ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ 3ನೇ ಅವಧಿಗೆ ದೇವೇಂದ್ರ ಫಡ್ನವೀಸ್ ಪ್ರಮಾಣ : ಶಿಂಧೆ ಮತ್ತು ಅಜಿತ್ ಪವಾರ್ ಉಪಮುಖ್ಯಮಂತ್ರಿ

KannadaprabhaNewsNetwork |  
Published : Dec 06, 2024, 08:59 AM ISTUpdated : Dec 06, 2024, 09:54 AM IST
ಮಹಾರಾಷ್ಟ್ರ | Kannada Prabha

ಸಾರಾಂಶ

ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ 3ನೇ ಅವಧಿಗೆ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಿದರು ಹಾಗೂ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ನಾಯಕರಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

 ಮುಂಬೈ : ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ 3ನೇ ಅವಧಿಗೆ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಿದರು ಹಾಗೂ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ನಾಯಕರಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. 

ಇದರೊಂದಿಗೆ 12 ದಿನದಿಂದ ರಾಜ್ಯದಲ್ಲಿ ಉಂಟಾಗಿದ್ದ ರಾಜಕೀಯ ಅನಿಶ್ಚಿತತೆಗೆ ತೆರೆ ಬಿತ್ತು.ಆಜಾದ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಲವಾರು ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಮಹಾಯುತಿ ಮೈತ್ರಿಕೂಟದ ಸಾವಿರಾರು ಬೆಂಬಲಿಗರು, ಉದ್ಯಮಿಗಳು, ನಟರು, ಕ್ರಿಕೆಟಿಗರು ಉಪಸ್ಥಿತರಿದ್ದರು.ಮೂವರನ್ನು ಹೊರತುಪಡಿಸಿದರೆ ಇತರೆ ಯಾವುದೇ ಸಚಿವರು ಪ್ರಮಾಣ ವಚನ ಸ್ವೀಕರಿಸಿಲ್ಲ. ನಾಗ್ಪುರದಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಮುನ್ನ ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಬಳಿಕ ಅಧಿಕಾರ ಸ್ವೀಕರಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಡ್ನವೀಸ್, ‘ಕೊಟ್ಟ ಎಲ್ಲ 5 ಭಸವಸೆ ಈಡೇರಿಸುತ್ತೇವೆ’ ಎಂದರು. ಇದೇ ವೇಳೆ, ರೋಗಿಯೊಬ್ಬರ ಅಸ್ಥಿಮಜ್ಜೆ ಕಸಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರು. ಬಿಡುಗಡೆ ಮಾಡಿದರು.

3ನೇ ಬಾರಿ ಸಿಎಂ:ನಾಗ್ಪುರ ನೈಋತ್ಯ ಕ್ಷೇತ್ರದಿಂದ ಆಯ್ಕೆಯಾಗಿರುವ 54 ವರ್ಷದ ಫಡ್ನವೀಸ್ ಅವರಿಗೆ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಪ್ರಮಾಣವಚನ ಬೋಧಿಸಿದರು. ನಂತರ ಅವರು ಶಿಂಧೆ (60) ಮತ್ತು ಪವಾರ್ (65) ಪ್ರಮಾಣ ವಚನ ಸ್ವೀಕಾರ ಮಾಡಿದರು. ಪವಾರ್ ಡಿಸಿಎಂ ಆಗುತ್ತಿರುವುದು ಇದು 6ನೇ ಸಲ.

ಡಿಸಿಎಂ ಆಗಲು ಒಪ್ಪಿದ ಶಿಂಧೆ: ಅಜಿತ್‌ ಪವಾರ್‌ ಡಿಸಿಎಂ ಆಗುವುದು ಪಕ್ಕಾ ಆಗಿತ್ತಾದರೂ, ಶಿಂಧೆ ಅವರು ಸಿಎಂ ಆಗಿದ್ದ ಕಾರಣ ಡಿಸಿಎಂ ಆಗಲು ಹಿಂದೇಟು ಹಾಕಿದ್ದರು. ಆದರೆ ಬಿಜೆಪಿಗರು ಹಾಗೂ ಶಿವಸೈನಿಕರ ಒತ್ತಡಕ್ಕೆ ಮಣಿದ ಅವರು, ಹಿಂಬಡ್ತಿ ಎನ್ನಲಾದರೂ ಡಿಸಿಎಂ ಹುದ್ದೆ ಸ್ವೀಕರಿಸಿದರು. ಮತ್ತು 288 ಸದಸ್ಯರ ಸದನದಲ್ಲಿ ಬಿಜೆಪಿ-ಶಿವಸೇನೆ-ಎನ್‌ಸಿಪಿ ''''''''''''''''ಮಹಾಯುತಿ'''''''''''''''' ಒಕ್ಕೂಟವು 230 ಸ್ಥಾನಗಳ ಬಹುಮತವನ್ನು ಹೊಂದಿದೆ.40 ಸಾವಿರ ಮಂದಿ ಸಾಕ್ಷಿ:

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ 40,000 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಭದ್ರತೆಗಾಗಿ 4,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಇದು ಸುಂದರ ದಿನ- ಅಮೃತಾ: ಏತನ್ಮಧ್ಯೆ, ಫಡ್ನವಿಸ್ ಮೂರನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಅವರ ಪತ್ನಿ, ಗಾಯಕಿ, ಮಾಜಿ ಬ್ಯಾಂಕ್ ಉದ್ಯೋಗಿ ಅಮೃತಾ ಫಡ್ನವೀಸ್‌ ಅವರು ಇದನ್ನು ‘ಸುಂದರವಾದ ದಿನ’ ಎಂದು ಕರೆದರು. ‘ಇದು ಸಂತೋಷದ ಸಂದರ್ಭವಾಗಿದೆ. ಆದರೆ ಜವಾಬ್ದಾರಿಯೂ ಹೆಚ್ಚಾಗಿದೆ " ಎಂದು ಅವರು ಹೇಳಿದರು.

ಫಡ್ನವೀಸ್‌ ಪದಗ್ರಹಣಕ್ಕೆ ಗಣ್ಯರ ದಂಡು

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್‌ ಪ್ರಮಾಣವಚನದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಉದ್ಯಮಿಗಳು, ಬಾಲಿವುಡ್‌ ತಾರೆಯರು, ಕ್ರಿಕೆಟಿಗರು ಭಾಗವಹಿಸಿದ್ದರು.

ಉದ್ಯಮಿ ಮುಖೇಶ್ ಅಂಬಾನಿ, ಅವರ ಸೊಸೆ ರಾಧಿಕಾ ಮರ್ಚೆಂಟ್‌, ಕುಮಾರಮಂಗಲಂ ಬಿರ್ಲಾ, ಅವರ ಮಗಳು ಅನನ್ಯಾ, ಟಾಟಾ ಟ್ರಸ್ಟ್‌ನ ಅಧ್ಯಕ್ಷ ನೋಯಲ್‌ ಟಾಟಾ ಭಾಗವಹಿಸಿದ್ದರು.ಜತೆಗೆ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ರಣಬೀರ್ ಕಪೂರ್‌, ರಣವೀರ್‌ ಕಪೂರ್‌, ಮಾಧುರಿ ದೀಕ್ಷಿತ್, ಸಂಜಯ್ ದತ್‌, ಜಾಹ್ಹವಿ ಕಪೂರ್‌ ಸಹ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಭಾಗವಹಿಸಿದ್ದರು.

ನೀವು ಡಿಸಿಎಂ ಆಗದಿದ್ದರೆ ನಾವೂ ಸಚಿವರಾಗಲ್ಲ ಎಂದ ಶಿವಸೈನಿಕರು!

ಮುಂಬೈ: ಏಕನಾಥ್‌ ಶಿಂಧೆ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸದಿದ್ದಲ್ಲಿ ಬಿಜೆಪಿ ನೇತೃತ್ವದ ನೂತನ ಮಹಾಯುತಿ ಸರ್ಕಾರದಲ್ಲಿ ನಾವು ಯಾರೂ ಸೇರುವುದಿಲ್ಲ ಎಂದು ಶಿವಸೇನೆ (ಶಿಂಧೆ ಬಣ) ಶಾಸಕರು ಪಟ್ಟು ಹಿಡಿದ ಪ್ರಸಂಗವು ಶಿಂಧೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ನಡೆಯಿತು.ಬುಧವಾರ ಎನ್‌ಸಿಪಿ (ಅಜಿತ್‌) ಮುಖ್ಯಸ್ಥ ಅಜಿತ್‌ ಪವಾರ್‌ ತಾವು ಡಿಸಿಎಂ ಆಗುವುದಾಗಿ ಹೇಳಿದ್ದರು. ಆದರೆ ಶಿಂಧೆ ಹಿಂದೇಟು ಹಾಕಿದ್ದರು. ಹೀಗಾಗಿ ಶಿವಸೈನಿಕರು ಶಿಂಧೆಗೆ ಭಾವನಾತ್ಮಕವಾಗಿ ಮಾತನಾಡಿ ಮನವೊಲಿಕೆ ಯತ್ನ ಮಾಡಿ, ಯಶ ಕಂಡರು.ಶಿಂಧೆ ಪ್ರಮಾಣ ಸ್ವೀಕಾರಕ್ಕೂ ಮುನ್ನ ಮಾತನಾಡಿದ್ದ ಅವರ ಆಪ್ತ ಶಾಸಕ ಉದಯ ಸಾಮಂತ್, ‘ಏಕನಾಥ್ ಶಿಂಧೆ ಅವರು ಉಪ ಮುಖ್ಯಮಂತ್ರಿ ಸ್ಥಾನವನ್ನು ಸ್ವೀಕರಿಸದಿದ್ದರೆ, ಶಿವಸೇನೆಯ (ಶಿಂಧೆ) ಯಾವುದೇ ಶಾಸಕರು ಸರ್ಕಾರದಲ್ಲಿ ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ’ ಎಂದಿದ್ದರು.

ಅಜಿತ್‌ ಪವಾರ್‌ 6ನೇ ಬಾರಿ ಡಿಸಿಎಂ: ದಾಖಲೆ

ಮುಂಬೈ: ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದಿಂದ ಎನ್‌ಸಿಪಿ (ಅಜಿತ್‌) ಮುಖ್ಯಸ್ಥ ಅಜಿತ್‌ ಪವಾರ್‌ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದು, 6ನೇ ಬಾರಿ ಡಿಸಿಎಂ ಪಟ್ಟಕ್ಕೇರಿದ ಮೊದಲಿಗರು ಎಂಬ ದಾಖಲೆ ನಿರ್ಮಿಸಿದ್ದಾರೆ.ಈ ಹಿಂದೆ 2010-2012 ಹಾಗೂ 2012 ರಿಂದ 2014ರ ವರೆಗೆ ಮಾಜಿ ಸಿಎಂ ಪೃಥ್ವಿರಾಜ್‌ ಚೌಹಾಣ್‌ ಅವರ ಅಧಿಕಾರಾವಧಿಯಲ್ಲಿ 2 ಬಾರಿ, 2019ರಲ್ಲಿ ಎನ್‌ಡಿಎ ಸರ್ಕಾರದಡಿ ಮೂರನೇ ಬಾರಿ, ಮಾಜಿ ಸಿಎಂ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಮೈತ್ರಿಕೂಟದಿಂದ 4ನೇ ಬಾರಿ ಹಾಗೂ 2023ರಲ್ಲಿ ಫಡ್ನವೀಸ್‌ ಅವರ ಜತೆ ಐದನೇ ಬಾರಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!