ಉಗ್ರ ನಿಗ್ರಹಕ್ಕೆ ಸಂಪೂರ್ಣ ಶಕ್ತಿ ವಿನಿಯೋಗ: ಮೋದಿ ತಾಕೀತು

KannadaprabhaNewsNetwork |  
Published : Jun 14, 2024, 01:07 AM ISTUpdated : Jun 14, 2024, 04:38 AM IST
ಮೋದಿ | Kannada Prabha

ಸಾರಾಂಶ

ಜಮ್ಮು-ಕಾಶ್ಮೀರದಲ್ಲಿ 4 ದಿನಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಖುದ್ದು ಭದ್ರತಾ ವ್ಯವಸ್ಥೆ ಪರಿಶೀಲಿಸಿದ್ದಾರೆ.

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ 4 ದಿನಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಖುದ್ದು ಭದ್ರತಾ ವ್ಯವಸ್ಥೆ ಪರಿಶೀಲಿಸಿದ್ದಾರೆ. ‘ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಸಂಪೂರ್ಣ ಶಕ್ತಿ ವಿನಿಯೋಗಿಸಬೇಕು’ ಎಂದು ಅವರು ತಾಕೀತು ಮಾಡಿದ್ದಾರೆ.

ಕಾಶ್ಮೀರದಲ್ಲಿ ಮೋದಿ-3 ಸರ್ಕಾರ ಬಂದ ನಂತರ ಇದ್ದಕ್ಕಿದ್ದಂತೆ ಉಗ್ರ ಚಟುವಟಿಕೆ ಚಿಗಿತುಕೊಂಡಿವೆ. ಈ ಬಗ್ಗೆ ಗುರುವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇತರ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಮೋದಿ, ಈ ಕೇಂದ್ರಾಡಳಿತ ಪ್ರದೇಶದ ಭದ್ರತಾ ಪರಿಸ್ಥಿತಿಯ ಸಂಪೂರ್ಣ ಅವಲೋಕನ ನಡೆಸಿದರು. ಈ ವೇಳೆ ಅಧಿಕಾರಿಗಳು, ಭಯೋತ್ಪಾದನೆ ನಿಗ್ರಹಕ್ಕೆ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಇದೇ ವೇಳೆ, ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಶ್ಮೀರದ ಉಪರಾಜ್ಯಪಾಲ ಮನೋಜ್‌ ಸಿನ್ಹಾ ಅವರೊಂದಿಗೂ ಮಾತುಕತೆ ನಡೆಸಿದರು. ಭದ್ರತಾ ಪಡೆಗಳ ನಿಯೋಜನೆ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸಿದರು.

ಈ ವೇಳೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದ ಮೋದಿ, ‘ಉಗ್ರ ನಿಗ್ರಹಕ್ಕೆ ಭಾರತದ ಭಯೋತ್ಪಾದನಾ ನಿಗ್ರಹ ಸಾಮರ್ಥ್ಯಗಳ ಸಂಪೂರ್ಣ ‘ಶಕ್ತಿ’ ವಿನಿಯೋಗಿಬೇಕು’ ಎಂದು ತಾಕೀತು ಮಾಡಿದರು ಎಂದು ಮೂಲಗಳು ಹೇಳಿವೆ. ಅರ್ಥಾತ್‌ ಸಾಧ್ಯವಿರುವ ಎಲ್ಲ ಪಡೆಗಳನ್ನು ಕಾಶ್ಮೀರದಲ್ಲಿ ನಿಯೋಜಿಸಿ, ಉಗ್ರರ ಹೆಡೆಮುರಿ ಕಟ್ಟಬೇಕು ಎಂದರು ಎಂದು ಅವು ಹೇಳಿವೆ.

3 ದಿನದಲ್ಲಿ 12 ಬಲಿ:

ಇತ್ತೀಚಿನ ದಿನದಲ್ಲಿ ಬಹುತೇಕ ಪ್ರಶಾಂತವಾಗಿದ್ದ ಜಮ್ಮು-ಕಾಶ್ಮೀರದಲ್ಲಿ ಬುಧವಾರ ರಾತ್ರಿಗೂ ಮುಂಚಿನ 72 ತಾಸುಗಳಲ್ಲಿ 3 ಪ್ರತ್ಯೇಕ ಭಯೋತ್ಪಾದಕ ದಾಳಿಗಳು ನಡೆದಿದ್ದು, 12 ಮಂದಿ ಸಾವಿಗೀಡಾಗಿ, 40 ಮಂದಿ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ಹೊಸ ಬಗೆಯ ಉಗ್ರರ ಜಾಲ ತಲೆಎತ್ತಿರುವ ಕುರಿತು ಭದ್ರತಾ ಪಡೆಗಳಲ್ಲಿ ಚರ್ಚೆ ಆರಂಭವಾಗಿದೆ.

ಕಾಶ್ಮೀರ ಬಸ್‌ ದಾಳಿ: 50 ಜನರು ವಶಕ್ಕೆ

ಜಮ್ಮು: ವೈಷ್ಣೋದೇವಿಗೆ ತೆರಳುತ್ತಿದ್ದ ಬಸ್‌ ಮೇಲೆ ನಡೆದ ಉಗ್ರ ದಾಳಿಗೆ ಸಂಬಂಧಿಸಿದಂತೆ 50 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಹುಡುಕಾಟವನ್ನು ಇನ್ನು ಹೆಚ್ಚು ತೀವ್ರಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು ಪೊಲೀಸರು,‘ಪ್ರಮಾಣ ವಚನ ಕಾರ್ಯಕ್ರಮದಂದು ರೈಸಿ ಜಿಲ್ಲೆಯಲ್ಲಿ ನಡೆದ ಉಗ್ರ ದಾಳಿಗೆ ಸಂಬಂಧಿಸಿದಂತೆ ಈಗಾಗಲೇ 50ಜನರನ್ನು ವಶಕ್ಕೆ ಪಡೆಯಲಾಗಿದೆ. 1995-2005ರವರೆಗೆ ಉಗ್ರರ ಅಡಗುತಾಣವಾಗಿದ್ದ ರೈಸಿ ಜಿಲ್ಲೆಯ ಅರ್ನಾಸ್‌ ಹಾಗೂ ಮಹೋರ್‌ನಲ್ಲಿಯೂ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಕುರುಹುಗಳನ್ನು ಪತ್ತೆ ಹಚ್ಚಲಾಗಿದೆ. ಜೊತೆಗೆ ಓರ್ವ ಉಗ್ರನ ರೇಖಾಚಿತ್ರವನ್ನು ಬಿಡುಗಡೆ ಮಾಡಿ 20 ಲಕ್ಷ ರು. ಬಹುಮಾನ ಘೋಷಿಸಲಾಗಿದೆ’ ಎಂದು ಮಾಹಿತಿ ನೀಡಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !