ಟ್ರಂಪ್‌ ತೆರಿಗೆ : ತಿರುಪ್ಪುರ್‌ ಸೇರಿ 3 ಕಡೆ ಜವಳಿ ಉತ್ಪಾದನೆ ಬಂದ್‌

KannadaprabhaNewsNetwork |  
Published : Aug 27, 2025, 01:00 AM ISTUpdated : Aug 27, 2025, 03:32 AM IST
ಡೊನಾಲ್ಡ್ ಟ್ರಂಪ್‌ | Kannada Prabha

ಸಾರಾಂಶ

ಭಾರತದ ರಫ್ತಿನ ಮೇಲೆ ಅಮೆರಿಕದ ಶೇ.50ರಷ್ಟು ತೆರಿಗೆ ಜಾರಿ ಖಚಿತವಾದ ಬೆನ್ನಲ್ಲೇ ದೇಶದ ಪ್ರಮುಖ ಜವಳಿ ಉತ್ಪಾದನಾ ಕೇಂದ್ರಗಳಾದ ತಮಿಳುನಾಡಿನ ತಿರುಪ್ಪುರ್‌, ಗುಜರಾತ್‌ನ ಸೂರತ್‌ ಮತ್ತು ಉತ್ತರಪ್ರದೇಶದ ನೋಯ್ಡಾದಲ್ಲಿನ ಜವಳಿ ಉದ್ಯಮಗಳ ಉತ್ಪಾದನೆ  ಸ್ಥಗಿತ 

 ನವದೆಹಲಿ :  ಭಾರತದ ರಫ್ತಿನ ಮೇಲೆ ಅಮೆರಿಕದ ಶೇ.50ರಷ್ಟು ತೆರಿಗೆ ಜಾರಿ ಖಚಿತವಾದ ಬೆನ್ನಲ್ಲೇ ದೇಶದ ಪ್ರಮುಖ ಜವಳಿ ಉತ್ಪಾದನಾ ಕೇಂದ್ರಗಳಾದ ತಮಿಳುನಾಡಿನ ತಿರುಪ್ಪುರ್‌, ಗುಜರಾತ್‌ನ ಸೂರತ್‌ ಮತ್ತು ಉತ್ತರಪ್ರದೇಶದ ನೋಯ್ಡಾದಲ್ಲಿನ ಜವಳಿ ಉದ್ಯಮಗಳು ಉತ್ಪಾದನೆಯನ್ನೇ ಸ್ಥಗಿತಗೊಳಿಸಿವೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಭಾರತದ ಜವಳಿ ವಲಯಕ್ಕೆ ಅಮೆರಿಕ ಅತಿದೊಡ್ಡ ಮಾರುಕಟ್ಟೆಯಾಗಿದೆ.

ಟ್ರಂಪ್ ತೆರಿಗೆ ಕಾರಣಕ್ಕೇ ಗುಜರಾತ್‌ನ ಸೌರಾಷ್ಟ್ರ ವಲಯದಲ್ಲಿ ಸುಮಾರು 1 ಲಕ್ಷ ವಜ್ರ ಕತ್ತರಿಸುವ ಮತ್ತು ಹೊಳಪು ನೀಡುವ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಮತ್ತಷ್ಟು ಲಕ್ಷಾಂತರ ಜನರ ಉದ್ಯೋಗ ಆತಂಕಕ್ಕೆ ಸಿಕ್ಕಿರುವ ಈ ವಿಷಯ ಹೊರಬಿದ್ದಿದೆ.

ಉತ್ಪಾದನೆ ಸ್ಥಗಿತ:

ಜವಳಿ ಉದ್ಯಮಗಳ ಉತ್ಪಾದನೆ ಸ್ಥಗಿತದ ಬಗ್ಗೆ ಮಂಗಳವಾರ ಇಲ್ಲಿ ಮಾಹಿತಿ ನೀಡಿರುವ ರಫ್ತು ಸಂಸ್ಥೆಗಳ ಒಕ್ಕೂಟ (ಎಫ್‌ಐಇಒ), ‘ಅಮೆರಿಕದ ಹೆಚ್ಚುವರಿ ತೆರಿಗೆಯಿಂದಾಗಿ ಅಲ್ಲಿಗೆ ಭಾರತದ ವಸ್ತುಗಳ ರಫ್ತು ದುಬಾರಿಯಾಗಲಿದೆ. ತೀವ್ರ ಸ್ಪರ್ಧಾತ್ಮಕವಾದ ಮಾರುಕಟ್ಟೆಯಲ್ಲಿ ಇಷ್ಟು ತೆರಿಗೆ ಇಟ್ಟುಕೊಂಡು ಚೀನಾ ಸೇರಿದಂತೆ ಇತರೆ ಪ್ರಮುಖ ಜವಳಿ ರಫ್ತು ದೇಶಗಳೊಂದಿಗೆ ಸ್ಪರ್ಧೆ ಅಸಾಧ್ಯ. ಇದೇ ಕಾರಣಕ್ಕಾಗಿ ತಿರುಪ್ಪುರ್‌, ನೋಯ್ಡಾ ಮತ್ತು ಸೂರತ್‌ನಲ್ಲಿನ ಜವಳಿ ಉದ್ಯಮಗಳು ಉತ್ಪಾದನೆಯನ್ನೇ ಸ್ಥಗಿತಗೊಳಿಸಿವೆ’ ಎಂದು ಹೇಳಿದೆ.

ಜವಳಿ ಮಾತ್ರವಲ್ಲದೇ ಚರ್ಮ, ಸೀಗಡಿ ಮೀನು, ಸೆರಾಮಿಕ್ಸ್‌, ಕರಕುಶಲ, ಕಾರ್ಪೆಟ್‌ ಸೇರಿ ಇತರೆ ಹಲವು ವಲಯಗಳು ಕೂಡಾ ಇದೇ ರೀತಿಯ ಸ್ಪರ್ಧೆಯನ್ನು ಎದುರಿಸಲಿವೆ ಎಂದು ಒಕ್ಕೂಟ ಹೇಳಿದೆ.

ಭಾರತಕ್ಕೆ ಹೋಲಿಸಿದರೆ ಇತರೆ ನೆರೆ ಹೊರೆ ದೇಶಗಳಾದ ಚೀನಾ, ವಿಯೆಟ್ನಾಂ, ಬಾಂಗ್ಲಾದೇಶ, ಕಾಂಬೋಡಿಯಾ, ಫಿಲಿಪ್ಪೀನ್ಸ್‌ ಸೇರಿದಂತೆ ಹಲವು ದೇಶಗಳ ಮೇಲೆ ಅಮೆರಿಕ ಶೇ.30-35ರಷ್ಟು ಕಡಿಮೆ ತೆರಿಗೆ ಹಾಕಿದೆ. ಹೀಗಾಗಿ ಈ ದೇಶಗಳ ಜವಳಿ ಉತ್ಪನ್ನಗಳ ಮುಂದೆ ಭಾರತೀಯ ಜವಳಿ ಉದ್ಯಮ ಸ್ಪರ್ಧೆ ಮಾಡುವುದು ಕಷ್ಟವಾಗಲಿದೆ ಎಂದು ಒಕ್ಕೂಟ ಹೇಳಿದೆ.

ಸಹಾಯ ಅಗತ್ಯ:

ಅಮೆರಿಕದ ಭಾರೀ ತೆರಿಗೆ ಹೇರಿಕೆಯ ಪ್ರಸ್ತುತ ಸ್ಥಿತಿಯಲ್ಲಿ ಜವಳಿ ಕ್ಷೇತ್ರದ ರಕ್ಷಣೆಗೆ ಸರ್ಕಾರ ಧಾವಿಸಬೇಕು. ಬಡ್ಡಿರಹಿತ ಸಾಲ ಯೋಜನೆ, ರಫ್ತಿಗೆ ನೆರವಿನಂತಹ ಕ್ರಮಗಳನ್ನು ಸರ್ಕಾರ ಘೋಷಿಸಿಬೇಕು. ಜೊತೆಗೆ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳಿಂದ ಸುಲಭದಲ್ಲಿ ಸಾಲ ನೀಡುವಂತೆ ಸರ್ಕಾರ ಅಥವಾ ಆರ್‌ಬಿಐ ನಿರ್ದೇಶನ ನೀಡಬೇಕು ಎಂದು ಎಫ್‌ಐಇಒ ಅಧ್ಯಕ್ಷ ಎಸ್‌.ಸಿ.ರಲ್ಹನ್‌ ಕೋರಿದ್ದಾರೆ.

ಇಂದಿನಿಂದ ಭಾರತಕ್ಕೆ ಟ್ರಂಪ್‌ 50% ತೆರಿಗೆ ಬರೆ 

ವಾಷಿಂಗ್ಟನ್‌: ಇಡೀ ದೇಶ ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಮುಳುಗಿರುವಾಗಲೇ ಭಾರತಕ್ಕೆ ಅಮೆರಿಕ ಭಾರೀ ತೆರಿಗೆ ಶಾಕ್‌ ನೀಡಿದೆ. ರಷ್ಯಾದಿಂದ ತೈಲ ಖರೀದಿಯ ನೆಪವೊಡ್ಡಿ ಈ ಹಿಂದೆ ಘೋಷಿಸಿದಂತೆ ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಸಂಬಂಧ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ. ಮಧ್ಯರಾತ್ರಿ 12.01 ಗಂಟೆಯಿಂದಲೇ ಈ ಹೆಚ್ಚುವರಿ ತೆರಿಗೆ ಅನುಷ್ಠಾನಕ್ಕೆ ಬಂದಿದೆ.

PREV
Read more Articles on

Recommended Stories

ಶುಲ್ಕ ಕೊಟ್ಟರೆ ಪುರೋಹಿತರಿಂದ ಗಯಾ ದಲ್ಲಿ ಈಗ ಇ-ಪಿಂಡದಾನ ಸೇವೆ ಆರಂಭ!
ಉದಯಗಿರಿ, ಹಿಮಗಿರಿ ಸ್ಟೆಲ್ತ್‌ ನೌಕೆ ನೌಕಾಪಡೆ ಬತ್ತಳಿಕೆಗೆ