ಸಾರಾಂಶ
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ, 2030ರೊಳಗೆ ಚಂದ್ರನ ಮೇಲೆ ಅಣು ರಿಯಾಕ್ಟರ್‌ವೊಂದನ್ನು ಸ್ಥಾಪಿಸುವ ಮಹತ್ವದ ಯೋಜನೆಗೆ ಕೈಹಾಕಲು ಹೊರಟಿದೆ.
ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ, 2030ರೊಳಗೆ ಚಂದ್ರನ ಮೇಲೆ ಅಣು ರಿಯಾಕ್ಟರ್‌ವೊಂದನ್ನು ಸ್ಥಾಪಿಸುವ ಮಹತ್ವದ ಯೋಜನೆಗೆ ಕೈಹಾಕಲು ಹೊರಟಿದೆ.
ಈ ಹಿಂದೆ 40 ಕಿ.ವ್ಯಾ.ನ ಸಣ್ಣ ಅಣು ರಿಯಾಕ್ಟರ್‌ವೊಂದನ್ನು ಸ್ಥಾಪಿಸಲು ನಾಸಾ ಚಿಂತನೆ ನಡೆಸಿತ್ತು. ಆದರೆ ಇದೀಗ 100 ಕಿ.ವ್ಯಾ. ರಿಯಾಕ್ಟರ್ ಸ್ಥಾಪಿಸಲು ನಿರ್ಧರಿಸಿದ್ದು, ನಾಸಾದ ಮಧ್ಯಂತರ ಆಡಳಿತಾಧಿಕಾರಿ ಸಿಯಾನ್ ಡಫ್ಫಿ ಅವರು ಈ ಕುರಿತು ವಾರದೊಳಗೆ ಘೋಷಣೆ ಮಾಡುವ ಸಾಧ್ಯತೆ ಇದೆ.
ಚಂದ್ರನ ಮೇಲೆ ನೆಲೆ ಸ್ಥಾಪಿಸಲು ರಷ್ಯಾ ಮತ್ತು ಚೀನಾ ಸೇರಿಕೊಂಡು ಯೋಜನೆ ರೂಪಿಸುತ್ತಿರುವ ಹೊತ್ತಿನಲ್ಲೇ ನಾಸಾ ಇಂಥದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಚೀನಾ-ರಷ್ಯಾಗಿಂತಲೂ ಮೊದಲೇ ಚಂದ್ರನ ಮೇಲೆ ತನ್ನ ಅಧಿಪತ್ಯ ಸಾಧಿಸಲು ಅಮೆರಿಕ ಹೊರಟಿದೆ. ಇದರಿಂದ ಚೀನಾ-ರಷ್ಯಾ ಹಾಗೂ ಅಮೆರಿಕದ ನಡುವಿನ ಜಿದ್ದಾಜಿದ್ದಿ ಇನ್ನು ಚಂದ್ರನ ಮೇಲೂ ಕಾಲಿಡುವುಡು ನಿಶ್ಚಿತವಾದಂತಾಗಿದೆ.
ಯಾಕೆ ಅಣು ರಿಯಾಕ್ಟರ್?:
ಭೂಮಿಗೆ ಹೋಲಿಸಿದರೆ ಚಂದ್ರನ ಮೇಲಿನ ರಾತ್ರಿ ಎರಡು ವಾರಗಳಷ್ಟು ಸುದೀರ್ಘವಾಗಿರುತ್ತದೆ. ಹೀಗಾಗಿ ಸೌರ ವಿದ್ಯುತ್ ಉತ್ಪಾದನೆ ಅಲ್ಲಿ ಹೆಚ್ಚು ಪರಿಣಾಮಕಾರಿಯಲ್ಲ. ಆದರೆ, ಅಣು ರಿಯಾಕ್ಟರ್‌ಗಳಿಂದ ವರ್ಷದ 365 ದಿನವೂ ವಿದ್ಯುತ್ ಪಡೆಯಬಹುದು. ಇದರಿಂದ ಚಂದ್ರನ ಮೇಲೆ ಬಾಹ್ಯಾಕಾಶ ನೆಲೆಯೊಂದನ್ನು ಸ್ಥಾಪಿಸುವುದು, ಅಲ್ಲಿ ಗಣಿಗಾರಿಕೆ ನಡೆಸುವ ರೋಬೋಟಿಕ್ ಉಪಕರಣಗಳಿಗೆ ನಿರಂತರ ವಿದ್ಯುತ್ ಪೂರೈಸುವುದು ಸಾಧ್ಯವಾಗಲಿದೆ. ಭೂಮಿಯಿಂದಲೇ ಬಾಹ್ಯಾಕಾಶಕ್ಕೆ ಅಗತ್ಯ ಸರಕುಗಳನ್ನು ಪೂರೈಸುವ ಬದಲು, ಈ ವಿದ್ಯುತ್ ಬಳಸಿಕೊಂಡು ಅಲ್ಲೇ ಅಗತ್ಯ ವಸ್ತುಗಳನ್ನು ಉತ್ಪಾದಿಸಿಕೊಳ್ಳುವ ಕುರಿತು ಚಿಂತನೆಯನ್ನೂ ನಡೆಸಬಹುದಾಗಿದೆ.
ಮಂಗಳ ಗ್ರಹದ ಅಧ್ಯಯನದಂಥ ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ದೃಷ್ಟಿಯಿಂದ ಚಂದ್ರನ ಮೇಲೆ ನೆಲೆ ನಿರ್ಮಿಸುವುದು ಆರ್ಥಿಕವಾಗಿ ಮತ್ತು ಕಾರ್ಯಾಚರಣೆ ದೃಷ್ಟಿಯಿಂದ ಲಾಭದಾಯಕ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.