ಅಬಕಾರಿ ಕೇಸಲ್ಲಿ ಬಂಧಿತ ಕೇಜ್ರಿ ಜಾಮೀನು ಬಗ್ಗೆ ಇಂದು ಸುಪ್ರೀಂ ತೀರ್ಪು ಭವಿಷ್ಯ ನಿರ್ಧಾರ

KannadaprabhaNewsNetwork |  
Published : Sep 13, 2024, 01:32 AM ISTUpdated : Sep 13, 2024, 06:30 AM IST
Delhi CM Arvind Kejriwal

ಸಾರಾಂಶ

ಅಬಕಾರಿ ಲೈಸೆನ್ಸ್‌ ಹಗರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ಕುರಿತು ಸುಪ್ರೀಂಕೋರ್ಟ್‌ ಶುಕ್ರವಾರ ತೀರ್ಪು ಪ್ರಕಟಿಸಲಿದೆ.

ನವದೆಹಲಿ: ಅಬಕಾರಿ ಲೈಸೆನ್ಸ್‌ ಹಗರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ಕುರಿತು ಸುಪ್ರೀಂಕೋರ್ಟ್‌ ಶುಕ್ರವಾರ ತೀರ್ಪು ಪ್ರಕಟಿಸಲಿದೆ. ಅಬಕಾರಿ ಹಗರಣದಲ್ಲಿ ಸಿಬಿಐನಿಂದ ತಮ್ಮ ಬಂಧನ ಮತ್ತು ಜಾಮೀನು ಕೋರಿ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿ ಕುರಿತು ಸೆ.5ರಂದು ವಿಚಾರಣೆ ಮುಗಿಸಿದ್ದ ನ್ಯಾಯಾಲಯ ತೀರ್ಪು ಕಾದಿರಿಸಿತ್ತು. ಜೂ.26ರಂದು ಕೇಜ್ರಿವಾಲ್‌ ಅವರನ್ನು ಸಿಬಿಐ ಬಂಧಿಸಿತ್ತು.

==

ಸಂಸತ್‌ ದಾಳಿಕೋರ ಅಫ್ಜಲ್‌ ಗುರು ಸೋದರ ಅಜೀಜ್‌ ಕಾಶ್ಮೀರ ಎಲೆಕ್ಷನ್‌ ಕಣಕ್ಕೆ!

ಶ್ರೀನಗರ: ಸಂಸತ್ ದಾಳಿ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಅಫ್ಜಲ್ ಗುರು ಸೋದರ ಅಜೀಜ್‌ ಅಹ್ಮದ್ ಗುರು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಸೋಪೋರ್‌ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಸಂಬಂಧ ಗುರುವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಜೀಜ್‌, 2023ರಲ್ಲಿ ನನ್ನ ಪುತ್ರನನ್ನು ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಇದೊಂದು ಸುಳ್ಳು ಪ್ರಕರಣವಾಗಿತ್ತು. ಈ ವಿಷಯವೇ ನನ್ನ ರಾಜಕೀಯ ಪ್ರವೇಶಕ್ಕೆ ಪ್ರೇರೇಪಣೆ ಎಂದಿದ್ದಾರೆ. ಈ ಹಿಂದೆ ಸರ್ಕಾರಿ ಹುದ್ದೆಯಲ್ಲಿದ್ದ ಅಜೀಜ್‌ 2014ರಲ್ಲಿ ಸ್ವಯಂ ನಿವೃತ್ತಿ ಪಡೆದು ಸದ್ಯ ಗುತ್ತಿಗೆದಾರರಾಗಿದ್ದಾರೆ.

==

ಮಂಕಿಪಾಕ್ಸ್‌ ರೋಗಿ ಚೇತರಿಕೆ, ಆತಂಕದ ಅಗತ್ಯವಿಲ್ಲ: ದಿಲ್ಲಿ ಆಸ್ಪತ್ರೆ

ನವದೆಹಲಿ: ಭಾರತದ ಮೊದಲ ಮಂಕಿಪಾಕ್ಸ್‌ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಅವರು ಗುಣಮುಖರಾಗುತ್ತಿದ್ದಾರೆ. ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯ ನಿರ್ದೇಶಕರು ತಿಳಿಸಿದ್ದಾರೆ.ಈ ಬಗ್ಗೆ ಮಾತನಾಡಿದ ಸುರೇಶ್‌ ಕುಮಾರ್‌, ‘ಎಂಪಾಕ್ಸ್‌ ಎಂಬುದು ಡಿಎನ್‌ಎ ವೈರಸ್‌ ಮತ್ತು ಈ ರೋಗ ಬಂದಾಗ ಮುಖ್ಯವಾಗಿ ಕೈಗಳು ಮತ್ತು ಚರ್ಮದ ಮೇಲೆ ಗುಳ್ಳೆಗಳಾಗಿ ಕಜ್ಜಿ ಆಗುತ್ತದೆ. ಇದು ತುರಿಕೆಗೂ ಕಾರಣವಾಗುತ್ತದೆ. ಆದರೆ ಭಾರತದಲ್ಲಿರುವ ಪ್ರಕರಣ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿಗೆ ಪೂರಕವಾಗಿಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಅವರು ಹೇಳಿದರು.

==

ಇಬ್ಬರು ಯೋಧರ ಮೇಲೆ ದಾಳಿ ಸ್ನೇಹಿತೆ ಮೇಲೆ ಗ್ಯಾಂಗ್‌ರೇಪ್‌

ಭೋಪಾಲ್: ರಾತ್ರಿ ವೇಳೆ ಸುತ್ತಾಡಲು ತೆರಳಿದ್ದ ಇಬ್ಬರು ಯುವ ಸೇನಾಧಿಕಾರಿಗಳ ಮೇಲೆ ದಾಳಿ ನಡೆಸಿದ ಗುಂಪೊಂದು, ಯೋಧರ ಗೆಳತಿಯ ಮೇಲೆ ಗ್ಯಾಂಗ್‌ರೇಪ್‌ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಗುರುವಾರ ನಡೆದಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಅದರಲ್ಲಿ ಒಬ್ಬನ ಮೇಲೆ ಕ್ರಿಮಿನಲ್‌ ದಾಖಲೆಗಳಿರುವುದು ಪತ್ತೆಯಾಗಿದೆ.

ಇಂದೋರ್‌ ಸಮೀಪದ ಮಹೂ ಸೈನಿಕ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದ ಇಬ್ಬರು ಯೋಧರು, ತಮ್ಮ 2 ಸ್ನೇಹಿತೆಯರೊಂದಿಗೆ ಸುತ್ತಾಡಲು ಹೋಗಿದ್ದರು. ಈ ವೇಳೆ ಪಿಸ್ತೂಲು, ಚಾಕು, ಕೋಲುಗಳನ್ನು ಹಿಡಿದು ಬಂದ 8 ಜನ ದುರುಳರು ಆ ನಾಲ್ವರಿಗೆ ಥಳಿಸಿದ್ದಾರೆ. ನಂತರ ಒಬ್ಬ ಸೈನಿಕ ಹಾಗೂ ಮಹಿಳೆಯನ್ನು ಒತ್ತೆಯಾಳಾಗಿಸಿಕೊಂಡು ಉಳಿದಿಬ್ಬರಿಗೆ 10 ಲಕ್ಷ ರು. ತರುವಂತೆ ಸೂಚಿಸಿದ್ದಾರೆ. ಇದನ್ನು ಕೂಡಲೇ ಪೊಲೀಸರ ಗಮನಕ್ಕೆ ತರಲಾಗಿದ್ದು, ಅವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ದಾಳಿಕೋರರು ಪರಾರಿಯಾಗಿದ್ದಾರೆ. ಪೊಲೀಸರು ಆಗಮನಕ್ಕೂ ಮುನ್ನ ಗುಂಪು, ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು ವೈದ್ಯಕೀಯ ತಪಾಸಣೆ ವೇಳೆ ಖಚಿತಪಟ್ಟಿದೆ.ಘಟನೆಯ ಸಂಬಂಧ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಮತ್ತು ಪ್ರಿಯಾಂಕಾ ಗಾಂಧಿ, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಮಹಿಳೆಯರ ಮೇಲಿನ ಅಪರಾಧಗಳ ಪ್ರತಿ ಸರ್ಕಾರದ ಅಸಡ್ಡೆ ಕಳವಳಕಾರಿ ಎಂದಿದ್ದಾರೆ.

==

ನಾನು ದಣಿದಿದ್ದೇನೆ: ಸಾವಿಗೂ ಮುನ್ನ ಮಲೈಕಾ, ಅಮೃತಾಗೆ ತಂದೆ ಮೆಹ್ತಾ ದೂರವಾಣಿ ಕರೆ

ಮುಂಬೈ: ನಟಿ ಮಲೈಕಾ ಅರೋರಾ ಅವರ ಮಲತಂದೆ ಅನಿಲ್‌ ಮೆಹ್ತಾ, ಆತ್ಮಹತ್ಯೆಗೂ ಮುನ್ನ ಇಬ್ಬರು ಪುತ್ರಿಯರಾದ ಮಲೈಕಾ ಮತ್ತು ಅಮೃತಾಗೆ ದೂರವಾಣಿ ಕರೆ ಮಾಡಿ, ‘ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಮತ್ತು ದಣಿದಿದ್ದೇನೆ’ ಎಂದು ಹೇಳಿದ್ದರು. ಕರೆ ಬಳಿಕ ಮೊಬೈಲ್‌ ಸ್ವಿಚಾಫ್‌ ಆಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ವಿಷಯವನ್ನು ಸ್ವತಃ ಪುತ್ರಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಮೆಹ್ತಾ ಸಾವಿನ ಕುರಿತ ಅನುಮಾನಗಳಿಗೆ ತೆರೆ ಎಳೆದಿರುವ ಪೊಲೀಸರು, ಆತ್ಮಹತ್ಯೆಯಿಂದಲೇ ಅವರ ಸಾವು ಸಂಭವಿಸಿದೆ. 6ನೇ ಮಹಡಿಯಿಂದ ಬಿದ್ದ ಗಾಯಗಳಿಂದ ಅವರ ಸಾವು ಸಂಭವಿಸಿದೆ ಎಂದು ಹೇಳಿದ್ದಾರೆ.

PREV

Recommended Stories

ಹೇಳದೆ, ಕೇಳದೆ ರಾಹುಲ್‌ ಫಾರಿನ್‌ಗೆಹೋಗುತ್ತಾರೆ: ಸಿಆರ್‌ಪಿಎಫ್‌ ದೂರು- ಭದ್ರತೆಯನ್ನು ಗಂಭೀರವಾಗಿ ಪರಿಗಣಿಸ್ತಿಲ್ಲ: ಖರ್ಗೆಗೆ ಪತ್ರ
ಮೊಬೈಲ್‌ನ ಇಎಂಐ ಕಟ್ಟಿಲ್ವಾ? ನಿಮ್ಮಫೋನ್‌ ಶೀಘ್ರವೇ ಲಾಕ್‌ ಆಗಬಹುದು!- ಸಾಲ ಕಟ್ಟದೆ ಓಡಾಡುತ್ತಿರುವವರಿಗೆ ಸದ್ಯವೇ ಆರ್‌ಬಿಐ ಶಾಕ್‌