ನವದೆಹಲಿ: ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವ ನಡುವೆಯೇ ಮಕ್ಕಳನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳದಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸೂಚಿಸಿದೆ.
ಈ ಕುರಿತು ಹೊರಡಿಸಿರುವ ಮಾರ್ಗಸೂಚಿಯಲ್ಲಿ ಮಕ್ಕಳನ್ನು ಚುನಾವಣಾ ಪ್ರಚಾರದಲ್ಲಿ ಕರಪತ್ರ ಹಂಚಿಕೆ, ರ್‍ಯಾಲಿಯಲ್ಲಿ ಘೋಷಣೆ ಕೂಗುವುದು, ಪ್ರಚಾರಕ್ಕೆ ಬಳಸುವ ವಾಹನಗಳಲ್ಲಿ ಕರೆದೊಯ್ಯುವುದು, ಪ್ರಚಾರಕ್ಕೆ ಬಳಸಲಾಗುವ ದೃಶ್ಯ, ಶ್ರವಣ ಜಾಹೀರಾತುಗಳನ್ನೂ ಒಳಗೊಂಡಂತೆ ಯಾವುದೇ ರೀತಿಯಲ್ಲಿ ಬಳಸಿಕೊಳ್ಳದಂತೆ ಸೂಚಿಸಿದೆ.
ಅಲ್ಲದೆ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗೂ ಈ ಕುರಿತು ಮಾರ್ಗಸೂಚಿ ಹೊರಡಿಸಿದ್ದು, ಮಕ್ಕಳ ಬಳಕೆಯ ವಿರುದ್ಧ ಶೂನ್ಯ ಸಹಿಷ್ಣುತೆ ವಹಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
-=ಒಂದು ವೇಳೆ ಚುನಾವಣಾ ಕರ್ತವ್ಯದ ಅವಧಿಯಲ್ಲಿ ಮಕ್ಕಳ ಬಳಕೆ ಕಂಡುಬಂದಲ್ಲಿ ಜಿಲ್ಲಾ ಚುನಾವಣಾಧಿಕಾರಿಯನ್ನು ಹೊಣೆಯಾಗಿಸಿ ಬಾಲಾಪರಾಧ ಕಾಯ್ದೆಯಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ.
ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ ಮಾಡದಂತೆ ಬಾಂಬೆ ಹೈಕೋರ್ಟ್ ಕೂಡ 2014ರಲ್ಲಿ ತೀರ್ಪು ನೀಡಿತ್ತು.