ಬ್ರಾಹ್ಮಣರ ಮೇಲೆ ಮೂತ್ರ ಮಾಡುವೆ : ಬಾಲಿವುಡ್‌ ಚಿತ್ರ ನಿರ್ದೇಶಕ ಅನುರಾಗ್‌ ವಿವಾದ

KannadaprabhaNewsNetwork | Updated : Apr 19 2025, 06:12 AM IST

ಸಾರಾಂಶ

ಫುಲೆ ಚಿತ್ರದ ಕುರಿತ ವಿವಾದಕ್ಕೆ ಪ್ರತಿಕ್ರಿಯಿಸುವ ವೇಳೆ ಬಾಲಿವುಡ್‌ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್‌, ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ.

ಮುಂಬೈ: ಫುಲೆ ಚಿತ್ರದ ಕುರಿತ ವಿವಾದಕ್ಕೆ ಪ್ರತಿಕ್ರಿಯಿಸುವ ವೇಳೆ ಬಾಲಿವುಡ್‌ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್‌, ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಫುಲೆ ಚಿತ್ರಕ್ಕೆ ಮಹಾರಾಷ್ಟ್ರ ಬ್ರಾಹ್ಮಣರ ವಿರೋಧ ಮತ್ತು ಸೆನ್ಸಾರ್‌ ಮಂಡಳಿಯ ತೀರ್ಮಾನದಿಂದ ಬಿಡುಗಡೆ ತಡವಾಗಿದ್ದಕ್ಕೆ ಅನುರಾಗ್‌ ಇನ್‌ಸ್ಟಾದಲ್ಲಿ ಬ್ರಾಹ್ಮಣರು ಮತ್ತು ಸೆನ್ಸಾರ್‌ ಮಂಡಳಿ ವಿರುದ್ಧ ತೀವ್ರವಾಗಿ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ವ್ಯಕ್ತಿಯೊಬ್ಬ ಹಾಕಿದ ಕಮೆಂಟ್‌ಗೆ ಪ್ರತಿಕ್ರಿಯಿಸಿದ ಅನುರಾಗ್‌, ‘ನಾನು ಬ್ರಾಹ್ಮಣರ ಮೇಲೆ ಮೂತ್ರ ಮಾಡುವೆ. ಏನಾದರೂ ತೊಂದರೆಯಿದೆಯೇ?’ ಎಂದು ಬರೆದಿದ್ದಾರೆ.

ಕ್ರೈಸ್ತರ ಭಾವನೆಗೆ ಧಕ್ಕೆ ಆರೋಪ: ನಟ ಹೂಡಾ, ಡಿಯೋಲ್‌ ವಿರುದ್ಧ ಕೇಸ್‌

ಚಂಡೀಗಢ: ಇತ್ತೀಚೆಗೆ ಬಿಡುಗಡೆಯಾದ ‘ಜಾಟ್’ ಸಿನೆಮಾದ ಕೆಲ ಅಂಶಗಳು ಕ್ರೈಸ್ತರ ಭಾವನೆಗೆ ದಕ್ಕೆ ತಂದು ಆರೋಪಿಸಿ, ನಟರಾದ ಸನ್ನಿ ಡಿಯೋಲ್‌, ರಣದೀಪ್‌ ಹೂಡಾ, ನಿರ್ದೇಶಕ ಗೋಪಿಚಂದ್ ಮಲಿನೇನಿ ಮತ್ತು ನಿರ್ಮಾಪಕರಾದ ಟಿ.ಜಿ ವಿಶ್ವ ಪ್ರಸಾದ್, ನವೀನ್ ಯೆರ್ನೇನಿ, ವೈ. ರವಿಶಂಕರ್ ವಿರುದ್ಧ ಜಲಂಧರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ‘ಚಿತ್ರದ ಒಂದು ದೃಶ್ಯವು ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಭಾವನೆಗೆ ತೀವ್ರ ನೋವುಂಟು ಮಾಡಿದೆ. ಯೇಸುಕ್ರಿಸ್ತನಿಗೆ ಅಗೌರವ ತೋರಿಸಲಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಚಿತ್ರ ಏ.10ರಂದು ಬಿಡುಗಡೆಯಾಗಿತ್ತು.

ಮೇ 1ರಿಂದ ದೇಶವ್ಯಾಪಿ ಜಿಪಿಎಸ್‌ ಆಧರಿತ ಟೋಲ್‌ ಶುಲ್ಕ ನಿರ್ಧಾರ ಆಗಿಲ್ಲ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಪಗ್ರಹ ಆಧರಿತ ಸುಂಕ ಸಂಗ್ರಹ ವ್ಯವಸ್ಥೆಯು ಮೇ 1ರಿಂದ ಜಾರಿಗೆ ತರುವ ಕುರಿತು ಇನ್ನೂ ಯಾವುದೇ ನಿರ್ಧಾರ ಆಗಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಸ್ಪಷ್ಟನೆ ನೀಡಿದೆ. ಮೇ 1ರಿಂದ ಉಪಗ್ರಹ ಆಧರಿತ ಟೋಲ್‌ ಸಂಗ್ರಹ ವ್ಯವಸ್ಥೆ ಕುರಿತು ಮಾಧ್ಯಮಗಳ ವರದಿಗೆ ಸ್ಪಷ್ಟನೆ ನೀಡಿದ ಇಲಾಖೆ, ತಡೆರಹಿತ, ಪ್ರಯಾಣ ಅನುಭವವನ್ನು ನೀಡಲು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ಎಎನ್‌ಪಿಆರ್‌) ಫಾಸ್ಟ್ಯಾಗ್‌ ಆಧರಿತ ಟೋಲ್‌ ಸಂಗ್ರಹ ವ್ಯವಸ್ಥೆಯನ್ನು ಆಯ್ದ ಟೋಲ್‌ ಪ್ಲಾಜಾಗಳಲ್ಲಿ ಅಳವಡಿಸಲಾಗುತ್ತದೆ. ಇದು ಹಾಲಿ ಫಾಸ್ಟ್ಯಾಗ್‌ ಜೊತೆಯೇ ಕಾರ್ಯನಿರ್ವಹಿಸಲಿದೆ. ಈ ವ್ಯವಸ್ಥೆಯಲ್ಲಿ ವಾಹನ ಎಷ್ಟು ದೂರ ಕ್ರಮಿಸಿದೆ ಎಂಬುದರ ಆಧರದ ಮೇಲೆ ಟೋಲ್‌ ಸಂಗ್ರಹಿಸಲಾಗುತ್ತದೆ ಎಂದಿದೆ.

ಇನ್ಫಿ ಮೂರ್ತಿ 17 ತಿಂಗಳ ಮೊಮ್ಮಗನ 3 ವರ್ಷದ ಆದಾಯ ₹10.65 ಕೋಟಿ

ನವದೆಹಲಿ: ಇನ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಅವರ 17 ತಿಂಗಳ ಮೊಮ್ಮಗನ ವಾರ್ಷಿಕ ಆದಾಯ ಭರ್ಜರಿ 3.3 ಕೋಟಿ ರು. ಹೌದು. ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರ ಪುತ್ರಿ ರೋಹನ್‌ ಮೂರ್ತಿ ಅವರ ಪುತ್ರ ಏಕಾಗ್ರಹಗೆ ಇದೀಗ 17 ತಿಂಗಳ ವಯಸ್ಸು. 2023ರ ನವೆಂಬರ್‌ ತಿಂಗಳಲ್ಲಿ ನಾರಾಯಣ ಮೂರ್ತಿ ತಮ್ಮ ಮೊಮ್ಮಗನಿಗೆ ಇನ್ಫೋಸಿಸ್‌ನಲ್ಲಿ ತಾವು ಹೊಂದಿದ್ದ ಷೇರುಗಳ ಪೈಕಿ ಶೇ.0.04 ಅಂದರೆ 15 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಇದರ ಮೌಲ್ಯ ಆಗ 240 ಕೋಟಿ ರು. ಇತ್ತು. ಇದೀಗ ಇನ್ಫೋಸಿಸ್‌ ತನ್ನ ಷೇರುದಾರರಿಗೆ ವಾರ್ಷಿಕ ಡಿವಿಡೆಂಡ್‌ ಪ್ರಕಟಿಸಿದ್ದು ಅದರನ್ವಯ ಏಕಾಗ್ರಹಗೆ 3.3 ಕೋಟಿ ರು. ಡಿವಿಡೆಂಡ್ ಬಂದಿದೆ. ಈ ಹಿಂದೆ ಕೂಡಾ ಏಕಾಗ್ರಹಗೆ ಇದೇ ರೀತಿಯಲ್ಲಿ 7.35 ಕೋಟಿ ರು. ಡಿವಿಡೆಂಡ್‌ ಬಂದಿತ್ತು.

ತಿರುಮಲದಲ್ಲಿ 100 ಹಸುಗಳ ಸಾವಾಗಿದೆ ಟಿಟಿಡಿ ಮಾಜಿ ಅಧ್ಯಕ್ಷರ ವಿರುದ್ಧ ಪ್ರಕರಣ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್ ನಡೆಸುತ್ತಿರುವ ಶ್ರೀ ವೆಂಕಟೇಶ್ವರ (ಎಸ್‌ವಿ) ಗೋಶಾಲೆಯಲ್ಲಿ ಆಡಳಿತದ ನಿರ್ಲಕ್ಷ್ಯದಿಂದಾಗಿ ಹಸುಗಳು ಸಾಯುತ್ತಿವೆ ಎಂದು ಆರೋಪಿಸಿದ್ದ ಟಿಟಿಡಿ ಮಾಜಿ ಅಧ್ಯಕ್ಷ ಮತ್ತು ವೈಎಸ್‌ಆರ್‌ಸಿಪಿ ನಾಯಕ ಬಿ. ಕರುಣಾಕರ್ ರೆಡ್ಡಿ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಟಿಟಿಡಿ ಸದಸ್ಯ ಭಾನುಪ್ರಕಾಶ್ ರೆಡ್ಡಿ ದೂರು ಸಲ್ಲಿಸಿದ್ದು, ‘ಗೋಶಾಲೆಯಲ್ಲಿ ಆಡಳಿತದ ನಿರ್ಲಕ್ಷ್ಯದಿಂದ 10 ತಿಂಗಳಲ್ಲಿ 100 ಹಸುಗಳು ಸಾವನ್ನಪ್ಪಿವೆ ಎಂದ ಕರುಣಾಕರ್ ರೆಡ್ಡಿ ಆರೋಪ ಸುಳ್ಳು. ಈ ರೀತಿ ಹೇಳಿಕೆಗಳು ಭಕ್ತರ ಭಾವನೆಗೆ ಧಕ್ಕೆ ತರುತ್ತವೆ’ ಎಂದು ಆರೋಪಿಸಿದ್ದಾರೆ. ದೂರಿನನ್ವಯ ರೆಡ್ಡಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Share this article