ತೈಲ ಬೆಲೆ ಬ್ಯಾರಲ್‌ಗೆ 100 ಡಾಲರ್‌ನತ್ತ

KannadaprabhaNewsNetwork |  
Published : Mar 03, 2026, 01:30 AM ISTUpdated : Mar 03, 2026, 04:35 AM IST
Oil

ಸಾರಾಂಶ

ತೈಲಭರಿತ ಇರಾನ್‌ ಸೇರಿ ಕೊಲ್ಲಿ ರಾಷ್ಟ್ರಗಳು ಹೊತ್ತಿ ಉರಿಯುತ್ತಿರುವ ಹೊತ್ತಿನಲ್ಲಿ ಹೋರ್ಮುಜ್‌ ಜಲಸಂಧಿಯ ಪ್ರವೇಶವನ್ನೂ ನಿರ್ಬಂಧಿಸಿರುವುದು ಜಾಗತಿಕ ತೈಲ ಬೆಲೆಯ ಮೇಲೆ ವಿಪರೀತ ಪರಿಣಾಮ ಬೀರಿದೆ. ಅಮೆರಿಕದ ತೈಲ ಬೆಲೆಯಲ್ಲಿ ಶೇ.7.6ರಷ್ಟು ಏರಿಕೆ 

ಫ್ರಾಂಕ್‌ಫರ್ಟ್‌: ತೈಲಭರಿತ ಇರಾನ್‌ ಸೇರಿ ಕೊಲ್ಲಿ ರಾಷ್ಟ್ರಗಳು ಹೊತ್ತಿ ಉರಿಯುತ್ತಿರುವ ಹೊತ್ತಿನಲ್ಲಿ ಹೋರ್ಮುಜ್‌ ಜಲಸಂಧಿಯ ಪ್ರವೇಶವನ್ನೂ ನಿರ್ಬಂಧಿಸಿರುವುದು ಜಾಗತಿಕ ತೈಲ ಬೆಲೆಯ ಮೇಲೆ ವಿಪರೀತ ಪರಿಣಾಮ ಬೀರಿದೆ. ಅಮೆರಿಕದ ತೈಲ ಬೆಲೆಯಲ್ಲಿ ಶೇ.7.6ರಷ್ಟು ಏರಿಕೆಯಾಗಿ ಪ್ರತಿ ಬ್ಯಾರಲ್‌ಗೆ (159 ಲೀಟರ್‌) 6604.83 ರು. ಆಗಿದೆ. ಬ್ರೆಂಟ್‌ ದರದಲ್ಲಿ ಶೇ.8.6ರಷ್ಟು ಹೆಚ್ಚಳವಾಗಿ 7244.98 ರು. ತಲುಪಿದೆ.

ಹೋರ್ಮುಜ್‌ ಜಲಸಂಧಿಯ ಮೂಲಕ ಜಗತ್ತಿನ ಶೇ.20ರಷ್ಟು ತೈಲ ಸಾಗಣೆಯಾಗುತ್ತಿತ್ತು. ಆದರೆ ಅಲ್ಲಿ ಸಾಗುತ್ತಿದ್ದ ಹಡಗುಗಳ ಮೇಲಿನ ದಾಳಿ ಮುಂದುವರೆದಿರುವ ಕಾರಣ ಪೂರೈಕೆಗೆ ಅಡಚಣೆಯಾಗಿದೆ. ಇದರಿಂದಾಗಿ ಬೇಡಿಕೆ ಹೆಚ್ಚಿ, ದರದಲ್ಲೂ ಏರಿಕೆಯಾಗಿದೆ. ಅತ್ತ ಈ ಜಲಸಂಧಿಯನ್ನು ತಪ್ಪಿಸಿ ಪೂರೈಕೆ ಸಾಧ್ಯವಿದೆಯಾದರೂ ಆ ಮಾರ್ಗ ಉದ್ದವಿರುವ ಕಾರಣ ಬೆಲೆ ಏರಿಕೆಯಾಗುತ್ತದೆ. 

ಅನಿಲ ಬೆಲೆ ಹೆಚ್ಚಳ:

ನೈಸರ್ಗಿಕ ಅನಿಲದ ಅತಿದೊಡ್ಡ ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾಗಿರುವ ಕತಾರ್‌ ಮೇಲೆ ಇರಾನ್‌ ದಾಳಿ ಮಾಡಿರುವ ಕಾರಣ ಅಲ್ಲಿ ನೈಸರ್ಗಿಕ ಅನಿಲದ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಈ ಬಗ್ಗೆ ಸರ್ಕಾರಿ ಒಡೆತನದ ಪೆಟ್ರೋಲಿಯಂ ಕಂಪನಿ ಕತಾರ್‌ಎನರ್ಜಿ ಅಧಿಕೃತವಾಗಿ ಘೋಷಿಸಿದೆ. ಪರಿಣಾಮ ಯುರೋಪ್‌ನಲ್ಲಿ ಅನಿಲದ ಬೆಲೆಯಲ್ಲಿ ಶೇ.40ರಷ್ಟು ಹೆಚ್ಚಳವಾಗಿದೆ.

ರುಪಾಯಿ ಮೌಲ್ಯ 41 ಪೈಸೆ ಕುಸಿದು 91.49ಕ್ಕೆ ಅಂತ್ಯ

ಮುಂಬೈ: ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕ ಕರೆನ್ಸಿಗೆ ಬೇಡಿಕೆ ಹೆಚ್ಚಾಗಿದ್ದು, ಸೋಮವಾರ ಡಾಲರ್‌ ಎದುರು ರುಪಾಯಿ ಮೌಲ್ಯ 41 ಪೈಸೆಗಳಷ್ಟು ಕುಸಿತವಾಗಿ 91.49ಕ್ಕೆ ಅಂತ್ಯವಾಗಿದೆ. ದಿನದ ಆರಂಭದಲ್ಲಿ ರುಪಾಯಿ ಮೌಲ್ಯ 91.23 ಇತ್ತು. ದಿನದ ಮಧ್ಯಕ್ಕೆ ಮತ್ತಷ್ಟು ಕುಸಿದು 91.65ಕ್ಕೆ ತಲುಪಿತು. ಆದರೆ ದಿನದಂತ್ಯಕ್ಕೆ 91.49ರಲ್ಲಿ ನೆಲೆಗೊಂಡಿತು. ದೇಶೀಯ ಷೇರು ಮಾರುಕಟ್ಟೆಗಳಲ್ಲಿ ಭಾರಿ ಮಾರಾಟ ಮತ್ತು ವಿದೇಶಿ ನಿಧಿಗಳ ಹೊರ ಹರಿವು ಕೂಡ ರುಪಾಯಿ ಮೌಲ್ಯದ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಯುದ್ಧದ ಏಟಿಗೆ ಸೆನ್ಸೆಕ್ಸ್‌ 1048 ಅಂಕ ಕುಸಿತ: ₹6.6 ಲಕ್ಷ ಕೋಟಿ ನಷ್ಟ

ಮುಂಬೈ: ಮಧ್ಯಪ್ರಾಚ್ಯದಲ್ಲಿ ಯುದ್ಧವು, ಬಾಂಬೆ ಷೇರುಪೇಟೆಗೆ ಹೊಡೆತ ನೀಡಿದ್ದು, ಸೋಮವಾರ ಸೆನ್ಸೆಕ್ಸ್‌ 1048 ಅಂಕಗಳ ಕುಸಿತ ಕಂಡು 80238 ಅಂಕಗಳಲ್ಲಿ ಮುಕ್ತಾಯವಾಗಿದೆ. ಮಧ್ಯಂತರ ಅವಧಿಯಲ್ಲಿ ಸೂಚ್ಯಂಕ 2743 ಅಂಕಗಳವರೆಗೂ ಕುಸಿದಿತ್ತಾದರೂ ಬಳಿಕ ಉತ್ತಮ ಚೇತರಿಕೆ ಕಂಡಿತು. ಷೇರುಪೇಟೆಯ ಕುಸಿತವು ಹೂಡಿಕೆದಾರರಿಗೆ ಒಂದೇ ದಿನ 6.6 ಲಕ್ಷ ಕೋಟಿ ರು. ನಷ್ಟಕ್ಕೆ ಕಾರಣವಾಗಿದೆ. ಯುದ್ಧವು, ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಷೇರುಪೇಟೆಗೆ ಹೊಡೆತ ನೀಡಿದೆ.

ಕೊಲ್ಲಿ ಉದ್ವಿಗ್ನತೆ ಕಾರಣ ಬೆಳ್ಳಿ ದರ ₹3.15 ಲಕ್ಷಕ್ಕೆ ಒಂದೇ ದಿನ 20000 ರು.ನಷ್ಟು ಏರಿಕೆ

ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ಪರಿಣಾಮವು ಅಮೂಲ್ಯ ಲೋಹಗಳ ಮೇಲೆ ಜಾಗತಿಕವಾಗಿ ಬಿದ್ದಿದೆ. ಬೆಂಗಳೂರಿನಲ್ಲಿ 1 ಕೆ.ಜಿ. ಬೆಳ್ಳಿ ಬೆಲೆಯಲ್ಲಿ ಒಮ್ಮೆಲೆ 20,000 ರು. ಏರಿಕೆಯಾಗಿ 3,15,000 ರು. ಆಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 2350 ರು. ತಗ್ಗಿ, 15,630 ರು. ಆಗಿದೆ. 25 ಕ್ಯಾರಟ್‌ನ ಹೊನ್ನಿನ ದರದಲ್ಲೂ 2,580 ರು. ಇಳಿಕೆಯಾಗಿ 17,051 ರು ಆಗಿದೆ.ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಬೆಳ್ಳಿಯ ಬೆಲೆಯೂ 3,15,000 ರು. ಆಗಿದೆ. 22 ಮತ್ತು 24 ಕ್ಯಾರಟ್‌ನ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 2350 ರು. ಮತ್ತು 2570 ರು. ಕಡಿಮೆಯಾಗಿ 15,645 ರು. ಮತ್ತು 17,066 ರು. ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

2ನೇ ದಿನವೂ ದೇಶಾದ್ಯಂತ ಪ್ರತಿಭಟನೆ
ಇರಾನ್‌-ಅಮೆರಿಕ ಯುದ್ಧದಲ್ಲಿ ಸೌದಿ ಡಬಲ್‌ ಗೇಂ?