ನವದೆಹಲಿ: ದೆಹಲಿ ಅಬಕಾರಿ ಹಗರಣ ಸಂಬಂಧ ಕಳೆದ 6 ತಿಂಗಳಿನಿಂದ ಬಂಧಿತರಾಗಿದ್ದ ಆಮ್‌ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್‌ಸಿಂಗ್‌ಗೆ ಸುಪ್ರೀಂಕೋರ್ಟ್ ಮಂಗಳವಾರ ಜಾಮೀನು ನೀಡಿದೆ. ಅದರ ಬೆನ್ನಲ್ಲೇ ಇದು ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ದಿನ ಎಂದು ಆಮ್‌ಆದ್ಮಿ ಪಕ್ಷ ಹರ್ಷ ವ್ಯಕ್ತಪಡಿಸಿದೆ.
ಸಂಜಯ್ ಜಾಮೀನಿಗೆ ನಮ್ಮದೇನು ಅಭ್ಯಂತರ ಇಲ್ಲ ಎಂಬ ಇ.ಡಿ. ಹೇಳಿಕೆ ಪರಿಗಣಿಸಿ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನಿನ ಅವಧಿಯಲ್ಲಿ ಸಂಜಯ್ ರಾಜಕೀಯ ಚಟುವಟಿಕೆ ನಡೆಸಬಹುದು. ಆದರೆ ಈ ಪ್ರಕರಣ ಸಂಬಂಧ ಯಾವುದೇ ಹೇಳಿಕೆ ನೀಡಕೂಡದು ಎಂದು ಕೋರ್ಟ್ ಸೂಚಿಸಿತು.
ದೆಹಲಿ ಸಚಿವೆ ಅತಿಷಿ ಮಾತನಾಡಿ, ‘ಮಂಗಳವಾರ ನ್ಯಾಯಾಲಯದ ವಿಚಾರಣೆ ವೇಳೆ ಎರಡು ವಿಷಯ ಬೆಳಕಿಗೆ ಬಂದಿದೆ. ಆರೋಪದ ಕುರಿತ ಹಣ ವರ್ಗಾವಣೆಗೆ ದಾಖಲೆಗಳು ಎಲ್ಲಿವೆ ಎಂಬುದಕ್ಕೆ ಇ.ಡಿ. ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನೊಂದು ಇಡೀ ಪ್ರಕರಣ ಕೇಜ್ರಿವಾಲ್ ವಿರುದ್ಧ ಬಲವಂತದ ಹೇಳಿಕೆ ನೀಡುವಂತೆ ಮಾಫಿ ಸಾಕ್ಷಿಗಳ ಮೇಲೆ ಒತ್ತಡ ಹಾಕಿ, ಅವರಿಂದ ಪಡೆದ ಹೇಳಿಕೆಗಳನ್ನು ಆಧರಿಸಿದ್ದು ಎಂಬುದು. ಈ ಕಾರಣಕ್ಕಾಗಿಯೇ ನ್ಯಾಯಾಲಯ ಇಂದು ಜಾಮೀನು ನೀಡಿದೆ’ ಎಂದು ಹೇಳಿದರು.