- 2ನೇ ಟೆಸ್ಟ್: ಮೊದಲ ಇನ್ನಿಂಗ್ಸಲ್ಲಿ ದ.ಆಫ್ರಿಕಾ 489 ರನ್ । ಕೊನೆ 4 ವಿಕೆಟ್‌ಗೆ 243 ರನ್ ಕಲೆಹಾಕಿದ ಬಾಲಂಗೋಚಿಗಳು
- ಭಾರತ ಮೂಲದ ಸೆನುರನ್ ಮುತ್ತುಸ್ವಾಮಿ 109, ಯಾನ್ಸನ್ 93 ರನ್ । 2ನೇ ದಿನಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 9 ರನ್ ಗುವಾಹಟಿ: ಟೇಲ್‌ಎಂಡರ್ಸ್ ಅಂದರೆ ಬಾಲಗೋಂಚಿ ಬ್ಯಾಟರ್‌ಗಳ ಸಾಹಸದಿಂದ ಭಾರತ ವಿರುದ್ಧ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 489 ರನ್‌ಗಳ ಬೃಹತ್ ಮೊತ್ತ ಕಲೆಹಾಕಿರುವ ದಕ್ಷಿಣ ಆಫ್ರಿಕಾ, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು ಈಗಾಗಲೇ ಗೆಲುವಿನ ಮೇಲೆ ಕಣ್ಣಿಟ್ಟಿದೆ.ಕೊನೆ 4 ವಿಕೆಟ್‌ಗೆ ಬರೋಬ್ಬರಿ 243 ರನ್ ಸೇರಿಸಿದ ದಕ್ಷಿಣ ಆಫ್ರಿಕಾ, ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮಂದ ಬೆಳಕಿನ ಕಾರಣ 2ನೇ ದಿನದಾಟವನ್ನು ನಿಗದಿತ ಸಮಯಕ್ಕಿಂತ ಕೊಂಚ ಮೊದಲೇ ಮುಕ್ತಾಯಗೊಳಿಸಿದಾಗ, ಭಾರತ 6.1 ಓವರಲ್ಲಿ ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿತ್ತು. ಇನ್ನೂ480 ರನ್ ಹಿನ್ನಡೆಯಲ್ಲಿದ್ದು, ಫಾಲೋ ಆನ್ ತಪ್ಪಿಸಿಕೊಳ್ಳಲು 280 ರನ್ ಕಲೆಹಾಕಬೇಕಿದೆ.
ಮೊದಲ ದಿನದಂತ್ಯಕ್ಕೆ 6 ವಿಕೆಟ್‌ಗೆ 247 ರನ್ ಗಳಿಸಿದ್ದ ದ.ಆಫ್ರಿಕಾಕ್ಕೆ, ಸೆನುರನ್ ಮುತ್ತುಸ್ವಾಮಿ ಹಾಗೂ ಕೈಲ್ ವೆರ್ರೆನಾ 2ನೇ ದಿನ ಆಸರೆಯಾದರು. ಇವರಿಬ್ಬರು ತಂಡದ ಮೊತ್ತವನ್ನು 300 ರನ್ ದಾಟಿಸಿದರು. 7ನೇ ವಿಕೆಟ್‌ಗೆ ಮೂಡಿಬಂದ 88 ರನ್ ಜೊತೆಯಾಟವನ್ನು ಜಡೇಜಾ ಮುರಿದಾಗ, ಭಾರತ ಸ್ವಲ್ಪ ನಿಟ್ಟುಸಿರುವ ಬಿಟ್ಟಿತು. ಕೀಪರ್ ವೆರ್ರೆನಾ 45 ರನ್ ಗಳಿಸಿ ಔಟಾದಾಗ ತಂಡದ ಮೊತ್ತ 334 ರನ್. ಆ ಬಳಿಕ ಕ್ರೀಸ್‌ಗಿಳಿದ ಮಾರ್ಕೊ ಯಾನ್ಸನ್ ಕೂಡ ಭಾರತೀಯರನ್ನು ಕಾಡಿದರು. ಮುತ್ತುಸ್ವಾಮಿ ಜೊತೆಗೂಡಿ, 8ನೇ ವಿಕೆಟ್‌ಗೆ 97 ರನ್ ಸೇರಿಸಿದರು.ಈ ನಡುವೆ, ಮುತ್ತುಸ್ವಾಮಿ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಧಾರದ ಮೇಲೆ ತಂಡಕ್ಕೆ ಆಯ್ಕೆಯಾಗಿದ್ದ ಮುತ್ತುಸ್ವಾಮಿ, ತಮ್ಮ ಆಯ್ಕೆ ಸಮರ್ಥಿಸಿಕೊಂಡರು. 206 ಎಸೆತಗಳನ್ನು ಎದುರಿಸಿದ ಸೆನುರನ್, 10 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ 109 ರನ್ ಗಳಿಸಿ ಔಟಾಗುವ ಹೊತ್ತಿಗೆ, ದ.ಆಫ್ರಿಕಾದ ಸ್ಕೋರ್ 400 ರನ್ ದಾಟಿತ್ತು.
ಸೆನುರನ್ ಔಟಾದ ಬಳಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಯಾನ್ಸನ್, 91 ಎಸೆತದಲ್ಲಿ 93 ರನ್ ಸಿಡಿಸಿದರು. ಅವರ ಇನ್ನಿಂಗ್ಸಲ್ಲಿ ಒಟ್ಟು 6 ಬೌಂಡರಿ, 7 ಸಿಕ್ಸರ್‌ಗಳಿದ್ದವು. ದ.ಆಫ್ರಿಕಾ ಮೊದಲ ಇನ್ನಿಂಗ್ಸಲ್ಲಿ 151.1 ಓವರ್ ಬ್ಯಾಟ್ ಮಾಡಿತು. ಭಾರತ ಪರ ಕುಲ್ದೀಪ್ 4, ಜಡೇಜಾ 2 ವಿಕೆಟ್ ಕಿತ್ತರು. ಸ್ಪಿನ್ನರ್‌ಗಳಿಗಿಂತ ಹೆಚ್ಚು ಓವರ್‌ಗಳನ್ನು ವೇಗಿಗಳು ಎಸೆಯಬೇಕಾಯಿತು. ಬೂಮ್ರಾ 32 ಹಾಗೂ ಸಿರಾಜ್ 30 ಓವರ್ ಬೌಲ್ ಮಾಡಿದರು. ಬೌಲಿಂಗ್ ಆಲ್ರೌಂಡರ್ ನಿತೀಶ್ ರೆಡ್ಡಿಗೆ ಕೇವಲ 6 ಓವರ್ ನೀಡಲಾಯಿತು.ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಪರ ಕ್ರೀಸ್‌ಗಿಳಿದ ಯಶಸ್ವಿ ಜೈಸ್ವಾಲ್ 7, ರಾಹುಲ್ 2 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. 3ನೇ ದಿನದಾಟದಲ್ಲಿ ಫಾಲೋ ಆನ್ ತಪ್ಪಿಸಿಕೊಳ್ಳುವುದು ಭಾರತದ ಮೊದಲ ಗುರಿಯಾಗಿರಲಿದೆ.
ಸ್ಕೋರ್: ದ.ಆಫ್ರಿಕಾ ಮೊದಲ ಇನ್ನಿಂಗ್ಸ್ 489/10 (ಮುತ್ತುಸ್ವಾಮಿ 109, ಯಾನ್ಸನ್ 93, ಕುಲ್ದೀಪ್ 4-115), ಭಾರತ (2ನೇ ದಿನದಂತ್ಯಕ್ಕೆ) 9/0==03ನೇ ಬಾರಿ
2017ರ ಜನವರಿ ಬಳಿಕ ಭಾರತ ತಂಡ ಇನ್ನಿಂಗ್ಸ್‌ವೊಂದರಲ್ಲಿ 150 ಓವರ್ ಫೀಲ್ಡ್ ಮಾಡಿದ್ದು ಇದು ಕೇವಲ 3ನೇ ಬಾರಿ. 02ನೇ ಆಟಗಾರಭಾರತ ವಿರುದ್ಧ ಟೆಸ್ಟ್ ಇನ್ನಿಂಗ್ಸಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಯಾನ್ಸನ್ ಜಂಟಿ ಮೊದಲ ಸ್ಥಾನ ಪಡೆದಿದ್ದಾರೆ. ಯಾನ್ಸನ್ 7 ಸಿಕ್ಸರ್ ಚಚ್ಚಿದ್ದರು. ಪಾಕ್‌ನ ಅಫ್ರಿದಿ ಸಹ 7 ಸಿಕ್ಸರ್ ಬಾರಿಸಿದ್ದರು. ಕೋಟ್..
ಕೋಲ್ಕತಾ ಪಿಚ್ ಬೇರೆ ರೀತಿ ಇತ್ತು. ಇದು (ಗುವಾಹಟಿ) ಪಿಚ್ ರಸ್ತೆ ರೀತಿ ಇದೆ. ಇಲ್ಲಿ ಬೌಲ್ ಮಾಡುವುದು ಸವಾಲಿನ ಕೆಲಸ. ಇದೇ ಕಾರಣಕ್ಕೆ ಟೆಸ್ಟ್ ಕ್ರಿಕೆಟ್ ಬಹಳ ವಿಶೇ ಷವಾದದ್ದು.- ಕುಲ್ದೀಪ್ ಯಾದವ್, ಭಾರತದ ಸ್ಪಿನ್ನರ್