ಉತ್ತರಕಾಶಿ: ಉತ್ತರಖಂಡದ ಉತ್ತರಕಾಶಿ ಬಳಿಯ ನಿರ್ಮಾಣ ಹಂತದ ಸಿಲ್‌ಕ್ಯಾರಾ ಹೆದ್ದಾರಿ ಸುರಂಗದೊಳಗೆ ಕಳೆದ 11 ದಿನಗಳಿಂದ ಸಿಕ್ಕಿಬಿದ್ದಿರುವ 41 ಕಾರ್ಮಿಕರ ರಕ್ಷಣೆ ಕಾರ್ಯಾಚರಣೆ ಬಹುತೇಕ ಅಂತಿಮ ಘಟ್ಟ ತಲುಪಿದ್ದು, ಯಾವುದೇ ಕ್ಷಣದಲ್ಲಿ ಅಲ್ಲಿಂದ ಸಿಹಿ ಸುದ್ದಿ ಹೊರಬೀಳುವ ನಿರೀಕ್ಷೆ ಇದೆ. ಬಹುಶಃ ಗುರುವಾರ ಬೆಳಗ್ಗೆ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆ ತರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ 21 ರಕ್ಷಣಾ ಸಿಬ್ಬಂದಿಯು ಗ್ಯಾಸ್ ಮಾಸ್ಕ್ ಧರಿಸಿ ಹೊಸದಾಗಿ ಕೊರೆದು ಹಾಕಲಾಗಿರುವ ರಕ್ಷಣಾ ಪೈಪ್ ಪ್ರವೇಶಿಸಿದ್ದಾರೆ. ಇವರು ಸಿಲುಕಿರುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತರುವ ಹೊಣೆ ಹೊತ್ತಿದ್ದಾರೆ. 15 ವೈದ್ಯರು ಹಾಗೂ 30 ಆ್ಯಂಬುಲೆನ್ಸ್‌ಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ರಕ್ಷಣೆಗೆ ಒಳಗಾಗುವ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಸರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮೀಪದ ಆಸ್ಪತ್ರೆಯಲ್ಲಿ 41 ಬೆಡ್‌ಗಳನ್ನೂ ಸಿದ್ಧಪಡಿಸಲಾಗಿದೆ.
ಇದಲ್ಲದೆ ಪರ್ಯಾಯ ಯೋಜನೆಯಾಗಿ ನಾವು ಸುರಂಗದ ಇನ್ನೊಂದು ಬದಿಯಾದ ಬಾರ್ಕೋಟ್‌ನಿಂದಲೂ ಸುರಂಗ ಕೊರೆಯುವ ಕೆಲಸ ಆರಂಭಿಸಿದ್ದೇವೆ . ಅಲ್ಲಿ ಈಗಾಗಲೇ 8 ಮೀಟರ್ ಜಾಗವನ್ನು ಕ್ರಮಿಸಿದ್ದೇವೆ. ಆದರೆ ಈ ಮಾರ್ಗದಲ್ಲಿ ಹೆಚ್ಚಿನ ಜಾಗ ಕ್ರಮಿಸಬೇಕಿರುವ ಕಾರಣ ನಮ್ಮ ಆದ್ಯತೆ ಸಿಲ್‌ಕ್ಯಾರಾ ಮಾರ್ಗವೇ ಆಗಿರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಮೋದಿ ಮಾಹಿತಿ:ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಕರೆ ಮಾಡಿ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದಾರೆ.