ನೇಪಾಳಕ್ಕೆ ಕರ್ಕಿ ಮಧ್ಯಂತರ ಸರ್ಕಾರ ಮುಖ್ಯಸ್ಥೆ?

KannadaprabhaNewsNetwork |  
Published : Sep 11, 2025, 12:04 AM ISTUpdated : Sep 11, 2025, 04:34 AM IST
ಕರ್ಕಿ | Kannada Prabha

ಸಾರಾಂಶ

ಸಂಘರ್ಷಪೀಡಿತ ನೇಪಾಳದಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ಬೆನ್ನಲ್ಲೇ, ಬಾಂಗ್ಲಾದೇಶ ಮಾದರಿಯಲ್ಲಿ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಲು ಪ್ರತಿಭಟನಾಕಾರರು ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಆಯ್ಕೆ ಮಾಡಿದ್ದಾರೆ. ಆಯ್ಕೆಯನ್ನು ಕರ್ಕಿಯವರು ಒಪ್ಪಿಕೊಂಡಿದ್ದಾರೆ.

 ಕಾಠ್ಮಂಡು: ಸಂಘರ್ಷಪೀಡಿತ ನೇಪಾಳದಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ಬೆನ್ನಲ್ಲೇ, ಬಾಂಗ್ಲಾದೇಶ ಮಾದರಿಯಲ್ಲಿ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಲು ಪ್ರತಿಭಟನಾಕಾರರು ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಆಯ್ಕೆ ಮಾಡಿದ್ದಾರೆ. ಆಯ್ಕೆಯನ್ನು ಕರ್ಕಿಯವರು ಒಪ್ಪಿಕೊಂಡಿದ್ದಾರೆ. ಇದಕ್ಕೆ ರಾಷ್ಟ್ರಾಧ್ಯಕ್ಷರ ಅನುಮತಿ ದೊರಕಿದರೆ ಶೀಘ್ರದಲ್ಲೇ ನೇಪಾಳದ ನೂತನ ಮುಖ್ಯಸ್ಥರಾಗಿ ನೇಮಕವಾಗುವ ಸಾಧ್ಯತೆಯಿದೆ.

ಬುಧವಾರ ಬೆಳಿಗ್ಗೆ ಪ್ರತಿಭಟನಾನಿರತ ‘ಜೆನ್‌ ಝೀ’ ಆಂದೋಲನದ ಯುವಕರು ಆನ್‌ಲೈನ್‌ ಸಭೆ ನಡೆಸಿ ನ್ಯಾ. ಕರ್ಕಿಯವರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಕರ್ಕಿಯವರನ್ನು ಆಯ್ಕೆ ಮಾಡಲು ಕನಿಷ್ಠ 1,000 ಜನರ ಸಹಿಯನ್ನು ಅಪೇಕ್ಷಿಸಲಾಗಿತ್ತು. ಆದರೆ 2,500ಕ್ಕೂ ಅಧಿಕ ಜನ ಸಹಿ ಹಾಕಿದ್ದರಿಂದ ಅವರ ಹೆಸರೇ ಅಂತಿಮವಾಗಿದೆ.

ಕರ್ಕಿಯವರು ಈ ಆಯ್ಕೆಯನ್ನು ಸ್ವಾಗತಿಸಿದ್ದು, ‘ನಾನು ಮಧ್ಯಂತರ ಸರ್ಕಾರದ ನಾಯಕತ್ವ ವಹಿಸಬಲ್ಲೆ ಎಂದು ಜೆನ್‌ ಝಡ್‌ ಗುಂಪು ವಿಶ್ವಾಸವಿಟ್ಟಿದೆ. ಪ್ರತಿಭಟನೆಯ ಸಮಯದಲ್ಲಿ ಸಾವನ್ನಪ್ಪಿದ ಯುವಕರಿಗೆ ಸಹಾಯ ಮಾಡುವುದು ನಮ್ಮ ತಕ್ಷಣದ ಗುರಿಯಾಗಿದೆ’ ಎಂದಿದ್ದಾರೆ.ರಾಷ್ಟ್ರಪತಿ ರಾಮ್ ಚಂದ್ರ ಪೌಢೇಲ್‌ ಅವರಿಂದ ಅನುಮೋದನೆ ದೊರೆತರೆ ಕರ್ಕಿ ಅಧಿಕೃತವಾಗಿ ಮಧ್ಯಂತರ ಸರ್ಕಾರದ ನಾಯಕಿಯಾಗಿ ನೇಮಕವಾಗಲಿದ್ದಾರೆ. ಆ ಬಳಿಕ ಸೇನಾ ಮುಖ್ಯಸ್ಥ ಅಶೋಕ್‌ ರಾಜ್‌ ಸಿಗ್ದೆಲ್ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. 

ಯಾರು ಸುಶೀಲಾ ಕರ್ಕಿ?:

ಸುಶೀಲಾ ಕರ್ಕಿ 1952ರ ಜೂ.7ರಂದು ಬಿರತನಗರದಲ್ಲಿ ಜನಿಸಿದರು. ರಾಜಕೀಯ ಶಾಸ್ತ್ರ ಮತ್ತು ಕಾನೂನಿನಲ್ಲಿ ಪದವಿ ಗಳಿಸಿದ್ದಾರೆ. ಭಾರತದ ಬನಾರಸ್‌ ವಿವಿಯಲ್ಲಿಯೂ ಶಿಕ್ಷಣ ಪೂರೈಸಿದ್ದಾರೆ. ನ್ಯಾಯಾಂಗ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲು ಶಿಕ್ಷಕಿಯಾಗಿದ್ದರು. ಅಲ್ಲಿ ತಮ್ಮ ನಿರ್ಭೀತ, ಸಮರ್ಥ ವ್ಯಕ್ತಿತ್ವದಿಂದ ಖ್ಯಾತಿ ಗಳಿಸಿದ್ದರು.

2006ರ ಸಾಂವಿಧಾನಿಕ ಕರಡು ಸಮಿತಿಯ ಭಾಗವಾಗಿ, ಆ ಬಳಿಕ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾದರು. ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳ ಬಗ್ಗೆ ಕುರ್ಕಿ ಮೆಚ್ಚುಗೆ ಸೂಚಿಸಿದ್ದೂ ಉಂಟು.

ಕರ್ನಾಟಕ ಎಂಟೆಕ್‌ ಪದವೀಧರ ರೇಸಿಂದ ಔಟ್? 

ನೇಪಾಳದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಹುದ್ದೆಗೆ ಕರ್ನಾಟಕದ ವಿಶ್ವೇಶ್ವರಯ್ಯ ವಿವಿಯ ಎಂಟೆಕ್‌ ಪದವೀಧರ ಬಲೇನ್‌ ಶಾ ಹೆಸರು ಬಲವಾಗಿ ಕೇಳಿಬಂದಿತ್ತು. ಯುವಕರು ನಡೆಸಿದ ಸಭೆಯಲ್ಲಿಯೂ ಅವರ ಪರವಾಗಿಯೇ ಕೂಗು ಕೇಳಿಬಂದಿತ್ತು. ಆದರೆ ಬಲೇನ್‌ ಅವರನ್ನು ಸಂಪರ್ಕಿಸಲು ಹಲವು ಬಾರಿ ಯತ್ನಿಸಿದರೂ, ಅವರು ಪ್ರತಿಕ್ರಿಯಿಸದ ಕಾರಣ ಬೇರೆ ಹೆಸರನ್ನು ಆಯ್ಕೆ ಮಾಡಲಾಯಿತು ಎಂದು ಯುವಕರು ತಿಳಿಸಿದ್ದಾರೆ.

ಹೊಸ ಸರ್ಕಾರಕ್ಕೆ ನೇಪಾಳ ಯುವಕರ ಷರತ್ತು 

ಕಾಠ್ಮಂಡು: ನೇಪಾಳ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತು ದಂಗೆಯೆದ್ದಿರುವ ಯುವಕರು ತಮ್ಮ ಆರಂಭಿಕ ಬೇಡಿಕೆಯಾಗಿದ್ದ ಪ್ರಧಾನಿ ಕೆ.ಪಿ.ಶರ್ಮಾ ಓಲಿಯವರ ರಾಜೀನಾಮೆ ಬಳಿಕವೂ ಹಲವು ಹೊಸ ಹೊಸ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಅಥವಾ ಸಂವಿಧಾನವನ್ನೇ ಸಂಪೂರ್ಣ ಹೊಸತಾಗಿ ಬರೆಯಬೇಕು ಎಂಬ ಪ್ರಮುಖ ಬೇಡಿಕೆಯ ಜೊತೆಗೆ ಇನ್ನಿತರ ಹಲವು ಬೇಡಿಕೆಗಳ ಜಾರಿಗೆ ಆಗ್ರಹಿಸುತ್ತಿದ್ದಾರೆ. 

ನಾಗರಿಕರು, ತಜ್ಞರು ಹಾಗೂ ಯುವಕರ ಸಕ್ರಿಯ ಭಾಗವಹಿಸುವಿಕೆಯುಳ್ಳ ಹೊಸ ಸಂವಿಧಾನವನ್ನು ರಚಿಸಬೇಕು ಅಥವಾ ಸಂವಿಧಾನಕ್ಕೆ ತಿದ್ದುಪಡಿ ತರಬೇಕು, ಜನರ ವಿಶ್ವಾಸ ಕಳೆದುಕೊಂಡಿರುವ ಪ್ರಸಕ್ತ ಸಚಿವ ಸಂಪುಟವನ್ನು ತಕ್ಷಣ ವಿಸರ್ಜಿಸಬೇಕು, ಮಧ್ಯಂತರ ಅವಧಿಯ ನಂತರ ಹೊಸ ಚುನಾವಣೆಗಳನ್ನು ನಡೆಸಬೇಕು ಮತ್ತು ಅವು ಸ್ವತಂತ್ರ, ನ್ಯಾಯಯುತ ಮತ್ತು ನೇರ ಸಾರ್ವಜನಿಕ ಭಾಗವಹಿಸುವಿಕೆಯನ್ನು ಆಧರಿಸಿವೆ ಎಂದು ಖಚಿತಪಡಿಸಿಕೊಳ್ಳಬೇಕು, ನೇರವಾಗಿ ಆಯ್ಕೆಯಾದ ಕಾರ್ಯಕಾರಿ ನಾಯಕತ್ವವನ್ನು ಸ್ಥಾಪಿಸಬೇಕು, 

ಕಳೆದ 3 ದಶಕಗಳಿಂದ ರಾಜಕೀಯ ನಾಯಕರು ಲೂಟಿ ಹೊಡೆದಿರುವ ಆಸ್ತಿ ಕುರಿತು ಸಮಗ್ರ ತನಿಖೆ ನಡೆಸಬೇಕು, ಅಕ್ರಮ ಆಸ್ತಿಗಳನ್ನು ರಾಷ್ಟ್ರೀಕೃತಗೊಳಿಸಬೇಕು, ಶಿಕ್ಷಣ, ಆರೋಗ್ಯ, ನ್ಯಾಯ, ಭದ್ರತೆ ಮತ್ತು ಸಂವಹನ ಎಂಬ 5 ಮೂಲಭೂತ ಕ್ಷೇತ್ರಗಳಲ್ಲಿ ರಚನಾತ್ಮಕ ಸುಧಾರಣೆ ತರಬೇಕು ಎಂಬ ಮುಖ್ಯ ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟಿದ್ದಾರೆ.

PREV
Read more Articles on

Recommended Stories

ವಿಶ್ವದ ನಂ.1 ಶ್ರೀಮಂತ ಪಟ್ಟದಿಂದ ಮಸ್ಕ್‌ ಔಟ್‌: ಲ್ಯಾರಿ ಈಗ ನಂ.1
ಮುಂದಿನ ತಿಂಗಳಿಂದ ದೇಶವ್ಯಾಪಿ ಮತಪಟ್ಟಿ ಪರಿಷ್ಕರಣೆ ಆರಂಭ?