ಪ್ರಯಾಗ್‌ರಾಜ್‌ : 60 ಕೋಟಿ ಭಕ್ತರಿಗೆ ಸಾಕ್ಷಿಯಾದ ಕುಂಭನಗರ ಯಥಾಸ್ಥಿತಿಗೆ : ಇದೀಗ ಬಿಕೋ ಬಿಕೋ

KannadaprabhaNewsNetwork | Updated : Mar 03 2025, 05:17 AM IST

ಸಾರಾಂಶ

ಹಲವು ತಿಂಗಳುಗಳ ತಯಾರಿ, ನೂರಾರು ವ್ಯವಸ್ಥೆಗಳು, ಕೋಟ್ಯಂತರ ಭಕ್ತರ ಆಗಮನದೊಂದಿಗೆ 45 ದಿನಗಳ ಕಾಲ ಇಲ್ಲಿ ಅದ್ಧೂರಿಯಾಗಿ ನಡೆದ ಮಹಾಕುಂಭ ಮೇಳಕ್ಕೆ ಈಗಾಗಲೇ ತೆರೆ ಬಿದ್ದಿದ್ದು, ಈ ಮಹಾಸಭೆಗೆಂದೇ ನಿರ್ಮಾಣವಾಗಿದ್ದ ಕುಂಭನಗರ ಯಥಾಸ್ಥಿತಿಗೆ ಮರಳುತ್ತಿದೆ.

ಪ್ರಯಾಗ್‌ರಾಜ್‌: ಹಲವು ತಿಂಗಳುಗಳ ತಯಾರಿ, ನೂರಾರು ವ್ಯವಸ್ಥೆಗಳು, ಕೋಟ್ಯಂತರ ಭಕ್ತರ ಆಗಮನದೊಂದಿಗೆ 45 ದಿನಗಳ ಕಾಲ ಇಲ್ಲಿ ಅದ್ಧೂರಿಯಾಗಿ ನಡೆದ ಮಹಾಕುಂಭ ಮೇಳಕ್ಕೆ ಈಗಾಗಲೇ ತೆರೆ ಬಿದ್ದಿದ್ದು, ಈ ಮಹಾಸಭೆಗೆಂದೇ ನಿರ್ಮಾಣವಾಗಿದ್ದ ಕುಂಭನಗರ ಯಥಾಸ್ಥಿತಿಗೆ ಮರಳುತ್ತಿದೆ.

60 ಕೋಟಿಗೂ ಅಧಿಕ ಭಕ್ತರು ಭೇಟಿ ನೀಡಿ, ಪುಣ್ಯಸ್ನಾನ ಮಾಡಿದ್ದ ಸಂಗಮ ಸ್ಥಳಗಳು ಈಗ ಭಣಗುಟ್ಟುತ್ತಿವೆ. ಕುಂಭಮೇಳ ನಡೆದ ವಿಶಾಲವಾದ ಮೈದಾನದಲ್ಲಿ ಭಕ್ತಾದಿಗಳು ತಂಗಲು ನಿರ್ಮಿಸಲಾಗಿದ್ದ ಟೆಂಟ್‌ಗಳನ್ನು ತೆರವುಗೊಳಿಸಲಾಗಿದ್ದು, ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತಿದೆ. ಜೊತೆಗೆ, ಸಂಚಾರ ದಟ್ಟಣೆ ತಪ್ಪಿಸಲು ನಿಷೇಧಿಸಲಾಗಿದ್ದ ವಾಹನ ಸಂಚಾರವನ್ನು ಮತ್ತೆ ಶುರು ಮಾಡಲಾಗಿದೆ.

ಇನ್ನೂ ಬರುತ್ತಿರುವ ಭಕ್ತರು : ಜ.12ರಂದು ಶುರುವಾದ ಕುಂಭಮೇಳ ಫೆ.26ರಂದು ಮುಕ್ತಾಯಗೊಂಡಿದೆ. ಆದರೆ ಆ ಅವಧಿಯಲ್ಲಿ ಕಾರಣಾಂತರಗಳಿಂದ ಬರಲಾಗದ ಭಕ್ತರು ಈಗ ಬಂದು ತ್ರಿವೇಣಿ ಸಂಗಮದಲ್ಲಿ ಮಿಂದೇಳುತ್ತಿದ್ದಾರೆ.

15 ದಿನ ಸ್ವಚ್ಛತಾ ಕಾರ್ಯ:

ಸಂಗಮ ಸ್ಥಳ, ಕುಂಭಮೇಳ ನಡೆದ ಮೈದಾನ, ರಸ್ತೆಗಳು, ಶಾಶ್ವತ ಅಥವಾ ತಾತ್ಕಾಲಿಕ ಮೂಲಸೌಕರ್ಯಗಳನ್ನು ಸ್ವಚ್ಛಗೊಳಿಸಲು, ರಾಜ್ಯ ಸರ್ಕಾರ ಮುಂದಿನ 15 ದಿನ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದೆ. ‘ಸ್ವಚ್ಛತಾ ಮಿತ್ರರು’ ಮತ್ತು ‘ಗಂಗಾ ಸೇವಾ ದೂತರು’ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು, ವಿಶೇಷ ಅಧಿಕಾರಿ ಆಕಾಂಕ್ಷಾ ರಾಣಾ ಇದರ ಮುಂದಾಳತ್ವ ವಹಿಸಿದ್ದಾರೆ.

ಕುಂಭಮೇಳದಲ್ಲಿ ಉತ್ಪತ್ತಿಯಾದ ಎಲ್ಲಾ ತ್ಯಾಜ್ಯವನ್ನು ನೈನಿಯಲ್ಲಿನ ಬಸ್ವಾರ್‌ ಘಟಕದಲ್ಲಿ ಸಂಸ್ಕರಿಸಿ, ಪ್ಲಾಸ್ಟಿಕ್‌ನಿಂದ ಇಂಧನ ಉತ್ಪಾದಿಸಲಾಗುವುದು. ಕುಂಭಮೇಳಕ್ಕೆಂದೇ ಅಳವಡಿಸಲಾದ ತಾತ್ಕಾಲಿಕ ಪೈಪ್‌ಲೈನ್‌, ಬೀದಿದೀಪಗಳು, ಕಲ್ಪವಾಸಿಗಳು ಬಳಸಿದ ಟೆಂಟ್‌, ಮಂಟಪಗಳು ಹಾಗೂ ಶೌಚಾಲಯಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

12 ವರ್ಷಗಳ ಬಳಿಕ ನಡೆದ ಈ ಕುಂಭಮೇಳವು, ಏಕಕಾಲಕದಲ್ಲಿ ನಡೆದ ಅತಿ ದೊಡ್ಡ ನದಿ ಶುದ್ಧೀಕರಣ, ಒಂದು ಸ್ಥಳದ ಸ್ವಚ್ಛತಾ ಅಭಿಯಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಸ್ವಯಂಸೇವ ಭಾಗವಹಿಸುವಿಕೆ, ಕೇವಲ 8 ಗಂಟೆಗಳಲ್ಲಿ ಮಾಡಲಾದ ಅಂಗೈ ಅಚ್ಚು ಸೇರಿ ಅನೇಕ ಗಿನ್ನೆಸ್‌ ದಾಖಲೆಗಳನ್ನು ನಿರ್ಮಿಸಿದೆ.

ಕುಂಭದಲ್ಲಿ ಬೇರ್ಪಟಿದ್ದ 50,000 ಜನ ಮರಳಿ ಕುಟುಂಬದ ತೆಕ್ಕೆಗೆ

ಪ್ರಯಾಗರಾಜ್‌: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಕುಟುಂಬದಿಂದ ಬೇರ್ಪಟ್ಟಿದ್ದ 50,000 ಜನರನ್ನು ಮರಳಿ ತಮ್ಮ ಕುಟುಂಬದೊಂದಿಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ 

.ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಅವರ ಮಾರ್ಗದರ್ಶನದಂತೆ ತೆರೆಯಲಾಗಿದ್ದ ಡಿಜಿಟಲ್‌ ಖೋಯಾ ಪಾಯಾ ಕೇಂದ್ರದಿಂದ (ನಾಪತ್ತೆ ಪತ್ತೆ ಕೇಂದ್ರ) ಜನರ ಪತ್ತೆ ಸಾಧ್ಯವಾಗಿದೆ. ಮಹಾಕುಂಭನಗರಾದ್ಯಂತ ಸ್ಥಾಪಿಸಲಾಗಿದ್ದ 10 ಕೇಂದ್ರಗಳಲ್ಲಿ ಡಿಜಿಟಲ್‌, ಕೃತಕಬುದ್ಧಿಮತ್ತೆ ಕ್ಯಾಮೆರಾಗಳ ಮೂಲಕ ಇದು ಸಾಧ್ಯವಾಗಿದೆ.

 ಜ.13-15ರ ನಡುವೆ 598, ಜ.28-30ರ ಮಧ್ಯೆ 8725, ಫೆ.2-4ರವರೆಗೆ 864 ಜನರನ್ನು ಕುಟುಂಬದ ಜೊತೆ ಸೇರಿಸಲಾಗಿದೆ. ಮಿಕ್ಕಂತೆ ಉಳಿದ ದಿನಳಲ್ಲಿ 24 ಸಾವಿರಕ್ಕೂ ಅಧಿಕ ಜನರನ್ನು ರಕ್ಷಣೆ ಮಾಡಲಾಗಿದೆ. ಖಾಸಗಿ ಕೇಂದ್ರಗಳು ಸಹ ರಕ್ಷಣೆ ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article