ಸಾರಾಂಶ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಮಿತ್ರದೇಶ’ ಭಾರತದ ವಸ್ತುಗಳ ಮೇಲೆ ಶೇ.50ರಷ್ಟು ಭಾರಿ ತೆರಿಗೆ ಹೇರಿದ್ದಕ್ಕೆ ಕಾರಣ ಏನು ಎಂಬ ವಿಶ್ಲೇಷಣೆಗಳು ನಡೆದಿರುವ ನಡುವೆಯೇ ಅಮೆರಿಕದ ಆಂತರಿಕ ದಾಖಲೆಗಳಲ್ಲಿ ಇದರ ‘ನೈಜ ಕಾರಣ’ ಉಲ್ಲೇಖಿಸಲಾಗಿದೆ. ‘ಭಾರಿ ತೆರಿಗೆ ಹೇರುವ ಮೂಲಕ, ಅಮೆರಿಕದಿಂದಲೇ ಶಸ್ತ್ರಾಸ್ತ್ರ ಖರೀದಿ ಮಾಡಬೇಕೆಂದು ಭಾರತದ ಮೇಲೆ ಒತ್ತಡ ಹೇರುವುದು ಹಾಗೂ ಭಾರತವು ಹೆಚ್ಚು ಹಣವನ್ನು ರಕ್ಷಣಾ ವೆಚ್ಚಕ್ಕೆ ಬಳಕೆ ಮಾಡುವಂತೆ ಮಾಡುವುದು- ಇವು ಟ್ರಂಪ್ ಅವರ ತಂತ್ರ. ಈ ಮಾಹಿತಿ ಅಮೆರಿಕದ ಆಂತರಿಕ ದಾಖಲೆಗಳಲ್ಲಿದೆ’ ಎಂದು ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ.
ಟ್ರಂಪ್ ಭಾರತದ ಮೇಲಷ್ಟೇ ಅಲ್ಲ. ಇದೇ ತಂತ್ರ ಅನುಸರಿಸಿ ತೈವಾನ್ ಮತ್ತು ಇಂಡೋನೇಷ್ಯಾ ಮೇಲೂ ಭಾರಿ ತೆರಿಗೆ ಹಾಕಿದ್ದಾರೆ. ಅವರ ರಕ್ಷಣಾ ವೆಚ್ಚವನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಅಮೆರಿಕ ನಿರ್ಮಿತ ಮಿಲಿಟರಿ ಉಪಕರಣಗಳನ್ನು ಖರೀದಿಸಲು ಪರೋಕ್ಷವಾಗಿ ಒತ್ತಡ ಹೇರಿದ್ದಾರೆ ಎಂದು ವರದಿ ಹೇಳಿದೆ.
‘ಭಾರತವು ರಷ್ಯಾ ಮೇಲೆ ಶಸ್ತ್ರಾಸ್ತ್ರ ಹಾಗೂ ತೈಲಕ್ಕೆ ಅವಲಂಬಿತವಾಗಿದೆ. ಇದನ್ನು ತಪ್ಪಿಸಿ ತನ್ನತ್ತ ಶಸ್ತ್ರಾಸ್ತ್ರಕ್ಕಾಗಿ ಮೋದಿ ಸರ್ಕಾರ ಬರಬೇಕು ಎಂಬುದು ಟ್ರಂಪ್ ಇರಾದೆ’ ಎಂದು ಅದು ವಿಶ್ಲೇಷಿಸಿದೆ.
‘ಈ ಹಿಂದೆ ವಿಶ್ವಾದ್ಯಂತ ಇದೇ ರೀತಿಯ ತಂತ್ರಗಳನ್ನು ಬಳಸಲಾಗಿತ್ತು ಎಂದು ದಾಖಲೆಗಳು ತೋರಿಸುತ್ತವೆ. ಪ್ರಮುಖ ಬಂದರು ಮೇಲಿನ ಚೀನಾದ ನಿಯಂತ್ರಣವನ್ನು ತೆಗೆದುಹಾಕುವಂತೆ ಇಸ್ರೇಲ್ ಮತ್ತು ಆಸ್ಟ್ರೇಲಿಯಾವನ್ನು ಒತ್ತಾಯಿಸಲಾಗಿತ್ತು. ಆಫ್ರಿಕನ್ ಮತ್ತು ದಕ್ಷಿಣ ಅಮೆರಿಕ ರಾಷ್ಟ್ರಗಳಿಗೆ ಚೀನಾದ ದೂರಸಂಪರ್ಕ ಮತ್ತು ಮಿಲಿಟರಿ ಸಂಬಂಧಗಳನ್ನು ಕಡಿತಗೊಳಿಸುವಮತೆ ಒತ್ತಡ ಹೇರಲಾಗಿತ್ತು. ಕಾಂಬೋಡಿಯಾ ಮೇಲೂ ಸುಂಕ ಹೇರಿ ಅಲ್ಲಿನ ನೌಕಾಪಡೆ ಮೇಲೆ ನಿಯಂತ್ರಣ ಸಾಧಿಸುವುದು ಅಮೆರಿಕ ತಂತ್ರವಾಗಿತ್ತು’ ಎಂದು ವರದಿ ಹೇಳಿದೆ.
ಭಾರತದ ರಕ್ಷಣಾ ವೆಚ್ಚ ಹೆಚ್ಚಳ, ಅಮೆರಿಕದಿಂದಲೇ ರಕ್ಷಣಾ ಖರೀದಿ ಹೆಚ್ಚಳ ಕುರಿತು ಭಾರತ ಮೇಲೆ ಒತ್ತಡ
ಇದಕ್ಕಾಗಿಯೇ ರಷ್ಯಾ ತೈಲ ಖರೀದಿ ಹೆಸರಲ್ಲಿ ಭಾರತದ ಮೇಲೆ ಶೇ.50ರಷ್ಟು ತೆರಿಗೆ ಹೇರಿಕೆ ಬಗ್ಗೆ ಕುತಂತ್ರ
ಟ್ರಂಪ್ ಸರ್ಕಾರದ ಆಂತರಿಕ ವರದಿ ಉಲ್ಲೇಖಿಸಿ ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಸ್ಫೋಟಕ ವರದಿ ಪ್ರಕಟ
ಭಾರತ, ವಿಯೆಟ್ನಾ, ಇಂಡೋನೇಷ್ಯಾ ಸೇರಿ ಹಲವು ದೇಶಗಳ ಮೇಲೆ ತೆರಿಗೆ ಹೇರಿಕೆಗೂ ಇದೇ ರೀತಿ ಒತ್ತಡ