ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್‌ ಅಸ್ಥಿ ಮಂಜು ಕ ತಿಲಾ ಗುರುದ್ವಾರದ ಬಳಿ ಯಮುನಾ ನದಿಯಲ್ಲಿ ವಿಸರ್ಜನೆ

KannadaprabhaNewsNetwork | Updated : Dec 30 2024, 04:24 AM IST

ಸಾರಾಂಶ

 ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಅಸ್ಥಿಯನ್ನು ಭಾನುವಾರ ದೆಹಲಿಯ ಮಂಜು ಕ ತಿಲಾ ಗುರುದ್ವಾರದ ಬಳಿಯ ಯಮುನಾ ನದಿಯಲ್ಲಿ ವಿಸರ್ಜಿಸಲಾಯಿತು.

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಅಸ್ಥಿಯನ್ನು ಭಾನುವಾರ ದೆಹಲಿಯ ಮಂಜು ಕ ತಿಲಾ ಗುರುದ್ವಾರದ ಬಳಿಯ ಯಮುನಾ ನದಿಯಲ್ಲಿ ವಿಸರ್ಜಿಸಲಾಯಿತು.

ಇದಕ್ಕೂ ಮುನ್ನ ಡಾ.ಸಿಂಗ್‌ ಅವರ ಅಂತ್ಯಕ್ರಿಯೆ ನಡೆದಿದ್ದ ನಿಂಗಂಬೋಧ್ ಘಾಟ್‌ನಿಂದ ಅವರ ಕುಟುಂಬ ಸದಸ್ಯರು ಅಸ್ಥಿ ಸಂಗ್ರಹಿಸಿ ನೇರವಾಗಿ ಯಮುನಾ ನದಿ ತಟದಲ್ಲಿರುವ ಅಸ್ಥ್‌ ಘಾಟ್‌ಗೆ ತೆರಳಿದರು. ಅಲ್ಲಿ ಸಿಂಗ್ ಅವರ ಪತ್ನಿ ಗುರುಶರಣ್‌ ಕೌರ್‌, ಮೂವರು ಪುತ್ರಿಯರಾದ ಉಪಿಂದರ್ ಸಿಂಗ್‌, ಧಮನ್‌ ಸಿಂಗ್‌ ಮತ್ತು ಅಮೃಿತ್‌ ಸಿಂಗ್, ಇತರೆ ಸಂಬಂಧಿಕರು ಸಿಖ್‌ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಿದರು. ನಂತರ ಅವರ ಅಸ್ಥಿಯನ್ನು ಯಮುನಾ ನದಿಯಲ್ಲಿ ವಿಸರ್ಜಿಸಲಾಯಿತು.

ಈ ವೇಳೆ ಕುಟುಂಬಸ್ಥರನ್ನು ಹೊರತುಪಡಿಸಿ ಮಿಕ್ಕ ಯಾವ ಕಾಂಗ್ರೆಸ್‌ ನಾಯಕರೂ ಹಾಜರಿರಲಿಲ್ಲ.

ಸಿಂಗ್ ಕುಟುಂಬಸ್ಥರು ಮೋತಿಲಾಲ್‌ ನೆಹರೂ ನಿವಾಸದಲ್ಲಿ ಡಾ.ಸಿಂಗ್‌ ಆತ್ಮಕ್ಕೆ ಶಾಂತಿ ಸಿಗುವಂತೆ ಕೋರಿ ಸಿಖ್‌ ಧರ್ಮದ ಪ್ರಕಾರಅಖಂಡ್‌ ಪಾಠ್‌'ಅನ್ನು ಜ.1ರಿಂದ ಕೈಗೊಳ್ಳಲಿದ್ದಾರೆ. ಇದರ ಭಾಗವಾಗಿ ಅಂತಿಮ್‌ ಅರ್ಧಾಸ್‌, ಕೀರ್ತನ್‌ ನಂಥ ಕಾರ್ಯಕ್ರಮಗಳು ಜ.3ರಂದು ರಕಾಬ್‌ ಗಂಜ್‌ ಗುರುದ್ವಾರದಲ್ಲಿ ನಡೆಯಲಿದೆ.

ಅಂತ್ಯಕ್ರಿಯೆ ವೇಳೆ ಡಾ.ಸಿಂಗ್ ಕುಟುಂಬಕ್ಕೆ ಅವಮಾನ: ಕಾಂಗ್ರೆಸ್‌

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕೇಂದ್ರ ಸರ್ಕಾರ ಅಗೌರವ ತೋರಿದೆ ಎಂದು ಕಾಂಗ್ರೆಸ್‌ ವಕ್ತಾರ ಪವನ್ ಖೇರಾ ಆರೋಪಿಸಿದ್ದಾರೆ.‘ದೂರದರ್ಶನ ಹೊರತುಪಡಿಸಿ ಬೇರೆ ಯಾವ ಮಾಧ್ಯಮಗಳಿಗೂ ಅಂತ್ಯಕ್ರಿಯೆ ಸ್ಥಳಕ್ಕೆ ಪ್ರವೇಶ ನೀಡಿರಲಿಲ್ಲ. ಡಿಡಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರನ್ನು ಮಾತ್ರವೇ ತೋರಿಸುತ್ತಿತ್ತು. ಸಿಂಗ್ ಕುಟುಂಬವನ್ನು ಹೆಚ್ಚಾಗಿ ತೋರಿಸಿರಲಿಲ್ಲ. ಕೇವಲ 3 ಕುರ್ಚಿಗಳನ್ನು ಮಾತ್ರ ಡಾ.ಸಿಂಗ್ ಅವರ ಕುಟುಂಬಕ್ಕೆ ನೀಡಲಾಗಿತ್ತು. ಕಾಂಗ್ರೆಸ್‌ ನಾಯಕರು ಸಿಂಗ್ ಹೆಣ್ಣು ಮಕ್ಕಳಿಗೆ ಮತ್ತು ಇತರ ನಾಯಕರಿಗೆ ಕುರ್ಚಿ ನೀಡಿ ಎಂದು ಒತ್ತಾಯಿಸಬೇಕಾಯಿತು. ಸಿಂಗ್ ಪತ್ನಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವಾಗ ಪ್ರಧಾನಿ ಮತ್ತು ಸಚಿವರು ಎದ್ದು ನಿಲ್ಲಿಲ್ಲ’ ಎಂದು ಆರೋಪಿಸಿದ್ದಾರೆ.ಬಿಜೆಪಿ ಇದಕ್ಕೆ ತಿರುಗೇಟು ನೀಡಿದ್ದು, ‘ಮನಮೋಹನ್ ಸಿಂಗ್ ಅವರ ಸಾವಿನ ವಿಚಾರದಲ್ಲಿ ಕಾಂಗ್ರೆಸ್‌ ರಾಜಕಾರಣ ಮುಂದುವರೆಸಿರುವುದು ನಾಚಿಕೆಗೇಡು’ ಎಂದು ತಿರುಗೇಟು ನೀಡಿದೆ.

ಡಾ। ಸಿಂಗ್‌ ಅಂತ್ಯಕ್ರಿಯೆ ಬಗ್ಗೆ ಕೈ ರಾಜಕೀಯ: ಪುರಿ ಕಿಡಿ

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್‌ ಅ‍ವರ ಅಂತ್ಯಕ್ರಿಯೆ ವಿಚಾರದಲ್ಲಿ ಕಾಂಗ್ರೆಸ್‌ ಕೊಳಕು ರಾಜಕೀಯ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಆರೋಪಿಸಿದ್ದಾರೆ.

ಡಾ.ಸಿಂಗ್‌ ಅವರ ಅಂತ್ಯಕ್ರಿಯೆಯನ್ನು ದೆಹಲಿಯ ರಾಜ್‌ಘಾಟ್‌ ಅಥವಾ ಶಕ್ತಿಸ್ಥಳದ ಬದಲು ನಿಗಂಬೋಧ್‌ ಘಾಟ್‌ನಲ್ಲಿ ನಡೆಸಿದ ಕೇಂದ್ರ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತೀವ್ರ ಕಿಡಿಕಾರಿದ್ದು, ಇದು 2 ಬಾರಿ ದೇಶವನ್ನು ಮುನ್ನಡೆಸಿದ ಮಾಜಿ ಪ್ರಧಾನಿ ಅ‍ವರಿಗೆ ಮಾಡಿದ ಅವಮಾನ ಎಂದು ಆಕ್ರೋಶ ಹೊರಹಾಕಿದ್ದರು.

ಈ ಆರೋಪಕ್ಕೆ ತಿರುಗೇಟು ನೀಡಿದ ಪುರಿ, ‘ಅಂತ್ಯಕ್ರಿಯೆ ವಿವಾದ ಕಾಂಗ್ರೆಸ್‌ ಸೃಷ್ಟಿ. ಈ ವಿಚಾರದಲ್ಲಿ ಕಾಂಗ್ರೆಸ್‌ ಕೊಳಕು ರಾಜಕೀಯ ಮಾಡುತ್ತಿದೆ. ಅಂತ್ಯಕ್ರಿಯೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅ‍ವರು ಕೇಂದ್ರ ಗೃಹ ಸಚಿವಾಲಯಕ್ಕೆ ಬರೆದ ಪತ್ರ ನಮ್ಮ ಕೈಸೇರಿದ್ದೇ ಡಾ.ಸಿಂಗ್‌ ಸಾವಿನ ಮರುದಿನ ಮಧ್ಯರಾತ್ರಿ. ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಯ ಸಮಸ್ಯೆಯಿಂದಾಗಿ ಅನಿವಾರ್ಯವಾಗಿ ನಿಗಂಬೋಧ್‌ ಘಾಟ್‌ ಅನ್ನು ಅಂತ್ಯಕ್ರಿಯೆಗೆ ಆಯ್ಕೆ ಮಾಡಿಕೊಳ್ಳಬೇಕಾಯಿತು. ರಾಜ್‌ಘಾಟ್‌ ಪ್ರದೇಶ ಸಮತಟ್ಟಾಗಿದ್ದು, ಮಳೆ ಬಂದರೆ ನೀರು ನಿಲ್ಲುವ ಅಪಾಯವಿತ್ತು. ಅಷ್ಟು ಕಡಿಮೆ ಸಮಯದಲ್ಲಿ ಮಳೆ ಆತಂಕದ ನಡುವೆ ವೇದಿಕೆ ನಿರ್ಮಾಣ ಸಾಧ್ಯವಿತ್ತಾ? ಬೇಕಿದ್ದರೆ ಕಾಂಗ್ರೆಸ್‌ ಅನ್ನೇ ಕೇಳಿ ನೋಡಿ’ ಎಂದು ತಿರುಗೇಟು ನೀಡಿದರು.

ಸ್ಮಾರಕ ನಿರ್ಮಾಣ ಖಚಿತ:ಇದೇ ವೇಳೆ ಡಾ. ಸಿಂಗ್ ಅವರ ಬಗ್ಗೆ ಗೌರವವಿದೆ, ಅ‍ವರಿಂದ ನಾವು ಸಾಕಷ್ಟು ಪ್ರೇರಣೆ ಪಡೆದಿದ್ದೇವೆ. ಅವರ ಸ್ಮಾರಕ ಖಂಡಿತವಾಗಿಯೂ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದರು.

Share this article