ಮುಂಬರುವ ಚುನಾವಣೆಯಲ್ಲಿ ತಮಿಳುನಾಡಿನ ಜನರು ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂಬ ವಿಶ್ವಾಸವಿದೆ. ಜನರ ನಾಡಿ ಮಿಡಿತ ನನಗೆ ಅರ್ಥವಾಗಿದೆ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನವದೆಹಲಿ: ಕ್ಷೇತ್ರ ಮರುವಿಂಗಡಣೆ ವೇಳೆ ಎಳ್ಳಷ್ಟೂ ಅನ್ಯಾಯ ಆಗಲ್ಲ. 5 ವರ್ಷ ಸುಮ್ಮನಿದ್ದ ಡಿಎಂಕೆ ಈಗ ತನ್ನ ವೈಫಲ್ಯ ಮುಚ್ಚಿಕೊಳ್ಳಲು ವಿನಾಕಾರಣ, ಈ ಬಗ್ಗೆ ಪ್ರಸ್ತಾಪ ಮಾಡುತ್ತಿದೆ. ಮುಂಬರುವ ಚುನಾವಣೆಯಲ್ಲಿ ತಮಿಳುನಾಡಿನ ಜನರು ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂಬ ವಿಶ್ವಾಸವಿದೆ. ಜನರ ನಾಡಿ ಮಿಡಿತ ನನಗೆ ಅರ್ಥವಾಗಿದೆ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಟೈಮ್ಸ್ ನೌ ಶೃಂಗಸಭೆಯಲ್ಲಿ ಮಾತನಾಡಿದ ಶಾ, ‘ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆಯ ಬಗ್ಗೆ ಏನೂ ಹೇಳಿಲ್ಲ. ಅಷ್ಟರಲ್ಲಿ 2026 ರ ರಾಜ್ಯ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಡಿಎಂಕೆ ಈ ವಿಷಯವನ್ನು ಎತ್ತಿದೆ. 5 ವರ್ಷಗಳ ಕಾಲ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದರು ಮತ್ತು ಈಗ ಅವರು ಇದ್ದಕ್ಕಿದ್ದಂತೆ ಎಚ್ಚರಗೊಂಡಿದ್ದಾರೆ’ ಎಂದರು.
‘ಕ್ಷೇತ್ರ ಮರುವಿಂಗಡಣೆಯಲ್ಲಿ ಯಾರಿಗೂ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ನಾನು ನಿಮಗೆ ಹೇಳಬಲ್ಲೆ. ಯಾರಿಗೂ ಅನ್ಯಾಯವಾಗುವ .0001 ಪ್ರತಿಶತದಷ್ಟೂ ಅವಕಾಶವಿಲ್ಲ’ ಎಂದರು.
ಸಂಸತ್ತಲ್ಲಿ ಮಾತಾಡದೇ ರಾಗಾ ವಿಯೆಟ್ನಾಂ ಯಾನ: ಶಾ
ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ತಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಸ್ಪೀಕರ್ ಮೇಲೆ ಆರೋಪಿಸಿದ್ದಕ್ಕೆ ಕಿಡಿಕಾರಿರುವ ಕೇಂದ್ರ ಸಚಿವ ಅಮಿತ್ ಶಾ,‘ ರಾಹುಲ್ ಭಾಷಣಕ್ಕೆ ಅವಕಾಶ ನೀಡಿದಾಗ ವಿಯೆಟ್ನಾಂಗೆ ಹೋಗಿದ್ದರು’ ಎಂದು ತಿರುಗೇಟು ನೀಡಿದ್ದಾರೆ.
ಟೈಮ್ಸ್ ನೌ ಸಂದರ್ಶನದಲ್ಲಿ ಮಾತನಾಡಿದ ಶಾ, ‘ಸಂಸತ್ತಿನಲ್ಲಿ ಕಾಂಗ್ರೆಸ್‌ಗೆ ಮಾತನಾಡಲು ಶೇ.42 ಸಮಯ ಮೀಸಲಿಡಲಾಗಿತ್ತು. ಆ ವೇಳೆ ಮಾತನಾಡದ ರಾಹುಲ್ ಗಾಂಧಿ ವಿಯೆಟ್ನಾಂಗೆ ಹೋದರು. ಅವರು ದೇಶಕ್ಕೆ ಹಿಂದಿರುಗಿದ ನಂತರ ತಾನು ಮಾತನಾಡುತ್ತೇನೆ ಎನ್ನುತ್ತಾರೆ. ಅದು ಹೇಗೆ ಸಾಧ್ಯ? ಅವರು ಒಂದು ಕುಟುಂಬಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಅವರಿಗೆ ವಿಶೇಷ ಸವಲತ್ತು ಸಿಗುವುದಿಲ್ಲ;. ಅವರು ಬೇರೊಬ್ಬರ ಸಮಯವನ್ನು ಕಸಿದುಕೊಂಡು ಮಾತನಾಡಲು ಆಗುವುದಿಲ್ಲ’ ಎಂದರು.
30 ವರ್ಷ ಬಿಜೆಪಿ ಅಧಿಕಾರದಲ್ಲಿ: ಅಮಿತ್ ಶಾ
ನವದೆಹಲಿ: ಬಿಜೆಪಿ ತನ್ನ ಸ್ಥಿರ ಪ್ರದರ್ಶನದಿಂದಾಗಿ ಕನಿಷ್ಠ 30 ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿ ಉಳಿಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾವಿಶ್ವಾಸ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ರಾತ್ರಿ ಟೈಮ್ಸ್ ನೌ ಶೃಂಗಸಭೆ 2025ರಲ್ಲಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷದ ಗೆಲುವು ಅದರ ನಿರಂತರ ಪರಿಶ್ರಮ ಆಧರಿಸಿರುತ್ತದೆ ಹಾಗೂ ನೀವು ನಿಮಗಾಗಿ ಜೀವಿಸದೆ, ದೇಶಕ್ಕಾಗಿ ಬದುಕಿದಾಗ ಗೆಲುವು ನಿಮ್ಮದಾಗಿರುತ್ತದೆ’ ಎಮದರು.
‘ನಾನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಿದ್ದಾಗ, ಮುಂದಿನ 30 ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿ ಉಳಿಯುತ್ತದೆ ಎಂದು ಹೇಳಿದ್ದೆ. ಈಗ ಕೇವಲ 10 ವರ್ಷಗಳು ಕಳೆದಿವೆ. ಇನ್ನೂ 20 ವರ್ಷ ಬಾಕಿ ಇದೆ’ ಎಂದು ಅವರು ಮಾರ್ಮಿಕವಾಗಿ ನುಡಿದರು.
‘ಆರ್‌ಎಸ್‌ಎಸ್ ಕಳೆದ 100 ವರ್ಷಗಳಿಂದ ದೇಶಭಕ್ತರನ್ನು ಸಿದ್ಧಪಡಿಸುತ್ತಿದೆ. ಹಲವು ಆಯಾಮಗಳನ್ನು ನಮ್ಮ ಮುಂದೆ ಇದ್ದರೂ ದೇಶಭಕ್ತಿಯನ್ನು ಹೇಗೆ ಪ್ರಧಾನ ಗುರಿಯನ್ನಾಗಿ ಇರಿಸಿಕೊಳ್ಳಬೇಕು ಎಂಬುದನ್ನು ನಾನು ಆರ್‌ಎಸ್‌ಎಸ್‌ನಿಂದ ಕಲಿತಿದ್ದೇನೆ. ಸರ್ಕಾರದಲ್ಲಿ ಆರೆಸ್ಸೆಸ್ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ’ ಎಂದು ಅವರು ಹೇಳಿದರು.