ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಬುಧವಾರ ಮುಂಜಾನೆ ತಮ್ಮ ನಿವಾಸದ ಮುಂದೆ ಜನತಾ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ದುಷ್ಕರ್ಮಿಯೊಬ್ಬ ಕಪಾಳಮೋಕ್ಷ ಮಾಡಿ, ತಲೆ ಕೂದಲು ಎಳೆದಾಡಿದ ಆಘಾತಕಾರಿ ಘಟನೆ ನಡೆದಿದೆ. ಈತ ಶ್ವಾನಪ್ರೇಮಿ ಎನ್ನಲಾಗಿದ್ದು, ದಿಲ್ಲಿಯಲ್ಲಿ ಬೀದಿನಾಯಿ ವಿರುದ್ಧ ಕ್ರಮ ಕೈಗೊಳ್ಳುವ ಸರ್ಕಾರದ ಧೋರಣೆ ಹಾಗೂ ಸುಪ್ರೀಂ ಕೋರ್ಟ್ ಆದೇಶದಿಂದ ನೊಂದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಈ ಕೃತ್ಯವು ಈ ಹಿಂದಿನ ಸಿಎಂ ಅರವಿಂದ ಕೇಜ್ರಿವಾಲ್ ಮೇಲಿನ ಕಪಾಳಮೋಕ್ಷ ಘಟನೆಯನ್ನು ನೆನಪಿಸಿದೆ.
ಇದು ಗುಪ್ತಾ ಅವರ ಹತ್ಯೆಗೆ ನಡೆದ ಪೂರ್ವನಿಯೋಜಿತ ಸಂಚು ಎಂದು ಮುಖ್ಯಮಂತ್ರಿಗಳ ಕಚೇರಿ ಆರೋಪಿಸಿದೆ. ಇನ್ನೊಂದೆಡೆ ಇಂಥ ಯಾವುದೇ ದಾಳಿ ಜನಸೇವೆಯ ಕುರಿತ ತಮ್ಮ ಇಚ್ಛಾ ಶಕ್ತಿಯನ್ನು ಕುಂದಿಸುವುದಕ್ಕೆ ಸಾಧ್ಯವಿಲ್ಲ ಎಂದು ರೇಖಾ ಗುಪ್ತಾ ಹೇಳಿದ್ದಾರೆ.ಪ್ರಕರಣ ಸಂಬಂಧ ರಾಜೇಶಭಾಯಿ ಖಿಮ್ಜಿಭಾಯಿ ಸಕ್ರಿಯಾ (41) ಎಂಬಾತನನ್ನು ಬಂಧಿಸಿದ್ದು, ಆತನ ವಿರುದ್ಧ ಹತ್ಯೆ ಕೇಸು ದಾಖಲಿಸಲಾಗಿದೆ. ಬಂಧಿತ ವ್ಯಕ್ತಿ ಗುಜರಾತ್‌ನ ರಾಜಕೋಟ್‌ನ ನಿವಾಸಿ ಎಂದು ತಿಳಿದುಬಂದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಆಗಿದ್ದೇನು?:ದೆಹಲಿಯ ಸಿವಿಲ್ ಲೈನ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದ ಮುಂದೆ ಸಿಎಂ ರೇಖಾ ಗುಪ್ತಾ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದರು. ಮುಂಜಾನೆ ಸುಮಾರು 8.15ಕ್ಕೆ ದಿಢೀರನೆ ನುಗ್ಗಿದ ವ್ಯಕ್ತಿಯೊಬ್ಬ ಗುಪ್ತಾ ಅವರ ಕಪಾಳಕ್ಕೆ ಬಾರಿಸಿದ್ದಾನೆ. ಅಲ್ಲದೆ, ಅವರನ್ನು ನೆಲದ ಮೇಲೆ ಕೆಡವಿ ಹೊಡೆಯಲು ಪ್ರಯತ್ನಿಸಿದ್ದಾನೆ. ತಕ್ಷಣ ಆತನನ್ನು ಬಂಧಿಸಿ ಪೊಲೀಸರ ವಶಕ್ಕೆ ನೀಡಲಾಗಿದೆ. ಘಟನೆಗೂ ಮೊದಲು ಆರೋಪಿ ಸಿಎಂ ನಿವಾಸದ ಮುಂದೆ ಓಡಾಡುತ್ತಿರುವುದು, ಫೋನಿನಲ್ಲಿ ಮಾತಾಡುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೊಡೆದಾತ ನಾಯಿಪ್ರೇಮಿ:ಈ ನಡುವೆ ಪುತ್ರನ ಬಂಧನ ಕುರಿತು ಪ್ರತಿಕ್ರಿಯಿಸಿರುವ ಆತನ ತಾಯಿ ಭಾನು, ‘ನನ್ನ ಮಗ ನಾಯಿಪ್ರೇಮಿ. ಬೀದಿನಾಯಿಗಳನ್ನು ಶೆಡ್‌ಗಳಿಗೆ ಕಳಿಸುವ ಸುಪ್ರೀಂ ಕೋರ್ಟ್ ಆದೇಶದಿಂದ ಸಿಟ್ಟಿಗೆದ್ದಿದ್ದ. ಈ ಬಗ್ಗೆ ಪ್ರತಿಭಟನೆ ನಡೆಸಲು ಸೋಮವಾರ ದೆಹಲಿಗೆ ತೆರಳಿದ್ದ. ಅವನ ಮಾನಸಿಕ ಆರೋಗ್ಯ ಸರಿಯಿಲ್ಲ. ನನಗೆ, ಆತನ ಹೆಂಡತಿಗೆ ಮತ್ತು ಎಲ್ಲರಿಗೂ ಹೊಡೆಯುತ್ತಾನೆ’ ಎಂದಿದ್ದಾರೆ.
ಆಗಿದ್ದೇನು?
- ಬುಧವಾರ ಬೆಳಗ್ಗೆ ದಿಲ್ಲಿ ಸಿಎಂ ನಿವಾಸದಲ್ಲಿ ಜನಸ್ಪಂದನ ಕಾರ್ಯಕ್ರಮ
- ಈ ವೇಳೆ ರೇಖಾ ಗುಪ್ತಾ ಕಪಾಳಕ್ಕೆ ಹೊಡೆದು ಕೂದಲು ಜಗ್ಗಿದ ವ್ಯಕ್ತಿ
- ಅವರನ್ನು ನೆಲಕ್ಕೆ ಬೀಳಿಸಿ ಪರಾರಿ ಆಗಲು ಯತ್ನ, ಕೂಡಲೇ ಬಂಧನ
- ಈತ ಗುಜರಾತ್ ಮೂಲದ ರಾಜೇಶಭಾಯಿ ಸಕ್ರಿಯಾ ಎಂದು ಗುರುತು ಪತ್ತೆ
- ದಿಲ್ಲಿಯಲ್ಲಿ ಬೀದಿನಾಯಿ ಮೇಲೆ ಕ್ರಮ ಖಂಡಿಸಿ ಈ ಕೃತ್ಯ ಎಂಬ ಶಂಕೆ