ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿ ಹಚ್ಚಿ ಭೀಕರವಾಗಿ ಕೊಂದ ಪತಿ!

KannadaprabhaNewsNetwork |  
Published : Aug 25, 2025, 01:00 AM ISTUpdated : Aug 25, 2025, 04:58 AM IST
ಆರೋಪಿ | Kannada Prabha

ಸಾರಾಂಶ

ತವರಿಂದ ಕೈಲಾದಷ್ಟು ವರದಕ್ಷಿಣೆ ತಂದ ಹೊರತಾಗಿಯೂ ಹೆಚ್ಚುವರಿ 36 ಲಕ್ಷ ರು.ಗೆ ಬೇಡಿಕೆ ಇಡುತ್ತಿದ್ದ ಗಂಡನ ಮನೆಯವರು, ಮಹಿಳೆಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ದಾರುಣ ಘಟನೆ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ.  

  ನೋಯ್ಡಾ :  ತವರಿಂದ ಕೈಲಾದಷ್ಟು ವರದಕ್ಷಿಣೆ ತಂದ ಹೊರತಾಗಿಯೂ ಹೆಚ್ಚುವರಿ 36 ಲಕ್ಷ ರು.ಗೆ ಬೇಡಿಕೆ ಇಡುತ್ತಿದ್ದ ಗಂಡನ ಮನೆಯವರು, ಮಹಿಳೆಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ದಾರುಣ ಘಟನೆ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ. ಹೃದಯ ಝಲ್ಲೆನಿಸುವ ಈ ದೃಶ್ಯಗಳು ಸೆರೆಯಾಗಿದ್ದು, ಎಲ್ಲೆಡೆ ಹರಿದಾಡುತ್ತಿವೆ. ಆರೋಪಿ ಪತಿ ಹಾಗೂ ಅತ್ತೆಯನ್ನು ಬಂಧಿಸಲಾಗಿದೆ.

ಮೃತ ನಿಕ್ಕಿ (28) 2016ರಲ್ಲಿ ನೋಯ್ಡಾದ ವಿಪಿನ್‌ ಎಂಬಾತನನ್ನು ಮದುವೆಯಾಗಿದ್ದರು. ಆಕೆಯ ಹಿರಿಯ ಸಹೋದರಿ ಕಾಂಚಂನ್‌ ಕೂಡ ವಿಪಿನ್‌ ಸಹೋದರ ರಾಹುಲ್‌ನನ್ನು ವಿವಾಹವಾಗಿ, ಅದೇ ಮನೆಯಲ್ಲಿದ್ದರು. ಮದುವೆಯ ಸಮಯದಲ್ಲಿ ನಿಕ್ಕಿ ಮನೆಯವರು ವರದಕ್ಷಿಣೆಯಾಗಿ ಸ್ಕಾರ್ಪಿಯೋ ಎಸ್‌ಯುವಿ, ರಾಯಲ್‌ ಎನ್‌ಫೀಲ್ಡ್‌, ನಗದು ಮತ್ತು ಚಿನ್ನವನ್ನು ಕೊಟ್ಟಿದ್ದರು. ಹಬ್ಬಗಳಿದ್ದಾಗ ಉಡುಗೊರೆಯನ್ನೂ ಕಳಿಸುತ್ತಿದ್ದರು. ಆದರೆ ವಿಪಿನ್‌ನ ದಾಹ ಅಷ್ಟಕ್ಕೇ ತಣಿಯದೆ, 36 ಲಕ್ಷ ರು. ಕೊಡುವಂತೆ ನಿಕ್ಕಿಯನ್ನು ಪೀಡಿಸುತ್ತಿದ್ದ. ಈ ಪೀಡನೆ ಅತಿರೇಕಕ್ಕೆ ಹೋಗಿ, ವಿಪಿನ್‌ ಮತ್ತು ಆತನ ತಾಯಿ ಸೇರಿಕೊಂಡು ನಿಕ್ಕಿಯನ್ನು ಕೂದಲು ಹಿಡಿದು ಎಳೆದೊಯ್ದು, ಅವರ ಮೇಲೆ ಆ್ಯಸಿಡ್‌ ಸುರಿದು ಬೆಂಕಿ ಹಚ್ಚಿದ್ದಾರೆ. ಈ ದೃಶ್ಯವನ್ನು ಸೆರೆಹಿಡಿದಿರುವ ಕಾಂಚನ್‌, ‘ಆ ಸಂದರ್ಭದಲ್ಲಿ ನನಗೇನೂ ಮಾಡಲಾಗಲಿಲ್ಲ’ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಸಜೀವದಹನವಾಗುತ್ತಿದ್ದ ನಿಕ್ಕಿಯಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಕೆ ಬದುಕುಳಿಯಲಿಲ್ಲ. ನಿಕ್ಕಿ ಮೈಗೆ ಬೆಂಕಿ ಹತ್ತಿಕೊಂಡದ್ದನ್ನು ಕಣ್ಣಾರೆ ಕಂಡಿದ್ದ ಅವರ 6 ವರ್ಷದ ಮಗ, ‘ಅವರು ನನ್ನಮ್ಮನ ಮೇಲೆ ಏನೋ ಸುರಿದರು. ಕಪಾಳಕ್ಕೆ ಬಾರಿಸಿದರು ಮತ್ತು ಲೈಟರ್‌ ಬಳಸಿ ಬೆಂಕಿ ಹಚ್ಬಿಟ್ಟರು’ ಎಂದು ಹೇಳಿದ್ದಾನೆ.

ವಿಡಿಯೋದಲ್ಲಿ ಏನಿದೆ?:

ವಿಪಿನ್‌, ಮತ್ತವನ ತಾಯಿ ನಿಕ್ಕಿಯ ಕೂದಲು ಹಿಡಿದು ಎಳೆದಾಡುತ್ತಾ, ಹೊಡೆಯುತ್ತಿದ್ದುದನ್ನು ಕಾಂಚನ್‌ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುತ್ತಿದ್ದರು. ಮಧ್ಯಪ್ರವೇಶಿಸಿದ್ದಕ್ಕಾಗಿ ಕಾಂಚನ್‌ಗೂ ಹೊಡೆದ ವಿಪಿನ್‌, ಬಳಿಕ ನಿಕ್ಕಿ ಮೇಲೆ ದ್ರವವನ್ನು ಸುರಿದು, ಬೆಂಕಿ ಹಚ್ಚುತ್ತಾರೆ. ಮೈತುಂಬಾ ಬೆಂಕಿ ಹತ್ತಿಕೊಂಡಿದ್ದ ನಿಕ್ಕಿ, ಕಷ್ಟದಲ್ಲಿ ಮೆಟ್ಟಿಲು ಇಳಿಯುತ್ತಿರುವುದೂ ಸೆರೆಯಾಗಿದೆ. ಕಾಂಚನ್‌ ಅವರು ಸಹೋದರಿಯ ಮೇಲೆ ನೀರೆರಚಿ ಬೆಂಕಿ ನಂದಿಸಲು ಯತ್ನಿಸಿದರಾದರೂ, ಅವರಾಗಲೇ ಪ್ರಜ್ಞೆ ತಪ್ಪಿದ್ದರು. ಈ ಬಗ್ಗೆ ಮಾತನಾಡಿರುವ ಕಾಂಚನ್‌, ‘ನಾನು ಈ ದೃಶ್ಯವನ್ನು ಸೆರೆ ಹಿಡಿಯದೇ ಇದ್ದಿದ್ದರೆ, ನಿಕ್ಕಿ ಹೇಗೆ ಸತ್ತಳು ಎಂದು ಯಾರಿಗೂ ತಿಳಿಯುತ್ತಿರಲಿಲ್ಲ’ ಎಂದು ಹೇಳಿದ್ದಾರೆ.  

ಕಿರುಕುಳ ಹೊಸದಲ್ಲ-ಕಾಂಚನ್‌:

ಮದುವೆಯಾಗಿ ಈ ಮನೆಗೆ ಕಾಲಿಟ್ಟಾಗಿಂದ ಸಹೋದರಿಯರಿಬ್ಬರು ವರದಕ್ಷಿಣೆಯ ಕಾರಣದಿಂದಾಗಿ ಕಿರುಕುಳಕ್ಕೆ ಒಳಗಾಗುತ್ತಿದ್ದ ಬಗ್ಗೆ ಕಾಂಚನ್‌ ಮಾಧ್ಯಮದ ಮುಂದೆ ಮಾತಾಡಿದ್ದಾರೆ. ‘ವಿಪಿನ್‌ ಮತ್ತು ರೋಹಿತ್‌ ಹಲವು ಬಾರಿ ತಡರಾತ್ರಿಯ ವರೆಗೆ ಮನೆಗೆ ಬರದೆ, ಪರಸ್ತ್ರೀಯರ ಜತೆ ಇರುತ್ತಿದ್ದರು. ಆ ಬಗ್ಗೆ ಪ್ರಶ್ನಿಸಿದರೆ, ನಮಗೆ ಹೊಡೆಯುತ್ತಿದ್ದರು. ನಾನು ಮತ್ತು ನಿಕ್ಕಿ ಸೇರಿ ಮೇಕ್‌ಅಪ್‌ ಸ್ಟುಡಿಯೋ ನಡೆಸುತ್ತಿದ್ದೆವು. ಇದು ಹಿಡಿಸದೆ, ನಮ್ಮ ಸಂಪಾದನೆಯನ್ನೆಲ್ಲಾ ಕಸಿದುಕೊಂಡು ಥಳಿಸುತ್ತಿದ್ದರು. ನಿಕ್ಕಿ ತೊಲಗಿದರೆ ವಿಪಿನ್‌ಗೆ ಇನ್ನೊಂದು ಮದುವೆ ಮಾಡಿಸಬಹುದು ಎಂದು ಯತ್ನಿಸುತ್ತಿದ್ದರು’ ಎಂದು ಕಾಂಚನ್‌ ಹೇಳಿದ್ದಾರೆ. ಜತೆಗೆ ಸಹೋದರಿಯ ಸಾವಿಗೆ ಸಂಬಂಧಿಸಿದಂತೆ ಪ್ರಕರಣವನ್ನೂ ದಾಖಲಿಸಿದ್ದಾರೆ.

ಪರಾರಿಗೆ ಯತ್ನಿಸಿದ ಪತ್ನಿ ಹಂತಕನ ಕಾಲಿಗೆ ಗುಂಡು

ಪಿಟಿಐ ನೋಯ್ಡಾವರದಕ್ಷಿಣೆಗಾಗಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಆರೋಪಿ ವಿಪಿನ್‌ ಪೊಲೀಸ್‌ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಣ ಆತನ ಕಾಲಿಗೆ ಗುಂಡು ಹೊಡೆಯಲಾಗಿದೆ.

36 ಲಕ್ಷ ರು. ವರದಕ್ಷಿಣೆಗಾಗಿ ಪತ್ನಿ ನಿಕ್ಕಿ (28) ಮೇಲೆ ಆ್ಯಸಿಡ್‌ ಸುರಿದು ಬೆಂಕಿ ಹಚ್ಚಿ ಕೊಂದ ಆರೋಪದಲ್ಲಿ ವಿಪಿನ್‌ನನ್ನು ಬಂಧಿಸಲಾಗಿತ್ತು. ವೈದ್ಯಕೀಯ ಚಿಕಿತ್ಸೆಗೆಂದು ಕರೆದೊಯ್ಯುತ್ತಿದ್ದ ವೇಳೆ ಆತ ಓಡಿಹೋಗಲು ಯತ್ನಿಸಿದ್ದಾನೆ. ಕೂಡಲೇ ಹಿಂಬಾಲಿಸಿದ ಪೊಲೀಸರು, ಕಾಲಿಗೆ ಗುಂಡು ಹೊಡೆದಿದ್ದಾರೆ.

ಈ ನಡುವೆ, ಆತನನ್ನು ಗುಂಡು ಹೊಡೆದು ಸಾಯಿಸಿ ಎಂದು ನಿಕ್ಕಿ ಪಾಲಕರು ಒತ್ತಾಯಿಸಿದ್ದಾರೆ. 

ನಿಕ್ಕಿ ಅವರ ಸಹೋದರಿ ಕಾಂಚನ್‌ ನೀಡಿದ ದೂರಿನ ಆಧಾರದಲ್ಲಿ ಕಸ್ನಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ವಿಪಿನ್‌ ಬಂಧನವಾಗಿತ್ತು. ಈ ಬಗ್ಗೆ ಮಾತನಾಡಿದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಸುಧೀರ್ ಕುಮಾರ್, ‘ಮಹಿಳೆಯೊಬ್ಬರು ಸಜೀವದಹನವಾಗಿರುವ ಬಗ್ಗೆ ಫಾರ್ಟಿಸ್‌ ಆಸ್ಪತ್ರೆಯಿಂದ ಕರೆ ಬಂದಿತ್ತು. ಆಕೆಯನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಸಾಗಿಸುವ ಬಗ್ಗೆಯೂ ತಿಳಿಸಿದರು. ಆದರೆ ನಾವಲ್ಲಿಗೆ ತಲುಪುವ ಮೊದಲೇ ನಿಕ್ಕಿ ಸಾವನ್ನಪ್ಪಿದ್ದರು’ ಎಂದು ಹೇಳಿದ್ದಾರೆ.

PREV
Read more Articles on

Recommended Stories

ಟ್ರಿಪಲ್‌ ಏರ್‌ಡಿಫೆನ್ಸ್‌ ಪರೀಕ್ಷೆ ಯಶಸ್ವಿ
ಗಗನಯಾನದ ಏರ್‌ಡ್ರಾಪ್‌ ಪರೀಕ್ಷೆ ಯಶಸ್ವಿ - ಸಿಬ್ಬಂದಿಯ ಸುರಕ್ಷಿತ ಮರಳುವಿಕೆಗೆ ಇದು ಅಗತ್ಯ