ವಾಷಿಂಗ್ಟನ್: 8 ದಿನದ ಯಾನಕ್ಕಾಗಿ ಬಾಹ್ಯಾಕಾಶಕ್ಕೆ ತೆರಳಿದ್ದ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಗಗನಯಾನಿ ಬುಚ್ ವಿಲ್ಮೋರ್, ಅನಿರೀಕ್ಷಿತ ಕಾರಣಗಳಿಂದಾಗಿ ಹೆಚ್ಚುವರಿಯಾಗಿ 278 ದಿನ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಉಳಿಯಬೇಕಾಯಿತು. ಆದರ ಇದಕ್ಕಾಗಿ ಅವರಿಗೆ ಯಾವುದೇ ಹೆಚ್ಚುವರಿ ವೇತನವಿಲ್ಲ. ದಿನಕ್ಕೆ ಕೇವಲ 430 ಭತ್ಯೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ, ‘ಹೀಗಾಗಿದೆ ಎಂದು ನನಗೆ ಗೊತ್ತಿರಲಿಲ್ಲ. ಆದ್ದರಿಂದ ನನ್ನ ಜೇಬಿನಿಂದಲೇ ನಾನು ವೇತನ ನೀಡುವೆ’ ಎಂದಿದ್ದಾರೆ.
ವೇತನ ಎಷ್ಟು? ಭತ್ಯೆ ಎಷ್ಟು ? :
ಅಮೆರಿಕದ ನಿಯಮಗಳ ಪ್ರಕಾರ ನಾಸಾದ ಗಗನಯಾತ್ರಿಗಳಿಗೂ ಸರ್ಕಾರಿ ಉದ್ಯೋಗಿಗಳಷ್ಟೇ ವೇತನ ನೀಡಲಾಗುತ್ತದೆ. ಅಧಿಕ ಕೆಲಸಕ್ಕಾಗಿ ಹೆಚ್ಚುವರಿ ಸಂಬಳ ನೀಡುವ ಸೌಲಭ್ಯವಿಲ್ಲ. ಬಾಹ್ಯಾಕಾಶ ಯಾತ್ರೆಯನ್ನೂ ಸರ್ಕಾರಿ ಕೆಲಸವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಅವರ ಪ್ರಯಾಣ, ವಾಸ, ಆಹಾರದ ವೆಚ್ಚಗಳನ್ನು ನಾಸಾ ಭರಿಸುತ್ತದೆ.
ಈ ವ್ಯವಸ್ಥೆಯ ಅಡಿಯಲ್ಲಿ, ಹಿರಿಯ ಗಗನಯಾತ್ರಿಯಾಗಿರುವ ಸುನಿತಾ ಅವರಿಗೆ ವರ್ಷಕ್ಕೆ 1.05 ಕೋಟಿ ರು. ವೇತನ ನೀಡಲಾಗುತ್ತದೆ. ಇನ್ನು 278 ದಿನಗಳ ಕಾಲ ಹೆಚ್ಚುವರಿಯಾಗಿ ಅಂತರಿಕ್ಷದಲ್ಲಿದ್ದ ಕಾರಣ ಅವರಿಗೆ 1.2 ಲಕ್ಷ ರು. ಭತ್ಯೆ ನೀಡಲಾಗುತ್ತದೆ. ಅಂದರೆ ಇದನ್ನು ಭಾಗಿಸಿದಾಗ ದಿನದ ಸರಾಸರಿ ಕೇವಲ 430 ರು. ಆಗುತ್ತದೆ.
ನಾಸಾದ ಈ ನಿರ್ಧಾರ ಟೀಕೆಗೆ ಕಾರಣವಾಗಿದೆ. ಹೆಚ್ಚುವರಿ ವೇತನ ಏಕಿಲ್ಲ? ಬರೀ ಪುಡಿಗಾಸು ಭತ್ಯೆ ಸಾಕೇ ಎಂದು ಜನತೆ ಪ್ರಶ್ನಿಸಿದ್ದಾರೆ.
ಹೆಚ್ಚುವರಿ ಹಣ ಕೈಯಿಂದ ಕೊಡುವೆ - ಟ್ರಂಪ್:
ಇನ್ನು ಈ ಬಗ್ಗೆ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ, ‘ನನಗೆ ಈ ವಿಷಯ ಗೊತ್ತಿರಲಿಲ್ಲ. ಅವರು ಮಾಡಿರುವ ಮಹತ್ಕಾರ್ಯಕ್ಕೆ ಈ ಮೊತ್ತವೇನೂ ದೊಡ್ಡದಲ್ಲ. ಅವರಿಗೆ ಹೆಚ್ಚುವರಿ ವೇತನ ನಿಡಲೇಬೇಕು ಎಂದರೆ ಅದನ್ನು ನಾನೇ ನನ್ನ ಜೇಬಿನಿಂದ ಕೊಡುವೆ’ ಎಂದಿದ್ದಾರೆ.
ಜೊತೆಗೆ ಸ್ಪೇಸ್ ಎಕ್ಸ್ ಸಂಸ್ಥಾಪಕ ಹಾಗೂ ಆಪ್ತ ಎಲಾನ್ ಮಸ್ಕ್ ಅವರನ್ನು ಪ್ರಶಂಸಿಸಿದ ಅವರು, ‘ಇವರಿರದಿದ್ದರೆ ಗಗನಯಾತ್ರಿಗಳನ್ನು ಇನ್ಯಾರು ಕರೆತರುತ್ತಿದ್ದರು’ ಎಂದು ಧನ್ಯವಾದ ಸಲ್ಲಿಸಿದ್ದಾರೆ.
ಅಮೆರಿಕದಿಂದ ಮತ್ತೆ 5 ಲಕ್ಷ ವಿದೇಶಿಗರ ಗಡೀಪಾರು ಸಾಧ್ಯತೆ
ಮಿಯಾಮಿ: ಅಕ್ರಮ ವಲಸಿಗರ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ ಸಾರಿರುವ ನಡುವೆಯೇ ಮತ್ತೆ 5 ಲಕ್ಷ ಜನರ ಗಡೀಪಾರು ಆತಂಕ ತಲೆ ಎತ್ತಿದೆ. ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರು 2022ರಲ್ಲಿ ರಾಜಕೀಯ ಅಸ್ಥಿರತೆ, ಯುದ್ಧ ಸ್ಥಿತಿ ಹೊಂದಿದ್ದ ಕ್ಯೂಬಾ, ಹೈಟಿ, ನಿಕಾರಾಗುವಾ ಮತ್ತು ವೆನಿಜ್ಯುವೆಲಾ ದೇಶಗಳಿಂದ ಕರೆತಂದಿದ್ದ 5,32,000 ಜನರಿಗೆ ನೀಡಲಾಗಿದ್ದ ತಾತ್ಕಾಲಿಕ ಅನುಮತಿಯನ್ನು ಟ್ರಂಪ್ ಆಡಳಿತ ರದ್ದುಪಡಿಸಿದೆ. ಈ ಅನುಮತಿಯು ಏ.24ರಂದು ರದ್ದಾಗುತ್ತಿತ್ತು. ಆದರೆ ಅದಕ್ಕೂ ಮುನ್ನವೇ ಅನುಮತಿ ರದ್ದುಪಡಿಸಲಾಗಿದೆ. ಈ ನಿರ್ಧಾರ ಮಾನವೀಯ ನೆರವಿಗೆ ಅಡ್ಡಿ ಎಂದು ಅಮೆರಿಕದ ಕೆಲ ನಾಗರಿಕರು ಮತ್ತು ವಲಸಿಗರು ಕೋರ್ಟ್ ಮೊರೆ ಹೋಗಿದ್ದಾರೆ.
ಮಸ್ಕ್‌ರ ಸ್ಟಾರ್‌ಲಿಂಕ್ ಸೇವೆಗೆ ಪಾಕ್ ತಾತ್ಕಾಲಿಕ ಅನುಮತಿ
ಇಸ್ಲಾಮಾಬಾದ್: ಟೆಕ್ ದೈತ್ಯ ಎಲಾನ್ ಮಸ್ಕ್ ಒಡೆತನದ ಉಪಗ್ರಹ ಆಧಾರಿತ ಇಂಟರ್‌ನೆಟ್ ಒದಗಿಸುವ ಸ್ಟಾರ್‌ಲಿಂಕ್‌ಗೆ ತನ್ನ ದೇಶದಲ್ಲಿ ಸೇವೆ ನೀಡಲು ಪಾಕಿಸ್ತಾನ ತಾತ್ಕಾಲಿಕ ಅನುಮತಿ ನೀಡಿದೆ.ಈ ಕುರಿತು ಪಾಕಿಸ್ತಾನದ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಚಿವೆ ಶಜಾ಼ ಫಾತಿಮಾ ಖ್ವಾಜಾ ಮಾಹಿತಿ ನೀಡಿದ್ದು, ‘ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆಯು ದೇಶದ ಸಂಪರ್ಕವನ್ನು ಉತ್ತಮಗೊಳಿಸುತ್ತದೆ. ಎಲ್ಲಾ ಭದ್ರತಾ ಮತ್ತು ನಿಯಂತ್ರಕ ಸಂಸ್ಥೆಗಳ ಒಮ್ಮತದೊಂದಿಗೆ ಹಾಗೂ ಪ್ರಧಾನಿ ಶೆಹಬಾಜ್ ಶರೀಫ್ ಅವರ ನಿರ್ದೇಶನದಂತೆ ಸ್ಟಾರ್‌ಲಿಂಕ್‌ಗೆ ತನ್ನ ಸೇವೆಗಳನ್ನು ಒದಗಿಸಲು ತಾತ್ಕಾಲಿಕ ಅನುಮತಿ ನೀಡಲಾಗಿದೆ’ ಎಂದರು.
ಜೊತೆಗೆ, ದೂರಸಂಪರ್ಕ ಪ್ರಾಧಿಕಾರವು ಸಂಸ್ಥೆಯ ಶುಲ್ಕ ಪಾವತಿ ಮತ್ತು ಇತರೆ ಪರವಾನಗಿ ಅವಶ್ಯಕತೆಗಳ ಅನುಸರಣೆಗಳ ಮೇಲ್ವಿಚಾರಣೆ ಮಾಡುತ್ತದೆ ಎಂದು ತಿಳಿಸಿದರು.