ಅಮೆರಿಕ : ಪ್ಯಾಲೆಸ್ತೀನ್‌ ಬೆಂಬಲಿಗನ ‘ಬೆಂಕಿ ದಾಳಿ’

KannadaprabhaNewsNetwork |  
Published : Jun 03, 2025, 12:53 AM ISTUpdated : Jun 03, 2025, 04:21 AM IST
ದಾಳಿ | Kannada Prabha

ಸಾರಾಂಶ

 ಪ್ಯಾಲೆಸ್ತೀನ್‌ ಬೆಂಬಲಿತನೊಬ್ಬ ಬೆಂಕಿ ಉಗಳುವ ಸ್ಪ್ರೇ ಬಳಸಿ ನಡೆಸಿದ ದಾಳಿಗೆ 8 ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಬೌಲ್ಡರ್‌ನ ಖ್ಯಾತ ಪರ್ಲ್‌ ಸ್ಟ್ರೀಟ್‌ನಲ್ಲಿ ನಡೆದಿದೆ.  

ಬೌಲ್ಡರ್ (ಅಮೆರಿಕ): ಗಾಜಾಪಟ್ಟಿಯ ಮೇಲೆ ಇಸ್ರೇಲ್‌ ತನ್ನ ದಾಳಿಯನ್ನು ತೀವ್ರಗೊಳಿಸಿರುವ ಹೊತ್ತಿನಲ್ಲೇ, ಪ್ಯಾಲೆಸ್ತೀನ್‌ ಬೆಂಬಲಿತನೊಬ್ಬಬೆಂಕಿ ಉಗಳುವ ಸ್ಪ್ರೇ ಬಳಸಿ ನಡೆಸಿದ ದಾಳಿಗೆ 8 ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಬೌಲ್ಡರ್‌ನ ಖ್ಯಾತ ಪರ್ಲ್‌ ಸ್ಟ್ರೀಟ್‌ನಲ್ಲಿ ನಡೆದಿದೆ. ದಾಳಿಕೋರನನ್ನು ಬಂಧಿಸಲಾಗಿದೆ.

ಗಾಜಾದಲ್ಲಿರುವ ಇಸ್ರೇಲಿ ಒತ್ತೆಯಾಳುಗಳ ಸ್ಥಿತಿಯತ್ತ ಸಾರ್ವಜನಿಕರ ಗಮನ ಸೆಳೆಯಲು ಒಟ್ಟುಗೂಡಿದ್ದ ‘ರನ್‌ ಫಾರ್‌ ದೇರ್‌ ಲೈಫ್ಸ್‌’ ಹೆಸರಿನ ಗುಂಪಿನ ಮೇಲೆ ಆರೋಪಿ ಮೊಹಮ್ಮದ್ ಸಬ್ರಿ ಸೊಲಿಮನ್( 45) ಏಕಾಏಕಿ ಬೆಂಕಿ ಹೊತ್ತಿಕೊಳ್ಳುವ ಸ್ಪ್ರೇ ಹಿಡಿದು ದಾಳಿ ನಡೆಸಿದ್ದಲ್ಲದೆ, ಬೆಂಕಿಕಾರಕ ವಸ್ತುವೊಂದನ್ನೂ ಜನರ ಮೇಲೆ ಎಸೆದಿದ್ದಾನೆ. ಇದರಿಂದ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಗಾಯಾಳುಗಳೆಲ್ಲ 52ರಿಂದ 88 ವಯಸ್ಸಿನವರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊಹಮ್ಮದ್‌ನನ್ನು ಕೂಡಲೇ ಬಂಧಿಸಿ ಜೈಲಿಗಟ್ಟಲಾಗಿದೆ. ಅತ್ತ ಎಫ್‌ಬಿಐ ಅಧಿಕಾರಿಗಳು ಇದು ಉಗ್ರಕೃತ್ಯವೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಜತೆಗೆ, ನಗರದ ಧಾರ್ಮಿಕ ಸ್ಥಳಗಳ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಘಟನೆ ವೇಳೆ ಸೆರೆಯಾದ ದೃಶ್ಯದಲ್ಲಿ, ಗುಂಪಿನ ಮೇಲೆ ದಾಳಿ ನಡೆಸುತ್ತಿದ್ದಾಗ ಆರೋಪಿಗೂ ಬೆಂಕಿ ಹೊತ್ತಿಕೊಂಡಿದ್ದು, ಕೂಡಲೇ ಆತ ತೊಟ್ಟಿದ್ದ ಶರ್ಟ್‌ಅನ್ನು ಬಿಚ್ಚಿಹಾಕಿದ್ದ. ಬಳಿಕ ಆತ ನೆಲದ ಮೇಲೆ ಬಿದ್ದಿದ್ದು, ಬಂಧನದ ವೇಳೆಯೂ ಪ್ರತಿರೋಧ ಒಡ್ಡಲಿಲ್ಲ. 

ಶಶಿ ತರೂರ್‌ ಪ್ರತಿಕ್ರಿಯೆ:

ಪಾಕಿಸ್ತಾನದ ಉಗ್ರವಾದವನ್ನು ಬಯಲಿಗೆಳೆಯಲು ನಿಯೋಗದೊಂದಿಗೆ ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಬೌಲ್ಡರ್‌ನಲ್ಲಿ ನಡೆದ ದಾಳಿಗೆ ಪ್ರತಿಕ್ರಿಯಿಸಿದ್ದಾರೆ ‘ದಾಳಿಯಿಂದ ಜೀವಹಾನಿಯಾಗಿಲ್ಲ ಎಂಬುದೇ ಸಮಾಧಾನ. ನಮ್ಮ ದೇಶಗಳಲ್ಲಿ (ಭಾರತ ಮತ್ತು ಅಮೆರಿಕದಲ್ಲಿ) ಭಯೋತ್ಪಾದನೆಗೆ ಸ್ಥಾನವಿಲ್ಲ ಎಂಬ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ಅಭಿಪ್ರಾಯವೇ ನಮ್ಮದು ಕೂಡ’ ಎಂದರು.

ಛತ್ತೀಸ್‌ಗಢದಲ್ಲಿ 6 ಕುಖ್ಯಾತರು ಸೇರಿ 16 ನಕ್ಸಲರ ಶರಣಾಗತಿ 

ಸುಕ್ಮಾ: ನಕ್ಸಲ್ ಮುಕ್ತಕ್ಕೆ ಪಣ ತೊಟ್ಟಿರುವ ಛತ್ತೀಸ್‌ಗಢ ಮತ್ತೊಂದು ಮಹತ್ವದ ಯಶಸ್ಸು ಸಾಧಿಸಿದ್ದು, ತಲೆಗೆ 25 ಲಕ್ಷ ರು. ಇನಾಮು ಹೊಂದಿದ್ದ 6 ಮಂದಿ ಸೇರಿದಂತೆ 16 ಮಾವೋವಾದಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಈ ಮೂಲಕ ಇಲ್ಲಿನ ಕೆರ್ಲಪೆಂಡಾ ಗ್ರಾಮ ನಕ್ಸಲ್ ಮುಕ್ತ ಪ್ರದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಿಆರ್‌ಎಫ್‌ ಮತ್ತು ಪೊಲೀಸರ ಮುಂದೆ ಶರಣಾದ 16 ಮಂದಿ ನಕ್ಸಲರ ಪೈಕಿ 9 ಮಂದಿ ಸುಕ್ಮಾ ಜಿಲ್ಲೆಯ ಕೆರ್ಲಪೆಂಡಾ ಗ್ರಾಮಕ್ಕೆ ಸೇರಿದವರು. ಈ ಶರಣಾಗತಿಯೊಂದಿಗೆ ಗ್ರಾಮ ನಕ್ಸಲ್ ಮುಕ್ತ ಗ್ರಾಮ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಗ್ರಾಮ ಸರ್ಕಾರದ ಯೋಜನೆಗಳ ಪ್ರಕಾರ ಅಭಿವೃದ್ಧಿಗೆ 1 ಕೋಟಿ ರು. ಅನುದಾನ ಪಡೆದಿದೆ.ಶರಣಾದ ನಕ್ಸಲರ ಪೈಕಿ 6 ಜನರ ಪತ್ತೆಗೆ ಸರ್ಕಾರ 25 ಲಕ್ಷ ರು. ಬಹುಮಾನ ಘೋಷಿಸಿತ್ತು. 16 ಮಾವೋವಾದಿಗಳ ಸರ್ಕಾರ 50 ಸಾವಿರ ರು. ವಿಶೇಷ ಅನುದಾನ ಘೋಷಿಸಿದೆ. ಕಳೆದ ವರ್ಷ ಛತ್ತೀಸ್‌ಗಢದಲ್ಲಿ 792 ನಕ್ಸಲರು ಶರಣಾಗತಿಯಾಗಿದ್ದರು.

ಅಯೋಧ್ಯೆ: 8 ದೇವತೆಗಳ ಪ್ರಾಣಪ್ರತಿಷ್ಠೆ ಇಂದು ಶುರು

ಅಯೋಧ್ಯೆ: ಇಲ್ಲಿನ ಐತಿಹಾಸಿಕ ರಾಮಮಂದಿರದ ಆವರಣದಲ್ಲಿ 8 ದೇವತೆಗಳ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮವು ಮಂಗಳವಾರ ಆರಂಭವಾಗಲಿದ್ದು, ಜೂ.5ರ ವರೆಗೆ ನಡೆಯಲಿದೆ. ಜೂ.5ರಂದು ರಾಮ ದರ್ಬಾರ್‌ ಹಾಲ್‌ ಕೂಡ ಉದ್ಘಾಟನೆಯಾಗಲಿದೆ.ಈ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮಾಹಿತಿ ನೀಡಿದ್ದು, ‘ಜೂ.5ರಂದು ಬೆಳಗ್ಗೆ 11.25ಕ್ಕೆ ಪ್ರಾಣಪ್ರತಿಷ್ಠಾಪನೆ ಸಂಪನ್ನವಾಗಲಿದೆ. ಸಿಎಂ ಯೋಗಿ ಆದಿತ್ಯನಾಥ್‌ ಅವರು ಕೂಡ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇದು ಸಾರ್ವಜನಿಕ ಸಭೆಯಲ್ಲ. ಬದಲಿಗೆ ಪೂಜಾ ಕೇಂದ್ರಿತವಾಗಿರಲಿದೆ. ದೇಶದ ವಿವಿಧ ಕಡೆಯಿಂದ ಆಗಮಿಸುವ 101 ವೈದಿಕರು ಸಾಂಪ್ರದಾಯಿಕ ವೈದಿಕ ಶೈಲಿಯಲ್ಲಿ ಆಚರಣೆಗಳನ್ನು ನೆರವೇರಿಸಲಿದ್ದಾರೆ’ ಎಂದರು.ಅತ್ತ, ರಾಮಮಂದಿರದ ಗೋಪುರಕ್ಕೆ ಚಿನ್ನ ಲೇಪನದ ಕಾರ್ಯವೂ ನಡೆಯುತ್ತಿದೆ.

ಬಡ್ಡಿ ದರ ಮತ್ತೆ ಶೇ.0.5ರಷ್ಟು ಇಳಿಕೆ ಸಾಧ್ಯತೆ: ಶುಕ್ರವಾರ ಘೋಷಣೆ?

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ , ಶುಕ್ರವಾರ ನಡೆಯಲಿರುವ ತನ್ನ ಜೂನ್‌ ತ್ರೈಮಾಸಿಕ ವಿತ್ತೀಯ ನೀತಿ ಸಭೆಯಲ್ಲಿ ರೆಪೋ ದರವನ್ನು (ಬಡ್ಡಿದರ) ಶೇ.0.50ರಷ್ಡು ಕಡಿತಗೊಳಿಸುವ ಸಾಧ್ಯತೆ ಇದೆ.ದೇಶದಲ್ಲಿನ ಹಣದುಬ್ಬರವು ಆರ್‌ಬಿಐನ ಮಿತಿಯಾದ ಶೇ.4ಕ್ಕಿಂತ ಕಡಿಮೆ ಇರುವ ಕಾರಣ ಈ ಬಾರಿ ಜನರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಬಡ್ಡಿದರ ಇಳಿಸಿದ್ದಲ್ಲಿ, ಈ ವರ್ಷ ಶೇ.1ರಷ್ಟು ಬಡ್ಡಿದರವನ್ನು ಆರ್‌ಬಿಐ ಇಳಿಸಿದಂತಾಗುತ್ತದೆ ಎಂದು ಎಸ್‌ಬಿಐ ವರದಿ ಹೇಳಿದೆ.

ಜೂ.4-6ರವರೆಗೆ ಆರ್‌ಬಿಐ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ನಡೆವ ವಿತ್ತೀಯ ನೀತಿ ಸಮಿತಿ ಸಭೆ ಬಳಿಕ ಬಡ್ಡಿದರದ ಕುರಿತು ಮಾಹಿತಿ ಹೊರಬೀಳಲಿದೆ. ಈ ಹಿಂದೆ ಫೆಬ್ರವರಿ ಮತ್ತು ಏಪ್ರಿಲ್‌ನಲ್ಲಿ ಆರ್‌ಬಿಐ ಸತತ 2 ಬಾರಿಯೂ ಶೇ.0.25ರಷ್ಟು ಬಡ್ಡಿದರ ಇಳಿಸಿತ್ತು.

ಈಶಾನ್ಯ ಮಳೆ: ಅಸ್ಸಾಂನಲ್ಲಿ 3.6 ಲಕ್ಷ ಜನ ಅತಂತ್ರ

ಇಟಾನಗರ್‌/ಗ್ಯಾಂಗ್ಟಾಕ್‌/ಗುವಾಹಟಿ: ಈಶಾನ್ಯದ ಸಪ್ತ ಸಹೋದರಿ ರಾಜ್ಯಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಅದು ಸೃಷ್ಟಿಸುತ್ತಿರುವ ಅವಾಂತರಗಳು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ.

ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯಗಳಲ್ಲಿ ಮಳೆ ಸಂಬಂಧಿತ ಸಮಸ್ಯೆಗಳಿಂದ ಮತ್ತೆ ಸಾವುಗಳು ಸಂಭವಿಸಿದ್ದು, ಲಕ್ಷಾಂತರ ಮಂದಿಗೆ ನೆಲೆಯಿಲ್ಲದಂತಾಗಿದೆ.ಅಸ್ಸಾಂನಲ್ಲಿ 3.64 ಲಕ್ಷ ಬಾಧಿತರು:ಅಸ್ಸಾಂನ 19 ಜಿಲ್ಲೆಗಳಲ್ಲಿ 3.64 ಲಕ್ಷ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಬ್ರಹ್ಮಪುತ್ರ, ಬರಾಕ್‌ ಮತ್ತು ಅವುಗಳ ಉಪನದಿಗಳು ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ಕಾರಣ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನೆರೆರಾಜ್ಯಗಳಿಂದಲೂ ನೀರು ಹರಿದುಬರುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ. ರಾಜ್ಯದಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಈವರೆಗೆ ರಾಜ್ಯದಲ್ಲಿ 8 ಸಾವುಗಳು ಸಂಭವಿಸಿವೆ.

ಅರುಣಾಚಲದಲ್ಲಿ 1 ಸಾವು:ಇಲ್ಲಿನ ಪ್ರಮುಖ ನದಿಗಳೆಲ್ಲ ಒಡಲು ತುಂಬಿಕೊಂಡು ಅಪಾಯದ ಮಟ್ಟವನ್ನೂ ಮೀರಿ ಹರಿಯುತ್ತಿವೆ. ಹಲವು ಸೇತುವೆಗಳಿಗೂ ಹಾನಿಯಾಗಿದೆ. ಲೋಹಿತ್‌ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸೋಮವಾರ ಒಬ್ಬರು ಬಲಿಯಾಗಿದ್ದು, ಈವರೆಗೆ ರಾಜ್ಯದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 11 ಆಗಿದೆ.

23 ಜಿಲ್ಲೆಗಳ 156 ಗ್ರಾಮಗಳ 938 ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ರಾತ್ರಿ ಹೊತ್ತು ಅಪಾಯಕಾರಿ ಪ್ರದೇಶಗಳಲ್ಲಿ ಸಂಚರಿಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ರಾಜ್ಯಪಾಲರು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.ಸಿಕ್ಕಿಂನಲ್ಲಿ 3 ಯೋಧರು ಬಲಿ:ಛತೆನ್ ಎಂಬಲ್ಲಿ ಭಾನುವಾರ ಸಂಜೆ ಭೂಕುಸಿತ ಸಂಭವಿಸಿದ್ದು, ಮಿಲಿಟರಿ ಕ್ಯಾಂಪ್‌ನಲ್ಲಿದ್ದ 3 ಯೋಧರು ಸಾವನ್ನಪ್ಪಿದ್ದಾರೆ. ಅಂತೆಯೇ, 6 ಸೈನಿಕರು ಕಾಣೆಯಾಗಿದ್ದಾರೆ. ಇನ್ನೂ ನಾಲ್ವರನ್ನು ರಕ್ಷಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಕಾಣೆಯಾದವರಿಗಾಗಿ ಹುಡುಕಾಟ ನಿರಂತರವಾಗಿ ನಡೆಯುತ್ತಿದೆ.

ಭಾನುವಾರ ಪ್ರವಾಸಿಗರಿದ್ದ ವಾಹನವೊಂದು ನದಿಗೆ ಬಿದ್ದು ಒಬ್ಬರು ಸಾವನ್ನಪ್ಪಿ, 8 ಜನ ಕಾಣೆಯಾಗಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ