ಜಯಾ ಪಕ್ಷದ 25ಶಾಸಕರ ಮತವಿಜಯ್‌ಗೆ: ಪಕ್ಷ2 ಹೋಳು ಖಚಿತ

KannadaprabhaNewsNetwork |  
Published : May 14, 2026, 04:00 AM IST
ಎಡಪ್ಪಾಡಿ | Kannada Prabha

ಸಾರಾಂಶ

ವಿಧಾನಸಭೆಯಲ್ಲಿ ವಿಜಯ್‌ ಪರ ಮತ ಚಲಾಯಿಸಿದ 25 ಶಾಸಕರ ಬಂಡಾಯ ನಾಯಕ ಷಣ್ಮುಗಂ ಬಣದ 24 ಶಾಸಕರ ಸದಸ್ಯತ್ವ ಅನರ್ಹತೆ ಕೋರಿ ಎಐಎಡಿಎಂಕೆ ಪಕ್ಷ ಸ್ಪೀಕರ್‌ಗೆ ಮನವಿ ಮಾಡಿದೆ. ಅಲ್ಲದೆ, ಪಕ್ಷದ ವಿವಿಧ ಹುದ್ದೆಗಳಿಂದ ಅವರನ್ನು ಸಸ್ಪೆಂಡ್ ಮಾಡಿದೆ.

- ಅನರ್ಹತೆಗೆ ಎಡಪ್ಪಾಡಿ ಪಟ್ಟು

- ಹುದ್ದೆಯಿಂದ ರೆಬೆಲ್ಸ್‌ ಸಸ್ಪೆಂಡ್‌

ಚೆನ್ನೈ: ಮುಖ್ಯಮಂತ್ರಿ ವಿಜಯ್‌ ನೇತೃತ್ವದ ತಮಿಳುನಾಡಿನ ಟಿವಿಕೆ ಸರ್ಕಾರ ಬೆಂಬಲಿಸುವ ಅಣ್ಣಾಡಿಎಂಕೆ ಪಕ್ಷದ 25 ಬಂಡಾಯ ಶಾಸಕರ ನಿರ್ಧಾರ, ಇದೀಗ ಪಕ್ಷವನ್ನೇ ಎರಡು ಹೋಳು ಮಾಡುವ ಹಂತಕ್ಕೆ ತಂದು ನಿಲ್ಲಿಸಿದೆ. ಬುಧವಾರ ವಿಧಾನಸಭೆಯಲ್ಲಿ ವಿಜಯ್‌ ಪರ ಮತ ಚಲಾಯಿಸಿದ 25 ಶಾಸಕರ ಬಂಡಾಯ ನಾಯಕ ಷಣ್ಮುಗಂ ಬಣದ 24 ಶಾಸಕರ ಸದಸ್ಯತ್ವ ಅನರ್ಹತೆ ಕೋರಿ ಎಐಎಡಿಎಂಕೆ ಪಕ್ಷ ಸ್ಪೀಕರ್‌ಗೆ ಮನವಿ ಮಾಡಿದೆ. ಅಲ್ಲದೆ, ಪಕ್ಷದ ವಿವಿಧ ಹುದ್ದೆಗಳಿಂದ ಅವರನ್ನು ಸಸ್ಪೆಂಡ್ ಮಾಡಿದೆ.

ಈಗಾಗಲೇ ಎಡಪ್ಪಾಡಿ ಬಣ ಮತ್ತು ಷಣ್ಮುಗಂ ಬಣ ತಮ್ಮದೇ ಪಕ್ಷದ ನೈಜ ಬಣ ಎಂದು ವಾದಿಸಿ ಸ್ಪೀಕರ್‌ಗೆ ಮನವಿ ಕೊಟ್ಟಿವೆ. ಹೀಗಾಗಿ ಯಾರ ಬಣವನ್ನು ಸ್ಪೀಕರ್ ನೈಜ ಬಣ ಎಂದು ಮಾನ್ಯ ಮಾಡುತ್ತಾರೆ ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಏನೇ ನಿರ್ಣಯ ಆದರೂ ಪಕ್ಷದ ಇಬ್ಭಾಗ ಖಚಿತ.

ವಿಪ್‌ ಉಲ್ಲಂಘನೆ:

ಅಣ್ಣಾಡಿಎಂಕೆ ಪಕ್ಷ ವಿಧಾನಸಭೆಯಲ್ಲಿ 47 ಸದಸ್ಯ ಬಲವನ್ನು ಹೊಂದಿದ್ದು ಬುಧವಾರ ನಡೆಯುವ ವಿಶ್ವಾಸಮತ ಯಾಚನೆ ವೇಳೆ ಸರ್ಕಾರದ ವಿರುದ್ಧವಾಗಿ ಮತ ಚಲಾಯಿಸುವಂತೆ ಪಕ್ಷದಿಂದ ವಿಪ್‌ ನೀಡಲಾಗಿತ್ತು. ಆದರೆ ವಿಜಯ್‌ ಬಣದ 25 ಶಾಸಕರು ಸರ್ಕಾರದ ಪರವಾಗಿ ಅಡ್ಡಮತದಾನ ಮಾಡಿದ್ದಾರೆ. ಅನರ್ಹತೆಯಿಂದ ಪಾರಾಗಲು ಇವರಿಗೆ 32 ಬಲದ ಅಗತ್ಯ ಇತ್ತು.

ಹೀಗಾಗಿ, ‘ವಿಪ್‌ ಮೀರಿದ ಶಾಸಕರ ವರ್ತನೆ ಪಕ್ಷಾಂತರ ತಡೆ ಕಾಯ್ದೆಯ ಉಲ್ಲಂಘನೆಯಾಗಿದೆ. ಈ ಪೈಕಿ ಸಿ.ವಿ. ಷಣ್ಮುಗಂ, ಎಸ್‌.ಪಿ. ವೇಲುಮಣಿ ಸೇರಿದಂತೆ 24 ಶಾಸಕರ ಸದಸ್ಯತ್ವ ರದ್ದು ಮಾಡಬೇಕು ಮತ್ತು ಆ ಸ್ಥಾನಗಳಿಗೆ ಮರು ಚುನಾವಣೆ ನಡೆಸಬೇಕು’ ಎಂದು ಎಡಪ್ಪಾಡಿ ಬಣ ಸ್ಪೀಕರ್‌ಗೆ ಮನವಿ ಸಲ್ಲಿಸಿದೆ.

ಅನರ್ಹತೆಗೆ ವಿರೋಧ:

ಈ ಬಗ್ಗೆ ಪ್ರತಿಕ್ರಿಯಿಸಿರುವ ಷಣ್ಮುಗಂ, ‘ನಾವು ವಿಪ್‌ ವಿರುದ್ಧ ಮತ ಚಲಾಯಿಸಿದ್ದೇವೆ ಎಂಬ ಹೇಳಿಕೆ ತಪ್ಪು. ಪ್ರಧಾನ ಕಾರ್ಯದರ್ಶಿಯು ನೇರವಾಗಿ ವಿಪ್‌ ಜಾರಿ ಮಾಡಲಾಗದು. ಮೊದಲು ಹೊಸದಾಗಿ ಆಯ್ಕೆಯಾಗಿರುವ ಶಾಸಕರ ಸಭೆ ಕರೆದು ಶಾಸಕಾಂಗ ನಾಯಕ, ಉಪ ಶಾಸಕಾಂಗ ನಾಯಕ ಮತ್ತು ವಿಪ್‌ ಆಯ್ಕೆ ಮಾಡಬೇಕು. ಆದರೀಗ ಎಡಪ್ಪಾಡಿ ಪಳನಿಸ್ವಾಮಿ ಅವರು ವಿಪ್‌ ಆಯ್ಕೆ ಮಾಡಿದ್ದಾರೆ. ಇದು ಸರಿಯಲ್ಲ’ ಎಂದು ವಾದಿಸಿದ್ದಾರೆ.

ಆದರೆ ಎಡಪ್ಪಾಡಿ ಆಯ್ಕೆ ಮಾಡಿರುವ ಅಗ್ರಿ ಕೃಷ್ಣಮೂರ್ತಿಯವರನ್ನು ವಿಪ್‌ ಆಗಿ ಸ್ಪೀಕರ್‌ ಕೂಡ ಈಗಾಗಲೇ ಗುರುತಿಸಿದ್ದಾರೆ ಎಂಬುದು ಗಮನಾರ್ಹ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

‘ಪೆಟ್ರೋಲ್‌ ಬಚಾವೋ’ಗೆಸ್ವತಃ ಮೋದಿ ಮಿತವ್ಯಯ!
ವಿಶ್ವಾಸಮತದಲ್ಲೂ ಭರ್ಜರಿ ವಿಜಯ