ಭಾರತ-ಪಾಕ್‌ ನಡುವಿನ ಕದನದಲ್ಲಿ5 ಯುದ್ಧ ವಿಮಾನ ನಷ್ಟ : ಟ್ರಂಪ್‌

KannadaprabhaNewsNetwork |  
Published : Jul 20, 2025, 01:15 AM ISTUpdated : Jul 20, 2025, 04:51 AM IST
ಟ್ರಂಪ್ | Kannada Prabha

ಸಾರಾಂಶ

ಪಹಲ್ಗಾಂ ದಾಳಿ ಬಳಿಕ ನಡೆದ ಭಾರತ ಮತ್ತು ಪಾಕ್‌ ನಡುವಿನ ಸಂಘರ್ಷದಲ್ಲಿ 4-5 ಯುದ್ಧವಿಮಾನಗಳು ನಾಶವಾಗಿವೆ ಎಂದು ಹೇಳಿ ಇದೀಗ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಹೇಳಿದ್ದಾರೆ. ಆದರೆ  ಸ್ಪಷ್ಟಪಡಿಸಿಲ್ಲ.

 ನ್ಯೂಯಾರ್ಕ್‌/ವಾಷಿಂಗ್ಟನ್‌ :  ಪಹಲ್ಗಾಂ ದಾಳಿ ಬಳಿಕ ನಡೆದ ಭಾರತ ಮತ್ತು ಪಾಕ್‌ ನಡುವಿನ ಸಂಘರ್ಷದಲ್ಲಿ 4-5 ಯುದ್ಧವಿಮಾನಗಳು ನಾಶವಾಗಿವೆ ಎಂದು ಹೇಳಿ ಇದೀಗ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಹೇಳಿದ್ದಾರೆ. ಆದರೆ, ಪತನವಾದ ಆ 5 ವಿಮಾನಗಳು ಭಾರತದ್ದೋ, ಪಾಕಿಸ್ತಾನದ್ದೋ ಅಥವಾ ಎರಡೂ ದೇಶಗಳಿಗೆ ಸೇರಿದವುಗಳೇ ಎಂಬುದನ್ನು ಮಾತ್ರ ಸ್ಪಷ್ಟಪಡಿಸಿಲ್ಲ.

ಇದೇ ವೇಳೆ ಭಾರತ ಮತ್ತು ಪಾಕ್‌ ನಡುವಿನ ಕದನ ವಿರಾಮಕ್ಕೆ ತಮ್ಮ ಮಧ್ಯಪ್ರವೇಶವೇ ಕಾರಣ ಎಂದು ಅವರು 24ನೇ ಸಲ ಪುನರುಚ್ಚರಿಸಿದ್ದಾರೆ.

ವೈಟ್‌ಹೌಸ್‌ನಲ್ಲಿ ರಿಪಬ್ಲಿಕನ್‌ ಸೆನೆಟರ್‌ಗಳಿಗೆ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಮಾತನಾಡಿದ ಅವರು, ‘ಭಾರತ ಮತ್ತು ಪಾಕ್‌ ನಡುವೆ ತೀವ್ರ ಸಂಘರ್ಷ ನಡೆಯುತ್ತಿತ್ತು. ಹಲವು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ನನ್ನ ಪ್ರಕಾರ ಸುಮಾರು 4 ಅಥವಾ 5 ವಿಮಾನಗಳು ನಷ್ಟವಾಗಿತ್ತು. ಆದರೂ ಎರಡೂ ದೇಶಗಳು ಪರಸ್ಪರ ದಾಳಿ ಮುಂದುವರಿಸಿದ್ದವು. ಈ ಯುದ್ಧ ತೀವ್ರಗೊಂಡು ಅಪಾಯಕಾರಿ ಸ್ಥಿತಿ ತಲುಪಿತ್ತು. ಎರಡೂ ಅಣ್ವಸ್ತ್ರ ದೇಶಗಳು ಪರಸ್ಪರ ದಾಳಿ ನಡೆಸುವ ಆತಂಕವಿತ್ತು‘ ಎಂದರು.

‘ಆ ಸ್ಥಿತಿಯಲ್ಲಿ ನಾವು ವ್ಯಾಪಾರ ಒಪ್ಪಂದ ಮೂಲಕ ನಾವು ಯುದ್ಧ ನಿಲ್ಲಿಸಿದೆವು. ನೀವು ಇದೇ ರೀತಿ ಶಸ್ತ್ರಾಸ್ತ್ರಗಳನ್ನು(ಪರಮಾಣು ಅಸ್ತ್ರ ಆಗಿರಬಹುದು) ಪ್ರಯೋಗಿಸುತ್ತಲೇ ಇದ್ದರೆ, ನಿಮ್ಮ ಜತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ನಾವು ಹೇಳಿದೆವು’ ಎಂದು ತಿಳಿಸಿದರು.

ಇದೇ ವೇಳೆ ‘ಅಮೆರಿಕದ ಇತರೆ ಯಾವುದೇ ಸರ್ಕಾರಗಳು 8 ವರ್ಷಗಳಲ್ಲಿ ಸಾಧಿಸಲಾಗದ್ದನ್ನು ನಮ್ಮ ಸರ್ಕಾರ ಕೇವಲ 6 ತಿಂಗಳಲ್ಲೇ ಮಾಡಿದೆ. ಇದಕ್ಕಾಗಿ ನಾನು ಹೆಮ್ಮೆಪಡುತ್ತೇನೆ. ನಾವು ಅನೇಕ ಯುದ್ಧಗಳನ್ನು ನಿಲ್ಲಿಸಿದ್ದೇವೆ. ಅವೆಲ್ಲ ಗಂಭೀರ ಯುದ್ಧಗಳಾಗಿದ್ದವು’ ಎಂದು ಟ್ರಂಪ್‌ ಹೇಳಿಕೊಂಡರು.

ಟ್ರಂಪ್‌ ಹೇಳಿಕೆಗೇಕೆ ಮಹತ್ವ?:

ಟ್ರಂಪ್‌ ಹೇಳಿಕೆ, ಸಮರ ವಿಮಾನ ನಷ್ಟದ ವಿಷಯದಲ್ಲಿ ಮಹತ್ವ ಪಡೆದಿದೆ. ಭಾರತದ 5 ಯುದ್ಧವಿಮಾನ ಹೊಡೆದುರುಳಿಸಿದ್ದಾಗಿ ಪಾಕ್‌ ಹೇಳಿತ್ತಾದರೂ ಭಾರತ ಅದನ್ನು ತಳ್ಳಿಹಾಕಿತ್ತು.

ಇದಲ್ಲದೆ, ಭಾರತ ಮತ್ತು ಪಾಕ್‌ ನಡುವಿನ ಕದನ ವಿರಾಮ ಘೋಷಣೆಯಾದ ಬಳಿಕ ಅಂದರೆ ಮೇ 10ರ ನಂತರ ಈ ಯುದ್ಧ ನಿಲ್ಲಲು ತಮ್ಮ ಮಧ್ಯಸ್ಥಿಕೆಯೇ ಕಾರಣ ಎಂದು ಟ್ರಂಪ್‌ ಅನೇಕ ಬಾರಿ ಹೇಳಿಕೊಂಡಿದ್ದರು. ವ್ಯಾಪಾರ ಒಪ್ಪಂದ ಮುಂದಿಟ್ಟುಕೊಂಡು ಎರಡೂ ದೇಶಗಳ ನಡುವಿನ ಯುದ್ಧ ನಿಲ್ಲಿಸಿದ್ದಾಗಿ ಹೇಳಿದ್ದರು. ಆದರೆ ಭಾರತ ಮಾತ್ರ ಟ್ರಂಪ್‌ ವಾದವನ್ನು ತಿರಸ್ಕರಿಸುತ್ತಲೇ ಬಂದಿದೆ. ಪಾಕ್‌ ಮನವಿಯಂತೆ ಕದನ ವಿರಾಮದ ಪ್ರಸ್ತಾಪ ಒಪ್ಪಿದ್ದಾಗಿ ಹೇಳಿಕೊಂಡಿದೆ.

ಟ್ರಂಪ್‌ 24ನೇ ಕ್ಷಿಪಣಿಗೆ ಮೋದಿ ಉತ್ತರ ನೀಡಲಿ: ರಾಹುಲ್‌

ನವದೆಹಲಿ: ಭಾರತ ಮತ್ತು ಪಾಕ್‌ ನಡುವಿನ ಸಂಘರ್ಷಕ್ಕೆ ತಮ್ಮ ಮಧ್ಯಸ್ಥಿಕೆಯೇ ಕಾರಣ ಎಂಬ ಟ್ರಂಪ್‌ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್‌ ಕೇಂದ್ರ ಸರ್ಕಾರ ವಿರುದ್ಧ ತೀವ್ರ ಕಿಡಿಕಾರಿದೆ.

‘ಮಾನ್ಸೂನ್‌ ಅಧಿವೇಶನಕ್ಕೆ ಎರಡು ದಿನ ಬಾಕಿ ಇದೆ ಎನ್ನುವಾಗಲೇ ಟ್ರಂಪ್‌ ಕ್ಷಿಪಣಿ 24ನೇ ಬಾರಿ ಹಾರಿಸಲ್ಪಟ್ಟಿದೆ. ವ್ಯಾಪಾರ ಒಪ್ಪಂದದ ಮೂಲಕ ಯುದ್ಧ ನಿಲ್ಲಿಸಿದ ಹೇಳಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ. ಟ್ರಂಪ್‌ ಜತೆ ಆತ್ಮೀಯ ಸಂಬಂಧ ಹೊಂದಿರುವ ಮೋದಿ ಅವರು ಕಳೆದ 70 ದಿನಗಳಿಂದ ಕೇಳಿಬರುತ್ತಿರುವ ಈ ಹೇಳಿಕೆಗೆ ಸಂಸತ್ತಿನಲ್ಲಿ ಉತ್ತರ ನೀಡಬೇಕು’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಆಗ್ರಹಿಸಿದ್ದಾರೆ.

ಟಿಆರ್‌ಎಫ್‌ ಉಗ್ರರಿಗೆ ಪಾಕ್‌ ಬಹಿರಂಗ ಬೆಂಬಲ 

ನವದೆಹಲಿ: ಪಹಲ್ಗಾಂ ದಾಳಿ ಹಿಂದಿದ್ದ ಹಾಗೂ ಅಮೆರಿಕದಿಂದ ನಿಷೇಧಕ್ಕೆ ಒಳಗಾಗಿರುವ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಸಹ ಸಂಸ್ಥೆ ದಿ ರೆಸಿಸ್ಟನ್ಸ್‌ ಫ್ರಂಟ್‌ಗೆ (ಟಿಆರ್‌ಎಫ್‌) ಪಾಕ್‌ ಸರ್ಕಾರದ ಬಹಿರಂಗ ಬೆಂಬಲ ಇದೀಗ ಬಯಲಾಗಿದೆ.ಟಿಆರ್‌ಎಫ್‌ ಅನ್ನು ನಾವು ಉಗ್ರ ಸಂಘಟನೆ ಎಂದೇ ಭಾವಿಸಲ್ಲ, ಪಹಲ್ಗಾಂ ದಾಳಿ ಹಿಂದೆ ಟಿಆರ್‌ಎಫ್‌ ಪಾತ್ರ ಕುರಿತು ದಾಖಲೆಯಿದ್ದರೆ ನೀಡಿ ಎಂದು ಪಾಕ್‌ ಉಪಪ್ರಧಾನಿ, ವಿದೇಶಾಂಗ ಸಚಿವ ಇಶಾಕ್‌ ದಾರ್‌ ಸಂಸತ್ತಿನಲ್ಲೇ ಆಗ್ರಹಿಸಿರುವ ವಿಚಾರ ಇದೀಗ ಬಯಲಾಗಿದೆ.ಶುಕ್ರವಾರವಷ್ಟೇ ಅಮೆರಿಕವು ಟಿಆರ್‌ಎಫ್‌ ಅನ್ನು ವಿದೇಶಿ ಉಗ್ರ ಸಂಘಟನೆ ಎಂದು ಘೋಷಿಸಿದೆ. 

ಜತೆಗೆ, ಪಹಲ್ಗಾಂ ದಾಳಿ ಹಿಂದೆ ಟಿಆರ್‌ಎಫ್‌ ಕೈವಾಡ ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ಪಾಕ್‌ ಉಪಪ್ರಧಾನಿಯೇ ಟಿಆರ್‌ಎಫ್‌ ಅನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ.‘ಪಹಲ್ಗಾಂ ದಾಳಿ ಖಂಡಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿಕೆಯಲ್ಲಿ ಟಿಆರ್‌ಎಫ್‌ನ ಉಲ್ಲೇಖವನ್ನು ಪಾಕ್‌ ಒತ್ತಡದ ಹಿನ್ನೆಲೆಯಲ್ಲೇ ಕೈಬಿಡಲಾಯಿತು. ಆಗ ನಮಗೆ ವಿದೇಶಗಳಿಂದ ಸಾಕಷ್ಟು ಕರೆಗಳು ಬಂತು. ಆದರೆ, ನಾವು ಮಾತ್ರ ಅದನ್ನು ಒಪ್ಪಿಕೊಳ್ಳಲಿಲ್ಲ. ಹೇಳಿಕೆಯಲ್ಲಿ ಟಿಆರ್‌ಎಫ್‌ ಹೆಸರು ತೆಗೆದುಹಾಕುವ ಮೂಲಕ ನಾವು ಮೇಲುಗೈ ಸಾಧಿಸಿದೆವು’ ಎಂದು ದಾರ್‌ ಹೇಳಿಕೊಂಡಿದ್ದಾರೆ.++++ಟಿಆರ್‌ಎಫ್‌ ಉಗ್ರ ಸಂಘಟನೆ ಬಹಿರಂಗವಾಗಿಯೇ ಪಹಲ್ಗಾಂ ದಾಳಿ ಹೊಣೆ ಹೊತ್ತುಕೊಂಡಿತ್ತು. ಈ ಘಟನೆ ಭಾರತ-ಪಾಕ್‌ ಸಂಘರ್ಷಕ್ಕೆ ಕಾರಣವಾಗುತ್ತಿದ್ದಂತೆ ಬಳಿಕ ಸಂಘಟನೆ ತನ್ನ ವರಸೆ ಬದಲಿಸಿತ್ತು.

ಸಂಸತ್ತಲ್ಲಿ ಟ್ರಂಪ್ ಹೇಳಿಕೆ ಪ್ರಸ್ತಾಪಕ್ಕೆ ಇಂಡಿಯಾ ಕೂಟ ನಿರ್ಧಾರ

ನವದೆಹಲಿ: ಸಂಸತ್‌ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಈ ವೇಳೆ ಪಹಲ್ಗಾಂ ಉಗ್ರ ದಾಳಿ, ಭಾರತ-ಪಾಕ್‌ ಕದನವಿರಾಮಕ್ಕೆ ಶ್ರಮಿಸಿದ್ದು ತಾವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪದೇ ಪದೇ ಹೇಳುತ್ತಿರುವುದು, ಬಿಹಾರದಲ್ಲಿನ ವಿವಾದಾತ್ಮಕ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ, ಕ್ಷೇತ್ರ ಮರುವಿಂಗಡಣೆ ಸೇರಿ 8 ಪ್ರಮುಖ ವಿಷಯ ಪ್ರಸ್ತಾಪಿಸಲು ವಿಪಕ್ಷಗಳ ಇಂಡಿಯಾ ಕೂಟ ನಿರ್ಣಯಿಸಿದೆ.ಶನಿವಾರ ಸಂಜೆ ಕೂಟದ 20 ಪಕ್ಷಗಳ ನಾಯಕರು ಪರಸ್ಪರ ವರ್ಚುವಲ್‌ ವಿಧಾನದಲ್ಲಿ ಸಭೆ ನಡೆಸಿ ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಪ್ರಮೋದ್ ತಿವಾರಿ ತಿಳಿಸಿದ್ದಾರೆ.ಇದೇ ವೇಳೆ, ವಿಪಕ್ಷಗಳು ಪ್ರಸ್ತಾಪಿಸಿದ ಈ ವಿಷಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಖುದ್ದು ಹಾಜರಿದ್ದು ಉತ್ತರಿಸಬೇಕು. ಪಹಲ್ಗಾಂ ಗುಪ್ತಚರ ವೈಫಲ್ಯ, ಟ್ರಂಪ್ ಅವರ ಮಧ್ಯಸ್ಥಿಕೆ ಹೇಳಿಕೆ ಬಗ್ಗೆ ಉತ್ತರಿಸಬೇಕು ಎಂದೂ ಇಂಡಿಯಾ ಕೂಟ ನಿರ್ಣಯ ಕೈಗೊಂಡಿದೆ.

ಇಂದು ಸರ್ವಪಕ್ಷ ಸಭೆ:ಅಧಿವೇಶನ ಹಿನ್ನೆಲೆಯಲ್ಲಿ ಭಾನುವಾರ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ.

PREV
Read more Articles on

Latest Stories

ಕೋಲ್ಕತಾ ಐಐಎಂನಲ್ಲಿ ರೇ* : ಬಾಗಲಕೋಟೆ ವಿದ್ಯಾರ್ಥಿಗೆ ಬೇಲ್‌
ದೇಶದ ಅನೇಕ ಕಡೆ ಭಾರಿ ಮಳೆ ಪ್ರವಾಹ ಪರಿಸ್ಥಿತಿ : ರೆಡ್ ಹಾಗೂ ಆರೆಂಜ್‌ ಅಲರ್ಟ್‌
ದೇಶದಲ್ಲಿ ಮೊದಲ ಬಾರಿಗೆ ಡಿಜಿಟಲ್‌ ಅರೆಸ್ಟ್‌ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟ