ಭಾರತದ ಶಸ್ತ್ರಾಸ್ತ್ರ ರಫ್ತು ₹23622 ಕೋಟಿಗೆ: ದಾಖಲೆ

| N/A | Published : May 15 2025, 06:09 AM IST

Indian Army Veterinary corps recruitment 2025
ಭಾರತದ ಶಸ್ತ್ರಾಸ್ತ್ರ ರಫ್ತು ₹23622 ಕೋಟಿಗೆ: ದಾಖಲೆ
Share this Article
  • FB
  • TW
  • Linkdin
  • Email

ಸಾರಾಂಶ

- ಯುದ್ಧ ಸಾಮಗ್ರಿಗಳ ರಫ್ತಿನಲ್ಲಿ ಹೊಸ ದಾಖಲೆ ಬರೆದ ಭಾರತ

- 2023-24ನೇ ಸಾಲಿಗೆ ಹೋಲಿಸಿದರೆ ಶೇ.12.04ರಷ್ಟು ಬೆಳವಣಿಗೆ

- ಸದ್ಯ 80 ರಾಷ್ಟ್ರಗಳಿಗೆ ಭಾರತದಿಂದ ಯುದ್ಧೋಪಕರಣಗಳ ರಫ್ತು

ನವದೆಹಲಿ: ಯುದ್ಧೋಪಕರಣಗಳ ರಫ್ತಿನಲ್ಲಿ ಭಾರತವು ಹೊಸ ದಾಖಲೆ ಬರೆದಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತವು 23,622 ಕೋಟಿ ರು. ಮೌಲ್ಯದ ಯುದ್ಧ ಸಾಮಗ್ರಿಗಳನ್ನು ರಫ್ತು ಮಾಡಿದೆ. ಈ ಮೂಲಕ ಈ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ(21,083 ಕೋಟಿ ರು.) 2,539 ಕೋಟಿ ರು.ನಷ್ಟು ಅಂದರೆ ಶೇ.12.04ರಷ್ಟು ಬೆಳವಣಿಗೆ ದಾಖಲಿಸಿದೆ.

ಪಾಕಿಸ್ತಾನ ಜತೆಗಿನ ಸಂಘರ್ಷದ ಬಳಿಕ ಭಾರತದ ಯುದ್ಧೋಪಕರಣಗಳ ಸಾಮರ್ಥ್ಯ ಹೆಚ್ಚು ಚರ್ಚೆಯಾಗುತ್ತಿದೆ. ಆಪರೇಷನ್‌ ಸಿಂದೂರ ಭಾರತದ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಹೊರಜಗತ್ತಿಗೆ ಅನಾವರಣವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಯುದ್ಧೋಪಕರಣಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆ ಇದೆ. ಭಾರತವು ಸುಮಾರು 80 ದೇಶಗಳಿಗೆ ಯುದ್ಧ ಸಾಮಗ್ರಿಗಳನ್ನು ರಫ್ತು ಮಾಡುತ್ತಿದ್ದು, 2029ರಲ್ಲಿ 50 ಸಾವಿರ ಕೋಟಿ ರು. ಮೌಲ್ಯದ ಯುದ್ಧೋಪಕರಣಗಳ ರಫ್ತಿನ ಗುರಿ ಇಟ್ಟುಕೊಂಡಿದೆ.

2013-14ರಲ್ಲಿ ಭಾರತ ಕೇವಲ 686 ಕೋಟಿ ರು. ಮೌಲ್ಯದ ಯುದ್ಧೋಪಕರಣಗಳನ್ನು ರಫ್ತು ಮಾಡಿತ್ತು. ಇದೀಗ ಅದರ 34ಪಟ್ಟು ಹೆಚ್ಚು ಪ್ರಮಾಣದ ಯುದ್ಧೋಪಕರಣಗಳನ್ನು ವಿದೇಶಗಳಿಗೆ ಮಾರಾಟ ಮಾಡುತ್ತಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಸರ್ಕಾರಿ ಕಂಪನಿಗಳ ಮೂಲಕ ಆಗುತ್ತಿರುವ ರಫ್ತು ಕಳೆದ ಹಣಕಾಸು ವರ್ಷದಲ್ಲಿ ಶೇ.42.85ರಷ್ಟು ಏರಿಕೆ ದಾಖಲಿಸಿದೆ. ಈ ಮೂಲಕ ಅಂತಾರಾಷ್ಟ್ರೀಯಮಟ್ಟದಲ್ಲಿ ಭಾರತದ ರಕ್ಷಣಾ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಕುದುರುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ಖಾಸಗಿ ಕಂಪನಿಗಳು 15,233 ಕೋಟಿ ರು. ಮೌಲ್ಯದ ಯುದ್ಧೋಪಕರಣಗಳನ್ನು ರಫ್ತು ಮಾಡಿದರೆ, ಸರ್ಕಾರಿ ಕಂಪನಿಗಳು 8,389 ಕೋಟಿ ರು. ಮೌಲ್ಯದ ಉತ್ಪನ್ನಗಳನ್ನು ಹೊರದೇಶಗಳಿಗೆ ಮಾರಾಟ ಮಾಡಿವೆ. 2023-24ರಲ್ಲಿ ಖಾಸಗಿ ಕಂಪನಿಗಳು 15,209 ಮತ್ತು ಸರ್ಕಾರಿ ಕಂಪನಿಗಳು 5,874 ಕೋಟಿ ರು. ಮೌಲ್ಯದ ಉತ್ಪನ್ನ ರಫ್ತು ಮಾಡಿವೆ.

ಭಾರತವು ಒಂದು ಕಾಲದಲ್ಲಿ ರಕ್ಷಣಾ ಉತ್ಪನ್ನಗಳ ಬಹುದೊಡ್ಡ ಆಮದುದೇಶವಾಗಿತ್ತು. ಇದೀಗ ಮೇಕ್‌ ಇನ್‌ ಇಂಡಿಯಾ ಮೂಲಕ ದೇಶದಲ್ಲೇ ಹೆಚ್ಚಿನ ಉತ್ಪನ್ನಗಳನ್ನು ಉತ್ಪಾದನೆ ಮಾಡಿ, ರಫ್ತಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.