ಕಾಲ್ತುಳಿತ ಘಟನೆ ಬಳಿಕವೂ ಕಮ್ಮಿ ಆಗದ ಬಾಬಾ ಜನಪ್ರಿಯತೆ

KannadaprabhaNewsNetwork | Updated : Jul 06 2024, 06:39 AM IST

ಸಾರಾಂಶ

121 ಭಕ್ತರನ್ನು ಬಲಿಪಡೆದ ಹಾಥ್ರಸ್‌ ಭೀಕರ ಕಾಲ್ತುಳಿತದ ಬಳಿಕ, ಅವರ ಮೇಲಿನ ಭಕ್ತಿಯೇನೂ ಕಡಿಮೆ ಆಗಿಲ್ಲ. ಭಕ್ತರು ಭೋಲೆ ಭಾಬಾನನ್ನು ದೇವರ ಸಂದೇಶವಾಹಕ, ಕಾಯಿಲೆಗಳನ್ನು ಗುಣಪಡಿಸುವ ಮಾಂತ್ರಿಕ ಎಂದೆಲ್ಲ ಹೊಗಳುತ್ತಾರೆ.

ಕಾನ್ಪುರ/ನೋಯ್ಡಾ: 121 ಭಕ್ತರನ್ನು ಬಲಿಪಡೆದ ಹಾಥ್ರಸ್‌ ಭೀಕರ ಕಾಲ್ತುಳಿತದ ಬಳಿಕ, ಅವರ ಮೇಲಿನ ಭಕ್ತಿಯೇನೂ ಕಡಿಮೆ ಆಗಿಲ್ಲ. ಭಕ್ತರು ಭೋಲೆ ಭಾಬಾನನ್ನು ದೇವರ ಸಂದೇಶವಾಹಕ, ಕಾಯಿಲೆಗಳನ್ನು ಗುಣಪಡಿಸುವ ಮಾಂತ್ರಿಕ ಎಂದೆಲ್ಲ ಹೊಗಳುತ್ತಾರೆ.

ಭೋಲೆ ಬಾಬಾ ಬಗ್ಗೆ ಮಾಧ್ಯಮಗಳು ಹಲವರನ್ನು ಮಾತನಾಡಿಸಿವೆ. ಆಗ ಹತ್ರಾಸ್‌ನ 33 ವರ್ಷದ ವಕೀಲೆ ಸೀಮಾ ಮಾತನಾಡಿ, ‘ಸೂರಜ್‌ಪಾಲ್ ಸಿಂಗ್ ಮನುಷ್ಯನಲ್ಲ, ಅವರು ದೇವರ ಸಂದೇಶವಾಹಕ. ಅವರೊಬ್ಬ ದೇವರ ಅವತಾರ’ ಎಂದಿದ್ದಾರೆ. ಭೋಲೆ ಬಾಬಾ ಆಶೀರ್ವಾದ ಇಲ್ಲದಿದ್ದರೆ ತಾನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರಲಿಲ್ಲ ಎಂದು ಹಿಮಾಂಶು (18) ನಂಬಿದ್ದಾರೆ.

ಇನ್ನು ಸೂರಜ್‌ಪುರದ ಗೃಹಿಣಿ ಮಾತನಾಡಿ, ‘ಔಷಧಿಗಳು ಮತ್ತು ವೈದ್ಯರು ವಿಫಲವಾದಾಗ, ಭೋಲೆಬಾಬಾ ಅವರ ಸತ್ಸಂಗದ ‘ಪವಿತ್ರ ನೀರು’ ನೇಹಾ ಅವರನ್ನು ಗುಣಪಡಿಸಿತು’ ಎಂದಿದ್ದಾರೆ.

ಇನ್ನು ಸೇವಾದಾರ ಭಕ್ತನೊಬ್ಬ ಮಾತನಾಡಿ, ‘ಬಾಬಾ ಅವರ ಪಾದಧೂಳಿ ತುಂಬಾ ಪವಿತ್ರ. ಅವರ ಪಾದಧೂಳಿ ಸ್ಪರ್ಶಿಸಿ ಅನೇಕರು ಗುಮುಖರಾಗಿದ್ದಾರೆ’ ಎಂದು ಹೇಳಿದ. ಇದೇ ಪಾದಧೂಳಿ ಸ್ಪರ್ಶಿಸಲು ಹೋಗಿಯೇ ಹಾಥ್ರಸ್‌ನಲ್ಲಿ ಕಾಲ್ತುಳಿತ ಸಂಭವಿಸಿತು ಎಂಬುದು ಇಲ್ಲಿ ಗಮನಾರ್ಹ.

ಸ್ಟಾರ್ ಹೋಟೆಲ್‌ ರೀತಿ ಬಾಬಾ ಆಶ್ರಮ!

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಿಂದ 25 ಕಿ.ಮೀ. ದೂರದಲ್ಲಿ ಬಾಬಾ ಭವ್ಯ ಆಶ್ರಮವಿದೆ. ಇದು ಪಂಚತಾರಾ ಹೋಟೆಲ್‌ಗಿಂತ ಏನೂ ಕಮ್ಮಿ ಇಲ್ಲ ಎಂದು ಕೆಲವು ಭಕ್ತರು ಹೇಳಿದ್ದಾರೆ.‘ಆಶ್ರಮ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಎಲ್ಲೆ ಕೋಣೆಗಳಲ್ಲಿ ಕೂಲರ್‌ ಅಳವಡಿಸಲಾಗಿದೆ. ಹೊರಗೆ ಬಾಲ್ಕನಿಗಳಲ್ಲಿ ಫ್ಯಾನ್‌ ಹಾಗೂ ಕೂಲರ್‌ ಹಾಕಲಾಗಿದೆ. ಬಾಬಾ ಸತ್ಸಂಗಕ್ಕೆ ಬಂದಾಗ ಝಳ ಆಗಬಾರದು ಎಂದು ಸತ್ಸಂಗ ಹಾಲ್‌ನಲ್ಲೂ ಸಂಪೂರ್ಣ ಎಸಿ ಹಾಕಲಾಗಿದ್ದು, ಹಾಲ್ ವೈಭವೋಪೇತವಾಗಿದೆ’ ಎಂದು ತಿಳಿಸಿದ್ದಾರೆ.ಆದರೆ ಕೆಲವು ಭಕ್ತರು ಮಾತನಾಡಿ, ‘ಬಾಬಾ ಸರಳ ಜೀವನ ನಡೆಸುತ್ತಾರೆ. ಯಾವ ಭಕ್ತರಿಂದಲೂ ದೇಣಿಗೆ, ದಕ್ಷಿಣೆ ಕೇಳುವುದಿಲ್ಲ’ ಎಂದಿದ್ದಾರೆ.

Share this article