ಭಾರತ ಶೇ.7 ದರದಲ್ಲಿ ಅಭಿವೃದ್ಧಿ ನಿರೀಕ್ಷೆ : ಮೋದಿ-3 ಸರ್ಕಾರದ ಮೊದಲ ಆರ್ಥಿಕ ಸಮೀಕ್ಷೆ

KannadaprabhaNewsNetwork | Updated : Jul 23 2024, 05:58 AM IST

ಸಾರಾಂಶ

ಮೋದಿ-3 ಸರ್ಕಾರದ ಮೊದಲ ಆರ್ಥಿಕ ಸಮೀಕ್ಷೆ ಸೋಮವಾರ ಬಿಡುಗಡೆ ಆಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.6.5 ರಿಂದ ಶೇ.7ರಷ್ಟು ಅಭಿವೃದ್ಧಿ ಆಗುವ ನಿರೀಕ್ಷೆ ಇದೆ ಎಂದು ಅಂದಾಜು ಮಾಡಿದೆ. 

 ನವದೆಹಲಿ :  ಮೋದಿ-3 ಸರ್ಕಾರದ ಮೊದಲ ಆರ್ಥಿಕ ಸಮೀಕ್ಷೆ ಸೋಮವಾರ ಬಿಡುಗಡೆ ಆಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.6.5 ರಿಂದ ಶೇ.7ರಷ್ಟು ಅಭಿವೃದ್ಧಿ ಆಗುವ ನಿರೀಕ್ಷೆ ಇದೆ ಎಂದು ಅಂದಾಜು ಮಾಡಿದೆ. ಜತೆಗೆ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವನ್ನು ಒತ್ತಿ ಹೇಳಿದ್ದು, ರಫ್ತನ್ನು ಉತ್ತೇಜಿಸುವ ಜತೆಗೆ ಹೆಚ್ಚು ಚೀನೀ ನೇರ ಹೂಡಿಕೆಗಳನ್ನು ಬೆಂಬಲಿಸಿದೆ.

ಇದರ ಜತೆಗೆ ಬೇಡಿಕೆ ಹಾಗೂ ಪೂರೈಕೆಯ ಮೇಲೆಯೇ ಹೆಚ್ಚು ಅವಲಂಬಿತವಾದ ಅಹಾರ ಕ್ಷೇತ್ರವೊಂದನ್ನು ಹೊರತುಪಡಿಸಿ, ಉಳಿದ ವಲಯಗಳ ಹಣದುಬ್ಬರವನ್ನು ಕಡಿಮೆ ಮಾಡಬೇಕು ಎಂದು ಕರೆ ನೀಡಿದೆ.ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರ ಕಚೇರಿ ಸಿದ್ಧಪಡಿಸಿರುವ ಸಮೀಕ್ಷೆಯು ಇದೇ ವೇಳೆ ಸತತವಾಗಿ ಏರುತ್ತಿರುವ ಷೇರುಪೇಟೆಗಳ ಬಗ್ಗೆ ಎಚ್ಚರಿಕೆಯ ಮಾತುಗಳನ್ನಾಡಿದೆ. ಷೇರುಪೇಟೆ ಏರಿಕೆ ಕಾರಣ ಹೂಡಿಕೆದಾರ ಆತ್ಮವಿಶ್ವಾಸ ಕೂಡ ಅತಿಯಾಗುತ್ತಿದೆ. ಹೀಗಾಗಿ ಊಹಾಪೋಹಗಳು ಹೆಚ್ಚಿ ಅವರು ಮೋಸ ಹೋಗುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆ ಗಂಟೆ ಮೊಳಗಿಸಿದೆ.

ಅಭಿವೃದ್ಧಿ ದರ ಕಡಿಮೆ?:

ಆರ್‌ಬಿಐ ಶೇ.7.2ರ ಬೆಳವಣಿಗೆ ದರ ಅಂದಾಜಿಸಿತ್ತು. ಅಲ್ಲದೆ, 2023-24ರಲ್ಲಿ ಸರ್ಕಾರ ಶೇ.8.2ರ ಬೆಳವಣಿಗೆ ಮುನ್ಸೂಚನೆ ನೀಡಿತ್ತು. ಆದರೆ ಈ ಸಲ ಅದಕ್ಕಿಂತ ಕಡಿಮೆ ಎಂದರೆ- ಶೇ.6.5ರಿಂದ ಶೇ.7ರವರೆಗೆ ಜಿಡಿಪಿ ಬೆಳವಣಿಗೆ ಕಾಣಬಹುದು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

ಅಭಿವೃದ್ಧಿ ಹೊಂದಿದ ದೇಶದ ಗುರಿ:

2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರದ ಆಗಲು ಖಾಸಗಿ ಹೂಡಿಕೆಯನ್ನು ಉತ್ತೇಜಿಸುವುದು, ಸಣ್ಣ ಉದ್ಯಮಗಳು ಮತ್ತು ಕೃಷಿಯನ್ನು ಬಲಪಡಿಸುವುದು ತೀರಾ ಅಗತ್ಯ ಎಂದು ಸಮೀಕ್ಷೆ ಗುರುತಿಸಿದೆ. ಇದಕ್ಕಾಗಿ ಹಣಕಾಸಿನ ಸಂಪನ್ಮೂಲಗಳನ್ನು ಸಂಗ್ರಹಿಸುವುದು, ಸಣ್ಣ ವ್ಯವಹಾರಗಳಿಗೆ ಇರುವ ಅಡ್ಡಿಗಳನ್ನು (ರೆಡ್‌ ಟೇಪಿಸಂ) ತೆಗೆದು ಹಾಕುವುದು ಮತ್ತು ಆದಾಯದ ಅಸಮಾನತೆಯನ್ನು ನಿಯಂತ್ರಿಸುವುದು ಪ್ರಮುಖ ಎಂದು ಅಭಿಪ್ರಾಯಪಟ್ಟಿದೆ.

ಉದ್ಯೋಗ ಸೃಷ್ಟಿ:

‘ಉದ್ಯೋಗ ಸೃಷ್ಟಿಗೆ ಹೆಚ್ಚು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಕಾರ್ಮಿಕ ಸುಧಾರಣೆಗಳ ಅನುಷ್ಠಾನವನ್ನು ತ್ವರಿತಗೊಳಿಸಬೇಕು. ಕೃಷಿಯೇತರ ವಲಯದಲ್ಲಿ 2030 ರವರೆಗೆ ವಾರ್ಷಿಕವಾಗಿ ಸುಮಾರು 78 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ಅದೂ ವಿಶೇಷವಾಗಿ ಖಾಸಗಿ ವಲಯದಲ್ಲಿ’ ಎಂದು ಕರೆ ನೀಡಿದೆ.

2047ರಲ್ಲಿ ಭಾರತ ವಿಕಸಿತ ದೇಶ ಆಗಲು ಹಿಂದೆಂದಿಗಿಂತಲೂ ಹೆಚ್ಚು ತ್ರಿಪಕ್ಷೀಯ ಬಾಂಧವ್ಯಗಳ ಅಗತ್ಯವಿದೆ.

ಚೀನಾದಿಂದ ಹೆಚ್ಚಿನ ಹೂಡಿಕೆ ಬೇಕು:

ಭಾರತವು ಚೀನಾದ ಆಮದನ್ನು ಗಲ್ವಾನ್‌ ಸಂಘರ್ಷದ ಬಳಿಕ ಕಡಿಮೆ ಮಾಡಿದ್ದರೂ, ಆರ್ಥಿಕ ಸಮೀಕ್ಷೆಯು ಚೀನಾದಿಂದ ನೇರ ಹೂಡಿಕೆಯನ್ನು ಹೆಚ್ಚಿಸಲು ಕರೆ ನೀಡಿದೆ. ಏಕೆಂದರೆ ಪೂರ್ವ ಏಷ್ಯಾ ದೇಶಗಳು ಇದೇ ತಂತ್ರ ಅನುಸರಿಸಿ ಯಶ ಕಂಡಿದ್ದವು. ಹೀಗಾಗಿ ಚೀನಾ ಎಫ್‌ಡಿಐ ಆಕರ್ಷಣೆಯಿಂದ ಭಾರತ-ಚೀನಾ ವ್ಯಾಪಾರ ಕೊರತೆ ನೀಗಲಿದೆ ಎಂದಿದೆ.

ಮಹಿಳಾ ಕೇಂದ್ರಿತ ಬಜೆಟ್‌ 10 ವರ್ಷದಲ್ಲಿ ಶೇ.219ರಷ್ಟು ಏರಿಕೆಮಹಿಳಾ ಕೇಂದ್ರಿತ ಬಜೆಟ್‌ನಲ್ಲಿ 10 ವರ್ಷದಲ್ಲಿ ಶೇ. 219ರಷ್ಟು ಏರಿಕೆ ಕಂಡಿದೆ ಎಂದು ಆರ್ಥಿಕ ಸಮೀಕ್ಷಾ ವರದಿ ಹೇಳಿದೆ. ಮಹಿಳೆಯರ ಅಭಿವೃದ್ಧಿಗಾಗಿ 2014ರಲ್ಲಿ 97,134 ಕೋಟಿ ರು. ವಿನಿಯೋಗಿಸಲಾಗಿತ್ತು. 2025ರಲ್ಲಿ ಈ ಪ್ರಮಾಣ 3.1 ಲಕ್ಷ ಕೋಟಿ ರು. ಏರಿದೆ. ಈ ಪ್ರಮಾಣವು 2024ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.38.7ರಷ್ಟು ಮತ್ತು 2014ಕ್ಕೆ ಹೋಲಿಸಿದರೆ ಶೇ. 218.8ರಷ್ಟಾಗಿದೆ. ಜೊತೆಗೆ ಈ ಮೊತ್ತವು ಒಟ್ಟು ಕೇಂದ್ರ ಬಜೆಟ್‌ನಲ್ಲಿ ಶೇ. 6.5 ರಷ್ಟು ಪಾಲು ಹೊಂದಿದೆ. ಇದೇ ವೇಳೆ ವಿವಿಧ ವೃತ್ತಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಬಗ್ಗೆ ಖಚಿತ ಪಡಿಸಿಕೊಳ್ಳಲು ಶಾಸಕಾಂಗ ಮಧ್ಯಪ್ರವೇಶಿಸಬೇಕು ಎಂದು ವರದಿ ಹೇಳಿದೆ.

ಶೇ.51ರಷ್ಟು ಪದವೀಧರರು ಮಾತ್ರ ಉದ್ಯೋಗಕ್ಕೆ ಅರ್ಹ

ಭಾರತದ ಪದವೀಧರರಲ್ಲಿ ಶೇ.51.25 ರಷ್ಟು ಮಂದಿ ಮಾತ್ರ ಉದ್ಯೋಗ ಪಡೆಯಲು ಅರ್ಹರಾಗಿದ್ದಾರೆ ಎಂದು ಆರ್ಥಿಕ ಸಮೀಕ್ಷಾ ವರದಿ ತಿಳಿಸಿದೆ. ಭಾರತದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯಲ್ಲಿ ಶೇ.65ರಷ್ಟು ಮಂದಿ 35ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಅವರಲ್ಲಿ ಆಧುನಿಕ ಆರ್ಥಿಕತೆಗೆ ಅಗತ್ಯವಿರುವ ಕೌಶಲ್ಯದ ಕೊರತೆ ಕಾಡುತ್ತಿದೆ. ಹೀಗಾಗಿ ಶೇ.51 ರಷ್ಟು ಮಂದಿ ಮಾತ್ರ ಉದ್ಯೋಗ ಪಡೆಯಲು ಅರ್ಹತೆ ವ್ಯಾಪ್ತಿಯಲ್ಲಿದ್ದಾರೆ. ಕಳೆದ ದಶಕದಲ್ಲಿ ಈ ಪ್ರಮಾಣ ಶೇ.34ರಷ್ಟಿತ್ತು. ಇದೀಗ ಸ್ವಲ್ಪ ಸುಧಾರಣೆಯಾಗಿದೆ ಎಂದು ಸಮೀಕ್ಷೆ ಹೇಳಿದೆ.

ಸಂಘರ್ಷದ ಹೊರತೂ ಚೀನಾ ಹೂಡಿಕೆ ಹೆಚ್ಚಳಕ್ಕೆ ಶಿಫಾರಸು

ಚೀನಾದ ಜತೆಗೆ ಸಂಘರ್ಷದ ಹೊರತಾಗಿಯೂ ಸ್ಥಳೀಯ ಉತ್ಪಾದಕತೆ ಮತ್ತು ರಫ್ತು ಹೆಚ್ಚಿಸಲು ಚೀನಾದಿಂದ ಹೆಚ್ಚಿನ ವಿದೇಶಿ ನೇರ ಬಂಡವಾಳ ಹೂಡಿಕೆ ಸ್ವೀಕರಿಸಬೇಕಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. 2000 ದಿಂದ 2024ರವರೆಗೆ ಚೀನಾ ಭಾರತದ ವಿದೇಶಿ ನೇರ ಹೂಡಿಕೆಗೆ ಪಾಲಿನಲ್ಲಿ ಶೇ 0.37 ರಷ್ಟನ್ನು ಮಾತ್ರ ಹೊಂದಿದೆ. ಗಡಿ ಹಂಚಿಕೊಂಡಿರುವ ಚೀನಾದ ಜೊತೆಗೆ ಭಾರತ 2023-24ರಲ್ಲಿ 118.4 ಬಿಲಿಯನ್ ಡಾಲರ್‌ ದ್ವಿಮುಖ ವಾಣಿಜ್ಯ ವ್ಯವಹಾರದೊಂದಿಗೆ ಅತಿ ದೊಡ್ಡ ಪಾಲುದಾರತ್ವವಾಗಿತ್ತು. ಕಳೆದ ಹಣಕಾಸು ವರ್ಷದಲ್ಲಿ ಚೀನಾಕ್ಕೆ ಭಾರತದಿಂದ ಶೇ.8.7ರಷ್ಟು ರಫ್ತು ಏರಿಕೆಯಾಗಿದ್ದು, ಅಮದು ಪ್ರಮಾಣ ಶೇ.3.24ರಷ್ಟು ಹೆಚ್ಚಳವಾಗಿದೆ.

ಚಿಲ್ಲರೆ ಹೂಡಿಕೆದಾರರ ಪ್ರಮಾಣ ಏರಿಕೆ ಬಗ್ಗೆ ಎಚ್ಚರ ಅಗತ್ಯ

ನವದೆಹಲಿ: ಷೇರುಪೇಟೆಯಲ್ಲಿ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆಯಲ್ಲಿ ಗಮನಾರ್ಹವಾಗಿ ಏರಿಕೆ ಕಂಡಿದ್ದು, ಇದರ ಬಗ್ಗೆ ಸಮೀಕ್ಷೆ ಎಚ್ಚರಿಸಿದೆ. ಮಾರುಕಟ್ಟೆಯ ಅಪಾಯದ ಅರಿವು ಇಲ್ಲದೇ ಹೆಚ್ಚಿನ ಆದಾಯದ ನಿರೀಕ್ಷೆಯು ಅತ್ಯಂತ ಕಳವಳಕಾರಿ ಎಂದು ಹೇಳಿದೆ. ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಬಂಡವಾಳ ಮಾರುಕಟ್ಟೆಗೆ ಸ್ಥಿರತೆಯನ್ನು ನೀಡುತ್ತದೆ. ಉತ್ಪನ್ನ ವ್ಯಾಪಾರದಲ್ಲಿ ಈ ಹೂಡಿಕೆದಾರರಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಗಮನಿಸಿದೆ. ಕಳೆದ ಕೆಲವು ವರ್ಷಗಳಿಂದ, ಭಾರತೀಯ ಬಂಡವಾಳ ಮಾರುಕಟ್ಟೆಗಳಲ್ಲಿ ತಮ್ಮ ಖಾತೆಗಳ ಮೂಲಕ ಮಾರುಕಟ್ಟೆಗಳಲ್ಲಿ ನೇರ ವಹಿವಾಟು ಮತ್ತು ಮ್ಯೂಚುವಲ್ ಫಂಡ್ ಚಾನೆಲ್‌ಗಳ ಮೂಲಕ ಪರೋಕ್ಷ ವ್ಯಾಪಾರದ ಅಡಿಯಲ್ಲಿ ಚಿಲ್ಲರೆ ಹೂಡಿಕೆದಾರರು ಹೂಡಿಕೆ ಮಾಡುತ್ತಿರುವುದು ಉಲ್ಬಣಗೊಂಡಿದೆ.

ಕಂಪನಿಗಳ ಲಾಭ ಏರಿಕೆ ಆದರೂ ನೇಮಕ, ವೇತನ ಹೆಚ್ಚಳ ಇಲ್ಲ! ಭಾರತದ ಕಾರ್ಪೋರೇಟ್‌ ವಯಲದ ಕಂಪನಿಗಳ ಆರ್ಥಿಕ ಸಾಧನೆ ಉತ್ತಮವಾಗಿದೆ. ಆದರೆ ಉದ್ಯೋಗಿಗಳ ನೇಮಕಾತಿ ಹಾಗೂ ವೇತನ ಹೆಚ್ಚಳವು ಕಂಪನಿಗಳ ಲಾಭದೊಂದಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಕಾರ್ಪೋರೇಟ್‌ ವಲಯದ 33 ಸಾವಿರಕ್ಕೂ ಹೆಚ್ಚು ಕಂಪನಿಗಳು 2020 ರಿಂದ 2023ರ ವರೆಗೆ ಪಾವತಿಸಿದ ತೆರಿಗೆಗಿಂದ ಲಾಭ ನಾಲ್ಕು ಪಟ್ಟು ಹೆಚ್ಚಾಗಿದೆ. ಈ ವಲಯದಲ್ಲಿ ಉದ್ಯೋಗ ಸೃಷ್ಟಿ, ವೇತನ ಏರಿಕೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ ಎಂದು ಹೇಳಿದೆ. ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಉತ್ಪಾದಕತೆಯ ಮೇಲೆ ಪ್ರಭಾವ ಬೀರುವ ಅನೇಕ ಸಮಸ್ಯೆಗಳು ರಾಜ್ಯ ಸರ್ಕಾರದ ಡೊಮೈನ್‌ಗಳಲ್ಲಿವೆ. ಇದನ್ನು ಕೇಂದ್ರ, ರಾಜ್ಯ ಹಾಗೂ ಖಾಸಗಿ ವಲಯದ ನಡುವೆ ತ್ರಿ ಪಕ್ಷೀಯ ಒಪ್ಪಂದ ಮಾಡಿಕೊಳ್ಳುವ ಮೂಲಕ 2047ರ ವೇಳೆಗೆ ಉತ್ತಮಗೊಳಿಸಬೇಕು ಎಂದು ಹೇಳಿದೆ.

Share this article