ಇಸ್ರೋ ಜಾಹೀರಾತಿಗೆ ಚೀನಾ ರಾಕೆಟ್‌ ಬಳಸಿದ ಡಿಎಂಕೆ ಸಚಿವೆ!

KannadaprabhaNewsNetwork |  
Published : Feb 29, 2024, 02:05 AM IST
ಡಿಎಂಕೆ ಪೋಸ್ಟರ್‌ | Kannada Prabha

ಸಾರಾಂಶ

ಡಿಎಂಕೆ ಸರ್ಕಾರಕ್ಕೆ ಭಾರತದ ಅಭಿವೃದ್ಧಿಯೇ ಕಾಣದು ಎಂದು ಪ್ರಧಾನಿ ಮೋದಿ ಟೀಕೆ ಮಾಡಿದ್ದಾರೆ. ಚೀನಾ ಏನೂ ನಮ್ಮ ವೈರಿ ದೇಶವಲ್ಲ ಎಂದು ಡಿಎಂಕೆ ಸಂಸದೆ ಕನಿಮೋಳಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಚೆನ್ನೈ: ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಇಸ್ರೋದ 2ನೇ ಉಡ್ಡಯನ ಕೇಂದ್ರ ಸಂಬಂಧ ತಮಿಳುನಾಡು ಸಚಿವರೊಬ್ಬರು ನೀಡಿದ ಪತ್ರಿಕಾ ಜಾಹೀರಾತು ಭಾರೀ ವಿವಾದಕ್ಕೆ ಕಾರಣವಾಗಿದೆ. ಜಾಹೀರಾತಲ್ಲಿ ಇಸ್ರೋದ ರಾಕೆಟ್‌ ಬಳಸುವ ಬದಲು ಚೀನಾ ರಾಷ್ಟ್ರಧ್ವಜ ಹೊಂದಿರುವ ರಾಕೆಟ್‌ನ ಚಿತ್ರ ಬಳಸಲಾಗಿದೆ.ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕಟುಟೀಕೆ ಮಾಡಿದ್ದರೆ, ಡಿಎಂಕೆ ನಾಯಕಿ ಕನಿಮೋಳಿ ಜಾಹೀರಾತು ಸಮರ್ಥಿಸಿಕೊಂಡಿದ್ದಾರೆ.ಏನಿದು ಪ್ರಕರಣ?:ಇಸ್ರೋ ಉಡ್ಡಯನ ಕೇಂದ್ರ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ಡಿಎಂಕೆ ಸರ್ಕಾರದಲ್ಲಿನ ಮೀನುಗಾರಿಕಾ ಖಾತೆ ಸಚಿವೆ ಅನಿತಾ ರಾಧಾಕೃಷ್ಣನ್‌ ಈ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಅದರಲ್ಲಿ ಯೋಜನೆಯನ್ನು ರಾಜ್ಯಕ್ಕೆ ತರುವಲ್ಲಿ ಮಾಜಿ ಸಿಎಂ ಕರುಣಾನಿಧಿ ಮತ್ತು ಹಾಲಿ ಸಿಎಂ ಸ್ಟಾಲಿನ್‌ ಅವರನ್ನು ಹೊಗಳುವ ಅಂಶಗಳಿದ್ದವು. ಆದರೆ ಜಾಹೀರಾತಲ್ಲಿ ಇಸ್ರೋ ರಾಕೆಟ್‌ ಫೋಟೋ ಹಾಕುವ ಬದಲು ಅಂತರ್ಜಾಲದಿಂದ ಡೌನ್‌ಡೋನ್‌ ಮಾಡಲಾದ ಚೀನಾದ ರಾಷ್ಟ್ರಧ್ವಜ ಒಳಗೊಂಡಿರುವ ರಾಕೆಟ್‌ ಫೋಟೋ ಬಳಸಿಕೊಳ್ಳಲಾಗಿದೆ.ಮೋದಿ ಟೀಕೆ:ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಡಿಎಂಕೆ ಸರ್ಕಾರದ ಎಡವಟ್ಟಿನ ಬಗ್ಗೆ ಕಿಡಿಕಾರಿದ ಪ್ರಧಾನಿ ಮೋದಿ, ‘ಡಿಎಂಕೆ ಭಾರತದ ಅಭಿವೃದ್ಧಿಯನ್ನು ನೋಡಲೇ ಸಿದ್ಧವಿಲ್ಲ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಅಭಿವೃದ್ಧಿಯನ್ನು ನೋಡಲು ಅವರು ಸಿದ್ಧರಿಲ್ಲ. ಇದು ಅವರು ಭಾರತೀಯ ವಿಜ್ಞಾನಿಗಳಿಗೆ ಮಾಡಿದ ಅವಮಾನ’ ಎಂದರು.ಜೊತೆಗೆ, ‘ಡಿಎಂಕೆ ಯಾವುದೇ ಅಭಿವೃದ್ಧಿ ಕೆಲಸ ಮಾಡುವುದಿಲ್ಲ, ಆದರೆ ಕೆಲಸ ಸುಳ್ಳು ಹಿರಿಮೆ ಪಡೆಯಲು ಯತ್ನಿಸುತ್ತಾರೆ. ಅವರು ನಮ್ಮ ಯೋಜನೆಗಳ ಮೇಲೆ ತಮ್ಮ ಸರ್ಕಾರದ ಸ್ಟಿಕ್ಕರ್‌ ಅಂಟಿಸುತ್ತಾರೆ. ಇಸ್ರೋ ಉಡ್ಡಯನ ಕೇಂದ್ರ ಶಂಕುಸ್ಥಾಪನೆಯ ಹಿರಿಮೆ ಪಡೆಯಲು ಅವರು ಚೀನಾ ಧ್ವಜದ ಚಿಹ್ನೆ ಅಂಟಿಸಿದ್ದಾರೆ. ನೀವು ತೆರಿಗೆ ರೂಪದಲ್ಲಿ ಪಾವತಿಸಿದ ಹಣವನ್ನುಅವರು ಜಾಹೀರಾತು ನೀಡಲು ಬಳಸಿಕೊಳ್ಳುತ್ತಿದ್ದಾರೆ. ಆದರೆ ಅವರು ಜಾಹೀರಾತಲ್ಲಿ ಭಾರತದ ಧ್ವಜದ ಚಿಹ್ನೆ ಹಾಕಿಲ್ಲ. ಏಕೆಂದರೆ ಅವರು ಬಾಹ್ಯಾಕಾಶ ವಲಯದಲ್ಲಿ ಭಾರತದ ಅಭಿವೃದ್ಧಿಯನ್ನು ಪ್ರದರ್ಶಿಸಲು ಬಯಸುವುದಿಲ್ಲ’ ಎಂದು ಮೋದಿ ಟೀಕಿಸಿದರು.ಇನ್ನೊಂದೆಡೆ, ‘ಇದು ಚೀನಾ ಕಡೆಗಿನ ಡಿಎಂಕೆ ರಸರ್ಕಾರದ ಬದ್ಧತೆ ಮತ್ತು ನಮ್ಮ ದೇಶದ ಸಾರ್ವಭೌಮತಕ್ಕೆ ಅವರು ತೋರಿಸುತ್ತಿರುವ ಅಗೌರವದ ಸಂಕೇತವಾಗಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಟೀಕಿಸಿದ್ದಾರೆ.ಸಮರ್ಥನೆ:ಈ ನಡುವೆ ಜಾಹೀರಾತಲ್ಲಿ ಚೀನಾ ಧ್ವಜ ಬಳಕೆಯನ್ನು ಡಿಎಂಕೆ ಸಂಸದೆ ಕನಿಮೋಳಿ ಸಮರ್ಥಿಸಿಕೊಂಡಿದ್ದಾರೆ. ‘ಜಾಹೀರಾತು ಸಿದ್ಧಪಡಿಸುವ ವ್ಯಕ್ತಿಯಿಂದ ತಪ್ಪಾಗಿರಬಹುದು. ನಾವೇನು ಚೀನಾವನ್ನು ವೈರಿ ದೇಶವೆಂದು ಘೋಷಿಸಿಲ್ಲ. ಸ್ವತಃ ಮೋದಿಯೇ ಚೀನಾ ಪ್ರಧಾನಿಯನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ. ಇಬ್ಬರು ಒಂದಾಗಿ ಮಹಾಬಲಿಪುರಂಗೆ ಭೇಟಿ ನೀಡಿದ್ದಾರೆ. ಆದರೆ ಇದೀಗ ಸತ್ಯವನ್ನು ಒಪ್ಪಿಕೊಳ್ಳಲಾಗದೆ ಬಿಜೆಪಿ ಜನರ ದಿಕ್ಕು ತಪ್ಪಿಸುವ ವಿಷಯ ಮಾಡುತ್ತಿದೆ’ ಎಂದು ಟೀಕಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಷ್ಯಾದ ಯಾಕುಟಿಯಾದಲ್ಲಿ- 56 ಡಿ.ಸೆ. ತಾಪ ದಾಖಲು
ಹಾರುವ ಮೊದಲೇ ಕೇರಳದ ವಿಮಾನ ಸಂಸ್ಥೆ ಸಂಕಷ್ಟದಲ್ಲಿ