಗಳವಾರದಿಂದ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.  

  ಬೆಂಗಳೂರು :  ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗೆ ಪಡಿತರ ಆಹಾರಧಾನ್ಯ ಸಾಗಣೆ ಬಾಕಿ 260 ಕೋಟಿ ರು. ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ಪಡಿತರ ಸಾಗಣೆ ಸ್ಥಗಿಗೊಳಿಸಿ ಮಂಗಳವಾರದಿಂದ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಡಿತರ ವಿತರಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್ ಆಫ್​ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್‌ ಆ್ಯಂಡ್ ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ಡಾ.ಜಿ.ಆರ್.ಷಣ್ಮುಗಪ್ಪ, ರಾಜ್ಯದ ‘ಅನ್ನಭಾಗ್ಯ’ ಹಾಗೂ ಕೇಂದ್ರದ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ’ ಯೋಜನೆಯಡಿ ಭಾರತೀಯ ಆಹಾರ ನಿಗಮ(ಎಫ್​​ಸಿಐ) ಗೋದಾಮುಗಳಿಂದ ಸಗಟು ಮಳಿಗೆಗಳಿಗೆ ಮತ್ತು ಸಗಟು ಮಳಿಗೆಗಳಿಂದ ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು 4.50 ಲಕ್ಷ ಮೆ.ಟನ್ ಪಡಿತರ ಸಾಗಣೆ ಮಾಡುತ್ತಿದ್ದೇವೆ. ಐದು ತಿಂಗಳಲ್ಲಿ ಬರೋಬ್ಬರಿ 20 ಲಕ್ಷ ಮೆ. ಟನ್ ಆಹಾರ ಪದಾರ್ಥ ಸಾಗಣೆ ಮಾಡಿದ್ದೇವೆ. ಜೂ.19ರಂದು ಸರ್ಕಾರನಮ್ಮ ಜೊತೆ ಮಾತುಕತೆ ನಡೆಸಿ ಬಾಕಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ಕೊಟ್ಟಿದ್ದರೂ ಈವರೆಗೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂದಾಜು ನಾಲ್ಕು ಸಾವಿರ ಲಾರಿಗಳು ಆಹಾರ ಧಾನ್ಯ ಸಾಗಿಸುತ್ತಿವೆ. ಇವುಗಳಲ್ಲಿ 1 ಸಾವಿರ ಲಾರಿಗಳು ಗುತ್ತಿಗೆ ಆಧಾರಿತವಾಗಿದ್ದರೆ, 3,500 ಲಾರಿಗಳು ಮಾಲೀಕತ್ವದ್ದಾಗಿದೆ. ಬಾಕಿ ಹಣ ಬಿಡುಗಡೆಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇಂಧನ ವೆಚ್ಚ, ರಸ್ತೆ ತೆರಿಗೆ ಮತ್ತು ಸಿಬ್ಬಂದಿಗೆ ವೇತನ ಪಾವತಿಸಲು ಪರದಾಡುತ್ತಿದ್ದೇವೆ. ಪ್ರತಿ ತಿಂಗಳು ಕಂತು ಕಟ್ಟಿಲ್ಲವೆಂದು ಫೈನಾನ್ಸ್‌ ಸಂಸ್ಥೆಗಳು ಲಾರಿ ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎಂದು ಅಳಲು ತೋಡಿಕೊಂಡರು.

 ಕಳೆದ 9 ತಿಂಗಳ ಹಿಂದೆ ಟೆಂಡರ್‌ದಾರರು ಪ್ರತಿ ಟೆಂಡರ್‌ಗೆ 4 ಲಕ್ಷ ರು.ಭದ್ರತಾ ಠೇವಣಿ ಕಟ್ಟಿದ್ದಾರೆ. ಒಟ್ಟು 30 ಕೋಟಿ ರು.ಭದ್ರತಾ ಠೇವಣಿ ಬಾಕಿ ಇದೆ. ಕಾರ್ಮಿಕರ ಪಿಎಫ್​​, ಇಎಸ್‌ಐ ಹಣವನ್ನು ಸರ್ಕಾರ ಪಾವತಿಸುತ್ತಿಲ್ಲ. ಕೋವಿಡ್ ವೇಳೆ ಹಣ ಪಡೆಯದೆ ಪಡಿತರ ಸಾಗಿಸಿದ್ದೇವೆ. ಈ ವೇಳೆ ಸಾಕಷ್ಟು ಲಾರಿ ಚಾಲಕರು ಮೃತಪಟ್ಟಿದ್ದಾರೆ. ಮೇಲಿನ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಜು.8ರಿಂದ ಪಡಿತರವನ್ನು ಲೋಡ್ ಮಾಡುವುದಿಲ್ಲ. ಇಲಾಖೆ ಗೋದಾಮುಗಳಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಲಾರಿ ಮುಷ್ಕರ ಏಕೆ?

- 5 ತಿಂಗಳಲ್ಲಿ ಸರ್ಕಾರಕ್ಕೆ 20 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥ ಸಾಗಣೆ

- ಲಾರಿ ಮಾಲೀಕರಿಗೆ ಸರ್ಕಾರದಿಂದ 260 ಕೋಟಿ ರು. ಸಾಗಣೆ ವೆಚ್ಚ ಬಾಕಿ

- ಲಾರಿ ಮಾಲೀಕರಿಗೆ ಹಣ ನೀಡುವುದಾಗಿ ಕಳೆದ ತಿಂಗಳು ಸರ್ಕಾರ ಭರವಸೆ

- ಆದರೆ ಈವರೆಗೂ ಬಾಕಿ ಹಣ ಸಂದಾಯವಿಲ್ಲ । ಹೀಗಾಗಿ 4000 ಲಾರಿ ಮುಷ್ಕರ

- ಮುಷ್ಕರದ ಕಾರಣ ಇಂದಿನಿಮದ ಪಡಿತರ ವಿತರಣೆಯಲ್ಲಿ ವ್ಯತ್ಯಯ ಸಾಧ್ಯತೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ