ಕೆನಡಾದಲ್ಲಿ ಮತ್ತೆ ಖಲಿಸ್ತಾನಿ ಕುಚೇಷ್ಟೆ: ಮೋದಿ, ಶಾ, ಜೈಶಂಕರ್‌ ಪ್ರತಿಕೃತಿ ಮೆರವಣಿಗೆ

KannadaprabhaNewsNetwork |  
Published : May 06, 2025, 12:17 AM ISTUpdated : May 06, 2025, 05:19 AM IST
ಕೆನಡಾ | Kannada Prabha

ಸಾರಾಂಶ

ಕೆನಡಾದಲ್ಲಿ ಮತ್ತೆ ಖಲಿಸ್ತಾನಿಗಳ ಉಪಟಳ ಹೆಚ್ಚಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರ ವಿಕಾರವಾದ ಪ್ರತಿಕೃತಿಯನ್ನು ಖಲಿಸ್ತಾನಿಗಳು ಮೆರವಣಿಗೆ ಮಾಡಿದ್ದಾರೆ.

ಟೊರಂಟೋ: ಕೆನಡಾದಲ್ಲಿ ಮತ್ತೆ ಖಲಿಸ್ತಾನಿಗಳ ಉಪಟಳ ಹೆಚ್ಚಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರ ವಿಕಾರವಾದ ಪ್ರತಿಕೃತಿಯನ್ನು ಖಲಿಸ್ತಾನಿಗಳು ಮೆರವಣಿಗೆ ಮಾಡಿದ್ದಾರೆ.

ಭಾನುವಾರ ಟೊರಂಟೋದಲ್ಲಿನ ಮ್ಯಾಲ್ಟನ್‌ ಗುರುದ್ವಾರ ಬಳಿ ಖಲಿಸ್ತಾನಿಗಳ ಉದ್ಧಟತನ ತೋರಿದ್ದಾರೆ. ಪ್ರಧಾನಿ ಮೋದಿ, ಅಮಿತ್‌ ಶಾ, ಜೈಶಂಕರ್‌ ಅವರು ಕೈಗಳಿಗೆ ಕೋಳ ಧರಿಸಿ ಜೈಲಿನಲ್ಲಿ ಇರುವ ರೀತಿ ಪ್ರತಿಕೃತಿ ಮಾಡಿ ಮೆರವಣಿಗೆ ಮಾಡಿದ್ದಾರೆ. ಈ ಬೆಳವಣಿಗೆ ಕೆನಡಾದಲ್ಲಿ ಪ್ರಧಾನಿ ಮಾರ್ಕ್‌ ಕಾರ್ನಿ ಅವರು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ನಡೆದಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ನಮ್ಮ ಬಾಹು ಸಾಕಷ್ಟು ವಿಶಾಲ: ಸುಪ್ರೀಂ

ನವದೆಹಲಿ: ಸುಪ್ರೀಂ ಕೋರ್ಟ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ಸಂಸದ ನಿಶಿಕಾಂತ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಯನ್ನು ಸ್ವೀಕರಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಇದೇ ವೇಳೆ, ‘ನಮ್ಮ ಬಾಹು ಸಾಕಷ್ಟು ವಿಶಾಲವಾಗಿವೆ’ ಎಂದು ತೀಕ್ಷ್ಣವಾಗಿ ಹೇಳಿದೆ.ರಾಷ್ಟ್ರಪತಿಗಳು ಮಸೂದೆಗಳನ್ನು ಅಂಗೀಕರಿಸಲು ಗಡುವು ನಿಗದಿಪಡಿಸಿದ್ದಕ್ಕಾಗಿ ನಿಶಿಕಾಂತ ದುಬೆ ಸುಪ್ರೀಂ ಕೋರ್ಟ್ ಅನ್ನು ಟೀಕಿಸಿದ್ದರು. ‘ಸುಪ್ರೀಂ ಕೋರ್ಟ್ ದೇಶವನ್ನು ಅರಾಜಕತೆಗೆ ತಳ್ಳುತ್ತಿದೆ. ದೇಶದಲ್ಲಿ ನಡೆಯುವ ಧಾರ್ಮಿಕ ಯುದ್ಧಗಳಿಗೆ ಅದೇ ಹೊಣೆ’ ಎಂದಿದ್ದರು.

ದುಬೆ ವಿರುದ್ಧ ಪಿಐಎಲ್ ಸಲ್ಲಿಸಿದ್ದ ವಕೀಲ ವಿಶಾಲ್ ತಿವಾರಿ, ‘ದುಬೆ ದ್ವೇಷಪೂರಿತ, ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇದು ಬಿಎನ್‌ಎಸ್‌ ಹಾಗೂ ನ್ಯಾಯಾಂಗ ನಿಂದನೆ ಕಾಯ್ದೆ 15ರ ಅನ್ವಯ ಶಿಕ್ಷಾರ್ಹ ಅಪರಾಧ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು’ ಎಂದು ಕೋರಿದ್ದರು.

ಇದರ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ, ‘ನಮ್ಮ (ಸುಪ್ರೀಂ ಕೋರ್ಟ್‌ನ) ಭುಜಗಳು ಸಾಕಷ್ಟು ವಿಶಾಲವಾಗಿವೆ. ಆದಾಗ್ಯೂ ನಾವು ಈ ಅರ್ಜಿಯನ್ನು ಪುರಸ್ಕರಿಸುವುದಿಲ್ಲ. ಆದರೆ ಈ ಬಗ್ಗೆ ಸಣ್ಣ ಆದೇಶ ನೀಡುತ್ತೇವೆ. ಅದಕ್ಕೆ ಕಾರಣವನ್ನೂ ತಿಳಿಸುತ್ತೇವೆ’ ಎಂದು ಹೇಳಿದರು.

ಉಜ್ಜಯಿನಿ ಮಹಾಕಾಲೇಶ್ವರ ದೇಗುಲದಲ್ಲಿ ಬೆಂಕಿ ಅವಘಡ

ಉಜ್ಜಯಿನಿ: 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಪ್ರಸಿದ್ಧ ಮಹಾಕಾಲೇಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.‘ದೇವಾಲಯದ ನಿಯಂತ್ರಣ ಕೊಠಡಿಯ ಮೇಲ್ಛಾವಣಿಯಲ್ಲಿ ಸ್ಥಾಪಿಸಲಾದ ವಾಯು ಗುಣಮಟ್ಟ ನಿರ್ವಹಣಾ ವ್ಯವಸ್ಥೆಯ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದವರ ಸಹಾಯದಿಂದ ತಕ್ಷಣವೇ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ’ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ರೋಶನ್ ಸಿಂಗ್ ತಿಳಿಸಿದ್ದಾರೆ.

ಗಡಿ ನುಸುಳಲು ಯತ್ನಿಸಿದ ಪಾಕ್ ಯೋಧ ಬಿಎಸ್‌ಎಫ್ ವಶಕ್ಕೆ

ಗುರುದಾಸಪುರ (ಪಂಜಾಬ್‌): ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಅರೆಸೇನಾ ಪಡೆಯ ಸೈನಿಕನೊಬ್ಬನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಭಾನುವಾರ ರಾಜಸ್ಥಾನದಲ್ಲಿ ಬಂಧಿಸಿದೆ. ಈತ ಬೇಹುಗಾರಿಕೆ ಉದ್ದೇಶದಿಂದ ಒಳನುಸುಳಲು ಯತ್ನಿಸಿದ್ದ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.ಪಾಕ್ ಅರೆಸೇನಾ ಪಡೆಯ ಬಹಾವಲ್ಪುರ್ ವಲಯದ ಸೈನಿಕ ಮುಹಮ್ಮದ್ ಹುಸೇನ್ ಬಂಧಿತ. ಸದ್ಯ ಈತ ರಾಜಸ್ಥಾನ ಗಡಿಯಲ್ಲಿ ಬಿಎಸ್ಎಫ್ ವಶದಲ್ಲಿದ್ದು, ಆತನ ಉದ್ದೇಶವನ್ನು ಹೊರಗೆಳೆಯಲು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಡೀ ಗಾಜಾ ವಶಕ್ಕೆ ಇಸ್ರೇಲ್ ನಿರ್ಧಾರ

ಟೆಲ್‌ ಅವಿವ್‌: ಇಸ್ರೇಲ್ - ಹಮಾಸ್ ಯುದ್ಧದ ಬಳಿಕ ಗಾಜಾ ಪಟ್ಟಿಯ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದ ಇಸ್ರೇಲ್ , ಇದೀಗ ಇಡೀ ಗಾಜಾವನ್ನು ವಶಪಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದೆ. ಇದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಕಾರಣವಾಗುವ ಸಾಧ್ಯತೆಯಿದೆ.

ತನ್ನಿಷ್ಟದಂತೆ ಹಮಾಸ್‌ನೊಂದಿಗೆ ಕದನ ವಿರಾಮ ಮಾತುಕತೆ ನಡೆಸಲು ಮತ್ತು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಒತ್ತಡ ಹೇರುವ ಪ್ರಯತ್ನದ ಭಾಗವಾಗಿ ಈ ಕ್ರಮಕ್ಕೆ ಮುಂದಾಗಿದೆ. ಗಾಜಾಪಟ್ಟಿ ವಶದ ಜತೆಗೆ ಅನಿರ್ದಿಷ್ಟ ಸಮಯದ ತನಕ ಅಲ್ಲಿಯೇ ಉಳಿಯುವ ನಿರ್ಧಾರಕ್ಕೆ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಒಂದು ವೇಳೆ ಈ ಕ್ರಮವು ಜಾರಿಗೆ ಬಂದರೆ ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ಕಾರ್ಯಾಚರಣೆಗಳು ವ್ಯಾಪಕವಾಗಿ ವಿಸ್ತರಿಸಲಿದೆ.

ಇಸ್ರೇಲ್ ಸೇನಾ ಮುಖ್ಯಸ್ಥರು ಸೇನೆಯು ಹತ್ತಾರು ಸಾವಿರ ಮೀಸಲು ಸೈನಿಕರನ್ನು ನಿಯೋಜಿಸುತ್ತಿದೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಸಚಿವ ಸಂಪುಟ ಮತದಾನದ ಮೂಲಕ ಅನುಮೋದನೆ ನೀಡಿದೆ. ಇನ್ನು ಇಸ್ರೇಲ್ ಮಿಲಿಟರಿ ಅಧಿಕಾರಿಗಳ ಪ್ರಕಾರ. ಇಸ್ರೇಲ್‌ನ ಈ ಯೋಜನೆಯಲ್ಲಿ ಲಕ್ಷಾಂತರ ಪ್ಯಾಲೆಸ್ತೀನಿಯರನ್ನು ದಕ್ಷಿಣ ಗಾಜಾಗೆ ಸ್ಥಳಾಂತರಿಸುವುದು ಕೂಡ ಸೇರಿದೆ.ಇಸ್ರೇಲ್‌-ಹಮಾಸ್‌ ಕದನ 2023ರಿಂದ ನಡೆದಿದ್ದು, ಗಾಜಾ ಪಟ್ಟಿಯಲ್ಲಿನ 52 ಸಾವಿರ ಜನರು ಹತರಾಗಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ