ತುಂಡು ತುಂಡಾಗಿ ಕತ್ತರಿಸಿದರೂ ಸಕಾಲಕ್ಕೆ ಸಂಬಳ ಕೊಡಲು ನನ್ನಿಂದಾಗದು: ರೇವಂತ್‌

KannadaprabhaNewsNetwork |  
Published : May 07, 2025, 12:47 AM IST
ರೇವಂತ್‌ ರೆಡ್ಡಿ | Kannada Prabha

ಸಾರಾಂಶ

ಹಲವು ಪುಕ್ಕಟೆ ಸ್ಕೀಂಗಳನ್ನು ಹಾಗೂ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ರಾಜ್ಯವು ಆರ್ಥಿಕ ದಿವಾಳಿಯ ಅಂಚಿನಲ್ಲಿದೆ ಎಂದು ಒಪ್ಪಿಕೊಂಡಿದ್ದಾರೆ.

- ಮಾಸಿಕ ₹22500 ಕೋಟಿ ಖರ್ಚಾಗ್ತಿದೆ, ಆದಾಯ ₹18500 ಕೋಟಿ ಮಾತ್ರ ಇದೆ- ವಿಮಾನ ಬಿಟ್ಟು ಕಾರಲ್ಲಿ ಓಡಾಡ್ತಿದ್ದೇನೆ । ಸರ್ಕಾರಿ ನೌಕರರಿಗೆ ತೆಲಂಗಾಣ ಸಿಎಂ

---

ಸಾಲ ಕೇಳಿದರೆ ಚಪ್ಪಲಿ

ಕಳ್ಳರಂತೆ ನೋಡುತ್ತಾರೆ!

ಯಾರೂ ನಮಗೆ ಸಾಲ ನೀಡುತ್ತಿಲ್ಲ. ಯಾರೂ ನಮ್ಮನ್ನು ನಂಬುತ್ತಿಲ್ಲ. ಹಣಕಾಸು ಸಂಸ್ಥೆಗಳು ತೆಲಂಗಾಣ ಪ್ರತಿನಿಧಿಗಳನ್ನು ಕಳ್ಳರಂತೆ ನೋಡುತ್ತಿವೆ. ನಾವು ದೆಹಲಿಗೆ ಹೋದಾಗ, ಯಾರೂ ನಮಗೆ ಅಪಾಯಿಂಟ್‌ಮೆಂಟ್‌ ಕೂಡ ನೀಡುವುದಿಲ್ಲ. ಕರೆ ಮಾಡಿದರೆ ಅವರ ಚಪ್ಪಲಿಗಳನ್ನು ಕದಿಯುತ್ತೇವೆ ಎಂದು ಭಾವಿಸುತ್ತಾರೆ.

- ರೇವಂತ್‌ ರೆಡ್ಡಿ, ತೆಲಂಗಾಣ ಸಿಎಂ

--

ಹೈದರಾಬಾದ್: ಹಲವು ಪುಕ್ಕಟೆ ಸ್ಕೀಂಗಳನ್ನು ಹಾಗೂ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ರಾಜ್ಯವು ಆರ್ಥಿಕ ದಿವಾಳಿಯ ಅಂಚಿನಲ್ಲಿದೆ ಎಂದು ಒಪ್ಪಿಕೊಂಡಿದ್ದಾರೆ. ವೇತನ ವಿಳಂಬ ಪ್ರತಿಭಟಿಸಿ ಸರ್ಕಾರಿ ನೌಕರರು ಮುಷ್ಕರ ನಡೆಸುವ ಬದಲು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ‘ನೀವು ನನ್ನನ್ನು ತುಂಡುಗಳಾಗಿ ಕತ್ತರಿಸಿದರೂ, ನಾನು ರಾಜ್ಯಕ್ಕೆ ತಿಂಗಳಿಗೆ 18,500 ಕೋಟಿ ರು.ಗಳಿಗಿಂತ ಹೆಚ್ಚು ಸಂಗ್ರಹಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ಹೈದರಾಬಾದ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರು ವೇತನ ವಿಳಂಬದ ವಿರುದ್ಧ ಮುಷ್ಕರ ನಡೆಸುವ ಎಚ್ಚರಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದರು.

‘ರಾಜ್ಯದ ಅಗತ್ಯ ಖರ್ಚುಗಳಿಗೆ ಪ್ರತಿ ತಿಂಗಳು 22,500 ಕೋಟಿ ರು. ಅಗತ್ಯವಿದೆ. ಆದರೆ ಕೇವಲ 18,500 ಕೋಟಿ ರು. ಮಾತ್ರ ಆದಾಯ ಗಳಿಸಲು ಸಾಧ್ಯವಾಗುತ್ತಿದೆ. 4 ಸಾವಿರ ಕೋಟಿ ರು. ಕೊರತೆಯಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ನೀವು (ಸರ್ಕಾರಿ ನೌಕರರು) ನನ್ನನ್ನು ತುಂಡುಗಳಾಗಿ ಕತ್ತರಿಸಿದರೂ, ನಾನು ತಿಂಗಳಿಗೆ 18,500 ಕೋಟಿ ರು.ಗಳಿಗಿಂತ ಹೆಚ್ಚು ಸಂಗ್ರಹಿಸಲು ಸಾಧ್ಯವಿಲ್ಲ. ದಯವಿಟ್ಟು ಮುಷ್ಕರ ಮಾಡದೇ ಪರಿಸ್ಥಿತಿ ಸರಿ ಮಾಡಲು ಸಹಕರಿಸಿ’ ಎಂದು ಮನವಿ ಮಾಡಿದರು.

‘ಹೇಳಿ.. ನಾವು ಕಲ್ಯಾಣ ಯೋಜನೆಗಳನ್ನು ನಿಲ್ಲಿಸಬೇಕೇ? ಪೆಟ್ರೋಲ್ ಬೆಲೆಯನ್ನು 200 ರು.ಗಳಿಗೆ ಹೆಚ್ಚಿಸಬೇಕೇ? ಅದು ಸರಿಯಲ್ಲ. ಈ ಹಂತದಲ್ಲಿ ಪ್ರತಿಭಟನೆಗಳು ಮತ್ತು ಉಪವಾಸ ಸತ್ಯಾಗ್ರಹಗಳು ಸರ್ಕಾರಿ ಯಂತ್ರದ ಸಂಪೂರ್ಣ ಕುಸಿತಕ್ಕೆ ಕಾರಣವಾಗಬಹುದು’ ಎಂದು ಅವರು ಎಚ್ಚರಿಸಿದರು.

ಆದರೆ ಗ್ಯಾರಂಟಿಗಳಿಂದ ಹೀಗಾಗಿದೆ ಎಂಬುದನ್ನು ಹೇಳದ ಅವರು, ‘ರಾಜ್ಯದ ಆರ್ಥಿಕ ದುಸ್ಥಿತಿಗೆ ಹಿಂದಿನ ಸಿಎಂ ಕೆಸಿಆರ್‌ ಸರ್ಕಾರ ಕಾರಣ. ಅವರು ಸಾಲ ಮರುಪಾವತಿಸದೆ ವ್ಯವಸ್ಥೆಯನ್ನು ನಾಶಪಡಿಸಿದ್ದರು. ನಾವು 1.58 ಲಕ್ಷ ಕೋಟಿ ರು. ಸಾಲವನ್ನು ಪಡೆದುಕೊಂಡಿದ್ದೇವೆ ಮತ್ತು ಈಗಾಗಲೇ 1.54 ಲಕ್ಷ ಕೋಟಿ ರು. ಮರುಪಾವತಿಸಿದ್ದೇವೆ. ನಾವು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ವ್ಯವಸ್ಥೆಯನ್ನು ಪುನರ್ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ. ಮಿತವ್ಯಯ ದೃಷ್ಟಿಯಿಂದ ಕೆಲವೊಮ್ಮೆ ವಿಶೇಷ ವಿಮಾನ ಬಿಟ್ಟು ರಸ್ತೆ ಮೂಲಕ ಸಾಗುತ್ತಿದ್ದೇನೆ. ದಯವಿಟ್ಟು ನಮ್ಮೊಂದಿಗೆ ಸಹಿಸಿಕೊಳ್ಳಿ’ ಎಂದು ಅವರು ಮನವಿ ಮಾಡಿದರು.

ಕಳ್ಳರಂತೆ ನೋಡುತ್ತಿದ್ದಾರೆ, ಸಾಲ ನೀಡ್ತಿಲ್ಲ:

‘ದುರದೃಷ್ಟವಶಾತ್, ಹಣಕಾಸು ಸಂಸ್ಥೆಗಳು ನಮ್ಮನ್ನು ಕಳ್ಳರಂತೆ ನಡೆಸಿಕೊಳ್ಳುತ್ತಿವೆ’ ಎಂದು ರೇವಂತ ರೆಡ್ಡಿ ವಿಷಾದಿಸಿದರು.

‘ಯಾರೂ ನಮಗೆ ಹಣ ಸಾಲ ನೀಡುತ್ತಿಲ್ಲ. ಒಂದು ಪೈಸೆಯೂ ನೀಡುತ್ತಿಲ್ಲ. ಈಗ ಯಾರೂ ನಮ್ಮನ್ನು ನಂಬುತ್ತಿಲ್ಲ. ಅವರು (ಹಣಕಾಸು ಸಂಸ್ಥೆಗಳು) ತೆಲಂಗಾಣ ಪ್ರತಿನಿಧಿಗಳನ್ನು ಕಳ್ಳರಂತೆ ನೋಡುತ್ತಿದ್ದಾರೆ. ನಾವು ದೆಹಲಿಗೆ ಹೋದಾಗ, ಯಾರೂ ನಮಗೆ ಅಪಾಯಿಂಟ್‌ಮೆಂಟ್‌ ಕೂಡ ನೀಡುವುದಿಲ್ಲ, ಕರೆ ಮಾಡಿದರೆ ಅವರ ಚಪ್ಪಲಿಗಳನ್ನು ಕದಿಯುತ್ತೇವೆ ಎಂದು ಭಾವಿಸುತ್ತಾರೆ’ ಎಂದು ಬೇಸರಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸ್ಟಾರ್‌ವಾರ್‌ ರೀತಿ ಲೇಸರ್‌ ಅಸ್ತ್ರ ರಾಜ್ಯದಲ್ಲಿ ಅಭಿವೃದ್ಧಿ!
ಗೌರಿ ಲಂಕೇಶ್‌ ಹತ್ಯೆ ಆರೋಪಿ ಮಹಾರಾಷ್ಟ್ರ ಪಾಲಿಕೆ ಚುನಾವಣೆಗೆ