ಇಸ್ಲಾಮಾಬಾದ್: ಅಲ್ ಖಾದಿರ್ ವಿಶ್ವ ವಿದ್ಯಾಲಯ ಪ್ರಕರಣದಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಬಂಧಿತರಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಇಲ್ಲಿನ ನ್ಯಾಯಾಲಯ 14 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಇಮ್ರಾನ್ ಪತ್ನಿ ಬುಶ್ರಾ ಬೀಬಿಗೆ 7 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.
ಇಮ್ರಾನ್ ಖಾನ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅಲ್ ಖಾದಿರ್ ವಿಶ್ವ ವಿದ್ಯಾಲಯ ತೆರೆಯುವುದಕ್ಕೆ ಸರ್ಕಾರ ಅನುಮತಿ ನೀಡಿತ್ತು. ಆದರೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ 190 ಮಿಲಿಯನ್ ಪೌಂಡ್ (10 ಲಕ್ಷ ಕೋಟಿ ರು.) ಹಾನಿಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪ ಈಗ ಸಾಬೀತಾಗಿದ್ದು, ಇಮ್ರಾನ್ ಖಾನ್ ಅವರಿಗೆ 14 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರು. ದಂಡ, ಇಮ್ರಾನ್ ಪತ್ನಿ ಬಿಬಿಗೆ 7 ವರ್ಷ ಜೈಲು ಶಿಕ್ಷೆ 5 ಲಕ್ಷ ರು. ದಂಡ ವಿಧಿಸಿದೆ. ಇದನ್ನು ಕಟ್ಟದಿದ್ದಲ್ಲಿ ಇನ್ನು 5 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸುವುದಾಗಿ ನ್ಯಾಯಾಲಯ ಹೇಳಿದೆ.
ಇದರ ಬೆನ್ನಲ್ಲೇ ಪ್ರಧಾನಿ ಶಹಬಾಜ್ ಷರೀಫ್ ಸರ್ಕಾರದ ವಿರುದ್ಧ ಇಮ್ರಾನ್ ಪತ್ನಿ ಬೀಬಿ ಆಕ್ರೋಶ ಹೊರಹಾಕಿದ್ದಾರೆ.
ಇಮ್ರಾನ್ ಖಾನ್ ಪ್ರಧಾನಿ ಆಗಿದ್ದಾಗ ಓರ್ವ ಉದ್ಯಮಿ ಹಾಗೂ ಬ್ರಿಟನ್ ಸರ್ಕಾರದ ನಡುವಿನ ವ್ಯಾಜ್ಯವೊಂದು ಇತ್ಯರ್ಥಗೊಂಡು. 50 ಶತಕೋಟಿ ರು.ಗಳನ್ನು ಬ್ರಿಟನ್ ರಾಷ್ಟ್ರೀಯ ಅಪರಾಧ ಸಂಸ್ಥೆ ಪರಿಹಾರ ನೀಡಲು ಒಪ್ಪಿತ್ತು. ನಿಯಮಾನುಸಾರ ಈ ಹಣ ಪಾಕ್ ಸರ್ಕಾರದ ಖಜಾನೆಗೆ ಮೊದಲು ಜಮೆ ಆಗದೇ ಇಮ್ರಾನ್ ನೆರವಿನಿಂದ ಉದ್ಯಮಿಯ ಖಾತೆಗೆ ಹೋಗಿತ್ತು. ಇದಕ್ಕೆ ಪ್ರತಿಯಾಗಿ ಅಲ್ ಖಾದಿರ್ ಟ್ರಸ್ಟ್‌ನ ಟ್ರಸ್ಟಿ ಆಗಿದ್ದ ಬುಶ್ರಾ ಬೀಬಿಗೆ ಅಲ್ ಖಾದಿರ್ ವಿವಿ ಸ್ಥಾಪಿಸಲು ಆ ಉದ್ಯಮಿ ನೆರವಾಗಿದ್ದರು. ಈ ವಹಿವಾಟಿನಿಂದ ಪಾಕ್ ಸರ್ಕಾರಕ್ಕೆ 10 ಲಕ್ಷ ಕೋಟಿ ರು. ಹಾನಿಯಾಗಿದೆ ಎಂದು ಆರೋಪಿಸಲಾಗಿತ್ತು.