5 ಬಾರಿ ಹರ್ಯಾಣದ ಮುಖ್ಯಮಂತ್ರಿಯಾಗಿದ್ದ ಐಎನ್‌ಎಲ್‌ಡಿ ಅಧ್ಯಕ್ಷ ಓಂ ಪ್ರಕಾಶ್‌ ಚೌಟಾಲ ನಿಧನ

KannadaprabhaNewsNetwork | Updated : Dec 21 2024, 04:37 AM IST

ಸಾರಾಂಶ

5 ಬಾರಿ ಹರ್ಯಾಣದ ಮುಖ್ಯಮಂತ್ರಿಯಾಗಿದ್ದ ಭಾರತೀಯ ರಾಷ್ಟ್ರೀಯ ಲೋಕ ದಳ (ಐಎನ್‌ಎಲ್‌ಡಿ) ಅಧ್ಯಕ್ಷ ಓಂ ಪ್ರಕಾಶ್‌ ಚೌಟಾಲ (89) ಹೃದಯಾಘಾತದಿಂದ ಶುಕ್ರವಾರ ನಿಧನರಾದರು.

 ಗುರುಗ್ರಾಮ : 5 ಬಾರಿ ಹರ್ಯಾಣದ ಮುಖ್ಯಮಂತ್ರಿಯಾಗಿದ್ದ ಭಾರತೀಯ ರಾಷ್ಟ್ರೀಯ ಲೋಕ ದಳ (ಐಎನ್‌ಎಲ್‌ಡಿ) ಅಧ್ಯಕ್ಷ ಓಂ ಪ್ರಕಾಶ್‌ ಚೌಟಾಲ (89) ಹೃದಯಾಘಾತದಿಂದ ಶುಕ್ರವಾರ ನಿಧನರಾದರು.ಮನೆಯಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಿಸದೇ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ಚೌಟಾಲ ಮಾಜಿ ಉಪ ಪ್ರಧಾನಿಯಾಗಿದ್ದ ದೇವಿಲಾಲ್ ಅವರ ಪುತ್ರ. ಹರ್ಯಾಣದ ಪ್ರಮುಖ ರಾಜಕೀಯ ಕುಟುಂಬದಿಂದ ಬಂದಿದ್ದ ಅವರು, ಭರವಸೆಯ ಪ್ರಾದೇಶಿಕ ನಾಯಕನಾಗಿ ಬೆಳೆದಿದ್ದರು. ಕೆಲ ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಚೌಟಾಲಾ ಅವರು ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅವರ ಮಕ್ಕಳು ಮೊಮ್ಮಕ್ಕಳು ಕೂಡ ಈಗ ಹರ್ಯಾಣದ ಪ್ರಭಾವಿ ರಾಜಕಾರಣಿಗಳು.

ಚೌಟಾಲಾ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಅವರ ಪಕ್ಷ ಐಎನ್‌ಎಲ್‌ಡಿ ಈ ಹಿಂದೆ ಬಿಜೆಪಿ ಮಿತ್ರ ಪಕ್ಷವಾಗಿ ಉಳಿದಿತ್ತು. 2005ರಿಂದ ಐಎನ್‌ಎಲ್‌ಡಿ ಹರ್ಯಾಣದಲ್ಲಿ ಅಧಿಕಾರದಿಂದ ದೂರ ಉಳಿದಿದೆ.

2 ಹಗರಣದಲ್ಲಿ ಜೈಲ ಸೇರಿದ್ದರು:

5 ಬಾರಿ ಸಿಎಂ ಆಗಿದ್ದರ ಔಚಾಲಾ, ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪುತ್ರ ಅಜಯ್‌ ಚೌಟಾಲ ಜತೆ ಜೈಲಿಗೆ ಹೋಗಿದ್ದರು. 2013ರಲ್ಲಿ ಜೈಲು ಸೇರಿದ್ದ ಅವರು 2021ರ ತನಕವೂ ಜೈಲಿನಲ್ಲಿದ್ದರು. ನಂತರ ಅಕ್ರಮ ಆಸ್ತಿ ಹಗರಣದಲ್ಲಿ 2022ರಲ್ಲಿ 4 ವರ್ಷ ದೋಷಿ ಎಂದು ಪರಿಗಣಿಸಲ್ಪಟ್ಟಿದ್ದರು. ಬಳಿಕ ಹೈಕೋರ್ಟು ಅವರ ಶಿಕ್ಷೆ ರದ್ದು ಮಾಡಿತ್ತು.

ಜೈಲಲ್ಲೇ 10, 12 ಪಾಸ್‌!:

ಪ್ರಾಥಮಿಕ ಶಾಲೆಗೆ ಚೌಟಾಲಾ ತಮ್ಮ ಓದನ್ನು ಬಿಟ್ಟಿದ್ದರು. ಹೀಗಾಗಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜೈಲಿಗೆ ಹೋಗಿದ್ದ ವೇಲೆ ಜೈಲಲ್ಲೇ 82ನೇ ವಯಸ್ಸಿನಲ್ಲಿ 10, 12ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು.

ಝಾಕಿರ್‌ ಹುಸೇನ್‌ ಅಂತ್ಯಕ್ರಿಯೆ: ಅಭಿಮಾನಿಗಳ ‘ಗೀತ ನಮನ’

ನ್ಯೂಯಾರ್ಕ್‌: ತಬಲಾ ಮಾಂತ್ರಿಕ ಝಾಕಿರ್‌ ಹುಸೇನ್‌ ಅವರ ಅಂತ್ಯಕ್ರಿಯೆಯನ್ನು ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಗುರುವಾರ ನೆರವೇರಿಸಲಾಯಿತು.ಈ ವೇಳೆ ಹುಸೇನ್‌ರ ನೂರಾರು ಅಭಿಮಾನಿಗಳು ಅಲ್ಲಿ ನೆರೆದಿದ್ದು, ಎ. ಶಿವಮಣಿ ಸೇರಿದಂತೆ ಹಲವು ಕಲಾವಿದರು ಸಂಗೀತದ ಮೂಲದ ಹುಸೇನ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಮಣಿ, ‘ತಾಳ ದೇವರಿದ್ದಂತೆ. ಅದೇ ನೀವು. 1982ರಿಂದ ಇಲ್ಲಿಯ ವರೆಗೆ ನಾನು ನಿಮ್ಮಿಂದ ಬಹಳಷ್ಟನ್ನು ಕಲಿತಿದ್ದೇನೆ. ನನ್ನ ಪ್ರತಿ ತಾಳದಲ್ಲೂ ನೀವು ಇರುತ್ತೀರ. ನಾವು ನಿಮ್ಮನ್ನು ಪ್ರೀತಿಸುತ್ತೇವೆ ಝಾಕಿರ್‌ ಭಾಯ್‌. ನಿಮ್ಮ ಮುಂದಿನ ಪಯಣ ಸುಗಮವಾಗಲಿ’ ಎಂದು ತಮ್ಮ ಹಾಗೂ ಹುಸೇನ್‌ರ ಸಂಬಂಧವನ್ನು ನೆನೆದರು.73 ವರ್ಷದ ಗ್ರಾಮಿ ವಿಜೇತ, ಪದ್ಮ ಪ್ರಶಸ್ತಿ ಪುರಸ್ಕೃತ ಝಾಕಿರ್‌ ಅವರು ಶ್ವಾಸಕೋಶ ಸಮಸ್ಯೆಯಿಂದ ಸೋಮವಾರ ಸ್ಯಾನ್‌ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

25ನೇ ದಿನಕ್ಕೆ ಉಪವಾಸ: ದಲ್ಲೆವಾಲ್ ಆರೋಗ್ಯ ಸ್ಥಿತಿ ಗಂಭೀರ

ಚಂಡೀಗಢ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಂಜಾಬ್- ಹರಿಯಾಣ ಖನೌರಿ ಗಡಿಯಲ್ಲಿ 25 ದಿನದಿಂದ ಆಮರಣ ಉಪವಾಸ ಕೈಗೊಂಡಿರುವ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ.ದಲ್ಲೆವಾಲ್ ಸುಮಾರು 10 ನಿಮಿಷಗಳ ಕಾಲ ಮೂರ್ಛೆ ಹೋದರು. ಅಲ್ಲದೇ ಅವರಿಗೆ ರಕ್ತದೊತ್ತಡ ಕಡಿಮೆಯಾಗಿದ್ದು, ಆಸ್ಪತ್ರೆಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ.ದಲ್ಲೆವಾಲ್ ಅವರ ಆರೋಗ್ಯ ಕಾಳಜಿ ವಹಿಸಿ, ಸಾಧ್ಯವಾದರೆ ಆಸ್ಪತ್ರೆಗೆ ಸ್ಥಳಾಂತರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚನೆ ನೀಡಿದ್ದು ವಿಚಾರಣೆಯನ್ನು ಜ.2ಕ್ಕೆ ಮುಂದೂಡಿದೆ.

ಈ ನಡುವೆ, ದಲ್ಲೆವಾಲ್ ಅವರು ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರಿಂ ಕೋರ್ಟ್‌ಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದಾರೆ.

ಗೂಗಲ್‌ನಿಂದ ಶೇ.10ರಷ್ಟು ಉದ್ಯೋಗಿಗಳಿಗೆ ಕೊಕ್‌

ನವದೆಹಲಿ: ಟೆಕ್‌ ದಿಗ್ಗಜ ಗೂಗಲ್ ಸಂಸ್ಥೆಯು ತನ್ನ ಕಂಪನಿಯಲ್ಲಿ ದಕ್ಷತೆ ಆಧಾರದಲ್ಲಿ ಕಂಪನಿಯ ಪ್ರಮುಖ ಸ್ಥಾನದಲ್ಲಿರುವ ಶೇ.10ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದಿದೆ. ಈ ಬಗ್ಗೆ ಸ್ವತಃ ಗೂಗಲ್ ಸಿಇಒ ಸುಂದರ್‌ ಪಿಚ್ಚೈ ಅವರೇ ಮಾಹಿತಿ ನೀಡಿದ್ದಾರೆ.

ಮೂಲಗಳ ಪ್ರಕಾರ, ಗೂಗಲ್‌ನಲ್ಲಿ ಮ್ಯಾನೇಜರ್‌, ನಿರ್ದೇಶಕರು, ಉಪಾಧ್ಯಕ್ಷರಂತಹ ಪ್ರಮುಖ ಹುದ್ದೆಯಲ್ಲಿರುವವರನ್ನೇ ಕೆಲಸದಿಂದ ತೆಗೆದು ಹಾಕಲಾಗಿದೆ ಇನ್ನು ಈ ಪೈಕಿ ಕೆಲವು ಸ್ಥಾನಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಕೆಲವರನ್ನು ವೈಯುಕ್ತಿಕ ಕೊಡುಗೆದಾರರ ಪಾತ್ರವನ್ನಾಗಿ ಪರಿವರ್ತಿಸಲಾಗಿದೆ ಎಂದು ಗೂಗಲ್ ಮಾಹಿತಿ ನೀಡಿದೆ.ಇನ್ನು ಇದೇ ಸಭೆಯಲ್ಲಿ ಸುಂದರ್‌ ಪಿಚ್ಚೈ ತನ್ನ ಸಂಸ್ಥೆಯ ಉದ್ಯೋಗಿಗಳಿಗೆ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಬೇಕು ಎನ್ನುವ ಮಾತುಗಳನ್ನು ಕೂಡ ಹೇಳಿದ್ದಾರೆ. ‘ಗೂಗ್ಲಿನೆಸ್‌’ ಪರಿಕಲ್ಪನೆಯು ಆಧುನಿಕ ಯುಗಕ್ಕೆ ನವೀಕರಣಗೊಳ್ಳುವ ಅವಶ್ಯಕತೆಯಿದೆ, ಎಐ ಯುಗದಲ್ಲಿ ಹೊಸ ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳಬೇಕಾಗಿದೆ’ ಎಂದರು.

ಸೆನ್ಸೆಕ್ಸ್‌ 1,176 ಅಂಕ ಪತನ: 5 ದಿನದಲ್ಲಿ 18 ಲಕ್ಷ ಕೋಟಿ ರು. ನಷ್ಟ

ಮುಂಬೈ: ಷೇರು ಮಾರುಕಟ್ಟೆಯಲ್ಲಿ 5ನೇ ದಿನವೂ ಕರಡಿ ಕುಣಿತ ಮುಂದುವರಿದಿದೆ ಸೆನ್ಸೆಕ್ಸ್‌ 1,176 ಅಂಕ ಕುಸಿದು 78,041ರಲ್ಲಿ ಸ್ಥಿರವಾಯಿತು. ನಿಫ್ಟಿಯು 364.20 ಅಂಕಗಳಿಗೆ ಕುಸಿದು 23,587 ಅಂಕಕ್ಕೆ ತಲುಪಿತು.ಕಳೆದ 5 ದಿನಗಳಲ್ಲಿ ಸೆನ್ಸೆಕ್ಸ್‌ 4,091 ಅಂಕ ಇಳಿದಿದ್ದು ಹೂಡಿಕೆದಾರರಿಗೆ 18.43 ಲಕ್ಷ ಕೋಟಿ ರು. ನಷ್ಟವಾಗಿದೆ. ಅಮೆರಿಕದ ಫೆಡರಲ್‌ ಬ್ಯಾಂಕ್‌ ಬಡ್ಡಿದರ ಇಳಿಕೆ ಮಾಡಿದ್ದೇ ಸತತ 2ನೇ ದಿನ ಈ ಹೊಡೆತಕ್ಕೆ ಕಾರಣವಾಗಿದೆ. ಏಷ್ಯಾ ಹಾಗೂ ಯುರೋಪ್‌ ಪೇಟೆಗಳೂ ಇಳಿಕೆ ಕಂಡಿವೆ

Share this article