ಪಿಟಿಐ ನವದೆಹಲಿ
ಎಲ್ಲ ನಾಗರಿಕರು ತಮ್ಮ ನಿತ್ಯ ಜೀವನದಲ್ಲಿ ಸಾಂವಿಧಾನಿಕ ಆದರ್ಶಗಳನ್ನು ಅಳವಡಿಕೊಳ್ಳಬೇಕು. ಮೂಲಭೂತ ಕರ್ತವ್ಯಗಳನ್ನು ಅನುಸರಿಸಿ ಮತ್ತು 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಿಸುವ ರಾಷ್ಟ್ರೀಯ ಗುರಿಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದ್ದಾರೆ.ಭಾರತ ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳು ಸಂದ ನಿಮಿತ್ತ ಹಳೆಯ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ‘ಸಂವಿಧಾನ ದಿವಸ್’ ಆಚರಣೆ ವೇಳೆ ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗವು ಸಾಮಾನ್ಯ ಜನರ ಜೀವನವನ್ನು ಉತ್ತಮಗೊಳಿಸಲು ಒಟ್ಟಾಗಿ ಕೆಲಸ ಮಾಡಬೇಕು’ ಎಂದರು.
‘ನಮ್ಮ ಸಂವಿಧಾನವು ಜೀವಂತ ಮತ್ತು ಪ್ರಗತಿಪರ ದಾಖಲೆಯಾಗಿದೆ. ನಮ್ಮ ಸಂವಿಧಾನದ ಮೂಲಕ, ನಾವು ಸಾಮಾಜಿಕ ನ್ಯಾಯ ಮತ್ತು ಅಂತರ್ಗತ ಅಭಿವೃದ್ಧಿಯ ಗುರಿಗಳನ್ನು ಸಾಧಿಸಿದ್ದೇವೆ’ ಎಂದು ಹರ್ಷಿಸಿದರು.ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸ್ಪೀಕರ್ ಓಂಪ್ರಕಾಶ್ ಧನಕರ್ ಮಾತನಾಡಿ, ‘ನಾವು ಪಂಥವನ್ನು ದೇಶಕ್ಕಿಂತ ಮೇಲಿಟ್ಟರೆ, ನಮ್ಮ ಸ್ವಾತಂತ್ರ್ಯ ಎರಡನೇ ಬಾರಿಗೆ ಅಪಾಯಕ್ಕೆ ತಳ್ಳಲ್ಪಡಲಿದೆ. ಇದಕ್ಕೆ ಯಾರೂ ಅವಕಾಶ ನೀಡಬಾರದು’ಎಂದು ಕರೆಯಿತ್ತರು.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಾತನಾಡಿ, ‘75 ವರ್ಷಗಳ ಹಿಂದೆ ಸಂವಿಧಾನದ ಅಂಗೀಕಾರಗೊಂಡಿತು. ಈ ದಿನದಂದು, ಈ ಪವಿತ್ರ ಕೊಠಡಿಯಲ್ಲಿ, ನಮ್ಮ ಸಂವಿಧಾನವನ್ನು ಅಂಗೀಕರಿಸಲಾಯಿತು, ಇದು ನಮ್ಮ ಪೂರ್ವಜರ ಸಮರ್ಪಣೆ, ತ್ಯಾಗ ಮತ್ತು ದೂರದೃಷ್ಟಿಗೆ ಸಾಕ್ಷಿ. ಜನಪ್ರತಿನಿಧಿಗಳು ಸದನದಲ್ಲಿ ನಮ್ಮ ಸಂವಿಧಾನ ಪ್ರತಿಪಾದಿಸಿರುವ ಆದರ್ಶಗಳನ್ನು ಎತ್ತಿಹಿಡಿಯುವಂಥ ಚರ್ಚೆ ಮಾಡಬೇಕು. ಈ ನಿಟ್ಟಿನಲ್ಲಿ ಶಪಥ ಮಾಡಬೇಕು ಎಂದು ಮನವಿ ಮಾಡಿದರು.---
75ನೇ ಸಂವಿಧಾನ ದಿನ ನಿಮಿತ್ತ ಅಂಚೆಚೀಟಿ ಬಿಡುಗಡೆನವದೆಹಲಿ: ಸಂವಿಧಾನ ಅಂಗೀಕಾರದ 75ನೇ ವರ್ಷಾಚರಣೆ ಸ್ಮರಣಾರ್ಥ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು, ಇದು ಭಾರತದ ಸಂವಿಧಾನವನ್ನು ಅಂಗೀಕರಿಸಿದ 75 ನೇ ವಾರ್ಷಿಕೋತ್ಸವಕ್ಕೆ ಸಮರ್ಪಿಸಲಾಗಿದೆ. ಈ ಸಂದರ್ಭದಲ್ಲಿ ಅವರು ಭಾರತದ ಸಂವಿಧಾನಕ್ಕೆ ಸಂಬಂಧಿಸಿದ 2 ಪುಸ್ತಕಗಳನ್ನು - ಸಂಸ್ಕೃತ ಮತ್ತು ಮೈಥಿಲಿ ಭಾಷೆಗಳಲ್ಲಿ ಬಿಡುಗಡೆ ಮಾಡಿದರು.
==ರಾಷ್ಟ್ರಪತಿಗೆ ರಾಹುಲ್ ಅಗೌರವ: ಬಿಜೆಪಿ
ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಸಂವಿಧಾನ ದಿನದ ಅಂಗವಾಗಿ ಸಂಸತ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ರಾಷ್ಟ್ರಪತಿ ಮುರ್ಮು ಅವರಿಂಗಿಂತ ಮೊದಲೇ ಕುಳಿತುಕೊಂಡಿದ್ದು, ಕಾರ್ಯಕ್ರಮ ಬಳಿಕ ಮುರ್ಮು ಅವರಿಗೆ ನಮಸ್ಕರಿಸಿದೇ ಹಾಗೆ ತೆರಳಿ ಉದ್ಧಟತನ ತೋರಿದ್ದಾರೆ ಎಂದು ವಿಡಿಯೋ ಹಂಚಿಕೊಂಡು ಬಿಜೆಪಿ ಆರೋಪಿಸಿದೆ.==
ರಾಷ್ಟ್ರಪತಿ ಭಾಷಣದಲ್ಲಿ ಜಾತ್ಯತೀತ ಪದ ಮಿಸ್: ಚರ್ಚಗೆ ಡಿಎಂಕೆ ಆಗ್ರಹನವದೆಹಲಿ: ಸಂವಿಧಾನ ದಿನದ ಪ್ರಯುಕ್ತ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಮಾಡಿದ ಭಾಷಣದಿಂದ ‘ಸಮಾಜವಾದಿ’, ‘ಜಾತ್ಯತೀತ’ ಪದಗಳನ್ನು ಕೈಬಿಡಲಾಗಿತ್ತು ಎಂದು ಡಿಎಂಕೆ ಆರೋಪಿಸಿದೆ. ಈ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾರಿಗೆ ಪತ್ರ ಬರೆದಿರುವ ಡಿಎಂಕೆ ನಾಯಕ ಟಿ.ಆರ್. ಬಾಲು, ‘ರಾಷ್ಟ್ರಪತಿಗಳ ಭಾಷಣವು ದೇಶದ ಜನರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಹರಡುವ ಉದ್ದೇಶ ಹೊಂದಿರುತ್ತದೆ. ಸಂವಿದಾನ ದಿನದಂದು ಮುರ್ಮು ಅವರು ಮಾಡಿದ ಭಾಷಣವು ಸರ್ಕಾರದಿಂದ ಸಿದ್ಧಪಡಿಸಿಲಾಗಿದ್ದು, ಅದರಲ್ಲಿ ಸಮಾಜವಾದಿ, ಜಾತ್ಯತೀತ ಪದಗಳನ್ನು ಸೇರಿಸಿರಲಿಲ್ಲ. ಈ ಬಗ್ಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಲು ಅನುವು ಮಾಡಿಕೊಡಬೇಕು’ ಎಂದು ಆಗ್ರಹಿಸಿದ್ದಾರೆ. ತುರ್ತುಸ್ಥಿತಿಯ ವೇಳೆ ಸಂವಿಧಾನಕ್ಕೆ ಸೇರಿಸಲಾಗಿದ್ದ ಪದಗಳನ್ನು ತೆಗೆದುಹಾಕಬೇಕು ಎಂದು ಸಲ್ಲಿಕೆಯಾದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಜಾಗೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.