ದಿಲ್ಲಿ ಗದ್ದುಗೆ ಯಾರಿಗೆ?: ನಾಳೆ ಉತ್ತರ

KannadaprabhaNewsNetwork |  
Published : Jun 03, 2024, 12:32 AM ISTUpdated : Jun 03, 2024, 06:21 AM IST
ಲೋಕಸಭಾ  | Kannada Prabha

ಸಾರಾಂಶ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬ ಅಂತಿಮ ಘಟ್ಟ ತಲುಪಿದ್ದು ಜೂ.4ರ ಮಂಗಳವಾರ ಲೋಕಸಭಾ ಚುನಾವಣೆ ಮತ ಎಣಿಕೆಯೊಂದಿಗೆ ತಾರ್ಕಿಕ ಅಂತ್ಯ ಕಾಣಲಿದೆ.

ನವದೆಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬ ಅಂತಿಮ ಘಟ್ಟ ತಲುಪಿದ್ದು ಜೂ.4ರ ಮಂಗಳವಾರ ಲೋಕಸಭಾ ಚುನಾವಣೆ ಮತ ಎಣಿಕೆಯೊಂದಿಗೆ ತಾರ್ಕಿಕ ಅಂತ್ಯ ಕಾಣಲಿದೆ. ಲೋಕಸಭೆಯ 543 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ (ಸೂರತ್‌) ಅವಿರೋಧ ಆಯ್ಕೆಯಾಗಿದ್ದು, ಉಳಿದ 542 ಕ್ಷೇತ್ರಗಳ ಮತ ಎಣಿಕೆ ಮಂಗಳವಾರ ನಡೆಯಲಿದೆ. ಜೊತೆಗೆ ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭಾ ಚುನಾವಣೆಯ ಎಣಿಕೆಯೂ ನಡೆಯಲಿದೆ.

ಏ.19ರಂದು ಮೊದಲ ಹಂತದ ಚುನಾವಣೆಯೊಂದಿಗೆ ಆರಂಭಗೊಂಡಿದ್ದ ಮತದಾನ ಜೂ.1ರಂದು ನಡೆದ 7 ಹಾಗೂ ಕಡೆಯ ಸುತ್ತಿನೊಂದಿಗೆ ಅಂತ್ಯಗೊಂಡಿದೆ. ಏಳೂ ಹಂತದಲ್ಲಿ ಒಟ್ಟಾರೆ ಶೇ.64ರಷ್ಟು ಮತ ಚಲಾವಣೆಯಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟದ ನಡುವಿನ ನೇರ ಹಣಾಹಣಿಗೆ ಸಾಕ್ಷ್ಯವಾಗಿದ್ದ ಚುನಾವಣೆಯ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿದೆ.

ಬಹುತೇಕ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತದ ಭವಿಷ್ಯ ನುಡಿದಿವೆ. ಇಂಡಿಯಾ ಮೈತ್ರಿಕೂಟದ ಬಲ ಹೆಚ್ಚಾದರೂ ಅಧಿಕಾರ ಹಿಡಿಯುವ ಸಾಧ್ಯತೆ ಕುರಿತು ಯಾವುದೇ ಸಮೀಕ್ಷಾ ಸಂಸ್ಥೆಗಳು ಕೂಡಾ ಭವಿಷ್ಯ ನುಡಿದಿಲ್ಲ. ಒಂದು ವೇಳೆ ಇದರಂತೆ ಫಲಿತಾಂಶ ಪ್ರಕಟವಾದರೆ ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದು, ನರೇಂದ್ರ ಮೋದಿ ಪ್ರಧಾನಿಯಾಗಿ ಹ್ಯಾಟ್ರಿಕ್‌ ಸಾಧಿಸಲಿದ್ದಾರೆ.

ಆದರೆ 2004ರ ಲೋಕಸಭಾ ಚುನಾವಣೆಯಲ್ಲಿ ಸಮೀಕ್ಷಾ ಸಂಸ್ಥೆಗಳು ನುಡಿದಿದ್ದ ಭವಿಷ್ಯ ಪೂರ್ಣ ಉಲ್ಟಾ ಹೊಡೆದು ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಮರಳಿತ್ತು. ಹೀಗಾಗಿಯೇ ಈ ಬಾರಿಯೂ 20 ವರ್ಷದ ಹಳೆಯ ಘಟನೆ ಮರುಕಳಿಸಲಿದೆ ಎಂದು ಇಂಡಿಯಾ ಮೈತ್ರಿಕೂಟ ಆಶಾಭಾವನೆಯಲ್ಲಿದೆ. ಈ ಕಾರಣಕ್ಕಾಗಿಯೇ ಮಂಗಳವಾರದ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿದೆ.

ಈ ಬಾರಿ ಚುನಾವಣೆಯಲ್ಲಿ 751 ನೊಂದಾಯಿತ ರಾಜಕೀಯ ಪಕ್ಷಗಳು ಸ್ಪರ್ಧೆ ಮಾಡಿದ್ದವು. 543 ಕ್ಷೇತ್ರಗಳಲ್ಲಿ 8360 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ. ಇನ್ನು ಆಂಧ್ರದಲ್ಲಿ ಅಧಿಕಾರಕ್ಕಾಗಿ ಹಾಲಿ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಎನ್‌ಡಿಎ ಮೈತ್ರಿಕೂಟದ ಪಕ್ಷಗಳಾದ ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಕೂಟದ ನಡುವೆ ಹಣಾಹಣಿ ಏರ್ಪಟ್ಟಿದೆ. ಒಡಿಶಾದಲ್ಲಿ ಹಾಲಿ ಆಡಳಿತಾರೂಢ ಬಿಜು ಜನತಾ ದಳ ಮತ್ತು ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

 ಮತ ಎಣಿಕೆ: ಚು. ಆಯೋಗಕ್ಕೆ ಬಿಜೆಪಿ, ಇಂಡಿಯಾ ದೂರು, ಪ್ರತಿದೂರು

ನವದೆಹಲಿ:ಲೋಕಸಭೆ ಚುನಾವಣೆ ಮುಗಿದ ಬಳಿಕ ಪ್ರತಿಪಕ್ಷ ಇಂಡಿಯಾ ಬ್ಲಾಕ್ ಮತ್ತು ಆಡಳಿತಾರೂಢ ಬಿಜೆಪಿ ಎರಡೂ ಕೂಟಗಳು ಭಾನುವಾರ ಚುನಾವಣಾ ಆಯೋಗದ ಬಾಗಿಲು ತಟ್ಟಿವೆ.ಮಂಗಳವಾರದ ಮತ ಎಣಿಕೆ ಸಮಯದಲ್ಲಿ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರತಿಪಕ್ಷಗಳು ಆಯೋಗವನ್ನು ಕೇಳಿವೆ. ಆದರೆ ಈ ಅರ್ಜಿ ವಿರೋಧಿಸಿರುವ ಬಿಜೆಪಿ, ಚುನಾವಣಾ ಪ್ರಕ್ರಿಯೆಯ ‘ಸಮಗ್ರತೆಯನ್ನು ಹಾಳುಮಾಡಲು ಪ್ರತಿಪಕ್ಷಗಳು ಸಂಯೋಜಿತ ಪ್ರಯತ್ನಗಳನ್ನು ನಡೆಸಿವೆ. ಪ್ರಜಾಸತ್ತಾತ್ಮಕ ಸಂಸ್ಥೆಗಳ ಪ್ರಕ್ರಿಯೆಗೆ ಅಪಾಯ ಉಂಟು ಮಾಡುತ್ತಿವೆ. ಈ ಬಗ್ಗೆ ಆಯೋಗ ಎಚ್ಚರದಿಂದ ಇರಬೇಕು’ ಎಂದು ಬಿಜೆಪಿ ಪ್ರತಿದೂರು ನೀಡಿದೆ.

ಮತ ಎಣಿಕೆ ದಿನ ಎಚ್ಚರವಾಗಿರಿ: ಕೈ ಅಭ್ಯರ್ಥಿಗಳಿಗೆ ಖರ್ಗೆ, ರಾಹುಲ್‌ ಸಲಹೆ

ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುವ ಜೂ.4ರಂದು ಎಚ್ಚರದಿಂದಿರಿ. ಮತ ಎಣಿಕೆ ವೇಳೆ ಯಾವುದೇ ಗೋಲ್‌ಮಾಲ್‌ ಆಗದಂತೆ ನೋಡಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಪಕ್ಷದ ಲೋಕಸಭಾ ಅಭ್ಯರ್ಥಿಗಳು, ರಾಜ್ಯ ಘಟಕದ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರಿಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ಸಲಹೆ ನೀಡಿದ್ದಾರೆ.ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದ ಮಾರನೇ ದಿನವಾದ ಭಾನುವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಅಭ್ಯರ್ಥಿಗಳು, ನಾಯಕರ ಜೊತೆ ಆನ್‌ಲೈನ್‌ ಸಭೆ ನಡೆಸಿದ ರಾಹುಲ್‌, ಮತದಾನದ ದಿನಕ್ಕೆ ಪಕ್ಷ ನಡೆಸಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.ಈ ವೇಳೆ ವಿವಿಧ ರಾಜ್ಯ ನಾಯಕರು ಎಕ್ಸಿಟ್‌ ಪೋಲ್‌ ಸಮೀಕ್ಷೆಗಳಿಗೂ ವಾಸ್ತವ ಪರಿಸ್ಥಿತಿಗೂ ವ್ಯತ್ಯಾಸವಿದೆ. ಕಾಂಗ್ರೆಸ್‌ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿದ್ದಾರೆ ಎಂದರು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ