ಧರ್ಮಸ್ಥಳ ಬಗ್ಗೆ ಮುಸುಕುಧಾರಿ ಆರೋಪ ಸುಳ್ಳು : ಮೊದಲ ಪತ್ನಿ

KannadaprabhaNewsNetwork |  
Published : Aug 22, 2025, 01:00 AM IST
ಪತ್ನಿ  | Kannada Prabha

ಸಾರಾಂಶ

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಮುಸುಕುಧಾರಿ ವ್ಯಕ್ತಿ ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು. ಆತನೊಂದಿಗೆ ಏಳು ವರ್ಷ ಸಂಸಾರ ಮಾಡಿದ್ದೇನೆ. ಶವ ಹೂತ ಬಗ್ಗೆ ಯಾವತ್ತೂ ಆತ ನನ್ನೊಂದಿಗೆ ಹೇಳಿಯೇ ಇಲ್ಲ.  

 ನಾಗಮಂಗಲ :  ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಮುಸುಕುಧಾರಿ ವ್ಯಕ್ತಿ ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು. ಆತನೊಂದಿಗೆ ಏಳು ವರ್ಷ ಸಂಸಾರ ಮಾಡಿದ್ದೇನೆ. ಶವ ಹೂತ ಬಗ್ಗೆ ಯಾವತ್ತೂ ಆತ ನನ್ನೊಂದಿಗೆ ಹೇಳಿಯೇ ಇಲ್ಲ. ಯಾರ ಬಳಿಯೋ ಹಣ ಪಡೆಯುವ ಉದ್ದೇಶದಿಂದ ಆತ ಈ ಕಿತಾಪತಿ ಮಾಡುತ್ತಿರಬಹುದು ಎಂದು ಅನಾಮಿಕ ದೂರುದಾರನ ಮೊದಲನೇ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ. 

ಆತನೊಬ್ಬ ಸುಳ್ಳುಗಾರ. ಅಹಂಕಾರಿ. ನನಗೆ ಕಿರುಕುಳ ಕೊಡುತ್ತಿದ್ದ, ಹೊಡೆಯುತ್ತಿದ್ದ. ಆತನ ವಿರುದ್ಧವೇ ತನಿಖೆ ನಡೆಸಿ ಶಿಕ್ಷೆಗೆ ಗುರಿಪಡಿಸಿ ಎಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ, ಅನಾಮಿಕನ ವಿಚ್ಛೇದಿತ ಮೊದಲ ಪತ್ನಿ ಒತ್ತಾಯಿಸಿದ್ದಾರೆ. 

ಪಟ್ಟಣದ ಹೊರವಲಯದಲ್ಲಿ ‘ಕನ್ನಡಪ್ರಭ’ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘ನಾನು ಮಂಡ್ಯ ಜಿಲ್ಲೆ ನಾಗಮಂಗಲ ಮೂಲದವಳು. 25 ವರ್ಷಗಳ ಹಿಂದೆ ಮದುವೆಯಾಗಿ ಆತನೊಂದಿಗೆ (ಮುಸುಕುಧಾರಿ) 7 ವರ್ಷ ಸಂಸಾರ ಮಾಡಿದ್ದೇನೆ. ನನಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗುವಿದೆ. ಹೆಣ್ಣು ಮಗಳಿಗೆ ಮದುವೆ ಮಾಡಿದ್ದೇನೆ. ಆತನಲ್ಲಿ (ಮುಸುಕುಧಾರಿ) ಒಳ್ಳೆಯತನವಿರಲಿಲ್ಲ. ಬರೀ ಸುಳ್ಳು ಹೇಳಿಕೊಂಡು ಓಡಾಡುವುದೇ ಅವನ ಕೆಲಸವಾಗಿತ್ತು’ ಎಂದು ಆರೋಪಿಸಿದರು. 

ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದ ಆತ ಮದುವೆಯಾದ ನಂತರ ನನ್ನನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿದ್ದ. ಕ್ಷೇತ್ರದ ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆ ಅವರೇ ನಮಗೆ ಮನೆ ಕೊಟ್ಟಿದ್ದರು. ಏಳು ವರ್ಷ ಧರ್ಮಸ್ಥಳದಲ್ಲಿಯೇ ಇದ್ದೆವು. ಆತ ನೇತ್ರಾವತಿ ಸ್ನಾನಘಟ್ಟದಲ್ಲಿ ಕಸ ಗುಡಿಸುವುದು, ಶೌಚಾಲಯ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದ. ಅವನಿಗೆ ₹3 ಸಾವಿರ ಸಂಬಳ ಬರುತ್ತಿತ್ತು. ರಾತ್ರಿ ಸಮಯದಲ್ಲಿ ನದಿಯಲ್ಲಿ ಯಾವುದಾದರೂ ಅಪರಿಚಿತ ಶವ ಸಿಕ್ಕಲ್ಲಿ ಹೂಳುತ್ತಿದ್ದರಂತೆ. ಅದು ನನಗೆ ಗೊತ್ತಿಲ್ಲ. ಹಣಕ್ಕಾಗಿ ಆತ ಏನೋ ಕಿತಾಪತಿ ಮಾಡಿರಬೇಕು ಎಂದು ಹೇಳಿದರು. 

ಎಲ್ಲ ಆರೋಪಗಳು ಸುಳ್ಳು:ಹಣದ ಆಮಿಷಕ್ಕೊಳಗಾಗಿ ಯಾರದ್ದೋ ಮಾತು ಕೇಳಿಕೊಂಡು ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾನೆ. ಅವನು ಈವರೆಗೆ ತೋರಿಸಿದ ಗುಂಡಿಗಳನ್ನೆಲ್ಲಾ ಅಗೆದರೂ ಇಲ್ಲಿಯವರೆಗೆ ಏನೂ ಸಿಕ್ಕಿಲ್ಲ. ಇವನ ಆಟ ನೋಡಿದರೆ ಏನೋ ಕಿತಾಪತಿ ಮಾಡುತ್ತಿದ್ದಾನೆ ಎಂದೆನಿಸುತ್ತದೆ. 

 ಪುಣ್ಯಕ್ಷೇತ್ರದ ಬಗ್ಗೆ, ಧರ್ಮಾಧಿಕಾರಿ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವ ಅವನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಮಾಡುತ್ತಿರುವ ಆರೋಪಗಳೆಲ್ಲವೂ ಶುದ್ಧ ಸುಳ್ಳು. ಧರ್ಮಸ್ಥಳದ ಬಗ್ಗೆ ನಮಗೆ ಸುಳ್ಳು ಹೇಳಲು ಆಗೋಲ್ಲ. ಅದೊಂದು ಪುಣ್ಯ ಕ್ಷೇತ್ರ. ನಮ್ಮೆಲ್ಲರಿಗೂ ಧರ್ಮಸ್ಥಳದ ಬಗ್ಗೆ ಅಪಾರ ಪ್ರೀತಿ- ಭಕ್ತಿ ಇದೆ. ಆತ ಯಾರ ಬಳಿಯೋ ಹಣ ಪಡೆದು ಅಥವಾ ಹೇಳಿಕೆ ಮಾತುಗಳನ್ನು ಕೇಳಿಕೊಂಡು ಈ ರೀತಿ ಕಿತಾಪತಿ ಮಾಡುತ್ತಿರಬಹುದು ಅನ್ನಿಸುತ್ತಿದೆ ಎಂದು ಹೇಳಿದರು. 

ಶವಗಳನ್ನು ಹೂತ ಬಗ್ಗೆ ನನ್ನೊಂದಿಗೆ ಹೇಳಿಲ್ಲ:ಧರ್ಮಸ್ಥಳದ ನೇತ್ರಾವತಿ ನದಿ ಬಳಿ ಯಾವುದಾದರೂ ಶವಗಳು ಸಿಕ್ಕಲ್ಲಿ ಒಡವೆಗಳನ್ನು ಕಸಿದುಕೊಳ್ಳುತ್ತಿದ್ದನಂತೆ. ಇದು ನನಗೆ ಗೊತ್ತಿಲ್ಲ. ಅತ್ಯಾಚಾರ, ಕೊಲೆಯಾದ ಶವಗಳನ್ನು ಹೂತ ಬಗ್ಗೆ ಯಾವತ್ತೂ ನನ್ನೊಂದಿಗೆ ಹೇಳಿರಲಿಲ್ಲ. ಇದೆಲ್ಲಾ ಶುದ್ಧ ಸುಳ್ಳು ಅನ್ನಿಸುತ್ತದೆ. ಅಂತಹ ಪುಣ್ಯ ಕ್ಷೇತ್ರದಲ್ಲಿ ಇವೆಲ್ಲ ನಡೆಯಲು ಸಾಧ್ಯವೇ ಇಲ್ಲ ಎಂದರು.ನಮ್ಮ ಸಂಸಾರ ಮುರಿದ ನಂತರ ಆತ ಮತ್ತೊಂದು ಮದುವೆ ಮಾಡಿಕೊಂಡನೆಂಬ ವಿಷಯ ಗೊತ್ತಾಯಿತು. ಜೀವನಾಂಶಕ್ಕೋಸ್ಕರ ನಾನು ನ್ಯಾಯಾಲಯದ ಮೊರೆಹೋದೆ. ಆದರೆ, ನನಗೆ ಕೆಲಸವಿಲ್ಲ, ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡು ಅಲ್ಲಿ ಕೊಡುವ ಊಟ ಮಾಡಿಕೊಂಡಿದ್ದೇನೆ. ನನ್ನ ಬಳಿ ಏನೂ ಇಲ್ಲ. ಹಾಗಾಗಿ, ಜೀವನಾಂಶ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ.  

ಎರಡು ವರ್ಷವಾದರೂ ನನಗೆ ನ್ಯಾಯ ಸಿಗಲಿಲ್ಲವಾದ್ದರಿಂದ ನಾನು ನನ್ನ ತಾಯಿ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಆಶ್ರಯ ಪಡೆದುಕೊಂಡೆ ಎಂದು ತಿಳಿಸಿದರು 

.ವಿಚ್ಛೇದನ ಬಳಿಕ ಎರಡು ಮದುವೆ:ನಾನು ವಿಚ್ಛೇದನ ಪಡೆದ ನಂತರ ಎರಡು ಮದುವೆಯಾಗಿದ್ದಾನೆಂದು ಹೇಳಲಾಗುತ್ತಿದೆ. ಇಟ್ಟುಕೊಂಡವಳನ್ನು ಮದುವೆಯಾಗಲು ನನಗೆ ಚಿತ್ರಹಿಂಸೆ ಕೊಟ್ಟು ಓಡಿಸಿದ. ಮದುವೆ ಮಾಡಿಕೊಂಡು ನಮಗೆ ಏನು ಮಾಡಿದ್ದೀಯಾ ಎಂದು ಎರಡನೇ ಹೆಂಡತಿ ಬೈತಿದ್ದಳಂತೆ. ಅವಳ ಒತ್ತಡಕ್ಕೆ, ಆಮಿಷಕ್ಕೆ ಒಳಗಾಗಿ ಹೀಗೆ ಮಾಡ್ತಿದ್ದಾನೆ ಅನ್ಸುತ್ತೆ ಎಂದು ಶಂಕೆ ವ್ಯಕ್ತಪಡಿಸಿದರು. 

ಅವನು ಉದ್ಧಾರವಾಗೋಲ್ಲ:ಕ್ಷೇತ್ರದ ಧರ್ಮಾಧಿಕಾರಿಗಳೂ ಸೇರಿದಂತೆ ಧರ್ಮಸ್ಥಳದ ಜನರು ಬಹಳ ಒಳ್ಳೆಯವರು. ಕೆಲಸ ಕೊಟ್ಟು ಅನ್ನ ನೀಡಿದ ಜಾಗಕ್ಕೆ ಅನ್ಯಾಯ, ಮೋಸ ಮಾಡಬಾರದು. ಆದರೆ, ಈ ಮುಸುಕುಧಾರಿ ದೊಡ್ಡ ಸುಳ್ಳುಗಾರ, ಮೋಸಗಾರ. ಆತನನ್ನು ಬಿಟ್ಟು ಬಂದಿದ್ದು ಒಳ್ಳೆಯದಾಯಿತು. ನನಗೆ ಮತ್ತು ನನ್ನ ಮಕ್ಕಳಿಗೆ ಮೋಸ, ವಂಚನೆ ಮಾಡಿದ್ದಾನೆ. ಆದರೆ, ಧರ್ಮಸ್ಥಳದ ಹೆಸರು ಕೆಡಿಸುತ್ತಿರುವ ಅವನು ಉದ್ಧಾರವಾಗೋಲ್ಲ. ಹಾಳಾಗುತ್ತಾನೆ. ಅವನಿಗೆ ದೇವರೇ ತಕ್ಕ ಶಿಕ್ಷೆ ವಿಧಿಸುತ್ತಾನೆ. ಅವನು ಸತ್ತು, ಹೆಣವಾದರೂ ನಾವು ಹೋಗಿ ಮುಖ ನೋಡುವುದಿಲ್ಲ ಎಂದು ಹಿಡಿಶಾಪ ಹಾಕಿದರು.

PREV
Read more Articles on

Recommended Stories

ದಿಲ್ಲಿ ಬೀದಿ ನಾಯಿ ಶೆಡ್‌ಗೆ : ಇಂದು ಸುಪ್ರೀಂನಲ್ಲಿ ತೀರ್ಪು
ಹೊಡೆದಿದ್ದಕ್ಕೆ ಗನ್‌ ತಂದು ಶಿಕ್ಷಕರ ಮೇಲೆ ವಿದ್ಯಾರ್ಥಿ ಗುಂಡಿನ ದಾಳಿ