ಮೆದುಳು ಗಡ್ಡೆ ತೆಗೆಯಲು ಐಬ್ರೋ ಮೂಲಕ ಸರ್ಜರಿ!

KannadaprabhaNewsNetwork |  
Published : May 22, 2024, 12:45 AM IST
ಶಸ್ತ್ರಚಿಕಿತ್ಸೆ | Kannada Prabha

ಸಾರಾಂಶ

ವಿಶ್ವದಲ್ಲೇ ಮೊದಲ ಬಾರಿಗೆ ಚೆನ್ನೈನಲ್ಲಿ ಅಪರೂಪದ ಸರ್ಜರಿ ನಡೆದಿದ್ದು, ಕಣ್ಣಿನ ಹುಬ್ಬಿನಿಂದ ಕೀ ಹೋಲ್‌ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಚೆನ್ನೈ: ಮೆದುಳು ಬಳಿ ಬೆಳೆದಿದ್ದ ಕ್ಯಾನ್ಸರ್‌ ಗಡ್ಡೆಯೊಂದನ್ನು ಕಣ್ಣಿನ ಹುಬ್ಬಿನ (ಐ ಬ್ರೋ) ಭಾಗದಿಂದ ಕೀ ಹೋಲ್‌ ಶಸ್ತ್ರಚಿಕಿತ್ಸೆ ನಡೆಸಿ ತೆಗೆಯುವ ಮೂಲಕ ಚೆನ್ನೈನ ವೈದ್ಯರ ತಂಡವೊಂದು ಅಪರೂಪದ ಸಾಧನೆ ಮಾಡಿದೆ. ಇಂಥ ಶಸ್ತ್ರಚಿಕಿತ್ಸೆ ವಿಶ್ವದಲ್ಲೇ ಮೊದಲಾದ ಕಾರಣ ಅಪೋಲೋ ಆಸ್ಪತ್ರೆಯ ವೈದ್ಯರ ತಂಡದ ಸಾಧನೆಗೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.ಜೊತೆಗೆ ಈ ಅಪರೂಪದ ಶಸ್ತ್ರಚಿಕಿತ್ಸೆ ಮೆದುಳಿನಲ್ಲಿ ಕಾಣಿಸಿಕೊಳ್ಳಬಹುದಾದ ತೊಂದರೆಯನ್ನು ಹೆಚ್ಚಿನ ತೊಂದರೆ ಇಲ್ಲದೇ ಗುಣಪಡಿಸಲು ಹೊಸ ಮಾರ್ಗವೊಂದು ಜಾಗತಿಕ ವೈದ್ಯಕೀಯ ಸಮುದಾಯಕ್ಕೆ ಸಿಕ್ಕಂತಾಗಿದೆ.ಅಪರೂಪದ ಸಾಧನೆ:ಮಹಿಳೆಯೊಬ್ಬರಲ್ಲಿ ‘ಇನ್ಸುಲರ್‌ ಬ್ರೇನ್‌’ ಬಳಿ ಗಡ್ಡೆಯೊಂದು ರೂಪುಗೊಂಡು ಕ್ಯಾನ್ಸರ್‌ ಆಗಿ ಪರಿವರ್ತನೆಗೊಂಡಿತ್ತು. ಗಡ್ಡೆ ರೂಪುಗೊಂಡ ಜಾಗ ಅತ್ಯಂತ ಸೂಕ್ಷ್ಮ ಭಾಗವಾಗಿತ್ತು. ವ್ಯಕ್ತಿಯ ಚಲನವಲನ, ಮಾತನ್ನು ನಿಯಂತ್ರಿಸುವ ಭಾಗದಲ್ಲೇ ಗಡ್ಡೆ ಇತ್ತು. ಜೊತೆಗೆ ಭಾರೀ ಪ್ರಮಾಣದ ಅತ್ಯಂತ ಸೂಕ್ಷ್ಮ ರಕ್ತನಾಳದ ಜಾಲ ಕೂಡಾ ಗಡ್ಡೆಯ ಆಸುಪಾಸಿನಲ್ಲೇ ಹರಡಿಕೊಂಡಿತ್ತು.

ಇಂಥ ಜಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸುವಾಗ ರೋಗಿ ಎಚ್ಚರ ಇರುವುದು ಅವಶ್ಯಕ. ಅಲ್ಲದೆ ಶಸ್ತ್ರಚಿಕಿತ್ಸೆ ಮಾಡುವಾಗ ಮೆದುಳಿನ ಕೋಶ, ರಕ್ತನಾಳಗಳಿಗೆ ಸಣ್ಣ ಹಾನಿಯೂ ಆಗದಂತೆ ನೋಡಿಕೊಳ್ಳುವುದು ಅನಿವಾರ್ಯ. ಇಲ್ಲದೇ ಹೋದಲ್ಲಿ ಸಣ್ಣ ವ್ಯತ್ಯಯ ಕೂಡಾ ರೋಗಿ ಪಾರ್ಶ್ವವಾಯು, ಮಾತನಾಡುವ ಸಮಸ್ಯೆಗೆ ತುತ್ತಾಗುವಂತೆ ಮಾಡುವ ಸಾಧ್ಯತೆ ಖಚಿತವಾಗಿರುತ್ತದೆ.ಹೀಗಾಗಿಯೇ ವೈದ್ಯರ ತಂಡ ಸಾಂಪ್ರದಾಯಿಕ ಸ್ಥಳದ ಮೂಲಕ ಚಿಕಿತ್ಸೆ ಬದಲು ಕಣ್ಣುಹುಬ್ಬಿನ ಮೇಲ್ಭಾಗದಲ್ಲಿ ಸಣ್ಣ ರಂಧ್ರ (ಕೀ ಹೋಲ್‌) ಕೊರೆದು ಶಸ್ತ್ರಚಿಕಿತ್ಸೆಗೆ ನಿರ್ಧರಿಸಿದ್ದರು.

ಅದರಂತೆ ರೋಗಿಯ ಕಣ್ಣುಹುಬ್ಬಿನ ಮೇಲೆ ರಂಧ್ರಕೊರೆದು ಅದರ ಮೂಲಕ ಆಳವಾದ ಭಾಗದಲ್ಲಿ ರೂಪುಗೊಂಡಿದ್ದ ಕ್ಯಾನ್ಸರ್‌ ಗಡ್ಡೆಯನ್ನು ಯಶಸ್ವಿಯಾಗಿ ಹೊರಗೆ ತೆಗೆದಿದ್ದಾರೆ. ಜೊತೆಗೆ ಶಸ್ತ್ರಚಿಕಿತ್ಸೆ ನಡೆದ ಕೇವಲ 72 ಗಂಟೆಗಳಲ್ಲಿ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ಅವರೀಗ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರ ತಂಡ ಹೇಳಿದೆ.ಅಲ್ಲದೆ ಇದು ವೈದ್ಯಕೀಯ ಶ್ರೇಷ್ಠತೆ, ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಸಾಬೀತುಪಡಿಸುತ್ತದೆ. ಅಲ್ಲದೆ ಈ ಪರ್ಯಾಯ ವಿಧಾನವು ಸಾಂಪ್ರದಾಯಿಕ ವಿಧಾನಕ್ಕಿಂತ ಹೆಚ್ಚು ಸುರಕ್ಷಿತ, ರೋಗಿಗೆ ಹಾನಿ ಮಾಡುವ ಸಾಧ್ಯತೆ ಕಡಿಮೆ ಮಾಡುವ ಜೊತೆಗೆ ಒಟ್ಟಾರೆ ರೋಗಿಯ ಭವಿಷ್ಯದ ಗುಣಮಟ್ಟದ ಜೀವನ ಸಾಗಿಸುವ ಸಂಭಾವ್ಯತೆ ಹೆಚ್ಚಿಸುತ್ತದೆ’ ಎಂದು ಅಪೋಲೋ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಹಿರಿಯ ಸಲಹೆಗಾರ ಡಾ. ಹೃಷಿಕೇಶ್‌ ಸರ್ಕಾರ್‌ ಹೇಳಿದ್ದಾರೆ.

ಸುರಕ್ಷಿತ ಶಸ್ತ್ರಚಿಕಿತ್ಸೆಇಂಥ ಶಸ್ತ್ರಚಿಕಿತ್ಸೆ ವಿಶ್ವದಲ್ಲೇ ಮೊದಲು. ಜೊತೆಗೆ ಈ ವಿಧಾನವು ಮೆದುಳಿನ ಗಡ್ಡೆ ಶಸ್ತ್ರಚಿಕಿತ್ಸೆಗೆ ಪರ್ಯಾಯ ಮಾರ್ಗವಾಗಿ ಹೊರಹೊಮ್ಮಿದೆ. ಈವರೆಗೆ ಬಳಸುತ್ತಿರುವ ವಿಧಾನಕ್ಕಿಂತ ಇದು ಸುರಕ್ಷಿತ ಎಂದು ಚೆನ್ನೈ ಅಪೋಲೋ ಆಸ್ಪತ್ರೆ ವೈದ್ಯ ಡಾ। ಹೃಷಿಕೇಶ್‌ ಸರ್ಕಾರ್‌ ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸಲ್ಲ: ದೋವಲ್‌
ಅಮೆರಿಕ ನಿಗೂಢ ಅಸ್ತ್ರದಿಂದ ವೆನಿಜುವೆಲನ್ನರಿಗೆ ರಕ್ತ ವಾಂತಿ!