ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಬ್ಯಾಟರಿ ಬೆಲೆ ಕಡಿಮೆಯಾಗುತ್ತಿರುವುದು ಮತ್ತು ಬಳಕೆಯಲ್ಲಿನ ಏರಿಕೆ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.
ನವದೆಹಲಿ: ‘ದೇಶದಲ್ಲಿ ಎಲೆಕ್ಟ್ರಿಕಲ್ ವಾಹನಗಳಿಗೆ ಇನ್ನು ಮುಂದೆ ಸಬ್ಸಿಡಿಗಳನ್ನು ನೀಡುವ ಅಗತ್ಯ ಇಲ್ಲ’ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.ಬ್ಲೂಮ್‌ಬರ್ಗ್ ಎನ್‌ಇಎಫ್ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಗಡ್ಕರಿ, ‘ಎಲೆಕ್ಟ್ರಿಕಲ್ ವಾಹನಗಳಿಗೆ ಬಳಸುವ ಬ್ಯಾಟರಿಗಳ ಬೆಲೆ ದೇಶದಲ್ಲಿ ಕಡಿಮೆಯಾಗಿದೆ. ಜೊತೆಗೆ ಹೆಚ್ಚುತ್ತಿರುವ ಅಳವಡಿಕೆಯಿಂದ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕಲ್ ವೆಹಿಕಲ್‌ಗಳು ಕೈಗೆಟಕುವ ದರದಲ್ಲಿ ಸಿಗುವಂತಾಗಲಿದೆ. ಗ್ರಾಹಕರು ಈಗ ಎಲೆಕ್ಟ್ರಿಕಲ್ ವಾಹನಗಳನ್ನು ಮತ್ತು ಸಿಎನ್‌ಜಿ ವಾಹನಗಳನ್ನು ತಾವಾಗಿಯೇ ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿ ನಾವು ಸಬ್ಸಿಡಿಗಳನ್ನು ನೀಡಬೇಕಾದ ಅಗತ್ಯವಿಲ್ಲ ಅನಿಸುತ್ತದೆ’ ಎಂದರು.
ಬ್ಯಾಟರಿಗಳ ಬೆಲೆ ದುಬಾರಿ ಇದ್ದ ಕಾರಣ ಎಲೆಕ್ಟಿಕಲ್ ವಾಹನಗಳು ಕೂಡ ದುಬಾರಿ ಆಗಿದ್ದವು. ದುಬಾರಿ ಎಂಬ ಕಾರಣ ಜನರು ಇವುಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದರು. ಆದ್ದರಿಂದ ಖರೀದಿ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿದೆ.
ಗೋವಾ: ಬೈಕ್‌ಗೆ ನಾಯಿ ಕಟ್ಟಿ ಎಳೆದೊಯ್ದಿದ್ದ ಬೆಳಗಾವಿ ವ್ಯಕ್ತಿ ಬಂಧನ ಪಣಜಿ: ದ್ವಿಚಕ್ರ ವಾಹನದಲ್ಲಿ ನಾಯಿಯನ್ನು ಕಟ್ಟಿ ಕಿ.ಮೀ. ಗಟ್ಟಲೇ ಎಳೆದುಕೊಂಡು ಹೋಗಿ, ನಾಯಿ ಸಾವಿಗೆ ಕಾರಣನಾದ ಬೆಳಗಾವಿ ಮೂಲದ ವ್ಯಕ್ತಿಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.ಸೆ.4ರಂದು ಈ ಘಟನೆ ನಡೆದಿದ್ದು, ಗೋವಾದ ಖೋರ್ಲಿಮ್‌ನ ಮಾಪುಸದಲ್ಲಿ ನೆಲೆಸಿರುವ ಅಶೋಕ್ ಪನ್ಹಾಲ್ಕರ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ನಾಯಿ ಸತ್ತ ಬಳಿಕ ಅದರ ಶವವನ್ನು ಅಶೋಕ್ ರಸ್ತೆ ಬದಿಯಲ್ಲಿ ಎಸೆದಿದ್ದ.ಆರೋಪಿ ನಾಯಿಯನ್ನು ತನ್ನ ಬೈಕ್‌ಗೆ ಕಟ್ಟಿ ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿ ಪೊಲೀಸರು ಆರೋಪಿ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.
ಸೆನ್ಸೆಕ್ಸ್ 1,017 ಅಂಕ ಕುಸಿತ: 2 ವಾರದ ಕನಿಷ್ಠಮುಂಬೈ: ಸತತ 4ನೇ ದಿನವೂ ಕುಸಿತ ಮುಂದುವರಿಸಿದ ಬಾಂಬೆ ಷೇರುಪೇಟೆ ಸೂಚ್ಯಂಕ ‘ಸೆನ್ಸಕ್ಸ್’, ಶುಕ್ರವಾರ 1,017 ಅಂಕಗಳ ಕುಸಿತ ಕಂಡು 81,183ಕ್ಕೆ ತಲುಪಿದೆ. ಇದರಿಂದ ಹೂಡಿಕೆದಾರರಿಗೆ 5.49 ಲಕ್ಷ ಕೋಟಿ ರು. ನಷ್ಟವಾಗಿದೆ. ಅದೇ ರೀತಿ ನಿಫ್ಟಿ ಕೂಡ 292 ಅಂಕಗಳು ಕುಸಿದು 24,852ಕ್ಕೆ ತಲುಪಿದೆ. ಇದು 2 ವಾರದ ಕನಿಷ್ಠವಾಗಿದೆ.
ದಿನದ ವಹಿವಾಟಿನಲ್ಲಿ ಪ್ರಮಖವಾಗಿ ಸೆನ್ಸೆಕ್ಸ್ ಒಂದು ಅವಧಿಯಲ್ಲಿ 1,219 ಅಂಕ ಕುಸಿದು, 80,981ಕ್ಕೆ ತಲುಪಿತ್ತು.
ಮಾರುಕಟ್ಟೆ ನಿಯಂತ್ರಕ ‘ಸೆಬಿ’, ವಿದೇಶೀ ಸಾಂಸ್ಥಿಕ ಹೂಡಿಕೆದಾರರಿಗೆ ಕೆಲವು ಹೊಸ ನಿಯಮ ಜಾರಿಗೊಳಿಸಿದೆ. ಇದು ಪತನಕ್ಕೆ ಕಾರಣವಾಯಿತು ಎಂದು ವಿಶ್ಲೇಷಿಸಲಾಗಿದೆ.ಕಳೆದ ಸೋಮವಾರ ಸೆನ್ಸೆಕ್ಸ್ 82,725 ಅಂಕಗಳು ತಲುಪಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.30 ಷೇರು ಕಂಪನಿಗಳಲ್ಲಿ ಪ್ರಮುಖವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಷೇರುಗಳು ಶೇ.4 ರಷ್ಟು ಕುಸಿದಿವೆ. ಅದೇ ರೀತಿ ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್, ಎಚ್‌ಸಿಎಲ್ ಟೆಕ್ನಾಲಜೀಸ್, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್ ಮತ್ತು ಐಟಿಸಿ ಇತರ ಪ್ರಮುಖ ಕಂಪನಿಯ ಷೇರುಗಳು ಕುಸಿದಿವೆ.ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಜೆಎಸ್‌ಡಬ್ಲ್ಯು ಸ್ಟೀಲ್ ಮತ್ತು ಮಾರುತಿ ಕಂಪನಿಗಳು ಮಾತ್ರ ಲಾಭ ಗಳಿಸಿವೆ.
ಉ.ಪ್ರ.: ಮುಷರ್ರಫ್ ಪೂರ್ವಜರ ಜಮೀನು 1.4 ಕೋಟಿ ರು.ಗೆ ಹರಾಜು ಬಾಗಪತ್ (ಉ.ಪ್ರ.): ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಜ।ಪರ್ವೇಜ್ ಮುಷರ್ರಫ್ ಅವರ ಮನೆತನಕ್ಕೆ ಸೇರಿದ 2 ಹೆಕ್ಟೇರ್ ಪ್ರದೇಶದ ಭೂಮಿಯನ್ನು 1.38 ಕೋಟಿ ರು.ಗೆ ಉತ್ತರ ಪ್ರದೇಶ ಸರ್ಕಾರ ಹರಾಜು ಹಾಕಿದೆ.ಬಾಗಪತ್ ಜಿಲ್ಲೆಯಲ್ಲಿರುವ ಕೊಟಾನಾ ಗ್ರಾಮದಲ್ಲಿರುವ ಈ ಜಾಗ ಪೂರ್ವಜರಿಗೆ ಸೇರಿತ್ತು. ಈ ಜಾಗವನ್ನು 1947ರಲ್ಲಿ ಭಾರತ ಬಿಟ್ಟು ಪಾಕಿಸ್ತಾನಕ್ಕೆ ವಲಸೆ ಹೋದ ವ್ಯಕ್ತಿಗಳಿಗೆ ಸಂಬಂಧಿಸಿದ ‘ಶತ್ರು ಆಸ್ತಿ’ ಕಾಯ್ದೆಯಡಿ ಸರ್ಕಾರ ವಶಪಡಿಸಿಕೊಂಡಿತ್ತು. ಆ ನಿಯಮದ ಪ್ರಕಾರ ಹರಾಜು ಹಾಕಲಾಗಿದೆ.ಮುಷರ್ರಫ್ ಹಾಗೂ ತಂದೆ- ತಾಯಿ ಈ ಗ್ರಾಮದಲ್ಲಿ ವಾಸಿಸಿರಲಿಲ್ಲ. ಆದರೆ ಅವರ ಚಿಕ್ಕಪ್ಪ ಹಲವು ವರ್ಷಗಳ ಕಾಲ ಇಲ್ಲಿ ನೆಲೆಸಿದ್ದರು ಎನ್ನಲಾಗಿದೆ.ಶತ್ರು ಆಸ್ತಿ ಕಾಯ್ದೆ ಪಾಕಿಸ್ತಾನ ಮತ್ತು ಭಾರತ ವಿಭಜನೆ ಬಳಿಕ ಜಾರಿಗೆ ತಂದ ಕಾಯ್ದೆ. ಈ ಕಾಯ್ದೆ ಪ್ರಕಾರ ಭಾರತದ ಮೂಲದವರಾಗಿದ್ದು, ಪಾಕಿಸ್ತಾನದಲ್ಲಿ ನೆಲೆಸಿರುವವರ ಪೂರ್ವಜರ ಆಸ್ತಿ ಭಾರತದಲ್ಲಿದ್ದರೆ, ಆ ಆಸ್ತಿಗಳು ಕೇಂದ್ರ ಗೃಹ ಇಲಾಖೆ ನಿರ್ವಹಿಸುತ್ತದೆ.