ಪಿಟಿಐ ಚಂಡೀಗಢ
ಬೆಂಬಲ ಬೆಲೆಗೆ ಕಾನೂನು ರೂಪ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಂಜಾಬ್ ಹಾಗೂ ಹರ್ಯಾಣ ರೈತರು ನಡೆಸುತ್ತಿರುವ ಪ್ರತಿಭಟನೆ ಗುರುವಾರ ಹಿಂಸಾರೂಪ ಪಡೆದಿದೆ.
ಶಂಭು ಮತ್ತು ಖನೌರಿ ಗಡಿ ಮೂಲಕ ದೆಹಲಿಯತ್ತ ತೆರಳಲು ರೈತರು ಯತ್ನಿಸಿದ ವೇಳೆ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.ಈ ವೇಳೆ ನೂರಾರು ರೈತರು ಗಾಯಗೊಂಡಿದ್ದು, ಈ ಪೈಕಿ ಸುಭಕರಣ್ ಸಿಂಗ್ (21) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮತ್ತೊಂದೆಡೆ ರೈತರು ಕೂಡಾ ತಮ್ಮ ಮೇಲೆ ಕಲ್ಲು, ಬಡಿಗೆಗಳಿಂದ ದಾಳಿ ನಡೆಸಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲಿಸರು ಆರೋಪಿಸಿದ್ದಾರೆ.
ಹೀಗಾಗಿ ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಈ ನಡುವೆ, ದಿಲ್ಲಿಯತ್ತ ಮುನ್ನುಗ್ಗಲು ರೈತರಿಗೆ ಕೃಷಿಕ ಮುಖಂಡ ಜಗಜಿತ್ ಸಿಂಗ್ ದಲ್ಲೇವಾಲ್ ಕರೆ ನೀಡಿದ್ದರೂ ಶಾಂತಿ ಕಾಯ್ದುಕೊಳ್ಳಲು ಮನವಿ ಮಾಡಿದ್ದಾರೆ.
ಇಲ್ಲದೇ ಹೋದರೆ 2021ರಲ್ಲಿ 3 ಕೃಷಿ ಕಾಯ್ದೆಗಳ ವಿರುದ್ಧ ಸಿಕ್ಕ ಜಯದಂತೆ ಈ ಸಲ ಗೆಲುವು ಲಭಿಸದು ಎಂದು ತಮ್ಮ ಬಾಂಧವರಿಗೆ ಮನವಿ ಮಾಡಿದ್ದಾರೆ.
ಇದರ ನಡುವೆ, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಅರ್ಜುನ್ ಮುಂಡಾ ಅವರು 5ನೇ ಸುತ್ತಿನ ಮಾತುಕತೆಗೆ ರೈತರನ್ನು ಆಹ್ವಾನಿಸಿದ್ದಾರೆ. ಈಗಾಗಲೇ 4 ಸುತ್ತಿನ ಸಭೆಗಳು ವಿಫಲಗೊಂಡಿವೆ.
2 ಗಡಿಗಳಲ್ಲಿ ಹಿಂಸೆ: ಹರ್ಯಾಣ-ಪಂಜಾಬ್ ಗಡಿ ಭಾಗವಾದ ಶಂಭು ಗಡಿ ಹಾಗೂ ಖನೌರಿ ಗಡಿಗಳು ಬುಧವಾರ ತ್ವೇಷಗೊಂಡಿವೆ. ಜೆಸಿಬಿ ಹಾಗೂ ಟ್ರಾಕ್ಟರ್‌ಗಳ ಸಮೇತ ಸಾವಿರಾರು ರೈತರು ದಿಲ್ಲಿಯತ್ತ ನುಗ್ಗಲು ಬೆಳಗ್ಗೆ ಆರಂಭಿಸಿದರು. ಶಂಭು ಗಡಿಯಲ್ಲಿ ಅವರನ್ನು ತಡೆಯಲು 5 ಸುತ್ತು ಅಶ್ರುವಾಯು ಸಿಡಿಸಿದರು.
ಇನ್ನೊಂದೆಡೆ ಖನೌರಿಯಲ್ಲೂ ಇದೇ ರೀತಿ ಅಶ್ರುವಾಯು ಸಿಡಿಸಿದ ವೇಳೆ ಮೂವರು ರೈತರು ತೀವ್ರವಾಗಿ ಗಾಯಗೊಂಡಿದ್ದಾರೆ.
ಇವರನ್ನೆಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿಗೆ ಕರೆದೊಯ್ಯುವ ವೇಳೆ ಪಂಜಾಬ್‌ನ ಭಠಿಂಡಾ ಜಿಲ್ಲೆಯ ಬಲೋಕೆ ಗ್ರಾಮದ ಸುಭ್‌ಕರಣ್ ಸಿಂಗ್ ಎಂಬ ಯುವಕ ಸಾವನ್ನಪ್ಪಿದ್ದಾನೆ.
ಮೃತ ಯುವಕನ ತಲೆಗೆ ಗಾಯಗಳಾಗಿವೆ. ಸಾವಿಗೆ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆ ವರದಿ ಬಳಿಕ ಖಚಿತವಾಗಲಿದೆ ಎಂದು ಪಟಿಯಾಲದ ರಾಜಿಂದರ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಕಾರದ ಪುಡಿ ದಾಳಿ: ಈ ನಡುವೆ ಉಭಯ ಗಡಿಗಳಲ್ಲೂ ಸಾವಿರಾರು ರೈತರು ಪೊಲೀಸರನ್ನು ಸುತ್ತುವರೆದು ಕಲ್ಲು ಮತ್ತು ಕಟ್ಟಿಗೆಗಳಿಂದ ದಾಳಿ ನಡೆಸಿದ್ದಾರೆ.
ಜೊತೆಗೆ ಸ್ಥಳದಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕಿ ಅದಕ್ಕೆ ಕಾರದ ಪುಡಿ ಹಾಕಿ ನಾವು ಉಸಿರಾಡದಂತೆ ಮಾಡಿದ್ದಾರೆ. ಈ ಘಟನೆಯಲ್ಲಿ ಹಲವು ಸಹೋದ್ಯೋಗಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ರೈತನ ಸಾವು: ಹೋರಾಟ 2 ದಿನ ಬಂದ್
ಪ್ರತಿಭಟನಾನಿರತ ರೈತನ ಸಾವು ಮತ್ತು 12 ಪೊಲೀಸರು ಗಾಯಗೊಂಡ ಬೆನ್ನಲ್ಲೇ ರೈತ ಹೋರಾಟಕ್ಕೆ 2 ದಿನಗಳ ತಡೆ ನೀಡಲಾಗಿದೆ. ಮುಂದಿನ ಹೋರಾಟಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಂಜೆ ತೀರ್ಮಾನ ಮಾಡಲಾಗುವುದು ಎಂದು ರೈತ ನಾಯಕ ಸರವಣ್ ಸಿಂಗ್ ಪಂಧೇರ್ ಹೇಳಿದ್ದಾರೆ.
ಪಂಜಾಬ್ ರೈತರು ಶಂಭು ಹಾಗೂ ಖನೌರಿ ಗಡಿಯಲ್ಲೇ ಉಳಿದುಕೊಂಡಿದ್ದು, ಇನ್ನೂ 2 ದಿನಗಳ ಕಾಲ ಇಲ್ಲಿದ್ದುಕೊಂಡೇ ಧರಣಿ ನಡೆಸುವುದಾಗಿ ಅವರು ತಿಳಿಸಿದ್ದಾರೆ.