ಪಿಎಂ ಕಿಸಾನ್ ಸಮ್ಮಾನ್ ನಿಧಿಯ 19ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ದೇಶಾದ್ಯಂತ 10 ಕೋಟಿ ರೈತರ ಖಾತೆಗೆ 22,000 ಕೋಟಿ ರು.

KannadaprabhaNewsNetwork | Updated : Feb 25 2025, 05:40 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 19ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ದೇಶಾದ್ಯಂತ 9.8 ಕೋಟಿ ರೈತರ ಖಾತೆಗೆ ಒಟ್ಟು 22 ಸಾವಿರ ಕೋಟಿ ರು. ಹಣ ಜಮೆಯಾಗಿದೆ.

ಭಾಗಲ್ಪುರ (ಬಿಹಾರ): ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 19ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ದೇಶಾದ್ಯಂತ 9.8 ಕೋಟಿ ರೈತರ ಖಾತೆಗೆ ಒಟ್ಟು 22 ಸಾವಿರ ಕೋಟಿ ರು. ಹಣ ಜಮೆಯಾಗಿದೆ.ಬಿಹಾರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಮೋದಿ ಇದೇ ಸಂದರ್ಭದಲ್ಲಿ ಕಿಸಾನ್ ಸಮ್ಮಾನ್ ಹಣವನ್ನು ಬಿಡುಗಡೆ ಮಾಡಿದರು.

6ನೇ ವರ್ಷದ ಹರ್ಷ:

ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಕಿಸಾನ್ ಸಮ್ಮಾನ್ ಜಾರಿ ಬಂದು 6 ವರ್ಷ ಪೂರೈಸಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಸಂತಸ ವ್ಯಕ್ತ ಪಡಿಸಿ ಟ್ವೀಟ್‌ ಮಾಡಿದ್ದಾರೆ.

‘ಪಿಎಂ ಕಿಸಾನ್ ಯೋಜನೆಯಡಿ ರೈತರ ಖಾತೆಗಳಿಗೆ 3.5 ಲಕ್ಷ ಕೋಟಿ ರು.ಗಳನ್ನು ಜಮಾ ಮಾಡಲಾಗಿದೆ. ಸರ್ಕಾರದ ಈ ಪ್ರಯತ್ನಗಳು ರೈತರಿಗೆ ಗೌರವ, ಸಮೃದ್ಧಿ, ಹೊಸ ಶಕ್ತಿಯನ್ನುನೀಡಿದೆ. ಸರ್ಕಾರದ ಪ್ರಯತ್ನದಿಂದಾಗಿ ಕೃಷಿ ಕ್ಷೇತ್ರವು ವೇಗವಾಗಿ ಅಭಿವೃದ್ಧಿ ಹೊಂದಿದೆ. ಲಕ್ಷಾಂತರ ಸಣ್ಣ ರೈತರಿಗೆ ಆರ್ಥಿಕ ಸಹಾಯವು ಮಾರುಕಟ್ಟೆಗೆ ಅವರ ಪ್ರವೇಶವನ್ನು ಹೆಚ್ಚಿಸಿದೆ. ಅವರ ವೆಚ್ಚ ಕಡಿಮೆಯಾಗಿ, ಆದಾಯ ಹೆಚ್ಚಾಗಿದೆ’ ಎಂದಿದ್ದಾರೆ.

ವಿಶ್ವದ ಭವಿಷ್ಯ ಭಾರತದ ಕೈಯಲ್ಲಿ: ಮೋದಿ

ಭೋಪಾಲ್: ‘ವಿಶ್ವದ ಭವಿಷ್ಯವು ಭಾರತದ ಕೈಯಲ್ಲಿದೆ ಎನ್ನುವ ಮಾತುಗಳು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸೋಮವಾರ ಮಧ್ಯಪ್ರದಶ ಜಾಗತಿಕ ಹೂಡಿಕೆದಾರರ ಸಮಾವೇಶ-2025ದಲ್ಲಿ ಮಾತನಾಡಿದ ಮೋದಿ ‘ ಜಗತ್ತಿನ ಭವಿಷ್ಯವು ಭಾರತದ ಕೈಯಲ್ಲಿದೆ ಎನ್ನುವ ಮಾತುಗಳು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದೆ. ಮುಂಬರುವ ವರ್ಷಗಳಲ್ಲಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರೆಯುತ್ತದೆ ಎಂದು ವಿಶ್ವಬ್ಯಾಂಕ್ ವಿಶ್ವಾಸ ವ್ಯಕ್ತಪಡಿಸಿದೆ. ಭಾರತದ ಬಗ್ಗೆ ಜಗತ್ತು ಹೊಂದಿರುವ ವಿಶ್ವಾಸದ ಹಲವು ನಿದರ್ಶನಗಳನ್ನು ನಾನು ಉಲ್ಲೇಖಿಸಬಹುದು. ಕಳೆದ ದಶಕದಲ್ಲಿ ಭಾರತವು ಮೂಲಸೌಕರ್ಯದಲ್ಲಿ ಉತ್ತಮ ಪ್ರಗತಿಯನ್ನು ಕಂಡಿದೆ’ ಎಂದರು.ಇದೇ ವೇಳೆ ಮಧ್ಯಪ್ರದೇಶವು ಹೂಡಿಕೆದಾರರ ನೆಚ್ಚಿನ ತಾಣವಾಗಿ ಬೆಳೆಯುತ್ತಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

Share this article