ಗೌರವಗಳೊಂದಿಗೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಅಂತ್ಯಸಂಸ್ಕಾರ : ಪಂಚಭೂತಗಳಲ್ಲಿ ಲೀನ

KannadaprabhaNewsNetwork |  
Published : Dec 29, 2024, 01:18 AM ISTUpdated : Dec 29, 2024, 04:36 AM IST
ಸಿಂಗ್ | Kannada Prabha

ಸಾರಾಂಶ

ವಯೋಸಹಜ ಕಾರಣಗಳಿಂದ ಗುರುವಾರ ರಾತ್ರಿ ನಿಧನರಾದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ಇಲ್ಲಿ ನೆರವೇರಿತು.

ನವದೆಹಲಿ: ವಯೋಸಹಜ ಕಾರಣಗಳಿಂದ ಗುರುವಾರ ರಾತ್ರಿ ನಿಧನರಾದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ಇಲ್ಲಿ ನೆರವೇರಿತು. ನಿಗಮ್‌ಬೋಧ್‌ ಘಾಟ್‌ನಲ್ಲಿ ಆತ್ಮೀಯರು, ಗಣ್ಯರ ಅಶ್ರುತರ್ಪಣ, ಧಾರ್ಮಿಕ ಪ್ರಾರ್ಥನೆಗಳ ನಡುವೆ ಸಿಂಗ್‌ ಅವರ ಚಿತೆಗೆ ಹಿರಿಯ ಪುತ್ರಿ ಉಪಿಂದರ್‌ ಸಿಂಗ್‌ ಅಗ್ನಿಸ್ಪರ್ಶ ಮಾಡಿದರು.

ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಅಮಿತ್‌ ಶಾ, ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಭೂತಾನ್‌ ದೊರೆ ಜಿಗ್ಮೆ ಖೇಸರ್‌ ನಮ್ಂಗ್ಯಾಲ್‌ ವಾಂಕ್ಚುಕ್‌, ರಿಷನ್‌ನ ವಿದೇಶಾಂಗ ಸಚಿವ ಧನಂಜಯ್‌ ರಾಮ್ಫುಲ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. 

ಜೊತೆಗೆ ಸಿಡಿಎಸ್‌ ಅನಿಲ್‌ ಚೌಹಾಣ್‌ ಸೇರಿ ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರೂ ಮಾಜಿ ಪ್ರಧಾನಿಯ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಜೊತೆಗೆ ಪಕ್ಷಾತೀತವಾಗಿ ವಿವಿಧ ರಾಜ್ಯಗಳ ಹಲವು ನಾಯಕರು ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು.

ಕಾಂಗ್ರೆಸ್‌ ಕಚೇರಿಯಲ್ಲಿ ಅಂತಿಮ ದರ್ಶನ

ಮನಮೋಹನ ಸಿಂಗ್‌ ಅವರ ಪಾರ್ಥಿವ ಶರೀರವನ್ನು ಶನಿವಾರ ಬೆಳಗ್ಗೆವರೆಗೆ ಮೋತಿಲಾಲ್‌ ನೆಹರೂ ರಸ್ತೆಯಲ್ಲಿರುವ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ 9 ಗಂಟೆಗೆ ಪಕ್ಷದ ಪ್ರಧಾನ ಕಚೇರಿಗೆ ಪಾರ್ಥಿವ ಶರೀರ ತರಲಾಯಿತು. ಅಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಖರ್ಗೆ ಸೇರಿ ಹಲವು ಗಣ್ಯರು, ಕಾರ್ಯಕರ್ತರು ಡಾ.ಸಿಂಗ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

11 ಕಿ.ಮೀ ಪಾರ್ಥೀವ ಶರೀರ ಮೆರವಣಿಗೆ

ಎಐಸಿಸಿ ಕಚೇರಿಯಲ್ಲಿ ಅಂತಿಮ ದರ್ಶನದ ಬಳಿಕ ಅಲ್ಲಿಂದ ಸುಮಾರು 11 ಕಿ.ಮೀ ದೂರದ ನಿಗಮ್‌ಘಾಟ್‌ಗೆ ವಿಶೇಷವಾಗಿ ಅಲಂಕೃತ ಸೇನಾ ವಾಹನದಲ್ಲಿ ಮೆರವಣಿಗೆ ಮೂಲಕ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಮಾಜಿ ಪ್ರಧಾನಿಯ ಈ ಅಂತಿಮಯಾತ್ರೆಯನ್ನು ಹಿಂಬಾಲಿಸಿದ ಹಾಗೂ ರಸ್ತೆ ಅಕ್ಕಪಕ್ಕ ಸೇರಿದ್ದ ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ಡಾ.ಮನಮೋಹನ ಸಿಂಗ್‌ ಅಮರ್‌ ರಹೇ, ಎಲ್ಲಿಯವರೆಗೆ ಸೂರ್ಯ,ಚಂದ್ರ ಇರುತ್ತಾರೋ ಅಲ್ಲಿವರೆಗೆ ನಿಮ್ಮ ಹೆಸರು ಅಮರವಾಗಿರುತ್ತದೆ ಎಂಬ ಘೋಷಣೆ ಮೊಳಗಿಸಿದರು.

ಸಿಂಗ್‌ಗೆ ಭಾರತ ರತ್ನಕ್ಕೆ ಬೇಡಿಕೆ

ಮೆರವಣಿಗೆಯಲ್ಲಿ ಡಾ.ಸಿಂಗ್‌ ಅ‍ವರಿಗೆ ಭಾರತ ರತ್ನ ನೀಡುವಂತೆ ಕೆಲವರು ಅಂತಿಮಯಾತ್ರೆ ವೇಳೆ ಘೋಷಣೆ ಮೊಳಗಿಸಿದರು. ನವಭಾರತ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿದ ಸಿಂಗ್‌ ಅವರಿಗೆ ದೇಶದ ಅತ್ಯುಚ್ಛ ಗೌರವ ಸಿಗಬೇಕು ಎಂದು ಆಗ್ರಹಿಸಿದರು.

ಸಿಂಗ್‌ ಪಾರ್ಥಿವ ಶರೀರಕ್ಕೆ ರಾಹುಲ್‌ ಹೆಗಲು

ಡಾ.ಸಿಂಗ್‌ ಅಂತಿಮಯಾತ್ರೆಯ ವೇಳೆ ಅವರ ಕುಟುಂಬ ಸದಸ್ಯರ ಜತೆಗೆ ಸೇನಾ ವಾಹನದಲ್ಲಿ ಘಾಟ್‌ಗೆ ವರೆಗೂ ತೆರಳಿದ ರಾಹುಲ್‌ ಗಾಂಧಿ ಅವರು ಅಲ್ಲಿ ಮಾಜಿ ಪ್ರಧಾನಿಯ ಪಾರ್ಥಿವ ಶರೀರಕ್ಕೆ ಹೆಗಲು ಕೊಡುವ ಮೂಲಕ ಗೌರವ ಸಲ್ಲಿಸಿದರು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ