ಅಕ್ರಮ ಹಣ ವರ್ಗಾವಣೆ: ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಇ.ಡಿ. ವಿಚಾರಣೆ

KannadaprabhaNewsNetwork | Updated : Jan 21 2024, 12:15 PM IST

ಸಾರಾಂಶ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೋರೆನ್‌ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ಮಾಡಲು ಆರಂಭಿಸಿದೆ.

ರಾಂಚಿ: ಭೂ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರಂಭಿಸಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ 7 ಬಾರಿ ಇ.ಡಿ. ನೀಡಿದ್ದ ಸಮನ್ಸ್‌ಗೆ ಉತ್ತರಿಸಿದ ಸೊರೇನ್‌, 8ನೇ ಸಮನ್ಸ್‌ ಜಾರಿಯಾದ ಬಳಿಕ ವಿಚಾರಣೆಗೆ ಒಪ್ಪಿಕೊಂಡಿದ್ದರು. ಶನಿವಾರ ಮಧ್ಯಾಹ್ನ 1 ಗಂಟೆಗೆ ಸೊರೇನ್‌ ಅವರ ನಿವಾಸಕ್ಕೆ ಆಗಮಿಸಿದ ಇ.ಡಿ. ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ. 

ಸಿಐಎಸ್‌ಎಫ್‌ ಸಿಬ್ಬಂದಿ ಇ.ಡಿ. ಅಧಿಕಾರಿಗಳ ಬೆಂಗಾವಲಿಗೆ ತೆರಳಿದ್ದು, ಸೊರೇನ್‌ ಅವರನ್ನು ಸೂಕ್ಷ್ಮವಾಗಿ ಗಮನಿಸಲು ಅಧಿಕಾರಿಗಳು ಉತ್ತಮ ದರ್ಜೆಯ ಬಾಡಿ ಕ್ಯಾಮೆರಾಗಳನ್ನು ಧರಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ಅಲ್ಲದೇ ವಿಚಾರಣೆ ನಡೆಯುತ್ತಿರುವ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಸಹ ನೇಮಿಸಲಾಗಿದೆ. 

ಮತ್ತೊಂದಡೆ ಸಭೆ ನಡೆಸಿರುವ ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷದ ನಾಯಕರು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬಹುದಾದ ನಿರ್ಣಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಪಕ್ಷದ ವಕ್ತಾರ ಸುಪ್ರಿಯೋ ಭಟ್ಟಾಚಾರ್ಯ ತಿಳಿಸಿದ್ದಾರೆ. 

ಅಕ್ರಮ ಭೂ ಒಡೆತನಕ್ಕೆ ಸಂಬಂಧಿಸಿದಂತೆ ಭಾರಿ ಪ್ರಮಾಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಇ.ಡಿ. ಆರೋಪಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 14 ಮಂದಿಯನ್ನು ಬಂಧಿಸಿದೆ.

Share this article