3.5 ಕೋಟಿ ಉದ್ಯೋಗ ಸೃಷ್ಟಿ ಸ್ಕೀಂಗೆ ಕೇಂದ್ರ ಸಂಪುಟ ಅಸ್ತು

KannadaprabhaNewsNetwork | Published : Jul 2, 2025 12:21 AM
ಅನುಮೋದನೆ | Kannada Prabha

ದೇಶದಲ್ಲಿ 2 ವರ್ಷದಲ್ಲಿ 3.5 ಕೋಟಿ ಉದ್ಯೋಗ ಸೃಷ್ಟಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಉತ್ಪಾದನಾ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಮತ್ತು ಸಾಮಾಜಿಕ ಭದ್ರತೆಯನ್ನು ಗುರಿಯಾಗಿಟ್ಟುಕೊಂಡು 1.07 ಲಕ್ಷ ಕೋಟಿ ರು. ಅಂದಾಜುವೆಚ್ಚದ ಉದ್ಯೋಗ ಆಧಾರಿತ ಪ್ರೋತ್ಸಾಹ ಧನ ಯೋಜನೆ (ಇಎಲ್‌ಐ) ಜಾರಿಗೆ ಮಂಗಳವಾರ ಒಪ್ಪಿಗೆ ನೀಡಿದೆ.

- ₹1 ಲಕ್ಷ ಕೋಟಿ ವೆಚ್ಚದ ಉದ್ಯೋಗ ಯೋಜನೆ

- 2 ವರ್ಷದಲ್ಲಿ 3.5 ಕೋಟಿ ಉದ್ಯೋಗ ಸೃಷ್ಟಿ ಗುರಿ

- ಹೊಸ ಉದ್ಯೋಗಿಗಳಿಗೆ ಸಿಗಲಿದೆ ಪ್ರೋತ್ಸಾಹಧನ- ಉದ್ಯೋಗದಾತರಿಗೂ ಸಿಗಲಿದೆ ಸರ್ಕಾರದ ಬೆಂಬಲ

--

2 ಹಂತದ ಯೋಜನೆ:

1. ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರಿಗೆ 2 ಕಂತುಗಳಲ್ಲಿ ಗರಿಷ್ಠ 15,000 ರು.ವರೆಗೆ 1 ತಿಂಗಳ ವೇತನ

2. 1 ಲಕ್ಷ ರು.ವರೆಗಿನ ವೇತನದ ಉದ್ಯೋಗ ಸೃಷ್ಟಿಗಾಗಿ ಉದ್ಯೋಗದಾತರಿಗೆ 3000 ರು.ವರೆಗೆ ಪ್ರೋತ್ಸಾಹಧನ

--

ಪಿಟಿಐ ನವದೆಹಲಿ

ದೇಶದಲ್ಲಿ 2 ವರ್ಷದಲ್ಲಿ 3.5 ಕೋಟಿ ಉದ್ಯೋಗ ಸೃಷ್ಟಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಉತ್ಪಾದನಾ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಮತ್ತು ಸಾಮಾಜಿಕ ಭದ್ರತೆಯನ್ನು ಗುರಿಯಾಗಿಟ್ಟುಕೊಂಡು 1.07 ಲಕ್ಷ ಕೋಟಿ ರು. ಅಂದಾಜುವೆಚ್ಚದ ಉದ್ಯೋಗ ಆಧಾರಿತ ಪ್ರೋತ್ಸಾಹ ಧನ ಯೋಜನೆ (ಇಎಲ್‌ಐ) ಜಾರಿಗೆ ಮಂಗಳವಾರ ಒಪ್ಪಿಗೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇಎಲ್‌ಐ ಯೋಜನೆಯು 2024-25ರ ಕೇಂದ್ರ ಬಜೆಟ್‌ನಲ್ಲಿ ಮಂಡಿಸಿದ ಪ್ರಸ್ತಾವನೆಯ ಭಾಗವಾಗಿತ್ತು.

ಈ ಯೋಜನೆ ಮುಂದಿನ 2 ವರ್ಷಗಳಲ್ಲಿ ದೇಶಾದ್ಯಂತ 3.5 ಕೋಟಿ ಉದ್ಯೋಗ ಸೃಷ್ಟಿಯ ಗುರಿ ಹೊಂದಿದೆ. ಯೋಜನೆಯಡಿ ಮೊದಲ ಬಾರಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ (ಇಪಿಎಫ್‌ಒದಲ್ಲಿ ನೋಂದಾಯಿತ) ಒಂದು ತಿಂಗಳ ವೇತನ (ಗರಿಷ್ಠ 15 ಸಾವಿರ ರು.) ಹಾಗೂ ಉದ್ಯೋಗದಾತರಿಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಗಾಗಿ 2 ವರ್ಷಗಳ ಕಾಲ ಪ್ರೋತ್ಸಾಹ ಧನ ಸರ್ಕಾರದಿಂದ ಸಿಗಲಿದೆ. ಆದರೆ ಉತ್ಪಾದನಾ ಕ್ಷೇತ್ರಕ್ಕೆ ಮಾತ್ರ ಈ ಯೋಜನೆ 4 ವರ್ಷಗಳ ವರೆಗೆ ವಿಸ್ತರಣೆಯಾಗಲಿದೆ.

ಈ ವರ್ಷದ ಆಗಸ್ಟ್‌ 1ರಿಂದ ಜುಲೈ 2027ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಯೋಜನೆ ಅನ್ವಯವಾಗಲಿದೆ. ಈ ಯೋಜನೆ 2 ಭಾಗಗಳನ್ನು ಹೊಂದಿದ್ದು, ಮೊದಲ ಭಾಗ ನವ ಉದ್ಯೋಗಿಗಳಿಗೆ ಹಾಗೂ 2ನೇ ಭಾಗ ಉದ್ಯೋಗದಾತರಿಗೆ ಸಂಬಂಧಿಸಿದ್ದಾಗಿದೆ.

ಹೊಸ ಉದ್ಯೋಗಿಗಳಿಗೆ ಪ್ರೋತ್ಸಾಹಧನ:

ಈ ಭಾಗವು ʻಇಪಿಎಫ್ಒʼನಲ್ಲಿ ನೋಂದಾಯಿತರಾದ ಮೊದಲ ಬಾರಿಯ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದೆ. ಸುಮಾರು ₹1 ಲಕ್ಷ ವರೆಗೆ ವೇತನ ಪಡೆಯುವವರಿಗಷ್ಟೇ ಇದರ ಲಾಭ ಸಿಗಲಿದೆ. ಹೊಸ ಉದ್ಯೋಗಿಗಳಿಗೆ ಗರಿಷ್ಠ 15,000 ರು. ವರೆಗಿನ 1 ತಿಂಗಳ ‘ಇಪಿಎಫ್‌ ವೇತನ’ವು, 2 ಕಂತುಗಳಲ್ಲಿ ಪ್ರೋತ್ಸಾಹಧನವಾಗಿ ಸಿಗಲಿದೆ.

ಮೊದಲ ಕಂತನ್ನು ಕೆಲಸಕ್ಕೆ ಸೇರಿದ 6 ತಿಂಗಳಲ್ಲಿ ಮತ್ತು 2ನೇ ಕಂತನ್ನು 12 ತಿಂಗಳ ಸೇವೆ ನಂತರ ಹಾಗೂ ಹಣಕಾಸು ಸಾಕ್ಷರತಾ ಕಾರ್ಯಕ್ರಮ ಪೂರ್ಣಗೊಳಿಸಿದ ಬಳಿಕ ನೀಡಲಾಗುತ್ತದೆ.

ಉದ್ಯೋಗಿಗಳಲ್ಲಿ ಉಳಿತಾಯ ಮನೋಭಾವವೃದ್ಧಿಗೆ ಪ್ರೋತ್ಸಾಹಧನದ ಒಂದು ಭಾಗ ಡಿಪಾಸಿಟ್‌ ಖಾತೆಯಲ್ಲಿ ನಿರ್ದಿಷ್ಟ ಅವಧಿ ವರೆಗೆ ಇಡಲಾಗುತ್ತದೆ. ನಿಗದಿತ ದಿನಾಂಕ ಬಳಿಕ ಆ ಹಣ ಹಿಂಪಡೆಯಬಹುದು. ಈ ಪ್ರೋತ್ಸಾಹಧನ ಯೋಜನೆಯಿಂದ 1.92 ಕೋಟಿ ನವ ಉದ್ಯೋಗಿಗಳಿಗೆ ಅನುಕೂಲ ಆಗಲಿದೆ.

ಉದ್ಯೋಗದಾತರಿಗೆ ಪ್ರೋತ್ಸಾಹಧನ ಹೇಗೆ?:

ವಿಶೇಷವಾಗಿ ಉತ್ಪಾದನಾ ಕ್ಷೇತ್ರಕ್ಕೆ ಒತ್ತು ನೀಡಿ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ಈ ಯೋಜನೆ ರೂಪಿಸಲಾಗಿದೆ. ಉದ್ಯೋಗದಾತರು ಸೃಷ್ಟಿಸುವ ಪ್ರತಿ ಹೆಚ್ಚುವರಿ ಉದ್ಯೋಗಕ್ಕೆ (ಕನಿಷ್ಠ 6 ತಿಂಗಳವರೆಗೆ ನಿರಂತರ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ) 3 ಸಾವಿರ ರು.ವರೆಗೆ ಪ್ರೋತ್ಸಾಹ ಧನ ಸಿಗಲಿದೆ. ಯೋಜನೆ 1 ಲಕ್ಷ ರು.ವರೆಗಿನ ವೇತನದ ಉದ್ಯೋಗ ಸೃಷ್ಟಿಗೆ ಮಾತ್ರ ಅನ್ವಯವಾಗಲಿದೆ.

ಎಷ್ಟು ಪ್ರೋತ್ಸಾಹಧನ?:

10 ಸಾವಿರ ರು. ವರೆಗಿನ ಮಾಸಿಕ ಇಪಿಎಫ್‌ ವೇತನ ಹೊಂದಿರುವ ನೌಕರರನ್ನು ನೇಮಿಸಿದ್ದಕ್ಕೆ ತಲಾ 1 ಸಾವಿರ ರು.ವರೆಗೆ, 10,001ರಿಂದ 20 ಸಾವಿರ ವರೆಗಿನ ಉದ್ಯೋಗ ಸೃಷ್ಟಿಗೆ ಮಾಸಿಕ 2 ಸಾವಿರ, 20,001ರಿಂದ 1 ಲಕ್ಷ ವರೆಗಿನ ವೇತನದ ಹೆಚ್ಚುವರಿ ಉದ್ಯೋಗ ಸೃಷ್ಟಿಸಿದ್ದಕ್ಕೆ ಮಾಸಿಕ ತಲಾ 3 ಸಾವಿರದ ವರೆಗೆ ಪ್ರೋತ್ಸಾಹಧನ ಉದ್ಯೋಗದಾತರಿಗೆ ಸಿಗಲಿದೆ.

ಈ ಭಾಗವು ಸುಮಾರು 2.60 ಕೋಟಿ ಜನರಿಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಉದ್ಯೋಗದಾತರನ್ನು ಪ್ರೋತ್ಸಾಹಿಸುವ ನಿರೀಕ್ಷೆಯಿದೆ.

ಷರತ್ತುಗಳೇನು?:

ಉದ್ಯೋಗದಾತರು ಇಪಿಎಫ್‌ಒದಲ್ಲಿ ನೋಂದಣಿಯಾಗಿರಬೇಕು. 50ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದ್ದರೆ ಕನಿಷ್ಠ ಹೆಚ್ಚುವರಿ ಇಬ್ಬರು ನೌಕರರು, 50ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದರೆ ಕನಿಷ್ಠ ಐವರು ಹೆಚ್ಚುವರಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕು ಎಂಬ ಷರತ್ತಿದೆ. ಉತ್ಪಾದನಾ ಕ್ಷೇತ್ರಕ್ಕೆ ಈ ಯೋಜನೆ 4 ವರ್ಷಗಳವರೆಗೆ ವಿಸ್ತರಣೆಯಾಗಲಿದೆ.

==

ಸಂಶೋಧನೆಯಲ್ಲಿ ಹೂಡಿಕೆ ಮಾಡಿದರೆ ಶೂನ್ಯಬಡ್ಡಿ ಸಾಲ

- ಇದರ ಉತ್ತೇಜನಕ್ಕೆ ₹1 ಲಕ್ಷ ಕೋಟಿ ಯೋಜನೆ: ಸಂಪುಟ ಅಸ್ತು

ನವದೆಹಲಿ: ಸಂಶೋಧನೆಯಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಉತ್ತೇಜಿಸಲು, ಹೂಡಿಕೆದಾರರಿಗೆ ಶೂನ್ಯ ಅಥವಾ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವ 1 ಲಕ್ಷ ಕೋಟಿ ರು. ಮೊತ್ತದ ಸಂಶೋಧನಾ ಅಭಿವೃದ್ಧಿ ಮತ್ತು ನಾವೀನ್ಯತೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.

ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ದೊರಕಿದೆ.‘ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಯಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಉತ್ತೇಜಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದು ಹೂಡಿಕೆದಾರರಿಗೆ ಶೂನ್ಯ ಅಥವಾ ಕಡಿಮೆ ಬಡ್ಡಿದರದಲ್ಲಿ ದೀರ್ಘಕಾಲೀನ ಆರ್ಥಿಕ ಸಹಾಯ ಒದಗಿಸುತ್ತದೆ. ಸ್ಟಾರ್ಟಪ್‌ಗಳಿಗೆ ಇಕ್ವಿಟಿಯನ್ನೂ ನೀಡಲಾಗುತ್ತದೆ. ಪ್ರಧಾನಮಂತ್ರಿಗಳ ಅಧ್ಯಕ್ಷತೆಯ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಸಂಸ್ಥೆ (ಎಎನ್‌ಆರ್‌ಎಫ್) ಈ ಯೋಜನೆಗೆ ಕಾರ್ಯತಂತ್ರದ ನಿರ್ದೇಶನವನ್ನು ಒದಗಿಸುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನೋಡಲ್ ಏಜೆನ್ಸಿಯಾಗಿರುತ್ತದೆ’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗಾರರಿಗೆ ತಿಳಿಸಿದರು.

==

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 58 ರು. ಇಳಿಕೆ

ನವದೆಹಲಿ: ಕೇಂದ್ರ ಸರ್ಕಾರ ಮಂಗಳವಾರ 19 ಕೇಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 58.50 ರು. ಇಳಿಸಿದೆ. ಇದರಿಂದ 1,665 ರು. ಬದಲು 1,616.50 ರು.ಗೆ ಸಿಲಿಂಡರ್‌ ಲಭಿಸಲಿದೆ. ಇದೇ ವೇಳೆ, ವೈಮಾನಿಕ ಇಂಧನ ಬೆಲೆಯನ್ನು ಕಿಲೋ ಲೀಟರ್‌ಗೆ 6,271.5 ರು.ನಷ್ಟು ಏರಿಸಲಾಗಿದ್ದು, 89,344.05 ರು.ಗೆ ಒಂದು ಕಿ.ಲೀ. ಲಭ್ಯವಾಗಲಿದೆ.