ಎಜ್‌ಬಾಸ್ಟನಲ್ಲಿ ನಿಲ್ಲದ ರನ್‌ ಮಳೆ!

KannadaprabhaNewsNetwork |  
Published : Jul 4, 2025 11:47 PM ISTUpdated : Jul 5, 2025 5:58 AM IST
ಕ್ರಿಕೆಟ್‌  | Kannada Prabha

ಸಾರಾಂಶ

 ಇಲ್ಲಿನ ಎಜ್‌ಬಾಸ್ಟನ್‌ನ ಪಿಚ್‌ ನಿರೀಕ್ಷೆಯಂತೆಯೇ ‘ಹೈವೇ’ ರೀತಿ ವರ್ತಿಸುತ್ತಿದ್ದು, ಭಾರತ ಹಾಗೂ ಇಂಗ್ಲೆಂಡ್‌ ಬ್ಯಾಟರ್‌ಗಳು ಹಬ್ಬ ಆಚರಿಸುತ್ತಿದ್ದಾರೆ.

ಬರ್ಮಿಂಗ್‌ಹ್ಯಾಮ್‌: ಇಲ್ಲಿನ ಎಜ್‌ಬಾಸ್ಟನ್‌ನ ಪಿಚ್‌ ನಿರೀಕ್ಷೆಯಂತೆಯೇ ‘ಹೈವೇ’ ರೀತಿ ವರ್ತಿಸುತ್ತಿದ್ದು, ಭಾರತ ಹಾಗೂ ಇಂಗ್ಲೆಂಡ್‌ ಬ್ಯಾಟರ್‌ಗಳು ಹಬ್ಬ ಆಚರಿಸುತ್ತಿದ್ದಾರೆ. ಮೊದಲ ಇನ್ನಿಂಗ್ಸಲ್ಲಿ ಭಾರತದ 587 ರನ್‌ಗಳ ಬೃಹತ್‌ ಮೊತ್ತಕ್ಕೆ ಉತ್ತರವಾಗಿ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸಲ್ಲಿ 407 ರನ್‌ ಕಲೆಹಾಕಿತು. ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್‌ ಮುನ್ನಡೆ ಸಾಧಿಸಿದ ಭಾರತ, 2ನೇ ಇನ್ನಿಂಗ್ಸ್‌ನಲ್ಲಿ ವೇಗವಾಗಿ ಬ್ಯಾಟ್‌ ಬೀಸುತ್ತ ಆತಿಥೇಯರಿಗೆ ದೊಡ್ಡ ಗುರಿ ನೀಡಲು ಹೋರಾಟ ನಡೆಸುತ್ತಿದೆ.

2ನೇ ದಿನ 77 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ 3ನೇ ದಿನವಾದ ಶುಕ್ರವಾರ ಆರಂಭಿಕ ಆಘಾತ ಎದುರಾಯಿತು. ಜೋ ರೂಟ್‌ (22) ಹಾಗೂ ಬೆನ್‌ ಸ್ಟೋಕ್ಸ್‌ (0)ರನ್ನು ಮೊಹಮದ್‌ ಸಿರಾಜ್‌ ಸತತ 2 ಎಸೆತಗಳಲ್ಲಿ ಔಟ್‌ ಮಾಡಿದರು. ಇಂಗ್ಲೆಂಡ್‌ 85ಕ್ಕೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಜೊತೆಯಾದ ಜೇಮಿ ಸ್ಮಿತ್‌ ಹಾಗೂ ಹ್ಯಾರಿ ಬ್ರೂಕ್‌, ಭಾರತೀಯ ಬೌಲರ್‌ಗಳ ಮೇಲೆ ಪ್ರಹಾರ ನಡೆಸಿದರು. ದಿನದಾಟದ ಮೊದಲ ಅವಧಿಯಲ್ಲೇ ಇಂಗ್ಲೆಂಡ್‌ 172 ರನ್‌ ಚಚ್ಚಿತು. ಅಲ್ಲದೇ ಸ್ಮಿತ್‌ ಶತಕವನ್ನೂ ಪೂರೈಸಿದರು. 6ನೇ ವಿಕೆಟ್‌ಗೆ ದಾಖಲೆಯ 303 ರನ್‌ ಸೇರಿಸಿ, ತಂಡವನ್ನು ಫಾಲೋ ಆನ್‌ನಿಂದ ಪಾರು ಮಾಡಿದರು.

158 ರನ್‌ ಗಳಿಸಿದ ಬ್ರೂಕ್‌ರನ್ನು ಆಕಾಶ್‌ದೀಪ್‌ ಬೌಲ್ಡ್‌ ಮಾಡುತ್ತಿದ್ದಂತೆ, ಭಾರತೀಯ ಪಾಳಯದಲ್ಲಿ ಮತ್ತೆ ಸಂತಸ ಮೂಡಿತು. 387 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ 20 ರನ್‌ಗೆ ಕೊನೆ 5 ವಿಕೆಟ್‌ ನಷ್ಟ ಅನುಭವಿಸಿತು. ಸಿರಾಜ್‌ 6 ವಿಕೆಟ್‌ ಕಬಳಿಸಿದರೆ, ಆಕಾಶ್‌ದೀಪ್‌ 4 ವಿಕೆಟ್‌ ಉರುಳಿಸಿದರು.

2ನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ, 8 ಓವರಲ್ಲೇ 50 ರನ್‌ ತಲುಪಿ ತನ್ನ ಮುನ್ನಡೆಯನ್ನು 225ಕ್ಕಿಂತ ಹೆಚ್ಚಿನ ಮೊತ್ತಕ್ಕೆ ಹೆಚ್ಚಿಸಿಕೊಂಡಿತು. ಜೈಸ್ವಾಲ್‌ 28 ರನ್‌ ಗಳಿಸಿ ಔಟಾದರು. ಸ್ಕೋರ್‌: ಭಾರತ 587 ಹಾಗೂ 58/1 (ಜೈಸ್ವಾಲ್‌ 28, ಟಂಗ್‌ 1-7), ಇಂಗ್ಲೆಂಡ್‌ 407 (ಸ್ಮಿತ್‌ 184*, ಬ್ರೂಕ್‌ 158, ಸಿರಾಜ್‌ 6-70, ಆಕಾಶ್‌ದೀಪ್‌ 4-88)

PREV
Read more Articles on