ನವದೆಹಲಿ: ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ, ತನ್ನ ಮೊದಲ ಬಜೆಟ್‌ನಲ್ಲಿ ಸುಧಾರಣಾ ಕ್ರಮಗಳಿಗೆ ಇನ್ನಷ್ಟು ತೇಜಿ ನೀಡಲಿದೆ ಮತ್ತು ಹಲವು ಐತಿಹಾಸಿಕ ಕ್ರಮಗಳನ್ನು ಘೋಷಿಸಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದ್ದಾರೆ. ಅಲ್ಲದೆ ನೂತನವಾಗಿ ರಚನೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಭವಿಷ್ಯದ ಕಲ್ಪನೆಗಳ ಚಿತ್ರಣವನ್ನು ಅವರು ದೇಶದ ಜನತೆ ಮುಂದಿಟ್ಟಿದ್ದಾರೆ.
18ನೇ ಲೋಕಸಭೆಯ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಹಲವು ಮಹತ್ವದ ನಿರ್ಧಾರ ಕೈಗೊಂಡಿದೆ. ಇದೀಗ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಸ್ಥಿರ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಮುಟ್ಟಲು ನೀಡಿದ ಜನಾದೇಶವಾಗಿದೆ.
ಸರ್ಕಾರ ತನ್ನ ಮುಂದಿನ ಬಜೆಟ್‌ನಲ್ಲಿ ಆರ್ಥಿಕತೆ ಸುಧಾರಣೆ, ತೆರಿಗೆ ನೀತಿಯಲ್ಲಿ ಬದಲಾವಣೆ, ದೂರಗಾಮಿ ಪರಿಣಾಮಗಳನ್ನು ಹೊಂದಿರುವ ನೀತಿಗಳ ಜೊತೆಗೆ ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ ಮಾಡಲು ಅಗತ್ಯವಾದದ ಸರ್ಕಾರದ ಭವಿಷ್ಯದ ಗುರಿಯನ್ನು ದೇಶದ ಮುಂದಿಡಲಿದೆ. ಬಜೆಟ್ ಹಲವು ಐತಿಹಾಸಿಕ ಘೋಷಣೆ ಮಾಡಲಿದೆ ಎಂದು ತಿಳಿಸಿದರು.
ನೊಂದವರಿಗೆ ಸಿಎಎ ನೆರವು:
ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆಯು, ದೇಶ ವಿಜಭನೆಯಿಂದ ನೊಂದವರಿಗೆ ಗೌರವಯುತ ಜೀವನ ನಡೆಸುವ ಅವಕಾಶ ಕಲ್ಪಿಸಿದೆ ಎಂದು ಮುರ್ಮು ತಿಳಿಸಿದರು.
4 ಬುಲೆಟ್ ರೈಲು ಕಾರಿಡಾರ್:
ದೇಶದ ಉತ್ತರ, ದಕ್ಷಿಣ ಮತ್ತು ಪೂರ್ವದ ಭಾಗಗಳಲ್ಲಿ ಬುಲೆಟ್ ರೈಲು ಕಾರಿಡಾರ್ ಆರಂಭಿಸುವ ಕುರಿತು ಕೇಂದ್ರ ಸರ್ಕಾರ ಕಾರ್ಯಸಾಧು ವರದಿ ತಯಾರಿಸಲು ನಿರ್ಧರಿಸಿದೆ ಎಂದು ರಾಷ್ಟ್ರಪತಿ ಮುರ್ಮು ಹೇಳಿದರು.
ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮ
ಇತ್ತೀಚೆಗೆ ನಡೆದ ಪ್ರವೇಶ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನ್ಯಾಯಸಮ್ಮತ ತನಿಖೆಗೆ ಸರ್ಕಾರ ಬದ್ಧವಾಗಿದೆ. ಅದೇ ರೀತಿ ತಪ್ಪಿತಸ್ಥರು ಶಿಕ್ಷೆ ಅನುಭವಿಸುವುದನ್ನು ಸರ್ಕಾರ ಖಾತರಿಪಡಿಸಿಕೊಳ್ಳಲಿದೆ. ಈ ವಿಷಯದಲ್ಲಿ ದೇಶವ್ಯಾಪಿ ಒಮ್ಮತದ ನಿರ್ಧಾರ ಕೈಗೊಳ್ಳಲು ಪಕ್ಷಾತೀತವಾಗಿ ಕ್ರಮ ಕೈಗೊಳ್ಳಬೇಕಿದೆ. ಈ ವಿಷಯದಲ್ಲಿ ದೊಡ್ಡ ಮಟ್ಟದ ಸುಧಾರಣೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ರಾಷ್ಟ್ರಪತಿ ತಿಳಿಸಿದರು.
ಕಾಶ್ಮೀರದ ಮತ ಶತ್ರುಗಳಿಗೆ ಉತ್ತರ:
ಕೇಂದ್ರಾಡಳಿತ ಪ್ರದೇಶವಾದ ಜಮ್ಮ ಮತ್ತು ಕಾಶ್ಮೀರದಲ್ಲಿ ವಿಧಿ 370 ಅನ್ನು ರದ್ದು ಗೊಳಿಸಿದ್ದರೂ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತದಾನ ಮಾಡುವ ಮೂಲಕ ಭಾರತದ ಶತ್ರು ದೇಶಗಳಿಗೆ ಅಲ್ಲಿನ ಮತದಾರರು ಪ್ರತ್ಯುತ್ತರ ನೀಡಿದ್ದಾರೆ ಎಂದರು.
ಶಿಕ್ಷೆಗಿಂತ ನ್ಯಾಯಕ್ಕೆ ಆದ್ಯತೆ:
ಬ್ರಿಟಿಷರ ಕಾಲದಲ್ಲಿ ಶಿಕ್ಷೆ ನೀಡುವುಕ್ಕಾಗಿಯೇ ಕಾನೂನು ರೂಪಿಸಲಾಗಿತ್ತು. ದುರದೃಷ್ಟವಶಾತ್ ಸ್ವಾತಂತ್ರ್ಯ ಬಳಿಕ ಅದನ್ನು ದಶಕಗಳ ಕಾಲ ಮುಂದುವರಿಸಿಕೊಂಡು ಬರಲಾಗಿತ್ತು. ಆದರೆ ಭಾರತೀಯ ನ್ಯಾಯ್ ಸಂಹಿತೆ, ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಸಾಕ್ಷ್ಯ ಅಧಿನಿಯಮಗಳು ಶಿಕ್ಷೆಗಿಂತ ತ್ವರಿತಗತಿಯಲ್ಲಿ ನ್ಯಾಯ ಒದಗಿಸಲಿದೆ ಎಂದರು.
ಪ್ರಜಾಪ್ರಭುತ್ವ ದುರ್ಬಲ:
ದೇಶದ ಜನರ ಭಾವನೆ ಹಾಗೂ ನಂಬಿಕೆಗೆ ಧಕ್ಕೆ ತರುವುದು, ನಾವು ಕುಳಿತ ಮರದ ರೆಂಬೆ ತುಂಡು ಮಾಡಿದಂತೆ. ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ನಡೆಯುವ ಪ್ರತಿ ಯತ್ನವನ್ನು ನಾವೆಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು. ಹಿಂದೆ ಬ್ಯಾಲೆಟ್ ಪೇಪರ್ ಇದ್ದಾಗ ಅವುಗಳನ್ನು ಲೂಟಿ ಮಾಡಲಾಗುತ್ತಿತ್ತು. ಆದರೆ ಈಗ ಇವಿಎಂ ಯಂತ್ರಗಳು ಅದನ್ನು ತಡೆದಿವೆ. ಇವು ಸುಪ್ರೀಂ ಕೋರ್ಟ್‌ನಿಂದ ಹಿಡಿದು, ಜನರ ಕೋರ್ಟ್‌ವರೆಗೆ ಮಾನ್ಯತೆ ಪಡೆದಿದೆ ಎಂದರು.
ನಳಂದ ಭಾರತದ ವೈಭವದ ಸಂಕೇತ:
ನಳಂದ ವಿಶ್ವ ವಿದ್ಯಾಲಯ ಮರುಸ್ಥಾಪನೆ, ದೇಶದಲ್ಲಿನ ಹಲವು ಪ್ರಾಚೀನ ಸಾಂಸ್ಕೃತಿಕ ಪರಂಪರೆಗಳನ್ನು ಕೇಂದ್ರ ಸರ್ಕಾರ ಪುನಃಶ್ಚೇತನಗೊಳಿಸಿದೆ. ಈ ಮೂಲಕ ಭಾರತವನ್ನು ಮತ್ತೆ ವಿಶ್ವದ ಶೈಕ್ಷಣಿಕ ಹಬ್‌ನನ್ನಾಗಿಸಲು ಪಣ ತೊಟ್ಟಿದೆ. ಇದರೊಂದಿಗೆ ಚಂದ್ರಯಾನದಂತಹ ಅಭಿವೃದ್ಧಿ ಕೆಲಸಗಳು ದೇಶವನ್ನು ಇನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಿದೆ ಎಂದರು.