ಸಾರಾಂಶ
ನವದೆಹಲಿ : ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ಸಮಗ್ರ ವಾಯುರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆ’ಯ (ಐಎಡಿಡಬ್ಲುಎಸ್) ಮೊದಲ ಪರೀಕ್ಷಾರ್ಥ ಪ್ರಯೋಗ ಒಡಿಶಾದ ಕರಾವಳಿಯಲ್ಲಿ ಶನಿವಾರ ಯಶಸ್ವಿಯಾಗಿ ನೆರವೇರಿದೆ. ಐಎಡಿಡಬ್ಲುಎಸ್ ಅನ್ನು ಒಡಿಶಾ ಕರಾವಳಿಯಲ್ಲಿ ಶನಿವಾರ 12:30ಕ್ಕೆ ಪರೀಕ್ಷಿಸಲಾಗಿದ್ದು, ಡ್ರೋನ್ ಹಾಗೂ ವೈಮಾನಿಕ ಗುರಿಗಳನ್ನು ಯಶಸ್ವಿಯಾಗಿ ತಡೆದು ಹೊಡೆದುರುಳಿಸಿದೆ.
ಪಾಕ್ ವಿರುದ್ಧ ಭಾರತ ಆಪರೇಷನ್ ಸಿಂದೂರ ನಡೆಸಿದ ಮೂರೂವರೆ ತಿಂಗಳ ಬಳಿಕ ಈ ಯಶಸ್ಸು ಲಭಿಸಿದೆ.
ಆಪರೇಷನ್ ಸಿಂದೂರದ ವೇಳೆ ಭಾರತವು ರಷ್ಯಾ ನಿರ್ಮಿತ ಎಸ್-400 ವಾಯುರಕ್ಷಣಾ ವ್ಯವಸ್ಥೆ ಬಳಸಿ ಪಾಕ್ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಹಿಮ್ಮೆಟ್ಟಿಸಿತ್ತು. ಇದರ ಬೆನ್ನಲ್ಲೇ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವು ಸಂಪೂರ್ಣ ದೇಶಿ ‘ಸುದರ್ಶನ ಚಕ್ರ’ ವಾಯುರಕ್ಷಣಾ ವ್ತವಸ್ಥೆ ಹೊಂದಲಿದೆ ಎಂದಿದ್ದರು. ಇದಾದ ಕೆಲವೇ ದಿನದಲ್ಲಿ ಈ ಪರೀಕ್ಷೆ ನಡೆದಿದೆ. ಪರೀಕ್ಷೆ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಹರ್ಷಿಸಿದ್ದಾರೆ.
ವಾಯುರಕ್ಷಣಾ ವ್ಯವಸ್ಥೆ ಕಾರ್ಯ ಹೇಗೆ?:
ಇದು ಬಹು-ಪದರದ ವಾಯುರಕ್ಷಣಾ ವ್ಯವಸ್ಥೆಯಾಗಿದೆ. ತ್ವರಿತವಾಗಿ ಪ್ರತಿಕ್ರಿಯಿಸುವ, ಭೂಮಿಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳು, ತೀರಾ ಕಡಿಮೆ ವ್ಯಾಪ್ತಿಯ ವಾಯುರಕ್ಷಣಾ ಕ್ಷಿಪಣಿಗಳು ಮತ್ತು ಹೆಚ್ಚಿನ ಶಕ್ತಿಯ ಲೇಸರ್ ಆಧರಿತ ಶಸ್ತ್ರಾಸ್ತ್ರಗಳ ವ್ಯವಸ್ಥೆಯನ್ನು ಒಳಗೊಂಡಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
‘ಪರೀಕ್ಷೆ ಸಮಯದಲ್ಲಿ, 2 ಹೈ-ಸ್ಪೀಡ್ ಫಿಕ್ಸೆಡ್ ವಿಂಗ್ ಮಾನವರಹಿತ ವೈಮಾನಿಕ ವಾಹನ ಗುರಿಗಳು ಮತ್ತು ಮಲ್ಟಿ-ಕಾಪ್ಟರ್ ಡ್ರೋನ್ ಸೇರಿದಂತೆ 3 ವಿಭಿನ್ನ ಗುರಿಗಳನ್ನು ನಾಶ ಮಾಡಲಾಗಿದೆ. ವಿಭಿನ್ನ ಶ್ರೇಣಿ ಮತ್ತು ಎತ್ತರಗಳಲ್ಲಿ ಏಕಕಾಲಕ್ಕೆ ಭೂಮಿಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳು, ತೀರಾ ಕಡಿಮೆ ವ್ಯಾಪ್ತಿಯ ವಾಯುರಕ್ಷಣಾ ಕ್ಷಿಪಣಿಗಳು ಮತ್ತು ಹೆಚ್ಚಿನ ಶಕ್ತಿಯ ಲೇಸರ್ ಆಧರಿತ ಶಸ್ತ್ರಾಸ್ತ್ರಗಳು ಅವನ್ನು ಹೊಡೆದು ಉರುಳಿಸಿವೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
‘ಕ್ಷಿಪಣಿ ವ್ಯವಸ್ಥೆಗಳು ಮತ್ತು ಡ್ರೋನ್ ಪತ್ತೆ ಮತ್ತು ವಿನಾಶ ವ್ಯವಸ್ಥೆ, ಕಮಾಂಡ್ ಮತ್ತು ನಿಯಂತ್ರಣ ಕಾರ್ಯವಿಧಾನ ಮತ್ತು ಸಂವಹನ ಮತ್ತು ರಾಡಾರ್‌ಗಳು ಸೇರಿ ಎಲ್ಲಾ ಶಸ್ತ್ರಾಸ್ತ್ರ ವ್ಯವಸ್ಥೆಯ ಘಟಕಗಳು ದೋಷರಹಿತವಾಗಿ ಕಾರ್ಯನಿರ್ವಹಿಸಿದವು’ ಎಂದು ಅದು ಹೇಳಿದೆ.
ರಾಜನಾಥ್ ಹರ್ಷ:
ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ಸಶಸ್ತ್ರ ಪಡೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.
‘ವಾಯುರಕ್ಷಣಾ ವ್ಯವಸ್ಥೆ (ಐಎಡಿಡಬ್ಲುಎಸ್) ಯಶಸ್ವಿ ಅಭಿವೃದ್ಧಿಗಾಗಿ ಡಿಆರ್‌ಡಿಒ, ಭಾರತೀಯ ಸಶಸ್ತ್ರ ಪಡೆಗಳು ಮತ್ತು ಉದ್ಯಮವನ್ನು ನಾನು ಅಭಿನಂದಿಸುತ್ತೇನೆ. ಈ ಪರೀಕ್ಷೆಯು ನಮ್ಮ ದೇಶದ ಬಹು-ಪದರದ ವಾಯುರಕ್ಷಣಾ ಸಾಮರ್ಥ್ಯವನ್ನು ದೃಢಪಡಿಸಿದೆ. ಶತ್ರುಗಳ ವೈಮಾನಿಕ ಬೆದರಿಕೆಗಳ ವಿರುದ್ಧ ರಕ್ಷಣೆಯನ್ನು ಬಲಪಡಿಸಲಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
ಏನಿದು ವ್ಯವಸ್ಥೆ?
ಇದು ಭೂಮಿಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ, ಕಡಿಮೆ ವ್ಯಾಪ್ತಿಯ ವಾಯುರಕ್ಷಣಾ ಕ್ಷಿಪಣಿ ಮತ್ತು ಲೇಸರ್ ಆಧರಿತ ಶಸ್ತ್ರಾಸ್ತ್ರ ಒಳಗೊಂಡ 3 ಸ್ತರದ ವಾಯುರಕ್ಷಣಾ ವ್ಯವಸ್ಥೆ. ಈ ಮೂರೂ ವ್ಯವಸ್ಥೆಗಳನ್ನೇ ಒಂದೇ ಕಮಾಂಡ್ ಕೇಂದ್ರದಿಂದ ನಿರ್ವಹಿಸಬಹುದು. ಇವು ವೈರಿ ದೇಶದ ಡ್ರೋನ್, ಕ್ಷಿಪಣಿ ದಾಳಿ ತಡೆಯುವ ಸಾಮರ್ಥ್ಯ ಹೊಂದಿವೆ.
ಹೇಗೆ ಕೆಲಸ ಮಾಡುತ್ತೆ?
ಭೂಮಿಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳು ಪದಾತಿ ದಳಕ್ಕೆ ಶತ್ರು ದಾಳಿಯಿಂದ ರಕ್ಷಣೆ ನೀಡುತ್ತದೆ. ಕಡಿಮೆ ವ್ಯಾಪ್ತಿಯ ವಾಯುರಕ್ಷಣಾ ಕ್ಷಿಪಣಿಗಳು 300 ಮೀಟರ್‌ನಿಂದ ಹಿಡಿದು 6 ಕಿ.ಮೀ ವ್ಯಾಪ್ತಿಯಲ್ಲಿ ತೂರಿ ಬರುವ ಯಾವುದೇ ಡ್ರೋನ್‌ಗಳನ್ನು ಹೊಡೆದುರುಳಿಸಬಲ್ಲದು. ಲೇಸರ್ ಆಧರಿತ ಶಸ್ತ್ರಾಸ್ತ್ರವು ಹೈ-ಸ್ಪೀಡ್ ಫಿಕ್ಸೆಡ್ ವಿಂಗ್ ವೈಮಾನಿಕ ವಾಹನಗಳು ಮತ್ತು ಮಲ್ಟಿ-ಕಾಪ್ಟರ್ ಡ್ರೋನ್ ನಾಶಪಡಿಸುವ ಸಾಮರ್ಥ್ಯ ಹೊಂದಿವೆ.
ಈ ರೀತಿ ವ್ಯವಸ್ಥೆ ಏಕೆ ಬೇಕು?
3 ಸ್ತರದ ವಾಯುರಕ್ಷಣೆ ಅತ್ಯಂತ ಕಡಿಮೆ ದೂರ, ಅತ್ಯಂತ ಕೆಳಮಟ್ಟದಲ್ಲಿ ತೂರಿಬರುವ ಡ್ರೋನ್, ಕ್ಷಿಪಣಿ ಹೊಡೆದುರುಳಿಸಬಲ್ಲದು. ಸಂಪೂರ್ಣ ದೇಶಿ ವ್ಯವಸ್ಥೆ ಆದ ಕಾರಣ ಇವುಗಳ ತಂತ್ರಜ್ಞಾನ ಭೇದಿಸುವುದು ಶತ್ರು ದೇಶಕ್ಕೆ ಕಷ್ಟ. ಕಡಿಮೆ ವ್ಯಾಪ್ತಿಯ ಈ ವ್ಯವಸ್ಥೆಯನ್ನು ಬೆಟ್ಟ, ಗುಡ್ಡಗಾಡು, ದುರ್ಗಮ ಪ್ರದೇಶದಲ್ಲಿ ಸುಲಭವಾಗಿ ಅಳವಡಿಸಿ ಬಳಸಬಹುದು