ದೆಹಲಿಯಲ್ಲಿ ಮಕ್ಕಳ ಆಸ್ಪತ್ರೆಗೆ ಬೆಂಕಿ ಬಿದ್ದು, ಕನಿಷ್ಠ 7 ಮಕ್ಕಳು ಸಾವನ್ನಪ್ಪಿದ್ದಾರೆ.
ನವದೆಹಲಿ: ದೆಹಲಿಯಲ್ಲಿ ಮಕ್ಕಳ ಆಸ್ಪತ್ರೆಗೆ ಬೆಂಕಿ ಬಿದ್ದು, ಕನಿಷ್ಠ 7 ಮಕ್ಕಳು ಸಾವನ್ನಪ್ಪಿದ್ದಾರೆ. 12 ಮಕ್ಕಳನ್ನು ಆಸ್ಪತ್ರೆಯಿಂದ ರಕ್ಷಿಸಲಾಗಿದೆ. ಪೂರ್ವ ದೆಹಲಿಯ ವಿವೇಕ್ ವಿಹಾರ ಪ್ರದೇಶದಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಈ ದುರಂತ ಸಂಭವಿಸಿದೆ.
ಅಗ್ನಿ ಶಾಮಕ ಸಿಬ್ಬಂದಿ ನೀಡಿದ ಮಾಹಿತಿ ಪ್ರಕಾರ, ರಾತ್ರಿ 11.32ರ ಸುಮಾರಿಗೆ ಅವರಿಗೆ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದ ಬಗ್ಗೆ ಕರೆ ಬಂದಿದೆ. ಆಸ್ಪತ್ರೆಯ ಮಕ್ಕಳ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ 16 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿವೆ. ಆದರೂ ದುರಾದೃಷ್ಟವಶಾತ್ 7 ಮಕ್ಕಳು ಸಾವನ್ನಪ್ಪಿವೆ. 12 ಮಕ್ಕಳನ್ನು ಘಟನಾ ಸ್ಥಳದಿಂದ ರಕ್ಷಣೆ ಮಾಡಲಾಗಿದೆ.
ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, 12 ಮಕ್ಕಳನ್ನು ಸ್ಥಳದಿಂದ ರಕ್ಷಿಸಲಾಗಿತ್ತು. ಆದರೆ ಅವರಲ್ಲಿ 7 ಮಕ್ಕಳು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ 5 ಮಕ್ಕಳಿಗೆ ಬೇರೆಡೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈ ಅಗ್ನಿ ಅನಾಹುತಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ, ಘಟನೆ ಸಂಬಂಧ ಆಸ್ಪತ್ರೆ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಅಗ್ನಿ ಅನಾಹುತದಲ್ಲಿ ಪುಟ್ಟ ಮಕ್ಕಳು ಪ್ರಾಣ ಕಳೆದುಕೊಂಡಿರುವುದಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿಷಾದ ವ್ಯಕ್ತಪಡಿಸಿದ್ದು,ಇದು ಹೃದಯ ಹಿಂಡುತ್ತಿದೆ ಎಂದು ಬೇಸರಿಸಿದ್ದಾರೆ. ಘಟನೆಗೆ ಏನು ಕಾರಣ ಎಂಬುದನ್ನು ತನಿಖೆ ನಡೆಸಲಾಗುವುದು, ಹಾಗೂ ಈ ದುರಂತಕ್ಕೆ ಜವಾಬ್ದಾರರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.