ಕೋಟ್ಯಂತರ ರು. ಮೌಲ್ಯದ ಆಸ್ತಿ ಪತ್ರಗಳು, ಚಿನ್ನಾಭರಣ ಇತರ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಆರಂಭಗೊಂಡಿದೆ.
ಬೆಂಗಳೂರು : ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಸೇರಿದ ಕೋಟ್ಯಂತರ ರು. ಮೌಲ್ಯದ ಆಸ್ತಿ ಪತ್ರಗಳು, ಚಿನ್ನಾಭರಣ ಇತರ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಆರಂಭಗೊಂಡಿದೆ.
ಶುಕ್ರವಾರ ಹಸ್ತಾಂತರ ಪ್ರಕ್ರಿಯೆ ಆರಂಭಗೊಂಡಿದ್ದು, ಜಯಲಲಿತಾ ಅವರಿಗೆ ಸೇರಿದ 7,040 ಗ್ರಾಂ.ನ 468 ವಿವಿಧ ಬಗೆಯ ಚಿನ್ನ, ವಜ್ರಖಚಿತ ಆಭರಣಗಳು, 700 ಕೆ.ಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜಿರೇಟರ್, 10 ಟಿವಿ ಸೆಟ್, 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್, 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್‌ಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತಿದೆ. ಈ ಸಂಬಂಧ ಕಾನೂನು ಪ್ರಕ್ರಿಯೆ ನಡೆಯಬೇಕಿರುವ ಕಾರಣ ನ್ಯಾಯಾಲಯವು ಹಸ್ತಾಂತರ ಪ್ರಕ್ರಿಯೆ ನಡೆಸುತ್ತಿದೆ. ಶನಿವಾರ ಸಹ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ.
ನ್ಯಾಯಾಧೀಶರ ಸಮ್ಮುಖದಲ್ಲಿ ಜಯಲಲಿತಾಗೆ ಸೇರಿದ ವಸ್ತುಗಳನ್ನು ನೀಡಲಾಗುತ್ತಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಲಿತಾ ಅವರಿಂದ ಕೋಟ್ಯಂತರ ರು.ಮೌಲ್ಯದ ದುಬಾರಿ ವಸ್ತುಗಳನ್ನು ನ್ಯಾಯಾಲಯವು ಮುಟ್ಟುಗೋಲು ಹಾಕಿಕೊಂಡಿತ್ತು. ಅವರ ಆಸ್ತಿಗಳನ್ನು ಹರಾಜು ಮಾಡುವ ಬದಲು ತಮಿಳುನಾಡು ಸರ್ಕಾರದ ಸುಪರ್ದಿಗೆ ನೀಡುವ ಬಗ್ಗೆ ಈ ಹಿಂದೆ ನ್ಯಾಯಾಲಯ ಸೂಚನೆ ನೀಡಿತ್ತು. 2024ರ ಫೆ.19ರಂದು ತಮಿಳುನಾಡು ಸರ್ಕಾರಕ್ಕೆ ನೀಡಲು ದಿನಾಂಕ ನಿಗದಿ ಮಾಡಲಾಗಿತ್ತು. ಅಲ್ಲದೇ, ಮಾ.6 ಮತ್ತು7ರಂದು ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕೃತ ಅಧಿಕಾರಿಗಳನ್ನು ನಿಯೋಜಿಸುವಂತೆ ಸೂಚನೆ ನೀಡಲಾಗಿತ್ತು.
ಈ ಮಧ್ಯೆ, ಜಯಲಲಿತಾ ಅವರ ಸಂಬಂಧಿಕರು ಎಂದು ಹೇಳಿಕೊಂಡಿದ್ದ ದೀಪಾ ಮತ್ತು ದೀಪಕ್ ಎಂಬುವರು ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಹಸ್ತಾಂತರ ಪ್ರಕ್ರಿಯೆಯನ್ನು ಕೈಗೆತ್ತಿಗೊಳ್ಳಲಾಗಿದೆ.