ರೈತರು - ಕೇಂದ್ರದ ಮಾತುಕತೆ ಅಪೂರ್ಣ: ನಾಳೆ 4ನೇ ಸುತ್ತಿನ ಚರ್ಚೆ

KannadaprabhaNewsNetwork |  
Published : Feb 17, 2024, 01:18 AM ISTUpdated : Feb 17, 2024, 09:13 AM IST
farmers protest

ಸಾರಾಂಶ

ಮಾತುಕತೆ ಧನಾತ್ಮಕವಾಗಿತ್ತು ಎಂದು ಕೇಂದ್ರ ಸಚಿವರು, ರೈತ ನಾಯಕರು ಹೇಳಿಕೆ ನೀಡಿದ್ದಾರೆ. ಸದ್ಯ ಪಂಜಾಬ್‌-ಹರ್ಯಾಣ ಗಡಿಯಲ್ಲೇ ಸದ್ಯಕ್ಕೆ ಪ್ರತಿಭಟನೆ ಮುಂದುವರಿಕೆ ಮಾಡಲಾಗಿದೆ. ರೈತರು-ಪೊಲೀಸರ ನಡುವೆ ಜಟಾಪಟಿ ನಡೆದಿದ್ದು, ಪೊಲೀಸ್‌ ಅಶ್ರುವಾಯು ಸಿಡಿಸಿದ್ದಾರೆ.

ನವದೆಹಲಿ: ದೆಹಲಿ ಚಲೋಗೆ ಕರೆಕೊಟ್ಟಿರುವ ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಗುರುವಾರ ನಡೆದ ಮೂರನೇ ಸುತ್ತಿನ ಮಾತುಕತೆ ಧನಾತ್ಮಕವಾಗಿ ಅಂತ್ಯಗೊಂಡಿದ್ದರೂ, ಅಪೂರ್ಣವಾಗಿದೆ. 

ಹೀಗಾಗಿ ಭಾನುವಾರ ಸಂಜೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಉಭಯ ಬಣಗಳು ಸಮ್ಮತಿಸಿವೆ. ಇದರಿಂದಾಗಿ ಸಂಘರ್ಷಕ್ಕೆ ಶೀಘ್ರ ಕೊನೆ ಬೀಳಬಹುದೆಂಬ ಆಶಾಭಾವನೆ ಮೂಡಿದೆ.

ಈ ಹಿನ್ನೆಲೆಯಲ್ಲಿ ದಿಲ್ಲಿಯತ್ತ ಸಾಗದೇ ಸದ್ಯ ತಮ್ಮ ಪ್ರತಿಭಟನೆಯನ್ನು ಪಂಜಾಬ್‌ ಮತ್ತು ಹರ್ಯಾಣ ಗಡಿಯಲ್ಲೇ ಮುಂದುವರೆಸಲು ಮತ್ತು ದೆಹಲಿಯತ್ತ ತೆರಳುವ ಯತ್ನವನ್ನು ಮಾಡದೇ ಇರಲು ರೈತ ಸಂಘಟನೆಗಳು ನಿರ್ಧರಿಸಿವೆ. 

ಇದರ ನಡುವೆ ಶಂಭು ಗಡಿಯಲ್ಲಿ ರೈತರು ಹಾಗೂ ಹರ್ಯಾಣ ಪೊಲೀಸರ ನಡುವೆ ಶುಕ್ರವಾರ ಮಧ್ಯಾಹ್ನ ಜಟಾಪಟಿ ನಡೆದಿದ್ದು, ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.

ರೈತರು ಮತ್ತು ಕೇಂದ್ರದ ಮೂರು ಸಚಿವರ ತಂಡದ ನಡುವೆ ಫೆ.8ರಂದು ಮೊದಲ ಸುತ್ತು ಮತ್ತು ಫೆ.12ರಂದು ಎರಡನೇ ಸುತ್ತಿನ ಮಾತುಕತೆ ನಡೆದಿತ್ತಾದರೂ ಅದು ವಿಫಲವಾಗಿತ್ತು. 

ಹೀಗಾಗಿ ಗುರುವಾರ ತಡರಾತ್ರಿವರೆಗೂ ಉಭಯ ಬಣಗಳು ಮುರನೇ ಸುತ್ತಿನ ಮಾತುಕತೆ ನಡೆಸಿವೆ. 5 ಗಂಟೆಗಳ ಕಾಲ ನಡೆದ ಮಾತುಕತೆ ಧನಾತ್ಮಕವಾಗಿ ಮುಕ್ತಾಯಗೊಂಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾತುಕತೆಯಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವ ಅರ್ಜುನ್‌ ಮುಂಡಾ, ಸೌಹಾರ್ದಯುತ ವಾತಾವರಣದಲ್ಲಿ ಮಾತುಕತೆ ನಡೆದಿದೆ. ಚರ್ಚೆ ಧನಾತ್ಮಕವಾಗಿತ್ತು. 

ಭಾನುವಾರ ಸಂಜೆ 6 ಗಂಟೆಗೆ ನಾವು ಮತ್ತೊಮ್ಮೆ ಒಂದಾಗಿ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.ಈ ನಡುವೆ ಮಾತುಕತೆ ಕುರಿತು ಪ್ರತಿಕ್ರಿಯಿಸಿರುವ ರೈತ ನಾಯಕ ಸರವಣ್‌ ಸಿಂಗ್‌ ಪಂಧೇರ್‌, ‘ ಬೆಳೆಗಳಿಗೆ ಬೆಲೆ ಖಾತ್ರಿಗೆ ಕಾನೂನಿನ ಬದ್ಧತೆ ನೀಡುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದೇವೆ. 

ಆದರೆ ಬೆಲೆ ಖಾತ್ರಿ ವಿಷಯದಲ್ಲಿ ನಮಗೆ ಇನ್ನಷ್ಟು ಸಮಯ ಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಮಾತುಕತೆ ಫಲಪ್ರದವಾಗಬೇಕು ಮತ್ತು ಸಂಘರ್ಷ ನಿಲ್ಲಬೇಕು ಎಂಬುದು ನಮ್ಮ ನಿಲುವು. 

ಇಲ್ಲದೇ ಹೋದಲ್ಲಿ ದೆಹಲಿ ಚಲೋ ನಡೆಸುವ ನಿರ್ಧಾರಕ್ಕೆ ನಾವು ಬದ್ಧರಾಗಿರಲಿದ್ದೇವೆ’ ಎಂದು ಹೇಳಿದ್ದಾರೆ.ಇದೇ ವೇಳೆ ಗಡಿ ಜಿಲ್ಲೆಗಳಲ್ಲಿ ಇಂಟರ್ನೆಟ್‌ ಬಂದ್‌, ರೈತರ ಮೇಲೆ ಅಶ್ರುವಾಯು ಸಿಡಿತದ ಘಟನೆಗಳ ಬಗ್ಗೆ ಸಂಘಟನೆಗಳು ಸಭೆಯಲ್ಲಿ ಕೇಂದ್ರದ ಗಮನ ಸೆಳೆದವು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ