ಚಂಡೀಗಢ: ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ‘ದೆಹಲಿ ಚಲೋ’ ಘೋಷಿಸಿರುವ ರೈತರು ಬುಧವಾರದಿಂದ ತಮ್ಮ ಹೋರಾಟ ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಪಂಜಾಬ್‌ನೊಂದಿಗೆ ಹೊಂದಿಕೊಂಡಿರುವ ಹರ್ಯಾಣದ ಶಂಭು, ಖನೌರಿ, ದೆಹಲಿ- ಹರ್ಯಾಣದ ಟಿಕ್ರಿ, ಸಿಂಘೂ ಮತ್ತು ಉತ್ತರಪ್ರದೇಶಕ್ಕೆ ಹೊಂದಿಕೊಂಡ ಘಾಜಿಪುರ್ ಗಡಿಯಲ್ಲಿ ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಈ ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಅರ್ಧಭಾಗ ಮುಚ್ಚಿ ಕಣ್ಗಾವಲು ಹೆಚ್ಚಿಸಲಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ದೆಹಲಿ ಮತ್ತು ಹರ್ಯಾಣ ಪೊಲೀಸರು ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಮತ್ತೆ ದಿಲ್ಲಿ ಚಲೋ: ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಪಂಜಾಬ್ ಮತ್ತು ಹರ್ಯಾಣದ ಶಂಭು ಮತ್ತು ಖನೌರಿ ಗಡಿಯಲ್ಲೇ ಬೀಡುಬಿಟ್ಟಿದ್ದ ಸಾವಿರಾರು ರೈತರು ಬುಧವಾರ ಮತ್ತೆ ತಮ್ಮ ದೆಹಲಿ ಚಲೋ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಕೇಂದ್ರ ಸರ್ಕಾರ ಬೇಳೆಕಾಳುಗಳು, ಜೋಳ ಹಾಗೂ ಹತ್ತಿ ಮತ್ತಿತರೆ ಬೆಳೆಗಳಿಗೆ ಮಾತ್ರ ಖರೀದಿ ಗ್ಯಾರಂಟಿ ನೀಡಿದೆ. ಆದರೆ ಕನಿಷ್ಠ ಬೆಂಬಲ ಬೆಲೆ ವ್ಯಾಪ್ತಿಗೆ ಬರುವ ಎಲ್ಲಾ 23 ಬೆಳೆಗಳಿಗೂ ಇದೇ ಖಾತರಿ ಸಿಗುವವರೆಗೂ ಹೋರಾಟ ನಿಲ್ಲದು ಎಂದು ಕೇಂದ್ರದ ಆಫರ್ ತಿರಸ್ಕರಿಸಿದ್ದ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಬುಧವಾರದಿಂದ ಮತ್ತೆ ದೆಹಲಿಗೆ ಪ್ರತಿಭಟನೆ ಕೊಂಡೊಯ್ಯುವ ಯತ್ನ ಮಾಡಲಿದ್ದಾರೆ.
ಬೇಡಿಕೆ ಒಪ್ಪಿಕೊಳ್ಳಿ: ಈ ನಡುವೆ ‘ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಒಪ್ಪಬೇಕು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನಶ್ಶಕ್ತಿ ಇದ್ದರೆ, ದಿನಪೂರ್ತಿ ಸಂಸತ್ ಕಲಾಪ ನಡೆಸಿ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿ ಮಾಡಬೇಕು.
ಈಗಿರುವ ಪ್ರಧಾನಿಯನ್ನು ಅತ್ಯಂತ ಶಕ್ತಿಶಾಲಿ ಪ್ರಧಾನಿ ಎಂದು ಬಿಜೆಪಿ ಹೇಳುತ್ತದೆ. ಅದು ನಿಜವೇ ಆಗಿದ್ದರೆ, ರೈತರ ಶೇ.80ರಷ್ಟು ಸಾಲ ಮನ್ನಾ ಮಾಡುವ ಮೂಲಕ ಇದನ್ನು ನಿರೂಪಿಸಬೇಕು’ ಎಂದು ರೈತ ಮುಖಂಡ ಸರವಣ ಸಿಂಗ್ ಪಂಧೇರ್ ಹೇಳಿದ್ದಾರೆ.
ಖಜಾನೆಗೆ ಹೊರೆ ಎಂಬುದು ಸುಳ್ಳು: ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡುವುದರಿಂದ ಸರ್ಕಾರದ ಖಜಾನೆಗೆ ನಷ್ಟವಾಗುತ್ತದೆ ಎಂಬುದು ಸುಳ್ಳು. ಅದರ ಬದಲಿಗೆ ರೈತರಿಂದ ದೇಶದ ಜಿಡಿಪಿ ಬೆಳವಣಿಗೆಯಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
177 ಜಾಲತಾಣಗಳಿಗೆ ತಾತ್ಕಾಲಿಕ ತಡೆ: ಈ ನಡುವೆ ರೈತರ ಪ್ರತಿಭಟನೆ ಜೊತೆ ನಂಟು ಹೊಂದಿದ್ದ 177 ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ವೆಬ್‌ಲಿಂಕ್‌ಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಸೂಚನೆ ಅನ್ವಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.