ಕೊಲ್ಲಿ ಯುದ್ಧದಿಂದ ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿ ಭಾರಿ ವ್ಯತಯ : ಗ್ಯಾಸ್‌ ಬರದಿದ್ದರೆ ಹೋಟೆಲ್‌ ಬಂದ್‌

Published : Mar 10, 2026, 04:53 AM IST
LPG

ಸಾರಾಂಶ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಳದ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ ಮತ್ತು ಗೃಹ ಬಳಕೆಯ ಎಲ್‌ಪಿಜಿ ಸರಬರಾಜಿನ ಮೇಲೆ ಪರಿಣಾಮ ಬೀರಿದ್ದು, ಗ್ಯಾಸ್‌ ಸಿಲಿಂಡರ್‌ ಅಭಾವ ತಲೆದೋರಿದೆ.

  ಬೆಂಗಳೂರು/ನವದೆಹಲಿ :  ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಳದ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ ಮತ್ತು ಗೃಹ ಬಳಕೆಯ ಎಲ್‌ಪಿಜಿ ಸರಬರಾಜಿನ ಮೇಲೆ ಪರಿಣಾಮ ಬೀರಿದ್ದು, ಗ್ಯಾಸ್‌ ಸಿಲಿಂಡರ್‌ ಅಭಾವ ತಲೆದೋರಿದೆ.

ಸೋಮವಾರ ಹೋಟೆಲ್‌ಗಳಿಗೆ ಅಗತ್ಯವಾದಷ್ಟು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳು ಸರಬರಾಜಾಗಿಲ್ಲ. ಮಂಗಳವಾರ ಸಿಲಿಂಡರ್‌ ಪೂರೈಕೆ ಸೂಕ್ತ ರೀತಿಯಲ್ಲಿ ಆಗದಿದ್ದರೆ ಹೋಟೆಲ್‌ಗಳನ್ನು ಬಂದ್‌ ಮಾಡಬೇಕಾಗುತ್ತದೆ ಎಂದು ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್‌ ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ಸುಮಾರು 20 ಸಾವಿರ ರೆಸ್ಟೋರೆಂಟ್‌ಗಳಿವೆ. 3,500 ಲಾಡ್ಜ್‌ ಹಾಗೂ 580 ತಾರಾ ಹೋಟೆಲ್‌ಗಳಿದ್ದು ಲಕ್ಷಾಂತರ ಜನರ ಜೀವನಕ್ಕೆ ತೊಂದರೆಯಾಗಲಿದೆ. ಅಲ್ಲದೇ ಬೀದಿ ಬದಿ ಮೊಬೈಲ್‌ ಕ್ಯಾಂಟೀನ್ ನಡೆಸುವವರು, ಕ್ಯಾಟರಿಂಗ್‌, ಮದುವೆ-ಮುಂಜಿ, ಈವೆಂಟ್‌ಗಳ ಮೇಲೂ ಪರಿಣಾಮವಾಗಲಿದೆ. ಹೋಟೆಲ್‌ ಉದ್ಯಮ ಬಂದ್‌ ಆದಲ್ಲಿ ಬೀದಿಬದಿ ವ್ಯಾಪಾರಿಗಳು, ಆಟೋ-ಕ್ಯಾಬ್‌ ಚಾಲಕರು, ಪಿಜಿಗಳಲ್ಲಿ ಉಳಿದುಕೊಂಡಿರುವವರು, ಕೂಲಿಕಾರ್ಮಿಕರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಲಿದೆ.

ಕೇಂದ್ರಕ್ಕೆ ಹೋಟೆಲ್‌ ಉದ್ಯಮ ಮನವಿ:

ದೇಶದ ಉನ್ನತ ಹೋಟೆಲ್‌ ಸಂಘವಾದ ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳ ಒಕ್ಕೂಟ (ಎಫ್‌ಎಚ್‌ಆರ್‌ಎಐ) ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದಿದ್ದು, ‘ತಳಮಟ್ಟದಲ್ಲಿ ವ್ಯಾಪಕ ಅಸ್ತವ್ಯಸ್ತತೆ ಇದೆ. ಮಾ.5ರಂದು ಸರ್ಕಾರ ಆದೇಶ ಹೊರಡಿಸಿ ಎಲ್‌ಪಿಜಿ ಪೂರೈಕೆಯ ಮೇಲೆ ಕೆಲವು ನಿರ್ಬಂಧ ವಿಧಿಸಿದೆ. ವಾಣಿಜ್ಯ ಸಿಲಿಂಡರ್‌ಗೆ ಇದು ಅನ್ವಯಿಸಲ್ಲ ಎಂದು ಸರ್ಕಾರವೇ ಹೇಳಿದ್ದರೂ, ವಿತರಕರು ವಾಣಿಜ್ಯ ಎಲ್‌ಪಿಜಿಗೆ ನಿರ್ಬಂಧವಿದೆ ಎನ್ನುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ದೂರಿದೆ.

ಬೇಡಿಕೆಯಷ್ಟು ಸಿಲಿಂಡರ್‌ ಬಂದಿಲ್ಲ:

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್‌ ಅವರು, ತೈಲ ಕಂಪನಿಗಳು 70 ದಿನಗಳವರೆಗೆ ಸಿಲಿಂಡರ್‌ ಸರಬರಾಜಿನಲ್ಲಿ ಅಡಚಣೆ ಉಂಟಾಗುವುದಿಲ್ಲ ಎಂದು ತಿಳಿಸಿದ್ದವು. ಹೀಗಿದ್ದರೂ ಏಜೆನ್ಸಿಯವರು ಸೋಮವಾರ ಬೇಡಿಕೆಯಷ್ಟು ಸಿಲಿಂಡರ್‌ ಸರಬರಾಜು ಮಾಡಿಲ್ಲ. ಮಂಗಳವಾರ ಸಿಲಿಂಡರ್‌ ಸರಬರಾಜಾಗದಿದ್ದರೆ ಹೋಟೆಲ್‌ಗಳನ್ನು ಬಂದ್‌ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸಂಬಂಧಪಟ್ಟ ಕೇಂದ್ರ ಸಚಿವರು ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ವಾಣಿಜ್ಯ ಅನಿಲ ಸಿಲಿಂಡರ್‌ ಸರಬರಾಜನ್ನು ಎಂದಿನಂತೆ ಪುನಾರಂಭ ಮಾಡಿ ಹೋಟೆಲ್‌ ಉದ್ಯಮಕ್ಕೆ ಸಹಕಾರ ನೀಡುವರು ಎಂದು ನಿರೀಕ್ಷಿಸುತ್ತೇವೆ. ಒಂದೊಮ್ಮೆ ಸೂಕ್ತ ಪ್ರಮಾಣದಲ್ಲಿ ಸಿಲಿಂಡರ್‌ ಪೂರೈಕೆ ಆಗದಿದ್ದರೆ ಹೋಟೆಲ್‌ ಉದ್ಯಮ ಬಂದ್‌ ಮಾಡಬೇಕಾಗುತ್ತದೆ ಎಂದು ಪುನರುಚ್ಚರಿಸಿದರು.

ತೀವ್ರ ಸಂಕಷ್ಟ

ಹೋಟೆಲ್‌ ಉದ್ಯಮ ಅಗತ್ಯ ಸೇವೆಯಡಿ ಬರುವುದರಿಂದ ಇದನ್ನೇ ಅವಲಂಬಿಸಿರುವ ಜನಸಾಮಾನ್ಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ವೈದ್ಯಕೀಯ ಮತ್ತಿತರ ಸೇವೆಯಲ್ಲಿರುವ ಹೆಚ್ಚಿನ ಜನರಿಗೆ ದಿನನಿತ್ಯದ ತಿಂಡಿ ತಿನಿಸುಗಳಿಗೆ ತೊಂದರೆಯಾಗಲಿದೆ. ಗ್ಯಾಸ್‌ ಸಿಲಿಂಡರ್‌ ಸರಬರಾಜು ಸಾಮಾನ್ಯ ಸ್ಥಿತಿಗೆ ಬರುವವರೆಗೂ ಹೋಟೆಲ್‌ ಉದ್ಯಮ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ವಿವರಿಸಿದರು.

ಹೋಟೆಲ್‌ಗಳೇ ಬಂದ್‌

ಪ್ರತಿ ದಿನವೂ ಹೋಟೆಲ್‌ಗಳಿಗೆ ಏಜೆನ್ಸಿಗಳು ಅನಿಲ ಸಿಲಿಂಡರ್‌ ಸರಬರಾಜು ಮಾಡುತ್ತಿದ್ದು, ಮುಂದೆ ಸಿಲಿಂಡರ್‌ ಅಭಾವ ಉಂಟಾಗಬಹುದು ಎಂದು ಹೇಳುತ್ತಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟಪಡಿಸಬೇಕು. ಸಿಲಿಂಡರ್‌ ಪೂರೈಕೆ ಆಗದಿದ್ದರೆ ಹೋಟೆಲ್‌ಗಳನ್ನು ಬಂದ್‌ ಮಾಡಬೇಕಾಗುತ್ತದೆ.

- ಎಸ್‌.ಸುಬ್ರಮಣ್ಯ ಹೊಳ್ಳ, ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ

ಕೃತಕ ಅಭಾವ ಸೃಷ್ಟಿಸಲೂ ಯತ್ನ ?

ಅನಿಲ ಸಿಲಿಂಡರ್‌ಗಳ ಅಭಾವ ಉಂಟಾಗಿದೆ ಎಂದು ವದಂತಿ ಹಬ್ಬಿಸಿ ಮುಕ್ತ ಮಾರುಕಟ್ಟೆಯಲ್ಲಿ ಅಧಿಕ ಬೆಲೆಗೆ ಸಿಲಿಂಡರ್‌ಗಳನ್ನು ಮಾರಾಟ ಮಾಡುವ ಹುನ್ನಾರವನ್ನೂ ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಎಲ್‌ಪಿಜಿ ಬುಕಿಂಗ್‌ ಅವಧಿ 21 ದಿನಗಳಿಂದ 25ಕ್ಕೇರಿಕೆ

ನವದೆಹಲಿ: ಎಲ್‌ಪಿಜಿ ಅಡುಗೆ ಅನಿಲದ ಹೆಚ್ಚಿನ ದಾಸ್ತಾನು ಮತ್ತು ಅಕ್ರಮ ವ್ಯಾಪಾರವನ್ನು ತಡೆಗಟ್ಟುವ ಉದ್ದೇಶದಿಂದ, ಸಿಲಿಂಡರ್‌ಗಳ ಬುಕಿಂಗ್‌ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಏರಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮಧ್ಯಪ್ರಾಚ್ಯ ಯುದ್ಧದಿಂದ ಎಲ್‌ಪಿಜಿ ಕೊರತೆ ಉಂಟಾಗುವ ಆತಂಕ ಎದುರಾಗಿದೆ. ಈ ನಡುವೆ ಜನಗಳು ಎಂದಿನ 2 ತಿಂಗಳ ಬದಲು ಅನಗತ್ಯವಾಗಿ 15 ದಿನಗಳಿಗೇ ಬುಕ್‌ ಮಾಡಿ, ಸಂಗ್ರಹಿಸಿಟ್ಟುಕೊಳ್ಳುವ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆ ಕಳೆದ ಶುಕ್ರವಾರವಷ್ಟೇ ಕೇಂದ್ರ ಸರ್ಕಾರ ಬುಕಿಂಗ್‌ ಅವಧಿಯನ್ನು 15 ದಿನಗಳಿಂದ 21 ದಿನಗಳಿಗೆ ಏರಿಸಿತ್ತು. ಇದನ್ನೀಗ 25 ದಿನಗಳಿಗೆ ಏರಿಕೆ ಮಾಡಿದೆ ಎಂದು ಮೂಲಗಳು ಹೇಳಿವೆ. ಇನ್ನು ಮುಂದೆ ಒಂದು ಸಿಲಿಂಡರ್‌ ಬುಕ್‌ ಮಾಡಿ 25 ದಿನಗಳ ಬಳಿಕವಷ್ಟೇ ಮತ್ತೊಂದನ್ನು ಬುಕ್‌ ಮಾಡಲು ಅವಕಾಶ ಸಿಗಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಲೆಬನಾನ್‌ ಮನೆ ಮೇಲೆ ಇಸ್ರೇಲ್‌ ಅಪಾಯಕಾರಿ ಬಿಳಿ ರಂಜಕ ಪ್ರಯೋಗ
ಸಾಕುನಾಯಿ ಬಿಟ್ಟು ದುಬೈನಿಂದ ವಲಸಿಗರ ಪಲಾಯನ!